ಪಾಸ್‌ಪೋರ್ಟ್ ಇಲ್ಲದೆಯೂ ನೇಪಾಳ ಪ್ರವಾಸ ಮಾಡಬಹುದು: ಈ ಕಾರ್ಡ್ ಒಂದು ಇದ್ದರೆ ಸಾಕು!
ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆಯೂ ಭಾರತೀಯರು ನೆರೆಯ ರಾಷ್ಟ್ರ ನೇಪಾಳಕ್ಕೆ ಪ್ರವಾಸ ಕೈಗೊಳ್ಳಬಹುದು. ಇದಕ್ಕಾಗಿ ಚುನಾವಣಾ ಆಯೋಗ ನೀಡಿರುವ ಮೂಲ ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್ ಕಡ್ಡಾಯವಾಗಿದೆ. ಆಧಾರ್, ಪ್ಯಾನ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಪ್ರಯಾಣದ ದಾಖಲೆಗಳಾಗಿ ಮಾನ್ಯವಲ್ಲ. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಕೆಲವು ಸಂದರ್ಭಗಳಲ್ಲಿ ಪರ್ಯಾಯ ದಾಖಲೆಗಳ ಅವಕಾಶವಿದೆ. ಇನ್ನು ಅಯೋಧ್ಯೆ ಮತ್ತು ನೇಪಾಳದ ಜನಕಪುರ ನಡುವೆ ನವೆಂಬರ್ 28ರಿಂದ 'ಸರಯು-ಕಮಲಾ ಎಕ್ಸ್‌ಪ್ರೆಸ್' ರೈಲು ಸೇವೆ ಆರಂಭವಾಗಲಿದೆ.
Nepal Visa Rules: ವಿದೇಶ ಪ್ರವಾಸ ಮಾಡಬೇಕು ಎಂಬುದು ಬಹುತೇಕ ಪ್ರತಿಯೊಬ್ಬರ ಕನಸು. ಆದರೆ ಪಾಸ್‌ಪೋರ್ಟ್ ಮಾಡಿಸಿಲ್ಲ, ವೀಸಾ ಪಡೆಯುವುದು ಕಷ್ಟವೆಂಬ ಕಾರಣಕ್ಕೆ ಅನೇಕರು ತಮ್ಮ ವಿದೇಶ ಪ್ರವಾಸದ ಯೋಜನೆಯನ್ನೇ ಕೈಬಿಡುತ್ತಾರೆ. ಇಂತಹವರಿಗೆ ಒಂದು ಸಿಹಿ ಸುದ್ದಿ ಇದೆ. ಭಾರತೀಯರು ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆಯೂ ನೆರೆಯ ಸುಂದರ ರಾಷ್ಟ್ರ ನೇಪಾಳಕ್ಕೆ ಸುಲಭವಾಗಿ ಪ್ರವಾಸ ಕೈಗೊಳ್ಳಬಹುದು. ಭಾರತ ಮತ್ತು ನೇಪಾಳದ ನಡುವೆ ಮುಕ್ತ ಗಡಿ ವ್ಯವಸ್ಥೆ ಇರುವುದರಿಂದ ವಿಮಾನ ಅಥವಾ ರಸ್ತೆ ಮಾರ್ಗದ ಮೂಲಕ ಪ್ರಯಾಣಿಸಲು ಅವಕಾಶವಿದೆ. ಆದರೆ ಅಲ್ಲಿಗೆ ತೆರಳುವ ಮುನ್ನ ಯಾವ ದಾಖಲೆಗಳನ್ನ ತೆಗೆದುಕೊಂಡು ಹೋಗಬೇಕು ಮತ್ತು ಯಾವ ನಿಯಮಗಳನ್ನ ಪಾಲಿಸಬೇಕು ಎಂಬುದನ್ನ ತಿಳಿದುಕೊಳ್ಳುವುದು ಬಹಳ ಮುಖ್ಯ.
ನೇಪಾಳ ಪ್ರವಾಸಕ್ಕೆ ಯಾವ ದಾಖಲೆ ಕಡ್ಡಾಯ?
ಪಾಸ್‌ಪೋರ್ಟ್ ಇಲ್ಲದೆ ನೇಪಾಳಕ್ಕೆ ತೆರಳಲು ಬಯಸುವ ಭಾರತೀಯರು ಚುನಾವಣಾ ಆಯೋಗ ನೀಡಿರುವ ಮೂಲ ಮತದಾರರ ಗುರುತಿನ ಚೀಟಿಯನ್ನ ಬಳಸಬಹುದು. ಒಂದು ವೇಳೆ ಪಾಸ್‌ಪೋರ್ಟ್ ಇದ್ದರೆ ಅದನ್ನೂ ಪ್ರಯಾಣದ ದಾಖಲೆಯಾಗಿ ತೋರಿಸಬಹುದು. ಅಂದರೆ ಈ ಎರಡರಲ್ಲಿ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ ನಿಮ್ಮ ಬಳಿ ಇರಬೇಕು.
ಇಲ್ಲಿ ಪ್ರವಾಸಿಗರು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಭಾರತದಲ್ಲಿ ಹಲವು ಕೆಲಸಗಳಿಗೆ ಬಳಸುವ ಆಧಾರ್ ಕಾರ್ಡ್ ನೇಪಾಳ ಪ್ರವಾಸಕ್ಕೆ ಮಾನ್ಯವಾದ ಪ್ರಯಾಣದ ದಾಖಲೆಯಲ್ಲ. ಅದೇ ರೀತಿ ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಅಥವಾ ಮೊಬೈಲ್‌ನಲ್ಲಿರುವ ದಾಖಲೆಗಳ ಫೋಟೋ ಹಾಗೂ ಪಿಡಿಎಫ್ ಪ್ರತಿಗಳನ್ನ ತೋರಿಸಿ ವಿಮಾನದಲ್ಲಿ ಪ್ರಯಾಣಿಸಲು ಅಥವಾ ಗಡಿ ದಾಟಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿರುವ ಹೆಸರು ಮತ್ತು ಫೋಟೋ ಸ್ಪಷ್ಟವಾಗಿದೆಯೇ, ಕಾರ್ಡ್ ಹಾನಿಗೊಳಗಾಗಿದೆಯೇ ಎಂಬುದನ್ನ ಪ್ರಯಾಣಕ್ಕೂ ಮುನ್ನ ಪರಿಶೀಲಿಸಿಕೊಳ್ಳಿ.
ವಿಮಾನ ಮತ್ತು ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ನಿಯಮಗಳೇನು?
ವಿಮಾನದಲ್ಲಿ ನೇಪಾಳಕ್ಕೆ ತೆರಳುವ ಭಾರತೀಯರು ವಿಮಾನ ನಿಲ್ದಾಣದಲ್ಲಿ ತಮ್ಮ ಮೂಲ ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿಯನ್ನ ತೋರಿಸಬೇಕು. ಇನ್ನು ರಸ್ತೆ ಮಾರ್ಗವಾಗಿ ಪ್ರಯಾಣಿಸುವವರು ಸುನೌಲಿ, ರಕ್ಸೌಲ್, ಪಾಣಿಟಂಕಿ ಅಥವಾ ಬನ್ಬಸಾ ಗಡಿಗಳ ಮೂಲಕ ನೇಪಾಳ ಪ್ರವೇಶಿಸಬಹುದು. ಈ ಗಡಿಗಳಲ್ಲಿಯೂ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ವಿಶೇಷವಾಗಿ ಹಬ್ಬದ ದಿನಗಳು ಅಥವಾ ಭದ್ರತಾ ಕಾರಣಗಳಿಂದ ತಪಾಸಣೆ ಮತ್ತಷ್ಟು ಕಟ್ಟುನಿಟ್ಟಾಗಿರಬಹುದು.
ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ನಿಯಮ
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೆಲವು ಸಂದರ್ಭಗಳಲ್ಲಿ ಪರ್ಯಾಯ ಗುರುತಿನ ದಾಖಲೆಗಳನ್ನ ತೋರಿಸಲು ಅವಕಾಶವಿದೆ. ಮಕ್ಕಳೊಂದಿಗೆ ಪ್ರಯಾಣಿಸುವವರು ಜನನ ಪ್ರಮಾಣಪತ್ರ, ಶಾಲೆಯ ಗುರುತಿನ ಚೀಟಿ ಮತ್ತು ಪೋಷಕರ ಮೂಲ ಗುರುತಿನ ಚೀಟಿಗಳನ್ನ ಜೊತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯ ನಿಯಮಗಳನ್ನ ಪರಿಶೀಲಿಸಿಕೊಳ್ಳಬೇಕು.
ಅಯೋಧ್ಯೆ-ಜನಕಪುರ ನಡುವೆ ಹೊಸ ರೈಲು ಸಂಪರ್ಕ
ಭಾರತ ಮತ್ತು ನೇಪಾಳದ ನಡುವಿನ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಸಂಪರ್ಕಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. 2026ರ ನವೆಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ನವದೆಹಲಿಯಿಂದ ವರ್ಚುವಲ್ ಮೂಲಕ 'ಸರಯು-ಕಮಲಾ ಎಕ್ಸ್‌ಪ್ರೆಸ್' ರೈಲಿಗೆ ಚಾಲನೆ ನೀಡಿದ್ದಾರೆ. ನವೆಂಬರ್ 28ರಿಂದ ಸೇವೆ ಆರಂಭಿಸಲಿರುವ ಈ ವಾರದ ರೈಲು, ಸೀತಾ ದೇವಿಯ ಜನ್ಮಸ್ಥಳವೆಂದು ಗುರುತಿಸಲಾದ ನೇಪಾಳದ ಜನಕಪುರ ಧಾಮ್ ಮತ್ತು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. 17 ಬೋಗಿಗಳನ್ನ ಹೊಂದಿರುವ ಈ ರೈಲು 604 ಕಿಲೋಮೀಟರ್ ದೂರವನ್ನ 19 ಗಂಟೆಗಳಲ್ಲಿ ಕ್ರಮಿಸಲಿದೆ. ರಕ್ಸೌಲ್, ಗೋರಖಪುರ ಸೇರಿದಂತೆ ಒಟ್ಟು 10 ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.
ಪ್ರವಾಸಿಗರು ಈ ಎಚ್ಚರಿಕೆ ಮರೆಯಬೇಡಿ!
ನೇಪಾಳ ಪ್ರವಾಸಕ್ಕೆ ತೆರಳುವವರು ಮೊಬೈಲ್‌ನಲ್ಲಿರುವ ದಾಖಲೆಗಳ ಫೋಟೋ ಅಥವಾ ಸ್ಕ್ರೀನ್‌ಶಾಟ್‌ಗಳನ್ನ ಮಾತ್ರ ನಂಬಿಕೊಂಡು ಪ್ರಯಾಣಿಸಬಾರದು. ವಿಮಾನ ನಿಲ್ದಾಣ, ಗಡಿ ತಪಾಸಣೆ, ಹೋಟೆಲ್ ಕೊಠಡಿ ಕಾಯ್ದಿರಿಸುವಿಕೆ ಅಥವಾ ಸ್ಥಳೀಯ ಸಿಮ್ ಕಾರ್ಡ್ ಖರೀದಿಸುವ ಸಂದರ್ಭಗಳಲ್ಲಿ ಮೂಲ ದಾಖಲೆಗಳನ್ನ ಕೇಳಬಹುದು. ಆದ್ದರಿಂದ ಮೂಲ ಗುರುತಿನ ಚೀಟಿಯ ಜೊತೆಗೆ ಅದರ ಕೆಲವು ಜೆರಾಕ್ಸ್ ಪ್ರತಿಗಳನ್ನೂ ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದು ಉತ್ತಮ.
ಒಟ್ನಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲವೆಂಬ ಕಾರಣಕ್ಕೆ ನೇಪಾಳ ಪ್ರವಾಸದ ಕನಸನ್ನ ಕೈಬಿಡಬೇಕಿಲ್ಲ. ಆದರೆ ಪ್ರಯಾಣಕ್ಕೂ ಮುನ್ನ ಅಗತ್ಯ ದಾಖಲೆಗಳು ಮತ್ತು ಸಂಬಂಧಪಟ್ಟ ಪ್ರಯಾಣ ನಿಯಮಗಳನ್ನ ಪರಿಶೀಲಿಸಿಕೊಂಡು ಸಿದ್ಧತೆ ಮಾಡಿಕೊಳ್ಳುವುದು ಮುಖ್ಯ.