ಅರ್ಹ ಫಲಾನುಭವಿಗಳಿಗೆ ಮಾತ್ರವೇ ಪಡಿತರ ಚೀಟಿ ಸಿಗುವಂತಾಗಬೇಕು ಮತ್ತು ಅದರ ದುರ್ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಿದೆ. ಈಗಾಗಲೇ ಪಡಿತರ ಚೀಟಿ ಇ-ಕೆವೈಸಿ ಕಂಪ್ಲೀಟ್ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು ಸೆಪ್ಟೆಂಬರ್ 30, 2026ರವರೆಗೂ ಈ ಕೆಲಸ ಪೂರ್ಣಗೊಳಿಸಲು ಕಾಲಾವಕಾಶ ನೀಡಿದೆ.
ಪಡಿತರ ಚೀಟಿ ಫಲಾನುಭವಿಗಳಿಗೆ ಕಡ್ಡಾಯ ಇ-ಕೆವೈಸಿ ಪೂರ್ಣಗೊಳಿಸಲು ಕೇವಲ 15 ದಿನಗಳಷ್ಟೇ ಬಾಕಿ ಉಳಿದಿದೆ. ಕರ್ನಾಟಕದಾದ್ಯಂತ ಆಹಾರ ಇಲಾಖೆಯ ಸರ್ವರ್‌ನಲ್ಲಿನ ತಾಂತ್ರಿಕ ದೋಷಗಳು ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಪರಿಶೀಲನಾ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿವೆ. ಇನ್ನೊಂದೆಡೆ, ಆದಾಯ ಪ್ರಮಾಣ ಪತ್ರ ಸಿಗದೆ ಜನ ಪರದಾಡುತ್ತಿದ್ದಾರೆ. ಏತನ್ಮಧ್ಯೆ, ಸೆ.15ರಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಪಡಿತರ ಚೀಟಿ ಇ-ಕೆವೈಸಿಯಲ್ಲಿ ತಾಂತ್ರಿಕ ದೋಷ... ಆಹಾರ ಸಚಿವರ ಮಹತ್ವದ ಸಭೆ:
ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸುವಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಆಹಾರ ಸಚಿವ ರಿಜ್ವಾನ್ ಅರ್ಷದ್ ಸೆಪ್ಟೆಂಬರ್ 15, 2026ರಂದು ವಿಕಾಸ ಸೌಧದಲ್ಲಿ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಮತ್ತು ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ (ಕೆಎಸ್‌ಡಿಸಿ) ಪ್ರತಿನಿಧಿಗಳೊಂದಿಗೆ ತುರ್ತು ಸಭೆ ನಡೆಸಿ, ಇ-ಕೆವೈಸಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಸೂಚನೆ:
ಸಭೆ ಬಳಿಕ ಮಾತನಾಡಿದ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್, ಪಡಿತರ ಚೀಟಿ ಫಲಾನುಭವಿಗಳಿಗೆ ಕಡ್ಡಾಯ ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ ಅಂತ್ಯದವರೆಗೂ ಸಮಯಾವಕಾಶ ನೀಡಲಾಗಿದೆ. ಈಗಾಗಲೇ ಅರ್ಧ ಸೆಪ್ಟೆಂಬರ್ ಮಾಸ ಕಳೆದಿದ್ದುವ, ಇ-ಕೆವೈಸಿ ಪೂರ್ಣಗೊಳಿಸಲು ಇನ್ನು ಕೇವಲ 15 ದಿನಗಳಷ್ಟೇ ಬಾಕಿ ಉಳಿದಿದೆ. ಈ ಹಿನ್ನಲೆಯಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಇ-ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಸರ್ವರ್ ಮತ್ತು ತಾಂತ್ರಿಕ ಸಮಸ್ಯೆಗಳನ್ನು ನಾವು ಗಮನಿಸಿದ್ದೇವೆ. ಸಮಸ್ಯೆ ವರದಿಯಾದಾಗಲೆಲ್ಲಾ, ಎನ್‌ಐಸಿ, ಕೆಎಸ್‌ಡಿಸಿ ಮತ್ತು ಇಲಾಖೆ ಅಧಿಕಾರಿಗಳಿಗೆ ಸಮನ್ವಯ ಸಾಧಿಸಿ ಅದನ್ನು ತಕ್ಷಣವೇ ಪರಿಹರಿಸಲು ಸೂಚಿಸಲಾಗಿದೆ," ಎಂದು ತಿಳಿಸಿದರು.
ಮನೆಯಿಂದಲೇ ಇ-ಕೆವೈಸಿ ಪೂರ್ಣಗೊಳಿಸಲು ಬರಲಿದೆ ಹೊಸ ಅಪ್ಲಿಕೇಶನ್:
ಪಡಿತರ ಚೀಟಿ ಫಲಾನುಭವಿಗಳು ಮನೆಯಿಂದಲೇ ಮುಖ ದೃಢೀಕರಣದ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಅನುವು ಮಾಡಿಕೊಡಲು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣಾ ನಿರ್ದೇಶನಾಲಯದೊಂದಿಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ವಾರದೊಳಗೆ ಈ ಅಪ್ಲಿಕೇಶನ್ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ನೀಡಿದರು.
ಗಮನಾರ್ಹವಾಗಿ, ಆಹಾರ ಇಲಾಖೆಯು ತನ್ನ ಅಪ್ಲಿಕೇಶನ್ ಮೂಲಕ ಪ್ರತ್ಯೇಕ URL ಗಳನ್ನು ಪರಿಚಯಿಸಿದೆ ಮತ್ತು ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಅದರ ಸರ್ವರ್ ಮೂಲಸೌಕರ್ಯದ ಲೋಡ್ ಪರೀಕ್ಷೆಯನ್ನು ನಡೆಸುತ್ತಿದೆ. ಸರ್ವರ್ ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮೂರನೇ ವ್ಯಕ್ತಿಯ ಏಜೆನ್ಸಿಯನ್ನು ನೇಮಿಸಲಾಗಿದೆ. ಸರ್ಕಾರವು ಒಂದು ತಿಂಗಳೊಳಗೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದರೊಂದಿಗೆ ಪಡಿತರ ವಿತರಣೆಯನ್ನೂ ಸಹ ಆರಂಭಿಸಬೇಕು. ನಿಗದಿತ ಸಮಯದೊಳಗೆ ಎಲ್ಲವೂ ಪೂರ್ಣಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ರಿಜ್ವಾನ್ ಅರ್ಷದ್, ಪಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆಯಲ್ಲಿ ಫಲಾನುಭವಿಗಳು ಎದುರಿಸುತ್ತಿರುವ ಸರ್ವರ್ ಸಮಸ್ಯೆಗಳು ಹಾಗೂ ತಾಂತ್ರಿಕ ಅಡಚಣೆಗಳ ಕುರಿತು ಇಂದು (ಸೆ. 15) ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಾಯಿತು. ಸರ್ವರ್ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಬಗೆಹರಿಸಿ, ಇ-ಕೆವೈಸಿ ಪ್ರಕ್ರಿಯೆ ಯಾವುದೇ ತೊಂದರೆ ಇಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಂತ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
Conducted a high-level review meeting on the E-KYC progress and the server-related issues affecting its implementation.
Discussed the challenges with all stakeholders involved in managing the process and reviewed the steps required to ensure seamless and timely completion of… pic.twitter.com/2ibDe22zjJ— Rizwan Arshad (@ArshadRizwan) September 15, 2026
ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಿರುವುದು ಕೇವಲ 36.44% ಜನರಷ್ಟೇ:
ಮರು-ಇ-ಕೆವೈಸಿಗಾಗಿ ಗುರುತಿಸಲಾದ 2,67,64,276 ಫಲಾನುಭವಿಗಳಲ್ಲಿ, ಕೇವಲ 97,54,197 ಜನರು ಅಥವಾ ಸುಮಾರು 36.44 ಪ್ರತಿಶತದಷ್ಟು ಜನರು ಮಾತ್ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಇನ್ನೂ ಪರಿಶೀಲನೆಯನ್ನು ಪೂರ್ಣಗೊಳಿಸಿಲ್ಲ ಎಂಬುದು ಗಮನಾರ್ಹವಾಗಿದೆ.
ವಾಸ್ತವವಾಗಿ, ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸದಿರಲು ಹಲವು ಕಾರಣಗಳಿದ್ದು ಅದರಲ್ಲಿ ಇ-ಕೆವೈಸಿ ಪೂರ್ಣಗೊಳಿಸಲು ಬೇಕಿರುವ ಅಗತ್ಯ ದಾಖಲೆಗಳ ಬಗೆಗಿನ ಗೊಂದಲವೂ ಪ್ರಮುಖ ಕಾರಣವಾಗಿದೆ. ಉದಾಹರಣೆಗೆ ಸಾಕಷ್ಟು ಜನರು ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಆದಾಯ ಪ್ರಮಾಣ ಪತ್ರದ ಅವಶ್ಯಕತೆ ಇದೆ ಎಂದು ಮೊದಲು ಆದಾಯ ಪ್ರಮಾಣ ಪತ್ರ ಪಡೆಯಲು ಪರದಾಡುತ್ತಿದ್ದಾರೆ. ಆದರೆ, ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಬೇಕಿರುವುದು ಕೇವಲ ಮೂರೇ ಮೂರು ದಾಖಲೆಗಳು.
ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಬೇಕಿಲ್ಲ ಆದಾಯ ಪ್ರಮಾಣ ಪತ್ರ:
ನೀವು ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಆದಾಯ ಪ್ರಮಾಣ ಪತ್ರಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇದು ನಿಮಗೆ ಸಿಹಿ ಸಮಾಚಾರ. ಪಡಿತರ ಚೀಟಿ ಇ-ಕೆವೈಸಿ ಕಂಪ್ಲೀಟ್ ಮಾಡಲು ಆದಾಯ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ, ಇದು ಕಡ್ಡಾಯವಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಬೇಕಿರುವ 3 ಅಗತ್ಯ ದಾಖಲೆಗಳು:
ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಬೇಕಿರುವ ಮೂರು ಪ್ರಮುಖ ದಾಖಲೆಗಳೆಂದರೆ..
* ಆಧಾರ್ ಕಾರ್ಡ್
* ಆಧಾರ್ ಲಿಂಕ್ಡ್ ಮೊಬೈಲ್ ನಂಬರ್
* ಆಧಾರ್ ಲಿಂಕ್ಡ್ ಎಲ್‌ಪಿಜಿ ಗ್ರಾಹಕರ ಐಡಿ
ಪಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಕೇವಲ ಮೇಲೆ ನಮೂದಿಸಿದ ಮೂರೇ ಮೂರು ದಾಖಲೆಗಳು ಸಾಕು. ಆದರೆ, ನೀವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರವೂ ಬೇಕಾಗುತ್ತದೆ.
ಇ-ಕೆವೈಸಿ ಅವಶ್ಯಕತೆಯು ಜುಲೈ 22, 2025 ರ ಕೇಂದ್ರದ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ತಿದ್ದುಪಡಿ ಆದೇಶವನ್ನು ಅನುಸರಿಸುತ್ತದೆ, ಇದು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲನೆಯನ್ನು ಕಡ್ಡಾಯಗೊಳಿಸುತ್ತದೆ. ಗಡುವಿನೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲರಾದ ಫಲಾನುಭವಿಗಳನ್ನು ಪರಿಶೀಲನಾ ವ್ಯಾಯಾಮದ ಅಡಿಯಲ್ಲಿ ಪಡಿತರ ಚೀಟಿ ಪಟ್ಟಿಯಿಂದ ಕೈ ಬಿಡಬಹುದು.