ಕಾಲ ಬದಲಾದರೂ ಕರಗದ ಕ್ರೇಜ್.. ಭಾರತೀಯರಿಗೆ ವಿಸ್ಕಿ ಏಕೆ ಇಷ್ಟ ಗೊತ್ತೆ..? ರೋಚಕ ಕಥೆ ಇಲ್ಲಿದೆ
ಮಾರುಕಟ್ಟೆಗೆ ಹತ್ತು ಹಲವು ಹೊಸ ಬ್ರಾಂಡ್‌ಗಳು, ವಿವಿಧ ರೀತಿಯ ವೈನ್‌ಗಳು ಮತ್ತು ನಾನಾ ಕ್ರಾಫ್ಟ್ ಬಿಯರ್‌ಗಳು ಪ್ರತಿದಿನ ಎಂಟ್ರಿ ಕೊಡುತ್ತಲೇ ಇರುತ್ತವೆ. ಆದರೂ, ಭಾರತೀಯರ ನೆಚ್ಚಿನ ಬ್ರಾಂಡ್ ಆಗಿ ವಿಸ್ಕಿ (Whisky) ಬೇರೆ ಯಾವುದೇ ಬ್ರಾಂಡ್ ಅಲುಗಾಡಿಸಲು ಸಾಧ್ಯವಾಗದಷ್ಟು ಗಟ್ಟಿಯಾಗಿ ನೆಲೆ ನಿಂತಿದೆ.. ಇದಕ್ಕೆ ಕಾರಣವೇನು.. ಭಾರತಕ್ಕೆ ಈ ಜನಪ್ರಿಯ ಪಾನಿಯ ಎಂಟ್ರಿ ಕೊಟ್ಟಿದ್ದೇಗೆ.. ಸಂಪೂರ್ಣ ಕಥೆ ಇಲ್ಲಿದೆ..
Whisky Intresting Facts : ಯುವಕರೇ ಇರಲಿ ಅಥವಾ ಹಿರಿಯರೇ ಇರಲಿ, ಮದುವೆ ಸಮಾರಂಭವಿರಲಿ, ಹಬ್ಬ-ಹರಿದಿನಗಳ ಆಚರಣೆಯಿರಲಿ ಅಥವಾ ವೀಕೆಂಡ್‌ನಲ್ಲಿ ಸ್ನೇಹಿತರ ಗೆಟ್‌ಟುಗೆದರ್ ಇರಲಿ—ಎಲ್ಲಾ ಸಂದರ್ಭಗಳಿಗೂ ವಿಸ್ಕಿ ಮಸ್ತ್ ಕನೆಕ್ಷನ್ ಹೊಂದಿದೆ. ಹಾಗಾದರೆ, ಬ್ರಿಟಿಷರ ಕಾಲದಲ್ಲಿ ಸಾಗರ ದಾಟಿ ಬಂದ ಈ ವಿಸ್ಕಿ ನಮ್ಮ ದೇಶದಲ್ಲಿ ಇಷ್ಟೊಂದು ಆಳವಾಗಿ ಬೇರೂರಲು ಅಸಲಿ ಕಾರಣವೇನು? ಇದರ ರೋಚಕ ಹಿನ್ನೆಲೆ ಇಲ್ಲಿದೆ.
ಬ್ರಿಟಿಷರ ಜೊತೆ ಭಾರತಕ್ಕೆ ಎಂಟ್ರಿ ಕೊಟ್ಟ ವಿಸ್ಕಿ
ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, 19ನೇ ಶತಮಾನದ ಮಧ್ಯಭಾಗದಲ್ಲಿ ಯುರೋಪ್‌ನಲ್ಲಿ ದ್ರಾಕ್ಷಿತೋಟಗಳಿಗೆ ರೋಗ ತಗುಲಿ ವೈನ್ ಉತ್ಪಾದನೆ ಕುಸಿದಾಗ ಸ್ಕಾಚ್ ವಿಸ್ಕಿ ಜಗತ್ತಿನ ಗಮನ ಸೆಳೆಯಿತು. ಆ ಸಮಯದಲ್ಲಿ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಸೈನಿಕರು ತಾವು ಹೋದಲ್ಲೆಲ್ಲಾ ವಿಸ್ಕಿ ಬಾಟಲಿಗಳನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದರು. ಹೀಗೆ 20ನೇ ಶತಮಾನದ ಆರಂಭದ ವರ್ಷಗಳಲ್ಲಿ ವಿಸ್ಕಿ ನಮ್ಮ ದೇಶದ ನೆಲ ತುಳಿಯಿತು. ಆರಂಭದಲ್ಲಿ ಇದರ ಬಳಕೆಗೆ ಬ್ರಿಟಿಷ್ ಸರಕಾರದ ಕಠಿಣ ನಿರ್ಬಂಧಗಳಿದ್ದವು. ಆದರೆ ಕಾಲಾನಂತರದಲ್ಲಿ ಬ್ರಿಟಿಷರ ಕ್ಲಬ್‌ಗಳು, ರಾಜಮನೆತನದ ಅರಮನೆಗಳ ಔತಣಕೂಟಗಳ ಮೂಲಕ ನಿಧಾನವಾಗಿ ಹೊರಬಂದ ವಿಸ್ಕಿ, ಕಾಲಕ್ರಮೇಣ ಭಾರತೀಯರ ಮನೆ ಮನಗಳನ್ನು ಪ್ರವೇಶಿಸಿತು.
ಭಾರತೀಯರು ವಿಸ್ಕಿಯನ್ನು ಇಷ್ಟಪಡಲು ಪ್ರಮುಖ ಕಾರಣಗಳು
ನಮ್ಮ ಹವಾಮಾನಕ್ಕೆ ಹೇಳಿ ಮಾಡಿಸಿದ ಪಾನೀಯ: ಭಾರತದಲ್ಲಿ ಬಹುತೇಕ ಕಡೆ ವರ್ಷವಿಡೀ ಬಿಸಿಲು ಹಾಗೂ ಸೆಖೆ ಹೆಚ್ಚು. ಹೀಗಾಗಿ ವಿಸ್ಕಿಯನ್ನು ನೀರು, ಸೋಡಾ ಅಥವಾ ಐಸ್ ಕ್ಯೂಬ್‌ಗಳ (ಐಸ್ ತುಂಡುಗಳು) ಜೊತೆ ಬೆರೆಸಿ ಸೇವಿಸುವುದು ಇಲ್ಲಿನ ಹವಾಮಾನಕ್ಕೆ ಅತ್ಯಂತ ಸೂಕ್ತವೆನಿಸುತ್ತದೆ. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಒಂದು ರಿಫ್ರೆಶ್ ಅನುಭವ ನೀಡುತ್ತದೆ.
ಖಾರವಾದ ಊಟಕ್ಕೆ ಬೆಸ್ಟ್ ಕಾಂಬಿನೇಷನ್: ನಮ್ಮ ಭಾರತೀಯ ಅಡುಗೆಗಳು ಮಸಾಲೆ ಪದಾರ್ಥಗಳಿಂದ ಕೂಡಿದ್ದು, ಬಾಯಲ್ಲಿ ಖಾರ ಕಾರವಾಗಿರುತ್ತವೆ. ಅದರಲ್ಲೂ ವಿಶೇಷವಾಗಿ ಮಾಂಸಾಹಾರಿ ಊಟ ಮಾಡುವಾಗ ಸೋಡಾ ಬೆರೆಸಿದ ವಿಸ್ಕಿ ಕುಡಿದರೆ ಸಿಗುವ ಮಜಾವೇ ಬೇರೆ. ಇದು ನಾಲಿಗೆಯ ಮೇಲಿನ ಮಸಾಲೆಯ ರುಚಿಯನ್ನು ಬ್ಯಾಲೆನ್ಸ್ ಮಾಡಿ, ಊಟದ ಮಜಾವನ್ನು ಇಮ್ಮಡಿಗೊಳಿಸುತ್ತದೆ.
ಸಿನಿಮಾಗಳಿಂದ ಮೂಡಿದ ರಾಯಲ್ ಲುಕ್: ನಮ್ಮ ಭಾರತೀಯ ಚಿತ್ರರಂಗದಲ್ಲಿ ವಿಸ್ಕಿಯನ್ನು ಯಾವತ್ತಿಗೂ ಅಧಿಕಾರ, ಶ್ರೀಮಂತಿಕೆ ಮತ್ತು ಘನತೆಯ ಸಂಕೇತವಾಗಿಯೇ ತೋರಿಸುತ್ತಾ ಬಂದಿದ್ದಾರೆ. ಸಿನಿಮಾದಲ್ಲಿ ಹೀರೋಗಳು ಸ್ಟೈಲ್ ಆಗಿ ಗ್ಲಾಸ್ ಹಿಡಿದು ಕುಡಿಯುವ ದೃಶ್ಯಗಳು ಜನಸಾಮಾನ್ಯರ ಮೇಲೂ ಗಾಢವಾದ ಪ್ರಭಾವ ಬೀರಿದವು. ಇದು ಒಂದು ಸ್ಟೇಟಸ್ ಸಿಂಬಲ್ ಆಗಿ ಬೆಳೆಯಲು ಕಾರಣವಾಯಿತು.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ವಿಸ್ಕಿಯ ದರ್ಬಾರು
ಒಂದು ಕಾಲದಲ್ಲಿ ಬ್ರಿಟಿಷರಿಂದ ನಮ್ಮ ದೇಶಕ್ಕೆ ಬಂದ ವಿಸ್ಕಿ ಸಂಸ್ಕೃತಿಯನ್ನು ಭಾರತೀಯರು ಎಷ್ಟು ಅಳವಡಿಸಿಕೊಂಡಿದ್ದಾರೆಂದರೆ, ಇಂದು ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ವಿಸ್ಕಿ ಮಾರಾಟವಾಗುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿಶೇಷವೆಂದರೆ, ವಿದೇಶಿ ಬ್ರಾಂಡ್‌ಗಳಷ್ಟೇ ಅಲ್ಲದೆ, ಇಂದು ನಮ್ಮದೇ ದೇಶದಲ್ಲಿ ತಯಾರಾಗುತ್ತಿರುವ 'ಅಮೃತ್' (Amrut) ಮತ್ತು 'ಇಂದ್ರಿ' (Indri) ದಂತಹ ಸ್ವದೇಶಿ ಸಿಂಗಲ್ ಮಾಲ್ಟ್ ವಿಸ್ಕಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರೋಬ್ಬರಿ ಅತ್ಯುತ್ತಮ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಜಾಗತಿಕ ವಿಸ್ಕಿ ಪ್ರಿಯರನ್ನು ಬೆರಗುಗೊಳಿಸುವ ಮೂಲಕ ಭಾರತೀಯ ಬ್ರಾಂಡ್‌ಗಳು ಈಗ ಇಡೀ ವಿಶ್ವದ ಮಾರುಕಟ್ಟೆಯನ್ನೇ ಆಳುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜೀವನಶೈಲಿ ಬದಲಾಗಬಹುದು, ಹೊಸ ಹೊಸ ಪಾನೀಯಗಳು ಮಾರುಕಟ್ಟೆಗೆ ಬರಬಹುದು, ಆದರೆ ಭಾರತೀಯರ ಪಾಲಿಗೆ ವಿಸ್ಕಿ ಎಂದರೆ ಕೇವಲ ಒಂದು ಪಾನೀಯವಲ್ಲ, ಅದೊಂದು ಎಮೋಷನ್..