ಬೆಂಗಳೂರು : ತಾತ ತಮ್ಮ ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿದ ಬಳಿಕ ಜನಿಸಿದ ಮೊಮ್ಮಗನೊಬ್ಬ, ತಂದೆಗೆ ಬಂದಿದ್ದ ಜಮೀನಿನಲ್ಲಿ ತನಗೂ ಪಾಲು ಬೇಕು ಅಂತ ಕೋರ್ಟ್ ಮೆಟ್ಟಿಲೇರಿದ್ದ.. ಆದರೆ ಮೊಮ್ಮಗನ ಈ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.. ಹಿಂದೂ ವಾರಸುದಾರಿಕೆ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ತಂದೆಗೆ ವೈಯಕ್ತಿಕವಾಗಿ ಬಂದ ಆಸ್ತಿಯಲ್ಲಿ ಮಗನಿಗೆ ಹುಟ್ಟಿನಿಂದಲೇ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.. ಹಾಗಾದರೆ ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಯಾವಾಗ ಹಕ್ಕು ಸಿಗುತ್ತೆ..? ತಂದೆ ಆಸ್ತಿಯನ್ನು ಮಾರಾಟ ಮಾಡಿದರೆ ಮಗ ಅದನ್ನು ಪ್ರಶ್ನಿಸಲು ಸಾಧ್ಯವಿಲ್ವಾ..? ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪಿನ ಹಿಂದಿನ ಕಾನೂನು ಏನು..? ಬನ್ನಿ ತಿಳಿಯೋಣ..
ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುತ್ತಾ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. 1993ರಲ್ಲಿ ಎನ್. ರಾಮಕೃಷ್ಣನ್ ಎಂಬ ವ್ಯಕ್ತಿ ತಮ್ಮ ಮಕ್ಕಳಿಗೆ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಿದ್ದರು. ಈ ಹಂಚಿಕೆ ನಡೆದ ಸಂದರ್ಭದಲ್ಲಿ ಈಗ ಕೋರ್ಟ್ ಮೆಟ್ಟಿಲೇರಿದ್ದ ಮೊಮ್ಮಗ ಇನ್ನೂ ಹುಟ್ಟಿರಲಿಲ್ಲ. ಹಂಚಿಕೆಯಲ್ಲಿ ಆತನ ತಂದೆಗೆ ಜಮೀನು ಬಂದಿತ್ತು. ಆದರೆ ಅಜ್ಜನ ಆಸ್ತಿ ಎಂಬ ಕಾರಣಕ್ಕೆ ತಂದೆಗೆ ಬಂದ ಜಮೀನಿನಲ್ಲಿ ತನಗೂ ಪಾಲು ಬೇಕು ಎಂದು ಮಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದಲ್ಲಿ ಮಗನ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. ತಂದೆಗೆ ವೈಯಕ್ತಿಕ ಆಸ್ತಿಯಾಗಿ ಬಂದ ಜಮೀನಿನಲ್ಲಿ ಮಗನಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಆಸ್ತಿ ಹಂಚಿಕೆಯಷ್ಟೇ ಅಲ್ಲ, ತಂದೆಯ ಆಸ್ತಿ ಮಾರಾಟದ ಹಕ್ಕೂ ಚರ್ಚೆಗೆ ಬಂದಿತ್ತು. 1993ರಲ್ಲಿ ತಾತ ಆಸ್ತಿ ಹಂಚಿಕೆ ಮಾಡಿದ ಬಳಿಕ, ತಂದೆಗೆ ಬಂದಿದ್ದ ಜಮೀನಿನ ಒಂದು ಭಾಗವನ್ನು 1997ರಲ್ಲಿ ಬೇರೆಯವರಿಗೆ ಮಾರಾಟ ಮಾಡಲಾಗಿತ್ತು. ಆದರೆ ತಂದೆ ಮಾರಾಟ ಮಾಡಿದ ಜಮೀನಿನಲ್ಲಿ ತನಗೂ ಪಾಲು ಬೇಕು ಎಂದು ಅವರ ಮಗ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆಗ ಈ ಮಗ ಅಪ್ರಾಪ್ತನಾಗಿದ್ದ. ತಾಯಿಯ ಸಂರಕ್ಷಣೆಯಲ್ಲಿ ಆಸ್ತಿ ಹಕ್ಕಿಗಾಗಿ ಕಾನೂನು ಹೋರಾಟ ನಡೆಸಿದ್ದ. ಆದರೆ 1993ರ ಆಸ್ತಿ ಹಂಚಿಕೆಯಾಗಲಿ, 1997ರ ಮಾರಾಟವಾಗಲಿ ಈ ಹಿಂದೆ ಪ್ರಶ್ನಿಸಿರಲಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಗಮನಿಸಿದೆ. ಕೊನೆಗೆ ತಂದೆಗೆ ಕಾನೂನುಬದ್ಧವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ತೀರ್ಪಿನ ಕೇಂದ್ರಬಿಂದು ಹಿಂದೂ ವಾರಸುದಾರಿಕೆ ಕಾಯ್ದೆ 1956ರ ಸೆಕ್ಷನ್ 8. ಈ ಸೆಕ್ಷನ್ ಪ್ರಕಾರ, ಹಿಂದೂ ಪುರುಷನ ಮರಣದ ನಂತರ ಆತನ ಆಸ್ತಿ ಕಾನೂನುಬದ್ಧ ವಾರಸುದಾರರಿಗೆ ಹೇಗೆ ಹಂಚಿಕೆಯಾಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ತಂದೆಗೆ ಅಜ್ಜನಿಂದ ಆಸ್ತಿ ಬಂದಿದ್ದರೆ, ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ. ಅಂದರೆ ಮಗ ಹುಟ್ಟಿದ್ದಾನೆ ಎಂಬ ಒಂದೇ ಕಾರಣಕ್ಕೆ ಆಸ್ತಿಯಲ್ಲಿ ಆತನಿಗೆ ಪಾಲು ಸೃಷ್ಟಿಯಾಗುವುದಿಲ್ಲ. ತಂದೆ ಆಸ್ತಿಯನ್ನು ಉಳಿಸಿಕೊಳ್ಳಬಹುದು, ಮಾರಾಟ ಮಾಡಬಹುದು ಅಥವಾ ಕಾನೂನಿನ ಪ್ರಕಾರ ಬೇರೆಯವರಿಗೆ ವರ್ಗಾಯಿಸಬಹುದು. ಇದೇ ಕಾರಣಕ್ಕೆ ಈ ಪ್ರಕರಣದಲ್ಲಿ ಮೊಮ್ಮಗನ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಹಾಗಾದರೆ ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಯಾವ ಸಂದರ್ಭದಲ್ಲೂ ಪಾಲು ಸಿಗುವುದಿಲ್ಲವೇ..? ಇಲ್ಲ.. ಇಲ್ಲಿ ಒಂದು ಮುಖ್ಯ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ತಂದೆಗೆ ವೈಯಕ್ತಿಕವಾಗಿ ಬಂದ ಆಸ್ತಿ ಮತ್ತು ಅವಿಭಕ್ತ ಹಿಂದೂ ಕುಟುಂಬದ ಪಿತ್ರಾರ್ಜಿತ ಆಸ್ತಿ ಎರಡೂ ಒಂದೇ ಅಲ್ಲ. ಉದಾಹರಣೆಗೆ, ತಾತನ ಆಸ್ತಿ ಅವಿಭಕ್ತ ಕುಟುಂಬದ ಆಸ್ತಿಯಾಗಿದ್ದು, ಕಾನೂನಿನ ಪ್ರಕಾರ ಮೊಮ್ಮಗ ಸಹಪಾಲುದಾರನಾಗಿದ್ದರೆ ಆತನಿಗೆ ಜನ್ಮಸಿದ್ಧ ಹಕ್ಕು ಇರಬಹುದು. ಆದರೆ ತಾತನ ಮರಣದ ನಂತರ ಸೆಕ್ಷನ್ 8ರ ಅಡಿಯಲ್ಲಿ ತಂದೆಗೆ ವೈಯಕ್ತಿಕವಾಗಿ ಬಂದ ಆಸ್ತಿಯಲ್ಲಿ ಅದೇ ಹಕ್ಕು ಇರುವುದಿಲ್ಲ. ಹೀಗಾಗಿ ಆಸ್ತಿ ಎಲ್ಲಿಂದ ಬಂತು, ಯಾವಾಗ ಹಂಚಿಕೆಯಾಯಿತು, ಯಾವ ಕಾನೂನಿನ ಅಡಿಯಲ್ಲಿ ಹಂಚಿಕೆಯಾಯಿತು ಎಂಬುದನ್ನು ಪರಿಶೀಲಿಸಬೇಕು. ಕೇವಲ ಅಜ್ಜನ ಆಸ್ತಿ ಎಂಬ ಕಾರಣಕ್ಕೆ ಪಾಲು ಕೇಳಲು ಸಾಧ್ಯವಿಲ್ಲ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಆಸ್ತಿ ಹಕ್ಕಿನ ವಿಚಾರದಲ್ಲಿ ಕುಟುಂಬಗಳಲ್ಲಿರುವ ಹಲವು ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ. ತಾತನ ಆಸ್ತಿ ಎಂಬ ಕಾರಣಕ್ಕೆ ಮೊಮ್ಮಗನಿಗೆ ಪ್ರತಿಯೊಂದು ಸಂದರ್ಭದಲ್ಲೂ ಪಾಲು ಸಿಗುವುದಿಲ್ಲ. ತಂದೆಗೆ ವೈಯಕ್ತಿಕ ಆಸ್ತಿಯಾಗಿ ಬಂದಿದ್ದರೆ, ಅದನ್ನು ಮಾರಾಟ ಮಾಡಲು ಮಗನ ಅನುಮತಿ ಬೇಕಾಗುವುದಿಲ್ಲ. ಆದರೆ ನಿಜವಾಗಿಯೂ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಅದರ ಹಕ್ಕಿನ ಲೆಕ್ಕಾಚಾರವೇ ಬೇರೆ. ಹೀಗಾಗಿ ಆಸ್ತಿ ವಿವಾದ ಎದುರಾದಾಗ ಕೇವಲ ಸಂಬಂಧದ ಆಧಾರದ ಮೇಲೆ ಹಕ್ಕು ನಿರ್ಧರಿಸುವುದಕ್ಕಿಂತ, ಆಸ್ತಿಯ ಮೂಲ ದಾಖಲೆಗಳು ಮತ್ತು ಹಿಂದಿನ ಹಂಚಿಕೆಯ ವಿವರಗಳನ್ನು ಪರಿಶೀಲಿಸುವುದು ಮುಖ್ಯ.
ಒಟ್ಟಿನಲ್ಲಿ, ಅಜ್ಜನ ಆಸ್ತಿ ಅಂದ ಮಾತ್ರಕ್ಕೆ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕು ಸಿಗುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ತಂದೆಗೆ ಕಾನೂನಿನ ಪ್ರಕಾರ ವೈಯಕ್ತಿಕ ಆಸ್ತಿಯಾಗಿ ಬಂದಿದ್ದರೆ, ಅದನ್ನು ಮಾರಾಟ ಮಾಡುವ ಅಧಿಕಾರ ತಂದೆಗೆ ಇರುತ್ತದೆ. ಆದರೆ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಕಾನೂನು ಬೇರೆ ರೀತಿಯಲ್ಲಿದೆ. ಹೀಗಾಗಿ ಆಸ್ತಿ ಹಂಚಿಕೆ ಮಾಡುವಾಗಲೂ, ಖರೀದಿ ಮಾಡುವಾಗಲೂ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಅತ್ಯಗತ್ಯ. ಅಜ್ಜನ ಆಸ್ತಿ, ತಂದೆಯ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ.. ಈ ಮೂರರ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದೇ ಈ ತೀರ್ಪಿನ ಮುಖ್ಯ ಸಂದೇಶ.