ಪಾಕಿಸ್ತಾನ ವಿರುದ್ಧ 80 ಎಸೆತಗಳಲ್ಲಿ ಸ್ಫೋಟಕ ಶತಕ! 19ರ ಹರೆಯದ ಅರ್ಜುನ್ ರಜಪೂತ್ ಯಾರು?
ಪಾಕಿಸ್ತಾನ ವಿರುದ್ಧದ U19 ಏಷ್ಯಾಕಪ್ ಪಂದ್ಯದಲ್ಲಿ 19 ವರ್ಷದ ಅರ್ಜುನ್ ರಜಪೂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 125ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಅವರು 11 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 107 ರನ್ ಗಳಿಸಿ ಗಮನ ಸೆಳೆದರು.
Arjun Rajput: ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಅರ್ಜುನ್ ರಜಪೂತ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಜವಾಬ್ದಾರಿಯುತ ಆಟವಾಡಿದ ಅರ್ಜುನ್, ಪಾಕಿಸ್ತಾನದ ಬೌಲರ್‌ಗಳ ಎದುರು ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಕೇವಲ 80 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. 19 ವರ್ಷದ ಈ ಯುವ ಆಟಗಾರನ ಅಮೋಘ ಇನ್ನಿಂಗ್ಸ್ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಭಾರತದ ಪರ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಪುತ್ರರಾದ ಆರ್ಯವೀರ್ ಸೆಹ್ವಾಗ್ ಹಾಗೂ ಅನ್ವೇ ದ್ರಾವಿಡ್ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜುನ್ ತಂಡದ ಜವಾಬ್ದಾರಿ ಹೊತ್ತು ಆಡಿದ ರೀತಿ ಗಮನಾರ್ಹವಾಗಿತ್ತು.
22 ರನ್‌ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಪಂದ್ಯದ ಆರಂಭದಲ್ಲಿ ಉತ್ತಮ ಆರಂಭ ಸಿಗಲಿಲ್ಲ. ಕೇವಲ 22 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಅರ್ಜುನ್ ರಜಪೂತ್, ಆತುರಪಡದೆ ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿದರು. ಎದುರಾಳಿ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸುತ್ತಾ ತಂಡದ ಇನ್ನಿಂಗ್ಸ್‌ಗೆ ಆಸರೆಯಾದರು. ಅರ್ಜುನ್ ತಮ್ಮ ಅರ್ಧಶತಕವನ್ನ ತಲುಪಲು 43 ಎಸೆತಗಳನ್ನ ತೆಗೆದುಕೊಂಡರು.
ಆರಂಭದಲ್ಲಿ ಸಂಯಮದಿಂದ ಆಡಿದ ಅವರು ಅರ್ಧಶತಕದ ಬಳಿಕ ತಮ್ಮ ಆಟದ ವೇಗವನ್ನ ಹೆಚ್ಚಿಸಿದರು. ಪಾಕಿಸ್ತಾನದ ಬೌಲರ್‌ಗಳ ಎಸೆತಗಳನ್ನ ಸಮರ್ಥವಾಗಿ ಎದುರಿಸಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ರನ್‌ಗಳಿಸಿದರು. ಕೇವಲ 80 ಎಸೆತಗಳಲ್ಲಿ ಶತಕ ಪೂರೈಸಿದ ಅರ್ಜುನ್, ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 11 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನ ಸಿಡಿಸಿದರು. ಅಂತಿಮವಾಗಿ 107 ರನ್‌ಗಳಿಸಿ ರಿಜ್ವಾನುಲ್ಲಾ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಅವರ ವಿಕೆಟ್ ಪತನದ ಬಳಿಕ ಭಾರತದ ಬ್ಯಾಟಿಂಗ್ ಮತ್ತೆ ಕುಸಿತ ಕಂಡಿತು. ಆದರೆ ಅದಕ್ಕೂ ಮುನ್ನ ಅರ್ಜುನ್ ತಂಡಕ್ಕೆ ಗೌರವಯುತ ಮೊತ್ತದತ್ತ ಸಾಗಲು ನೆರವಾಗಿದ್ದರು.
ಯಾರು ಈ ಅರ್ಜುನ್ ರಜಪೂತ್?
ಪಾಕಿಸ್ತಾನ ವಿರುದ್ಧದ ಶತಕದ ಮೂಲಕ ಗಮನ ಸೆಳೆದಿರುವ ಅರ್ಜುನ್ ರಜಪೂತ್ ಪಂಜಾಬ್‌ನ ಜಲಂಧರ್ ಮೂಲದವರು. ಅವರಿಗೆ 19 ವರ್ಷ ವಯಸ್ಸು. ಅವರ ತಂದೆಯ ಹೆಸರು ಹೋತಿ ರಾಮ್. ಅವರ ಕುಟುಂಬ ಆರ್ಥಿಕ ಸಂಕಷ್ಟಗಳನ್ನ ಎದುರಿಸುತ್ತಿದ್ದರೂ ಅರ್ಜುನ್ ಅವರ ಕ್ರಿಕೆಟಿಗನಾಗುವ ಕನಸಿಗೆ ಬೆಂಬಲವಾಗಿ ನಿಂತಿದೆ. ಅರ್ಜುನ್ ಅವರ ಅಜ್ಜ ಚೋಲೆ-ಕುಲ್ಚಾ ಮಾರಾಟ ಮಾಡುತ್ತಿದ್ದರು. ಸೀಮಿತ ಆರ್ಥಿಕ ಸಂಪನ್ಮೂಲಗಳ ನಡುವೆಯೂ ಕುಟುಂಬದವರು ಅವರ ಕ್ರಿಕೆಟ್ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ಈ ಬೆಂಬಲವೇ ಕ್ರಿಕೆಟ್ ಕ್ಷೇತ್ರದಲ್ಲಿ ಮುಂದೆ ಸಾಗಲು ಅವರಿಗೆ ನೆರವಾಗಿದೆ.
ಹರ್ಭಜನ್ ಸಿಂಗ್ ಅಕಾಡೆಮಿಯಲ್ಲಿ ತರಬೇತಿ
ಅರ್ಜುನ್ ರಜಪೂತ್ ಅವರು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ನಿರಂತರ ಅಭ್ಯಾಸ ಮತ್ತು ಪಂದ್ಯಗಳಲ್ಲಿನ ಉತ್ತಮ ಪ್ರದರ್ಶನದ ಮೂಲಕ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿದ್ದಾರೆ. ಇದರ ಪರಿಣಾಮ ಪಂಜಾಬ್ ಅಂಡರ್-16 ತಂಡದ ನಾಯಕತ್ವದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.
ವಿನೂ ಮಂಕಡ್ ಟ್ರೋಫಿ ಹಾಗೂ ಕೂಚ್ ಬೆಹರ್ ಟ್ರೋಫಿಯಂತಹ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಅವರಿಗೆ ಭಾರತೀಯ ಅಂಡರ್-19 ತಂಡದಲ್ಲಿ ಅವಕಾಶ ದೊರೆಯಿತು. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಅರ್ಜುನ್ ಕೇವಲ ಬ್ಯಾಟಿಂಗ್‌ನಲ್ಲಷ್ಟೇ ಅಲ್ಲ, ಬೌಲಿಂಗ್‌ನಲ್ಲಿಯೂ ಸಾಮರ್ಥ್ಯ ಹೊಂದಿದ್ದಾರೆ. ಅವರು ಆಫ್ ಸ್ಪಿನ್ನರ್ ಆಗಿಯೂ ತಂಡಕ್ಕೆ ನೆರವಾಗಬಲ್ಲರು. ತಮ್ಮ ಹಿಂದಿನ ಪಂದ್ಯವೊಂದರಲ್ಲಿ ಕೇವಲ 8 ರನ್ ನೀಡಿ ಮೂರು ವಿಕೆಟ್‌ಗಳನ್ನ ಕಬಳಿಸಿರುವುದು ಅವರ ಬೌಲಿಂಗ್ ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ.
ಆರ್ಯವೀರ್ ಸೆಹ್ವಾಗ್, ಅನ್ವೇ ದ್ರಾವಿಡ್ ಬ್ಯಾಟಿಂಗ್ ವೈಫಲ್ಯ
ಈ ಪಂದ್ಯದಲ್ಲಿ ಭಾರತದ ಪರ ಆಡಿದ ಯುವ ಆಟಗಾರರಲ್ಲಿ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವೇ ದ್ರಾವಿಡ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ಇಬ್ಬರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಆರ್ಯವೀರ್ ಸೆಹ್ವಾಗ್ 22 ರನ್ ಗಳಿಸಿದರೆ, ಅನ್ವೇ ದ್ರಾವಿಡ್ 10 ರನ್‌ಗಳಿಗೆ ಔಟಾದರು. ಇವರಿಬ್ಬರ ವಿಕೆಟ್‌ಗಳನ್ನು ಪಾಕಿಸ್ತಾನದ ಬೌಲರ್ ನಿಕಾಬ್ ಶಫೀಕ್ ಪಡೆದರು.
ಭಾರತದ ನಾಯಕ ಲಕ್ಷ್ಯ ರಾಯ್‌ಚಂದಾನಿ ಖಾತೆ ತೆರೆಯುವ ಮೊದಲೇ ಔಟಾದರು. ವಿ.ಕೆ.ವಿನೀತ್ 8 ರನ್ ಹಾಗೂ ಯಶವರ್ಧನ್ ಚೌಹಾಣ್ ಕೇವಲ 1 ರನ್ ಗಳಿಸಿದರು. ಪಾಕಿಸ್ತಾನದ ಬೌಲಿಂಗ್ ವಿಭಾಗದಲ್ಲಿ ಅಲಿ ರಜಾ ಮತ್ತು ರಿಜ್ವಾನುಲ್ಲಾ ತಲಾ ಎರಡು ವಿಕೆಟ್ ಪಡೆದರು. ಭಾರತದ ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರರು ಬೇಗನೆ ಪೆವಿಲಿಯನ್‌ಗೆ ಮರಳಿದರೂ ಅರ್ಜುನ್ ರಜಪೂತ್ ಅವರ ಶತಕ ತಂಡದ ಪರ ಪ್ರಮುಖ ಇನ್ನಿಂಗ್ಸ್ ಎನಿಸಿಕೊಂಡಿತು. ಈ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡಕ್ಕೆ 209 ರನ್‌ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ 46.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು 208 ರನ್ ಗಳಿಸಿದೆ.
ಒಟ್ನಲ್ಲಿ ಪಂಜಾಬ್‌ನ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅರ್ಜುನ್ ರಜಪೂತ್, ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಅಂಡರ್-19 ಏಷ್ಯಾಕಪ್‌ನಲ್ಲಿ ಗಮನ ಸೆಳೆದಿದ್ದಾರೆ. ಪಾಕಿಸ್ತಾನದ ವಿರುದ್ಧದ 107 ರನ್‌ಗಳ ಇನ್ನಿಂಗ್ಸ್ ಅವರ ಕ್ರಿಕೆಟ್ ಪಯಣದಲ್ಲಿ ಪ್ರಮುಖ ಪ್ರದರ್ಶನವಾಗಿ ಗುರುತಿಸಿಕೊಂಡಿದೆ.