West Indies set huge target of 296 runs for Team India: ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ರೋಚಕವಾಗಿ ಆರಂಭಗೊಂಡಿದೆ. ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸದ ಭಾಗವಾಗಿ, ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವು ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಿರ್ಧಾರದಂತೆ ಮೈದಾನಕ್ಕಿಳಿದ ವೆಸ್ಟ್ ಇಂಡೀಸ್ ತಂಡವು, ಆರಂಭಿಕ ಆಘಾತಗಳ ಹೊರತಾಗಿಯೂ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬೃಹತ್ 296 ರನ್‌ಗಳ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ನೀಡಿದೆ.
ಪಂದ್ಯದ ಆರಂಭದಲ್ಲಿ ಭಾರತೀಯ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ಭಾರತೀಯ ಬೌಲರ್‌ಗಳು ಆರಂಭಿಕ ಓವರ್‌ಗಳಲ್ಲಿ ಪಿಚ್‌ನ ಲಾಭ ಪಡೆದು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯತ್ನಿಸಿದರು. ವೆಸ್ಟ್ ಇಂಡೀಸ್ ಪರವಾಗಿ ಇನ್ನಿಂಗ್ಸ್ ಆರಂಭಿಸಲು ಜಾನ್ ಕ್ಯಾಂಪ್ಬೆಲ್ John Campbell ಮತ್ತು ಜಸ್ಟಿನ್ ಗ್ರೀವ್ಸ್ Justin Greaves ಇಬರು ಕ್ರೀಸ್‌ಗಿಳಿದರು. ಭಾರತೀಯ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ಮೊದಲ ವಿಕೆಟ್‌ಗೆ ಅಮೂಲ್ಯವಾದ ರನ್‌ಗಳನ್ನು ಕಲೆಹಾಕಿತು.
ಆರಂಭಿಕ ಆಟಗಾರ ಜಾನ್ ಕ್ಯಾಂಪ್ಬೆಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 60 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 62 ರನ್ ಬಾರಿಸಿ ತಂಡಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟರು. ಇವರ ಜತೆಗೆ ಜಸ್ಟಿನ್ ಗ್ರೀವ್ಸ್ ಕೂಡ ತಾಳ್ಮೆಯ ಆಟವಾಡಿ ತಂಡದ ಮೊತ್ತವನ್ನು ಮುನ್ನಡೆಸಿದರು. ತಂಡದ ಸ್ಕೋರ್ 135 ರನ್‌ಗಳಿದ್ದಾಗ ಜಾನ್ ಕ್ಯಾಂಪ್ಬೆಲ್ ಔಟ್ ಅಗುವ ಮೂಲಕ ವಿಂಡೀಸ್ ಮೊದಲ ವಿಕೆಟ್ ಕಳೆದುಕೊಂಡಿತು. ಇವರನ್ನು ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ ಅವರು ಅದ್ಭುತವಾದ ಕ್ಯಾಚ್ ಹಿಡಿಯುವ ಮೂಲಕ ಔಟ್ ಮಾಡಿದರು.
ಜಸ್ಟಿನ್ ಗ್ರೀವ್ಸ್ ಕ್ರೀಸ್‌ನಲ್ಲಿ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಹೀಗಾಗಿ ಜಸ್ಟಿನ್ ಗ್ರೀವ್ಸ್ ಕೇವಲ 108 ಎಸೆತಗಳಲ್ಲಿ 12 ಅದ್ಭುತವಾದ ಬೌಂಡರಿಗಳೊಂದಿಗೆ 101 ರನ್ ಬಾರಿಸಿದರು. ಇದರಲ್ಲಿ ಯಾವುದೇ ಸಿಕ್ಸರ್ ಬಾರಿಸಲಿಲ್ಲ. ಆದರೆ ಕುಲ್‌ದೀಪ್ ಯಾದವ್ ಅವರ ಬೌಲಿಂಗ್‌ನಲ್ಲಿ ಜಸ್ಟಿನ್ ಗ್ರೀವ್ಸ್ ಎಲ್‌ಬಿಡಬ್ಲು ಔಟ್ ಆಗುವ ಮೂಲಕ ತಮ್ಮ ಬ್ಯಾಟಿಂಗ್ ಅನ್ನು ಕೊನೆಗೊಳಿಸಿದರು. ನಂತರ ಕ್ರೀಸ್‌ಗಿಳಿದ ಅನುಭವಿ ಬ್ಯಾಟರ್ ಹಾಗೂ ನಾಯಕ ಶಾಯ್ ಹೋಪ್ Shai Hope ತಂಡದ ಪರವಾಗಿ ಜಾಸ್ತಿ ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಶಾಯ್ ಹೋಪ್ ಮತ್ತು ಕೀಸಿ ಕಾರ್ಟಿ Keacy Carty ತಂಡದ ರನ್ ಗತಿಯನ್ನು ಕಾಯ್ದುಕೊಳ್ಳಲು ಯತ್ನಿಸಿದರು. ಕೀಸಿ ಕಾರ್ಟಿ 13 ರನ್ ಗಳಿಸಿ ಔಟಾದರೆ, ನಾಯಕ ಶಾಯ್ ಹೋಪ್ ಅವರು ಕೇವಲ 12 ರನ್‌ಗಳಿಗೆ ಔಟಾದರು.
ಭಾರತೀಯ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿದ್ದ ಜಸ್ಟಿನ್ ಗ್ರೀವ್ಸ್ ಅವರನ್ನು ಔಟ್ ಮಾಡುವಲ್ಲಿ ಸ್ಪಿನ್ ಮಾಂತ್ರಿಕ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇನ್ನುಳಿದಂತೆ ಮಧ್ಯಮ ಕ್ರಮದಲ್ಲಿ ಕೀಸಿ ಕಾರ್ಟಿಯವರ ದಿಢೀರ್ ನಿರ್ಗಮನದಿಂದ ವಿಂಡೀಸ್ ಸ್ವಲ್ಪ ಮಟ್ಟಿಗೆ ಸಂಕಷ್ಟಕ್ಕೆ ಸಿಲುಕಿತು. ಯುವ ಆಟಗಾರ ಜುವೆಲ್ ಆಂಡ್ರ್ಯೂ ಖಾತೆ ತೆರೆಯದೆ ಶೂನ್ಯ ಸುತ್ತಿದರೆ, ರೇಸ್ಟನ್ ಚೇಸ್ Roston Chase 24 ರನ್ ಗಳಿಸಿ ನಿರ್ಗಮಿಸಿದರು.
ಆದರೆ ಇನ್ನಿಂಗ್ಸ್‌ನ ಅಂತಿಮ ಹಂತದಲ್ಲಿ ಕ್ರೀಸ್‌ಗೆ ಬಂದ ಮಿಡಲ್ ಬ್ಯಾಟರ್ ಅಮೀರ್ ಜಂಗೂ Amir Jangoo ಅವರು ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಜಂಗೂ ಅತ್ಯಂತ ಆಕ್ರಮಣಕಾರಿ ಹಾಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯರಾಗಿ ಉಳಿದರು. ಇವರು ಕೇವಲ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಗಗನಚುಂಬಿ ಸಿಕ್ಸರ್‌ಗಳ ಸಹಾಯದಿಂದ ಅಜೇಯ 58 ರನ್ ಚಚ್ಚಿದರು. ಕೆಳಕ್ರಮದಲ್ಲಿ ಮ್ಯಾಥ್ಯೂ ಫೋರ್ಡೆ 7 ರನ್ ಹಾಗೂ ಗೂಡಾಕೇಶ್ ಮೋಟಿ ಅಜೇಯ 4 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 296 ರನ್‌ಗಳ ಟಾರ್ಗೆಟ್ ಅನ್ನು ಟೀಮ್ ಇಂಡಿಯಾಗೆ ನೀಡಿದೆ. ವೆಸ್ಟ್ ಇಂಡೀಸ್ ತಂಡಕ್ಕೆ ಹೆಚ್ಚುವರಿಯಾಗಿ 14 ರನ್‌ಗಳು ಲಭಿಸಿರುವುದು ಅದೃಷ್ಟವೇ ಸರಿ.
ಭಾರತದ ಬೌಲಿಂಗ್ ವಿಭಾಗದಲ್ಲಿ ಚೈನಾಮನ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಅವರು ತಮ್ಮ ಕೋಟಾದ 10 ಓವರ್‌ಗಳಲ್ಲಿ ಕೇವಲ 40 ರನ್ ನೀಡಿ ಪ್ರಮುಖವಾದ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವಿಂಡೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ವೇಗಿ ಪ್ರಸಿದ್ಧ್ ಕೃಷ್ಣ ಅವರು 10 ಓವರ್‌ಗಳಲ್ಲಿ 60 ರನ್ ನೀಡಿ 2 ವಿಕೆಟ್ ಪಡೆದರೆ, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 1 ವಿಕೆಟ್ ಪಡೆದರು. ಇನ್ನುಳಿದಂತೆ ಗೂರ್ನೂರ್ ಬ್ರಾರ್, ರವೀಂದ್ರ ಜೇಡಜಾ ಹಾಗೂ ನಮನ್ ಧೀರ್ ಬೌಲಿಂಗ್ ಮಾಡಿದರೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ತಿರುವನಂತಪುರಂನ ಈ ವಂಡೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೃಹತ್ ಟಾರ್ಗೆಟ್ ಅನ್ನೇ ಸೆಟ್ ಮಾಡಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ನಾಯಕ ಶುಭಮನ್ ಗಿಲ್ ಅವರ ಮೇಲೆ ಪಂದ್ಯ ಗೆಲ್ಲುವ ದೊಡ್ಡ ಜವಾಬ್ದಾರಿ ಇದೆ.