“ನಾವೆಲ್ಲರೂ ಸೇರಿಯೇ ಕಳ್ಳಾಟ ಆಡಿದ್ದು”: ಆಸ್ಟ್ರೇಲಿಯಾ ತಂಡದ ದೊಡ್ಡ ಮೋಸದಾಟ ಬಯಲು!
2018ರ ಸ್ಯಾಂಡ್‌ಪೇಪರ್ ಗೇಟ್ ಹಗರಣದ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಉಸ್ಮಾನ್ ಖ್ವಾಜಾ ಹೊಸ ಹೇಳಿಕೆ ನೀಡಿದ್ದಾರೆ. ಚೆಂಡು ವಿರೂಪಗೊಳಿಸುವ ಪ್ರಕರಣದಲ್ಲಿ ಕೇವಲ ಮೂವರು ಆಟಗಾರರಲ್ಲ, ಇಡೀ ತಂಡವೇ ಭಾಗಿಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ತಮ್ಮ ಆತ್ಮಕಥನದಲ್ಲೂ ಈ ವಿಚಾರವನ್ನ ಉಲ್ಲೇಖಿಸಿರುವ ಖ್ವಾಜಾ, ಆಗಿನ ತನಿಖಾಧಿಕಾರಿಗಳು ತಮ್ಮನ್ನ ವಿಚಾರಣೆಗೆ ಕರೆದಿರಲಿಲ್ಲವೆಂದು ತಿಳಿಸಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹಿಂದಿನ ತನಿಖೆಯ ನಿರ್ಣಯಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.
Usman Khawaja on Sandpapergate: ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾದ 2018ರ ‘ಸ್ಯಾಂಡ್‌ಪೇಪರ್ ಗೇಟ್’ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಭಾಗಿಯಾಗಿದ್ದರು ಎಂಬ ಕ್ರಿಕೆಟ್ ಆಸ್ಟ್ರೇಲಿಯಾದ ಹಿಂದಿನ ತನಿಖಾ ವರದಿಯನ್ನ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಪ್ರಶ್ನಿಸಿದ್ದಾರೆ. ಚೆಂಡು ವಿರೂಪಗೊಳಿಸುವ ವಿವಾದದಲ್ಲಿ ಇಡೀ ತಂಡವೇ ಭಾಗಿಯಾಗಿತ್ತು ಎಂದು ಅವರು ನೀಡಿರುವ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ತಮ್ಮ ಹೊಸ ಆತ್ಮಕಥನ ‘ಸಬ್ರ್’ ಪುಸ್ತಕದಲ್ಲಿ ಖ್ವಾಜಾ ಈ ವಿವಾದಕ್ಕೆ ಸಂಬಂಧಿಸಿದ ಹಲವು ಸಂಗತಿಗಳನ್ನ ಉಲ್ಲೇಖಿಸಿದ್ದಾರೆ. ನವೆಂಬರ್ 10ರಂದು ಬಿಡುಗಡೆಯಾಗಲಿರುವ ಈ ಪುಸ್ತಕದ ಆಯ್ದ ಭಾಗಗಳಲ್ಲಿ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಡೆದ ಘಟನೆಗಳ ಬಗ್ಗೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. nine ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಖ್ವಾಜಾ, ಈ ಪ್ರಕರಣದಲ್ಲಿ ಬ್ಯಾಟರ್‌ಗಳು, ಬೌಲರ್‌ಗಳು ಅಥವಾ ಸಿಬ್ಬಂದಿ ಮಾತ್ರವಲ್ಲದೆ ಇಡೀ ತಂಡವೇ ಭಾಗಿಯಾಗಿತ್ತು ಎಂದು ಹೇಳಿದ್ದಾರೆ.
“ನಾವೆಲ್ಲರೂ ಇದರಲ್ಲಿ ಭಾಗಿಯಾಗಿದ್ದೆವು. ಬ್ಯಾಟರ್‌ಗಳಲ್ಲ, ಬೌಲರ್‌ಗಳಲ್ಲ, ಸಿಬ್ಬಂದಿಯೂ ಅಲ್ಲ ಎಂಬುದಲ್ಲ; ನಮ್ಮೆಲ್ಲರಿಗೂ ಇದರ ಅರಿವಿತ್ತು” ಎಂಬ ಅರ್ಥದಲ್ಲಿ ಖ್ವಾಜಾ ತಮ್ಮ ಹೇಳಿಕೆ ನೀಡಿದ್ದಾರೆ. ಈ ಮೂಲಕ 2018ರ ಪ್ರಕರಣದ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ್ದ ತನಿಖೆಯ ನಿರ್ಣಯಕ್ಕೆ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎರಡನೇ ಟೆಸ್ಟ್‌ನಲ್ಲೇ ಸ್ಯಾಂಡ್‌ಪೇಪರ್ ಬಳಕೆ?
ಖ್ವಾಜಾ ಅವರ ಹೇಳಿಕೆಯ ಪ್ರಕಾರ, ಚೆಂಡನ್ನ ವಿರೂಪಗೊಳಿಸುವ ಚರ್ಚೆ ಕೇವಲ ಕೇಪ್‌ಟೌನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯಕ್ಕೆ ಸೀಮಿತವಾಗಿರಲಿಲ್ಲ. ಅದಕ್ಕೂ ಮೊದಲು ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿಯೇ ಚೆಂಡನ್ನ ಹೇಗೆ ಉಜ್ಜಿ ಅದರ ಸ್ವರೂಪ ಬದಲಾಯಿಸಬಹುದು ಎಂಬ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಚರ್ಚೆಗಳು ನಡೆದಿದ್ದವು. ಆ ಪಂದ್ಯದಲ್ಲೂ ಸ್ಯಾಂಡ್‌ಪೇಪರ್ ಬಳಸಲಾಗಿತ್ತು ಎಂದು ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಅಲ್ಲಿಂದ ಹೊರನಡೆದಿದ್ದರು. ಈ ಮೂಲಕ ಅಲ್ಲಿ ನಡೆಯುತ್ತಿದ್ದ ವಿಚಾರಗಳ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಬೇಡ ಎಂಬ ರೀತಿಯಲ್ಲಿ ಅವರು ವರ್ತಿಸಿದ್ದರು ಅಂತಾ ಖ್ವಾಜಾ ಹೇಳಿದ್ದಾರೆ.
ತನಿಖಾಧಿಕಾರಿಗಳು ನನ್ನನ್ನ ವಿಚಾರಿಸಲಿಲ್ಲ ಎಂದ ಖ್ವಾಜಾ
2018ರ ಕೇಪ್‌ಟೌನ್ ಟೆಸ್ಟ್ ಪಂದ್ಯದ ವೇಳೆ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಅವರ ಪಕ್ಕದಲ್ಲೇ ತಾನು ಕುಳಿತಿದ್ದರೂ, ಕ್ರಿಕೆಟ್ ಆಸ್ಟ್ರೇಲಿಯಾದ ತನಿಖಾಧಿಕಾರಿಗಳು ತನ್ನನ್ನ ಒಮ್ಮೆಯೂ ವಿಚಾರಣೆಗೆ ಒಳಪಡಿಸಲಿಲ್ಲವೆಂದು ಖ್ವಾಜಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನಿಖೆಯ ವೇಳೆ ತನ್ನ ಹೇಳಿಕೆಯನ್ನ ಪಡೆಯಬಹುದಿತ್ತು. ಆದರೆ ಅಧಿಕಾರಿಗಳಿಂದ ಯಾವುದೇ ಕರೆ ಬರಲಿಲ್ಲ. ವಿಚಾರಣೆ ನಡೆಯದೆ ಶಿಕ್ಷೆ ಪ್ರಕಟವಾಗಿದ್ದನ್ನ ಕಂಡು ತಮಗೆ ಆಶ್ಚರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇಡೀ ತಂಡವೇ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂಬ ನಿಲುವನ್ನ ತಾನು ಹೊಂದಿದ್ದರಿಂದಲೇ ತನ್ನನ್ನ ವಿಚಾರಣೆಗೆ ಕರೆಯಲಿಲ್ಲ ಎಂಬ ಅನುಮಾನವನ್ನೂ ಖ್ವಾಜಾ ವ್ಯಕ್ತಪಡಿಸಿದ್ದಾರೆ. ಘಟನೆಯ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಹ ಆಟಗಾರರೊಂದಿಗೆ ಮಾತನಾಡುವಾಗ, ಇದು ತಂಡದ ಜವಾಬ್ದಾರಿ ಎಂದು ಹೇಳಿದ್ದೆ. ಆದರೆ ಅಂತಿಮವಾಗಿ ಮೂವರು ಆಟಗಾರರ ಮೇಲಷ್ಟೇ ಆರೋಪ ಮತ್ತು ಶಿಕ್ಷೆಯ ಹೊರೆ ಬಿದ್ದಿತು ಎಂದು ಅವರು ಹೇಳಿದ್ದಾರೆ.
ಏನಿದು 2018ರ ಸ್ಯಾಂಡ್‌ಪೇಪರ್ ಗೇಟ್ ಪ್ರಕರಣ?
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಆಟಗಾರ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಹಳದಿ ಬಣ್ಣದ ಸ್ಯಾಂಡ್‌ಪೇಪರ್ ಬಳಸಿ ಚೆಂಡನ್ನ ಉಜ್ಜುತ್ತಿರುವುದು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಚೆಂಡಿನ ಒಂದು ಭಾಗವನ್ನ ಒರಟಾಗಿಸಿ ರಿವರ್ಸ್ ಸ್ವಿಂಗ್ ಪಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿತ್ತು.
ಈ ಘಟನೆ ಬಹಿರಂಗವಾದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆ ನಡೆಸಿ, ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ವಿರುದ್ಧ ಕ್ರಮ ಕೈಗೊಂಡಿತ್ತು. ಸ್ಮಿತ್ ಮತ್ತು ವಾರ್ನರ್‌ಗೆ 12 ತಿಂಗಳ ನಿಷೇಧ ವಿಧಿಸಲಾಗಿತ್ತು. ಬ್ಯಾನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳ ನಿಷೇಧ ಹೇರಲಾಗಿತ್ತು. ಈ ಮೂವರಿಗಷ್ಟೇ ಪ್ರಕರಣದ ಬಗ್ಗೆ ಪೂರ್ವ ಮಾಹಿತಿ ಇತ್ತು ಎಂಬುದು ಆಗಿನ ತನಿಖೆಯ ನಿರ್ಣಯವಾಗಿತ್ತು.
ಇನ್ನು 2021ರಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಮತ್ತು ನಾಥನ್ ಲಿಯಾನ್ ಸೇರಿದಂತೆ ಆಸ್ಟ್ರೇಲಿಯಾದ ಪ್ರಮುಖ ಬೌಲರ್‌ಗಳು ಈ ಕೃತ್ಯದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಜಂಟಿ ಹೇಳಿಕೆ ನೀಡಿದ್ದರು. ಆದರೆ ಖ್ವಾಜಾ ಅವರ ಇತ್ತೀಚಿನ ಹೇಳಿಕೆಗಳು ಈ ಹಿಂದಿನ ವಿಚಾರವನ್ನ ಮತ್ತೊಮ್ಮೆ ಚರ್ಚೆಗೆ ತಂದಿವೆ.
ಕ್ರಿಕೆಟ್ ಆಸ್ಟ್ರೇಲಿಯಾದ ಪ್ರತಿಕ್ರಿಯೆ ಏನು?
ಖ್ವಾಜಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, 2018ರ ಪ್ರಕರಣದ ತನಿಖೆಯಲ್ಲಿ ಲಭ್ಯವಾದ ಎಲ್ಲ ಮಾಹಿತಿಯನ್ನ ಪರಿಗಣಿಸಲಾಗಿದೆ ಎಂದು ತಿಳಿಸಿದೆ. ಈವರೆಗೆ ಮಂಡಳಿಗೆ ಸಲ್ಲಿಕೆಯಾದ ಸಂಬಂಧಿತ ಮಾಹಿತಿಯನ್ನ ಸರಿಯಾಗಿ ಪರಿಶೀಲಿಸಲಾಗಿದ್ದು, ತನಿಖೆಯ ನಿರ್ಣಯಗಳ ಬಗ್ಗೆ ತಮಗೆ ಇನ್ನೂ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದೆ. ಹೊಸದಾಗಿ ಯಾವುದೇ ಸಂಬಂಧಿತ ಮಾಹಿತಿ ಸಲ್ಲಿಕೆಯಾದರೂ ಅದನ್ನ ಪರಿಗಣಿಸಲು ಅವಕಾಶವಿದೆ ಎಂದೂ ಮಂಡಳಿ ಹೇಳಿದೆ.
ಹೀಗಾಗಿ ಎಂಟು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಸ್ಯಾಂಡ್‌ಪೇಪರ್ ಗೇಟ್ ಪ್ರಕರಣಕ್ಕೆ ಉಸ್ಮಾನ್ ಖ್ವಾಜಾ ಅವರ ಹೊಸ ಹೇಳಿಕೆಗಳಿಂದ ಮತ್ತೆ ಜೀವ ಬಂದಿದೆ. ಇಡೀ ತಂಡಕ್ಕೆ ಈ ವಿಚಾರ ತಿಳಿದಿತ್ತು ಎಂಬ ಅವರ ಆರೋಪ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ಹಿಂದಿನ ತನಿಖೆಯ ನಿರ್ಣಯಗಳ ನಡುವಿನ ವ್ಯತ್ಯಾಸ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಆದರೆ ಖ್ವಾಜಾ ಅವರ ಹೇಳಿಕೆಗಳು ಹೊಸ ಆರೋಪಗಳಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹಿಂದಿನ ತನಿಖಾ ನಿರ್ಣಯಕ್ಕೆ ಬದ್ಧವಾಗಿದೆ.