SOCIAL MEDIA

Newsletter

PARTNER SITES
Select Language Select State

ಮೈದಾನದಲ್ಲೇ ಗುರ್ನೂರ್-ಸೀಫರ್ಟ್ ನಡುವೆ ಕ್ಲ್ಯಾಶ್! ಕಿಂಗ್‌ ಕೊಹ್ಲಿ ಎಂಟ್ರಿಯಿಂದ ಏನಾಯ್ತು ನೋಡಿ...

ಭಾರತ-ನ್ಯೂಜಿಲೆಂಡ್ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಿಮ್ ಸೀಫರ್ಟ್ ಔಟಾದ ಬಳಿಕ ಭಾರತದ ಬೌಲರ್ ಗುರ್ನೂರ್ ಬ್ರಾರ್ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿ ಗುರ್ನೂರ್ ಅವರನ್ನ ಅಲ್ಲಿಂದ ಕರೆದುಕೊಂಡು ಹೋದರು. ಈ ನಡುವೆ ಗುರ್ನೂರ್ ವರ್ತನೆಯನ್ನ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ಸೀಫರ್ಟ್ 48 ಎಸೆತಗಳಲ್ಲಿ 58 ರನ್ ಗಳಿಸಿ ಗಮನ ಸೆಳೆದರು.

Written By Puttaraj K Alur
Published: Nov 13, 2026, 21:27 IST | Updated: Nov 13, 2026, 22:25 IST
Image Credit: Virat Kohli
Join

India vs New Zealand 4th ODI: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಟಗಾರರ ನಡುವಿನ ಮಾತಿನ ಚಕಮಕಿ ಗಮನ ಸೆಳೆದಿದೆ. ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಗುರ್ನೂರ್ ಬ್ರಾರ್ ಮತ್ತು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ನಡುವೆ ಬಿಸಿಯಾದ ವಾಗ್ವಾದ ನಡೆಯಿತು. ಈ ವೇಳೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ತಡೆಯಲು ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮಧ್ಯಪ್ರವೇಶಿಸಿದರು. ಗುರ್ನೂರ್ ಅವರನ್ನ ಅಲ್ಲಿಂದ ಕರೆದುಕೊಂಡು ಹೋಗುವ ಮೂಲಕ ಮೈದಾನದಲ್ಲಿನ ಉದ್ವಿಗ್ನತೆಯನ್ನ ತಗ್ಗಿಸಲು ಪ್ರಯತ್ನಿಸಿದರು.

12ನೇ ಓವರ್‌ನಲ್ಲಿ ನಡೆದ ಘಟನೆ

ನ್ಯೂಜಿಲೆಂಡ್ ಇನ್ನಿಂಗ್ಸ್‌ನ 12ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ಸಂಭವಿಸಿತು. ಗುರ್ನೂರ್ ಬ್ರಾರ್ ಶಾರ್ಟ್ ಪಿಚ್ ಎಸೆತವನ್ನ ಬೌಲ್ ಮಾಡಿದರು. ಇದನ್ನ ಎದುರಿಸಿದ ಟಿಮ್ ಸೀಫರ್ಟ್ ಪುಲ್ ಶಾಟ್ ಆಡಲು ಮುಂದಾದರು. ಆದರೆ ಚೆಂಡಿನ ವೇಗಕ್ಕೆ ತಕ್ಕಂತೆ ಹೊಡೆಯಲು ಸಾಧ್ಯವಾಗದೆ, ಬ್ಯಾಟ್‌ನ ಮೇಲ್ಭಾಗಕ್ಕೆ ತಾಗಿ ಚೆಂಡು ಗಾಳಿಯಲ್ಲಿ ಹಾರಿತು. ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್ ಚುರುಕಾಗಿ ಕಾರ್ಯಪ್ರವೃತ್ತರಾದರು. ತಮ್ಮ ಎಡಭಾಗಕ್ಕೆ ಓಡಿ ಮುಂದೆ ಡೈವ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು. ಇದರೊಂದಿಗೆ ಸೀಫರ್ಟ್ ಅವರ ಇನ್ನಿಂಗ್ಸ್ ಅಂತ್ಯಗೊಂಡಿತು.

ವಿಕೆಟ್ ಪಡೆದ ಸಂಭ್ರಮದಲ್ಲಿ ಗುರ್ನೂರ್ ಬ್ರಾರ್ ಸ್ವಲ್ಪ ಆಕ್ರಮಣಕಾರಿಯಾಗಿ ವರ್ತಿಸಿದರು. ಸೀಫರ್ಟ್ ಅವರ ಮುಂದೆ ಹಾರಿ ಸಂಭ್ರಮಿಸಿದ ಅವರ ನಡೆ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಮೈದಾನದಲ್ಲಿ ಪರಿಸ್ಥಿತಿ ಬಿಸಿಯಾಗುತ್ತಿರುವುದನ್ನ ಗಮನಿಸಿದ ಆನ್-ಫೀಲ್ಡ್ ಅಂಪೈರ್ ಕ್ರಿಸ್ ಬ್ರೌನ್ ತಕ್ಷಣ ಮಧ್ಯಪ್ರವೇಶಿಸಿದರು. ಗುರ್ನೂರ್ ಅವರೊಂದಿಗೆ ಮಾತನಾಡಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೂಡ ಮಧ್ಯೆ ಪ್ರವೇಶಿಸಿ ಗುರ್ನೂರ್ ಅವರನ್ನ ಅಲ್ಲಿಂದ ಕರೆದುಕೊಂಡು ಹೋದರು. ಇದರಿಂದ ಆಟಗಾರರ ನಡುವಿನ ವಾಗ್ವಾದ ಮತ್ತಷ್ಟು ಮುಂದುವರಿಯುವುದನ್ನ ತಡೆಯಲು ಸಾಧ್ಯವಾಯಿತು.

ಗುರ್ನೂರ್ ವರ್ತನೆಗೆ ಗವಾಸ್ಕರ್ ಅಸಮಾಧಾನ

ಭಾರತದ ಮಾಜಿ ನಾಯಕ ಹಾಗೂ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಗುರ್ನೂರ್ ಬ್ರಾರ್ ಅವರ ಮೈದಾನದ ವರ್ತನೆಯನ್ನ ಟೀಕಿಸಿದ್ದಾರೆ. ಬ್ಯಾಟ್ಸ್‌ಮನ್ ಈಗಾಗಲೇ ಔಟಾಗಿರುವ ಸಂದರ್ಭದಲ್ಲಿ ಅವರೊಂದಿಗೆ ವಾದ ಮಾಡುವ ಅಥವಾ ಮುಖಾಮುಖಿಯಾಗುವ ಅಗತ್ಯವಿಲ್ಲವೆಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ವಿಕೆಟ್ ಪಡೆದ ಸಂಭ್ರಮವನ್ನ ವ್ಯಕ್ತಪಡಿಸುವಾಗ ಆಟಗಾರರು ಎದುರಾಳಿ ಆಟಗಾರರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆಯೂ ಈ ಘಟನೆ ಗಮನ ಸೆಳೆದಿದೆ.

ಸೀಫರ್ಟ್ ಬ್ಯಾಟ್‌ನಿಂದ ಆಕರ್ಷಕ ಅರ್ಧಶತಕ

ಇನ್ನು ಈ ಪಂದ್ಯದಲ್ಲಿ ಟಿಮ್ ಸೀಫರ್ಟ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 48 ಎಸೆತಗಳನ್ನ ಎದುರಿಸಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ 58 ರನ್ ಗಳಿಸಿದರು. ವಿಲ್ ಯಂಗ್ ಅವರೊಂದಿಗೆ ಸೇರಿ ಮೊದಲ ವಿಕೆಟ್‌ಗೆ 85 ರನ್‌ಗಳ ಉತ್ತಮ ಜೊತೆಯಾಟವನ್ನೂ ಆಡಿದರು. ಈ ಮೂಲಕ ಭಾರತ ವಿರುದ್ಧದ ಏಕದಿನ ಪಂದ್ಯದ ಮೊದಲ 10 ಓವರ್‌ಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎಂಬ ದಾಖಲೆಗೂ ಸೀಫರ್ಟ್ ಪಾತ್ರರಾದರು. ಅವರ ಆರಂಭಿಕ ಬ್ಯಾಟಿಂಗ್ ತಂಡಕ್ಕೆ ಉತ್ತಮ ಅಡಿಪಾಯ ಒದಗಿಸಿತು.

ಪವರ್‌ಪ್ಲೇನಲ್ಲಿ ನ್ಯೂಜಿಲೆಂಡ್‌ನ ಹೊಸ ಸಾಧನೆ

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಪವರ್‌ಪ್ಲೇ ಅವಧಿಯಲ್ಲೂ ಗಮನಾರ್ಹ ಸಾಧನೆ ಮಾಡಿತು. ಕಳೆದ 16 ಏಕದಿನ ಪಂದ್ಯಗಳಲ್ಲಿ ಮೊದಲ 10 ಓವರ್‌ಗಳಲ್ಲಿ ತಂಡವು 50 ರನ್‌ಗಳ ಗಡಿ ದಾಟಿರಲಿಲ್ಲ. ಆದರೆ ಈ ಪಂದ್ಯದಲ್ಲಿ 17ನೇ ಪ್ರಯತ್ನದಲ್ಲಿ ವಿಕೆಟ್ ನಷ್ಟವಿಲ್ಲದೆ 72 ರನ್ ಗಳಿಸುವ ಮೂಲಕ ಆ ದಾಖಲೆಯನ್ನ ಮುರಿಯಿತು. ಇದಕ್ಕೂ ಮೊದಲು 2025ರ ನವೆಂಬರ್‌ನಲ್ಲಿ ವೆಲ್ಲಿಂಗ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಪವರ್‌ಪ್ಲೇ ಅವಧಿಯಲ್ಲಿ 64 ರನ್ ಗಳಿಸಿತ್ತು. 

ಇದೀಗ ಭಾರತ ವಿರುದ್ಧದ ಪಂದ್ಯದಲ್ಲಿ ಅದಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದೆ. ಒಟ್ನಲ್ಲಿ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೀಫರ್ಟ್ ಅವರ ಆಕರ್ಷಕ ಬ್ಯಾಟಿಂಗ್, ಗುರ್ನೂರ್ ಬ್ರಾರ್ ಅವರೊಂದಿಗೆ ನಡೆದ ವಾಗ್ವಾದ, ಸುನಿಲ್ ಗವಾಸ್ಕರ್ ಅವರ ಟೀಕೆ ಹಾಗೂ ವಿರಾಟ್ ಕೊಹ್ಲಿ ಮಧ್ಯಪ್ರವೇಶ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದ ಪ್ರಮುಖ ಘಟನೆಗಳಾಗಿವೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES