Youngest T20 Captain: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೊಂದು ಮಹತ್ವದ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಈಗಾಗಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡಿರುವ ಅವರು, ಇದೀಗ ನಾಯಕತ್ವದಲ್ಲಿಯೂ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 15 ವರ್ಷ ಮತ್ತು 232 ದಿನಗಳ ವಯಸ್ಸಿನಲ್ಲಿ ಬಿಹಾರ ಹಿರಿಯರ ತಂಡದ ನಾಯಕನಾಗಿ ಕಣಕ್ಕಿಳಿಯುವ ಮೂಲಕ ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026-27ನೇ ಸಾಲಿನ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಟೂರ್ನಿಯಲ್ಲಿ ಈ ಐತಿಹಾಸಿಕ ಸಾಧನೆ ದಾಖಲಾಗಿದೆ. ಟೂರ್ನಿಯ ಎಲೈಟ್ ಗುಂಪು 'ಬಿ' ಪಂದ್ಯದಲ್ಲಿ ಬಿಹಾರ ತಂಡವು ಸೌರಾಷ್ಟ್ರ ವಿರುದ್ಧ ಸೆಣಸಿತು. ಈ ಪಂದ್ಯದಲ್ಲಿ ನಾಯಕನಾಗಿ ಟಾಸ್‌ಗೆ ಆಗಮಿಸಿದ ವೈಭವ್ ಸೂರ್ಯವಂಶಿ, ಪುರುಷರ ಟಿ20 ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹಿಂದಿನ ವಿಶ್ವದಾಖಲೆ ಮುರಿದ ವೈಭವ್
ಇದುವರೆಗೆ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆಯನ್ನ ಕ್ರೊಯೇಷಿಯಾದ ಝಾಕ್ ವುಕುಸಿಕ್ ಹೊಂದಿದ್ದರು. 2025ರ ಆಗಸ್ಟ್‌ನಲ್ಲಿ ಸೈಪ್ರಸ್ ವಿರುದ್ಧದ ಪಂದ್ಯದಲ್ಲಿ 17 ವರ್ಷ ಮತ್ತು 311 ದಿನಗಳ ವಯಸ್ಸಿನಲ್ಲಿ ಕ್ರೊಯೇಷಿಯಾ ತಂಡವನ್ನ ಮುನ್ನಡೆಸುವ ಮೂಲಕ ಅವರು ಈ ಸಾಧನೆ ಮಾಡಿದ್ದರು. ಇದೀಗ 15 ವರ್ಷ ಮತ್ತು 232 ದಿನಗಳ ವಯಸ್ಸಿನಲ್ಲೇ ಬಿಹಾರ ತಂಡದ ನಾಯಕತ್ವ ವಹಿಸಿಕೊಂಡಿರುವ ವೈಭವ್, ಆ ದಾಖಲೆಯನ್ನ ಹಿಂದಿಕ್ಕಿದ್ದಾರೆ.
ಮೊದಲ ಪಂದ್ಯದಲ್ಲಿ 18 ರನ್ ಗಳಿಸಿದ ಯುವ ನಾಯಕ
ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ವೈಭವ್ ಸೂರ್ಯವಂಶಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅನುಭವಿ ಜಯದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ತಂಡದ ವಿರುದ್ಧ ಬಿಹಾರ ಪರ ಆರಂಭಿಕ ಬ್ಯಾಟರ್ ಆಗಿಯೂ ವೈಭವ್ ಕಣಕ್ಕಿಳಿದರು. ಆದರೆ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ. 12 ಎಸೆತಗಳನ್ನ ಎದುರಿಸಿದ ಅವರು ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಿಹಾರ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಪೃಥ್ವಿ ರಾಜ್ 38 ರನ್ ಗಳಿಸಿದರು. ಅವರ ಕೊಡುಗೆಯ ನೆರವಿನಿಂದ ಬಿಹಾರ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು. ಈ ಮೂಲಕ ಎದುರಾಳಿ ಸೌರಾಷ್ಟ್ರ ತಂಡಕ್ಕೆ ಗೆಲ್ಲಲು 138 ರನ್‌ಗಳ ಗುರಿ ನೀಡಿತು.
ವೈಭವ್ ಪಾಲಿಗೆ ಸಾಧನೆಗಳ ಸರಮಾಲೆಯ ವರ್ಷ
ಬಿಹಾರದ ಸಮಸ್ತಿಪುರ ಮೂಲದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿಗೆ 2026ನೇ ವರ್ಷ ಹಲವು ಮಹತ್ವದ ಮೈಲಿಗಲ್ಲುಗಳನ್ನ ತಂದುಕೊಟ್ಟಿದೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಅವರು, 237.30ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 776 ರನ್ ಗಳಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ವೈಭವ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಭಾರತ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಳಿಕ, 15 ವರ್ಷ ಮತ್ತು 99 ದಿನಗಳ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಹಿಂದಿಕ್ಕಿದ್ದರು.
ನಾಯಕತ್ವದ ವಿಚಾರದಲ್ಲಿಯೂ ಅವರಿಗೆ ಹಿಂದಿನ ಅನುಭವವಿದೆ. ರಣಜಿ ಟ್ರೋಫಿಯಲ್ಲಿ ಬಿಹಾರ ತಂಡದ ಉಪನಾಯಕರಾಗಿ ಹಾಗೂ ದುಲೀಪ್ ಟ್ರೋಫಿ ಗೆದ್ದ ಪೂರ್ವ ವಲಯ ತಂಡದಲ್ಲಿ ಇಶಾನ್ ಕಿಶನ್ ಅವರ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಬಿಹಾರ ಹಿರಿಯರ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಹೊಸ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಬಿಹಾರದ ಮೊದಲ ಎರಡು ಪಂದ್ಯಗಳಿಗೆ ನಾಯಕತ್ವ
ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಎರಡು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಬಿಹಾರ ತಂಡವನ್ನ ಮುನ್ನಡೆಸಲಿದ್ದಾರೆ. ಆ ಬಳಿಕ ಅವರು ಕತಾರ್‌ನ ದೋಹಾಗೆ ಪ್ರಯಾಣಿಸಲಿದ್ದು, ನವೆಂಬರ್ 19ರಿಂದ ಆರಂಭವಾಗಲಿರುವ ಎಸಿಸಿ ರೈಸಿಂಗ್ ಸ್ಟಾರ್ಸ್ ಎಮರ್ಜಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ 'ಎ' ತಂಡವನ್ನ ಸೇರಿಕೊಳ್ಳಲಿದ್ದಾರೆ.
ಒಟ್ನಲ್ಲಿ ಚಿಕ್ಕ ವಯಸ್ಸಿನಲ್ಲೇ ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ತಮ್ಮ ಸಾಮರ್ಥ್ಯವನ್ನ ತೋರಿಸುತ್ತಿರುವ ವೈಭವ್ ಸೂರ್ಯವಂಶಿ, ಪುರುಷರ ಟಿ20 ಕ್ರಿಕೆಟ್‌ನ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವದಾಖಲೆಯೊಂದಿಗೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.