ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಧಮಾಕಾ; ಒಂದೇ ದಿನ, ಒಂದೇ ಸಮಯದಲ್ಲಿ ಟೀಂ ಇಂಡಿಯಾದ 2 ಪಂದ್ಯಗಳು
ಒಂದೇ ದಿನ ಭಾರತದ ಎರಡು ತಂಡಗಳು ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ವಿಶೇಷವೆಂದರೆ, ಎರಡೂ ಪಂದ್ಯಗಳು ಬಹುತೇಕ ಒಂದೇ ಸಮಯದಲ್ಲಿ ನಡೆಯಲಿವೆ.
Team India two matches same day : ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಂಗಳವಾರ ಸೆಪ್ಟೆಂಬರ್ 22 ರಂದು ವಿಶೇಷ ದಿನವಾಗಲಿದೆ. ಒಂದೇ ದಿನ ಭಾರತದ ಎರಡು ತಂಡಗಳು ಟಿ 20 ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ವಿಶೇಷವೆಂದರೆ, ಎರಡೂ ಪಂದ್ಯಗಳು ಬಹುತೇಕ ಒಂದೇ ಸಮಯದಲ್ಲಿ ನಡೆಯಲಿವೆ. ಹೀಗಾಗಿ ಟೀಂ ಇಂಡಿಯಾದ ಅಭಿಮಾನಿಗಳಿಗೆ ಒಂದೇ ಸಮಯದಲ್ಲಿ ಎರಡು ಪಂದ್ಯಗಳ ಆಯ್ಕೆಯ ಸವಾಲು ಎದುರಾಗಲಿದೆ. ಒಂದೆಡೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಏಷ್ಯನ್ ಗೇಮ್ಸ್ 2026ರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಪುರುಷರ ತಂಡ ಜಪಾನ್ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ಆಡಲಿದೆ.
ಏಷ್ಯನ್ ಗೇಮ್ಸ್ 2026 ರ ಮಹಿಳಾ ಕ್ರಿಕೆಟ್ ಫೈನಲ್ ಪಂದ್ಯ ಸೆಪ್ಟೆಂಬರ್ 22 ರಂದು ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ಚಿನ್ನದ ಪದಕಕ್ಕಾಗಿ ಮುಖಾಮುಖಿಯಾಗಲಿವೆ. ಸೆಮಿಫೈನಲ್ ನಲ್ಲಿ ಭಾರತ ಬಾಂಗ್ಲಾದೇಶವನ್ನು 114 ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಶ್ರೀಲಂಕಾ ಪಾಕಿಸ್ತಾನ ವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.
ಈ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ಆರಂಭವಾಗಲಿದೆ. ಅಂದರೆ ಇದೇ ಸಮಯದಲ್ಲಿ ಭಾರತ ಪುರುಷರ ತಂಡದ ಜಪಾನ್ ವಿರುದ್ಧದ ಪಂದ್ಯವೂ ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರಿಯರಿಗೆ ಡಬಲ್ ಆಕ್ಷನ್ ಸಿಗಲಿದೆ. ಮಹಿಳಾ ತಂಡದ ಪಂದ್ಯವನ್ನು ಏಷ್ಯನ್ ಗೇಮ್ಸ್ ಪ್ರಸಾರ ವ್ಯವಸ್ಥೆಯ ಮೂಲಕ ವೀಕ್ಷಿಸಬಹುದು. ಭಾರತ ಮಹಿಳಾ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ರಿಚಾ ಘೋಷ್, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ರೇಣುಕಾ ಸಿಂಗ್ ಠಾಕೂರ್ ಸೇರಿದಂತೆ ಪ್ರಮುಖ ಆಟಗಾರ್ತಿಯರಿದ್ದಾರೆ.
ಇನ್ನೊಂದೆಡೆ, ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಪುರುಷರ ತಂಡ ಜಪಾನ್ ವಿರುದ್ಧ ಏಕೈಕ ಟಿ20 ಪಂದ್ಯವಾಡಲಿದೆ. ಈ ಪಂದ್ಯ ಸೆಪ್ಟೆಂಬರ್ 22 ರಂದು ಭಾರತೀಯ ಕಾಲಮಾನ ಬೆಳಗ್ಗೆ 9:30 ಕ್ಕೆ ಆರಂಭವಾಗಲಿದೆ. ಜಪಾನ್‌ನ ಸಾನೋದಲ್ಲಿ ನಡೆಯಲಿರುವ ಈ ಪಂದ್ಯ ಭಾರತ ಮತ್ತು ಜಪಾನ್ ಪುರುಷರ ತಂಡಗಳ ನಡುವಿನ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ವೈಭವ್ ಸೂರ್ಯವಂಶಿ ಸೇರಿದಂತೆ ಆಟಗಾರರು ತಂಡದಲ್ಲಿದ್ದಾರೆ. ಈ ಪಂದ್ಯವು ಕೇವಲ ಕ್ರಿಕೆಟ್ ಪಂದ್ಯವಷ್ಟೇ ಅಲ್ಲ. ಭಾರತ-ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ವಿಶೇಷ ಪಂದ್ಯವೂ ಆಗಿದೆ.
ಹೀಗಾಗಿ ಸೆಪ್ಟೆಂಬರ್ 22 ರಂದು ಬೆಳಗ್ಗಿ ನಿಂದಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯಗಳ ಸುರಿಮಳೆಯೇ ಇರಲಿದೆ. ಬೆಳಗ್ಗೆ 9:30 ಕ್ಕೆ ಭಾರತ - ಜಪಾನ್ ಪುರುಷರ ಪಂದ್ಯ ಆರಂಭವಾದರೆ, 10:30ಕ್ಕೆ ಭಾರತ - ಶ್ರೀಲಂಕಾ ಮಹಿಳಾ ತಂಡಗಳ ಏಷ್ಯನ್ ಗೇಮ್ಸ್ ಫೈನಲ್ ಆರಂಭವಾಗಲಿದೆ. ಒಂದೆಡೆ ಐತಿಹಾಸಿಕ ಟಿ20 ಪಂದ್ಯ, ಮತ್ತೊಂದೆಡೆ ಏಷ್ಯನ್ ಗೇಮ್ಸ್ ಚಿನ್ನದ ಪದಕದ ಫೈನಲ್. ಒಂದೇ ದಿನ ಭಾರತದ ಎರಡು ತಂಡಗಳು ಕಣಕ್ಕಿಳಿಯುತ್ತಿರುವುದು ಕ್ರಿಕೆಟ್ ಅಭಿಮಾನಿ ಗಳಿಗೆ ವಿಶೇಷ ಅನುಭವ ನೀಡಲಿದೆ.