IND vs NZ ODI Series 2026: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನ ಟೀಂ ಇಂಡಿಯಾ 3-1 ಅಂತರದಿಂದ ಗೆದ್ದುಕೊಂಡಿದೆ. ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 22 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 209 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 48.1 ಓವರ್‌ಗಳಲ್ಲಿ 187 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ನಾಲ್ಕನೇ ಪಂದ್ಯದಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ ಭಾರತ ತಿರುಗೇಟು ನೀಡಿದ್ದು, ಸರಣಿಯನ್ನ ತನ್ನದಾಗಿಸಿಕೊಂಡಿದೆ.
ಆರಂಭದಲ್ಲೇ ಕುಸಿದ ಭಾರತದ ಬ್ಯಾಟಿಂಗ್
ಈ ಪಂದ್ಯದಲ್ಲಿ ಟಾಸ್ ಬಳಿಕ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಯಿತು. ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ರೋಹಿತ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 5 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ರುತುರಾಜ್ ಗಾಯಕ್ವಾಡ್ 18 ರನ್ ಗಳಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 22 ರನ್‌ಗಳ ಕೊಡುಗೆ ನೀಡಿದರು. ನಂತರ ಬ್ಯಾಟಿಂಗ್‌ಗೆ ಬಂದ ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಇಬ್ಬರೂ ತಲಾ 46 ರನ್ ಗಳಿಸಿ ಭಾರತದ ಇನ್ನಿಂಗ್ಸ್‌ಗೆ ಆಸರೆಯಾದರು. ಆದರೆ ಅರ್ಧಶತಕದ ಅಂಚಿನಲ್ಲಿ ಇಬ್ಬರೂ ವಿಕೆಟ್ ಕಳೆದುಕೊಂಡರು. ನಮನ್ ಧೀರ್ 22 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳಿಂದ ಹೆಚ್ಚಿನ ರನ್‌ಗಳು ಹರಿದುಬರದ ಕಾರಣ ಭಾರತ 42.1 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು. ಒಂದು ಹಂತದಲ್ಲಿ ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು.
𝙒.𝙄.𝙉.𝙉.𝙀.𝙍.𝙎 🤩 #TeamIndia make it 2️⃣ out of 2️⃣ series wins so far in New Zealand 🏆👌 #NZvIND https://t.co/G4a496NyFX
— BCCI (@BCCI) November 15, 2026
ಕೊನೆಯಲ್ಲಿ ಸಿರಾಜ್-ಅರ್ಶದೀಪ್ ಹೋರಾಟ
166 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಕೊನೆಯ ಹಂತದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಅರ್ಶದೀಪ್ ಸಿಂಗ್ ನೆರವಾದರು. ಕೊನೆಯ ವಿಕೆಟ್‌ಗೆ ಈ ಜೋಡಿ ತಲಾ 14 ರನ್‌ಗಳ ಕೊಡುಗೆ ನೀಡಿತು. ಇಬ್ಬರೂ ಸೇರಿ ಅಮೂಲ್ಯ 26 ರನ್ ಕಲೆಹಾಕಿದ್ದರಿಂದ ಭಾರತದ ಮೊತ್ತ 200ರ ಗಡಿ ದಾಟಿತು. ವಿಶೇಷವಾಗಿ ಅರ್ಶದೀಪ್ ಸಿಂಗ್ ಕೇವಲ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿ ಗಮನ ಸೆಳೆದರು. ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ ಮತ್ತು ಜಾಕಬ್ ಡಫಿ ತಲಾ ಮೂರು ವಿಕೆಟ್ ಪಡೆದರೆ, ಮ್ಯಾಟ್ ಫಿಶರ್ ಎರಡು ವಿಕೆಟ್ ಕಬಳಿಸಿದರು.
ಆರಂಭದಲ್ಲೇ ಕಿವೀಸ್‌ಗೆ ಸಿರಾಜ್ ಆಘಾತ
ಭಾರತ ನೀಡಿದ 210 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಆರಂಭದಲ್ಲೇ ಆಘಾತ ನೀಡಿದರು. ಟಿಮ್ ಸೀಫರ್ಟ್ 14 ರನ್ ಗಳಿಸಿ ಔಟಾದರು. ಬಳಿಕ ವಿಲ್ ಯಂಗ್ 22 ರನ್ ಗಳಿಸಿ ಅರ್ಶದೀಪ್ ಸಿಂಗ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಫಿನ್ ಅಲೆನ್ ಕೇವಲ ಒಂದು ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ನಿಕ್ ಕೆಲ್ಲಿ 24 ರನ್ ಗಳಿಸಿದರೆ, ಡೀನ್ ಫಾಕ್ಸ್‌ಕ್ರಾಫ್ಟ್ 31 ರನ್ ಹಾಗೂ ಮೈಕಲ್ ಬ್ರೇಸ್‌ವೆಲ್ 19 ರನ್ ಗಳಿಸಿದರು. ಈ ಆಟಗಾರರು ತಂಡವನ್ನ ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರೂ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದರು.
ಅರ್ಷದೀಪ್ ಬೌಲಿಂಗ್‌ಗೆ ನಲುಗಿದ ಕಿವೀಸ್
ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ 24 ರನ್ ಹಾಗೂ ಕ್ರಿಶ್ಚಿಯನ್ ಕ್ಲಾರ್ಕ್ 16 ರನ್ ಗಳಿಸಿ ಹೋರಾಟ ನಡೆಸಿದರು. ಆದರೆ ನಿರ್ಣಾಯಕ ಹಂತದಲ್ಲಿ ಭಾರತೀಯ ಬೌಲರ್‌ಗಳು ವಿಕೆಟ್ ಪಡೆಯುವ ಮೂಲಕ ಆತಿಥೇಯ ತಂಡದ ಗೆಲುವಿನ ಆಸೆಗೆ ತಣ್ಣೀರೆರಚಿದರು. ಸ್ಯಾಂಟ್ನರ್ ಅವರನ್ನ ನಮನ್ ಧೀರ್ ಔಟ್ ಮಾಡಿದರೆ, ಕ್ರಿಶ್ಚಿಯನ್ ಕ್ಲಾರ್ಕ್ ವಿಕೆಟ್ ಅರ್ಶದೀಪ್ ಸಿಂಗ್ ಪಾಲಾಯಿತು. ಅಕ್ಷರ್ ಪಟೇಲ್ ಜಾಕಬ್ ಡಫಿ ಅವರನ್ನ ಔಟ್ ಮಾಡುವ ಮೂಲಕ ನ್ಯೂಜಿಲೆಂಡ್ ಇನ್ನಿಂಗ್ಸ್‌ಗೆ ತೆರೆ ಎಳೆದರು.
ಭಾರತದ ಪರ ಅರ್ಶದೀಪ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಸಿರಾಜ್ ಕೂಡ ನಿರ್ಣಾಯಕ ವಿಕೆಟ್‌ಗಳನ್ನ ಕಬಳಿಸಿದರು. ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಯಶ್ ಠಾಕೂರ್ ಒಂದು ವಿಕೆಟ್ ಪಡೆದರು. ಅಂತಿಮವಾಗಿ ನ್ಯೂಜಿಲೆಂಡ್ 48.1 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು. ಭಾರತ 22 ರನ್‌ಗಳ ಜಯ ದಾಖಲಿಸಿತು.
ಏಳು ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ನ್ಯೂಜಿಲೆಂಡ್
ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಏಕದಿನ ಸರಣಿಯನ್ನ 3-1 ಅಂತರದಿಂದ ಗೆದ್ದುಕೊಂಡಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್ 244 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಭಾರತ ತಿರುಗೇಟು ನೀಡಿ ಸರಣಿ ಗೆದ್ದಿದೆ.
ಇದರೊಂದಿಗೆ ನ್ಯೂಜಿಲೆಂಡ್ ತಂಡ ಏಳು ವರ್ಷಗಳ ಬಳಿಕ ತವರಿನಲ್ಲಿ ಏಕದಿನ ಸರಣಿ ಸೋತಿದೆ. ಕೊನೆಯ ಬಾರಿಗೆ 2019ರಲ್ಲಿ ನ್ಯೂಜಿಲೆಂಡ್ ತನ್ನ ನೆಲದಲ್ಲಿ ಏಕದಿನ ಸರಣಿ ಸೋತಿತ್ತು. ಆಗಲೂ ಭಾರತವೇ ಕಿವೀಸ್ ತಂಡವನ್ನ ಮಣಿಸಿತ್ತು. ಈ ಬಾರಿ ಮತ್ತೊಮ್ಮೆ ಭಾರತ ನ್ಯೂಜಿಲೆಂಡ್ ನೆಲದಲ್ಲಿ ಸರಣಿ ಗೆದ್ದು ಸಂಭ್ರಮಿಸಿದೆ.