SOCIAL MEDIA

Newsletter

PARTNER SITES
Select Language Select State

ತಂಡದಿಂದ ರಿಷಬ್ ಪಂತ್ ಔಟ್! ಮತ್ತೊಬ್ಬ ವಿಕೆಟ್ ಕೀಪರ್ ನ್ಯೂಜಿಲೆಂಡ್‌ಗೆ ಪ್ರಯಾಣ

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊರಗುಳಿದಿದ್ದಾರೆ.

Written By Chetana Devarmani
Published: Oct 13, 2026, 08:34 PM IST | Updated: Oct 13, 2026, 08:35 PM IST
Join

Rishabh Pant Injury: ಎಡಭಾಗದ ಸ್ನಾಯು ಸೆಳೆತದ ಕಾರಣದಿಂದ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಮೊದಲ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಿಂದ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಜಾರ್ಖಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಭಾರತೀಯ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯನ್ನು ಪೂರ್ಣಗೊಳಿಸಿದ ಬಳಿಕ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲು ಸಿದ್ಧವಾಗುತ್ತಿದೆ. ಅಕ್ಟೋಬರ್ 22ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಐದು ಟಿ20ಐ, ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಭಾರತ ಎ ತಂಡವೂ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಮೂರು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಲಿದೆ.

ಅಕ್ಟೋಬರ್ 24ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಭಾರತ ಎ ಮತ್ತು ನ್ಯೂಜಿಲೆಂಡ್ ಎ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ 15 ಆಟಗಾರರ ತಂಡವನ್ನು ಪ್ರಕಟಿಸಿತ್ತು. ಈ ತಂಡಕ್ಕೆ ಧ್ರುವ್ ಜುರೇಲ್ ನಾಯಕನಾಗಿ ಆಯ್ಕೆಯಾಗಿದ್ದರು. ತಂಡದಲ್ಲಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರಂತಹ ಅನುಭವಿ ಆಟಗಾರರೂ ಸ್ಥಾನ ಪಡೆದಿದ್ದರು.

ಆದರೆ, ಇದೀಗ ಗಾಯದ ಸಮಸ್ಯೆಯಿಂದಾಗಿ ರಿಷಭ್ ಪಂತ್ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅಕ್ಟೋಬರ್ 1ರಿಂದ 5ರವರೆಗೆ ನಡೆದ ಇರಾನಿ ಕಪ್ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸಿದ್ದ ಪಂತ್‌ಗೆ ಎಡಭಾಗದ ಸ್ನಾಯು ಸೆಳೆತ ಉಂಟಾಗಿತ್ತು ಎಂದು ವರದಿಯಾಗಿದೆ. ಪಂತ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿಯೇ ಅವರ ಲಭ್ಯತೆ ಫಿಟ್‌ನೆಸ್ ಮೇಲೆ ಅವಲಂಬಿತವಾಗಿರಲಿದೆ ಎಂದು ತಿಳಿಸಲಾಗಿತ್ತು. ಇದೀಗ ಅವರು ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆಯದ ಹಿನ್ನೆಲೆಯಲ್ಲಿ ಮೊದಲ ಎರಡು ಪಂದ್ಯಗಳಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.

ರಿಷಭ್ ಪಂತ್ ಮೂರನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ದೈಹಿಕ ಸಾಮರ್ಥ್ಯ ಮತ್ತು ಚೇತರಿಕೆಯ ಪ್ರಗತಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ವಿಶೇಷ ಕೇಂದ್ರದಲ್ಲಿ ಫಿಟ್‌ನೆಸ್ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ. ಪಂತ್ ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಅವರು ಕೊನೆಯ ಬಾರಿಗೆ ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2024ರಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಲು ಅವರ ಫಿಟ್‌ನೆಸ್ ಮಹತ್ವದ್ದಾಗಿದೆ.

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕುಶಾಗ್ರ ಇತ್ತೀಚಿನ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಹಾಗೂ ಇತ್ತೀಚೆಗೆ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಸತತವಾಗಿ ಶತಕಗಳನ್ನು ಗಳಿಸಿರುವುದು ಗಮನಾರ್ಹ. ಈ ಪ್ರದರ್ಶನದ ಹಿನ್ನೆಲೆಯಲ್ಲಿ ಭಾರತ ಎ ತಂಡದಲ್ಲಿ ಅವರಿಗೆ ಅವಕಾಶ ದೊರೆತಿದೆ.

ಧ್ರುವ್ ಜುರೇಲ್ ನಾಯಕತ್ವದ ಭಾರತ ಎ ತಂಡಕ್ಕೆ ನ್ಯೂಜಿಲೆಂಡ್ ಪ್ರವಾಸ ಮಹತ್ವದ್ದಾಗಿದೆ. ಮುಂಬರುವ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಈ ಪಂದ್ಯಗಳು ಆಟಗಾರರಿಗೆ ನೆರವಾಗಲಿವೆ. ಮತ್ತೊಂದೆಡೆ, ರಿಷಭ್ ಪಂತ್ ಆದಷ್ಟು ಬೇಗ ಚೇತರಿಸಿಕೊಂಡು ಮೈದಾನಕ್ಕೆ ಮರಳುತ್ತಾರೆಯೇ ಎಂಬುದರ ಮೇಲೆ ಕ್ರಿಕೆಟ್ ಅಭಿಮಾನಿಗಳ ಗಮನ ನೆಟ್ಟಿದೆ.

 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES