ಹರ್ಷಿತ್ ರಾಣಾಗೆ ಪಾಕ್ ಆಟಗಾರರ ಆಕ್ರಮಣಕಾರಿ ಸೆಂಡ್‌ಆಫ್! ಮೈದಾನದಲ್ಲೇ ಶುರುವಾಯ್ತು ಹೈಡ್ರಾಮಾ
ರಾಣಾ ಔಟಾಗುತ್ತಿದ್ದಂತೆ ಪಾಕಿಸ್ತಾನದ ಆಟಗಾರರು ಅವರತ್ತ ಧಾವಿಸಿದರು. ವಿಶೇಷವಾಗಿ ಸ್ಪಿನ್ನರ್ ಸುಫಿಯಾನ್ ಮುಕೀಮ್, ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ರಾಣಾ ಅವರ ಬಳಿ ಬಂದು ಆಕ್ರಮಣಕಾರಿ ಧಾಟಿಯಲ್ಲಿ ಮಾತನಾಡಿದರು. ಇದರಿಂದ ಮೈದಾನದಲ್ಲಿ ಮತ್ತೊಮ್ಮೆ ಮಾತಿನ ಚಕಮಕಿ ಆರಂಭವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ರಾಣಾ ತೋರಿದ್ದ ಆಕ್ರಮಣಕಾರಿ ವರ್ತನೆಗೆ ಪಾಕಿಸ್ತಾನದ ಆಟಗಾರರು ತಿರುಗೇಟು ನೀಡಿದಂತೆ ಈ ಘಟನೆ ಕಂಡುಬಂದಿತು.
Asia Cup Rising Stars 2026: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಮತ್ತೊಮ್ಮೆ ಆಟಗಾರರ ನಡುವಿನ ಮಾತಿನ ಚಕಮಕಿ ಗಮನ ಸೆಳೆದಿದೆ. ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳ ನಡುವಿನ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಹರ್ಷಿತ್ ರಾಣಾರನ್ನ ಪಾಕಿಸ್ತಾನದ ಆಟಗಾರರು ಆಕ್ರಮಣಕಾರಿ ರೀತಿಯಲ್ಲಿ ಪೆವಿಲಿಯನ್‌ಗೆ ಕಳುಹಿಸಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಹರ್ಷಿತ್ ರಾಣಾ ಔಟಾದ ಬಳಿಕ ಪಾಕಿಸ್ತಾನದ ಸ್ಪಿನ್ನರ್ ಸುಫಿಯಾನ್ ಮುಕೀಮ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಂಪೈರ್‌ಗಳು ಮತ್ತು ಉಭಯ ತಂಡಗಳ ಆಟಗಾರರು ಮಧ್ಯಪ್ರವೇಶಿಸಬೇಕಾಯಿತು.
ನವೆಂಬರ್ 22ರಂದು ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು. ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಆರಂಭದಿಂದಲೇ ಎರಡೂ ತಂಡಗಳ ಆಟಗಾರರ ನಡುವೆ ಬಿಸಿ ವಾತಾವರಣ ಕಂಡುಬಂದಿತ್ತು. ಟಾಸ್ ಸಮಯದಲ್ಲಿಯೂ ಉಭಯ ತಂಡಗಳ ನಾಯಕರು ಸಾಂಪ್ರದಾಯಿಕವಾಗಿ ಹಸ್ತಲಾಘವ ಮಾಡಿರಲಿಲ್ಲ. ಪಂದ್ಯದ ವೇಳೆ ನಡೆದ ಮಾತಿನ ಚಕಮಕಿ ಈ ವಾತಾವರಣವನ್ನ ಮತ್ತಷ್ಟು ಕಾವೇರಿಸಿತ್ತು.
ಮೊದಲ ಇನ್ನಿಂಗ್ಸ್‌ನಲ್ಲೇ ಆರಂಭವಾಗಿತ್ತು ವಾಗ್ವಾದ
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 'ಎ' ತಂಡಕ್ಕೆ ಆರಂಭಿಕರಾದ ಶಾಮಿಲ್ ಹುಸೇನ್ ಮತ್ತು ಮಾಝ್ ಸದಾಕತ್ ಉತ್ತಮ ಆರಂಭ ನೀಡಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್ ಮಾಡುತ್ತಿದ್ದ ಹರ್ಷಿತ್ ರಾಣಾ ಅವರ ಓವರ್‌ಗಳಲ್ಲಿ ಕೆಲವು ಬೌಂಡರಿಗಳು ಬಂದಿದ್ದವು. ಇದಾದ ಬಳಿಕ ರಾಣಾ ಪಾಕಿಸ್ತಾನದ ಆರಂಭಿಕ ಬ್ಯಾಟರ್‌ಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ನಂತರ ಆಯುಷ್ ಬದೋನಿ ಬೌಲಿಂಗ್‌ನಲ್ಲಿ ಶಾಮಿಲ್ ಹುಸೇನ್ ಹೊಡೆದ ಚೆಂಡನ್ನ ಹರ್ಷಿತ್ ರಾಣಾ ಕ್ಯಾಚ್ ಹಿಡಿದು ಔಟ್ ಮಾಡಿದ್ದರು. 33 ರನ್ ಗಳಿಸಿದ್ದ ಶಾಮಿಲ್ ವಿಕೆಟ್ ಕಳೆದುಕೊಂಡ ಬಳಿಕ ರಾಣಾ ಆಕ್ರಮಣಕಾರಿ ಸನ್ನೆಯ ಮೂಲಕ ಅವರನ್ನ ಪೆವಿಲಿಯನ್ ಕಡೆಗೆ ತೆರಳುವಂತೆ ಸೂಚಿಸಿದ್ದರು.
ಇದೇ ರೀತಿ ವಿಕೆಟ್ ಕೀಪರ್ ರೋಹೈಲ್ ನಝೀರ್ ಶೂನ್ಯಕ್ಕೆ ಔಟಾದಾಗಲೂ ರಾಣಾ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಹೀಗಾಗಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೇ ಹರ್ಷಿತ್ ರಾಣಾ ಮತ್ತು ಪಾಕಿಸ್ತಾನದ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಗಳ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ರಾಣಾ ಬ್ಯಾಟಿಂಗ್‌ಗೆ ಬಂದಾಗ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನಗೊಂಡಿತು.
ರಾಣಾ ಔಟಾಗುತ್ತಿದ್ದಂತೆ ಮುಗಿಬಿದ್ದ ಪಾಕ್ ಆಟಗಾರರು
ಪಾಕಿಸ್ತಾನ 'ಎ' ತಂಡ ನೀಡಿದ್ದ 314 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಭಾರತ 'ಎ' ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 45ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಬ್ಯಾಟಿಂಗ್‌ಗೆ ಬಂದರು. ಮೊಹಮ್ಮದ್ ಇಮ್ರಾನ್ ರಾಂಧವಾ ಎಸೆದ ಫುಲ್‌ಟಾಸ್ ಚೆಂಡನ್ನ ಸಿಕ್ಸರ್‌ಗೆ ಅಟ್ಟಲು ಪ್ರಯತ್ನಿಸಿದ ರಾಣಾ, ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಫರ್ಹಾನ್ ಯೂಸುಫ್ ಅವರಿಗೆ ಕ್ಯಾಚ್ ನೀಡಿ ಔಟಾದರು. ಅವರು ಶೂನ್ಯ ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ರಾಣಾ ಔಟಾಗುತ್ತಿದ್ದಂತೆ ಪಾಕಿಸ್ತಾನದ ಆಟಗಾರರು ಅವರತ್ತ ಧಾವಿಸಿದರು. ವಿಶೇಷವಾಗಿ ಸ್ಪಿನ್ನರ್ ಸುಫಿಯಾನ್ ಮುಕೀಮ್, ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ರಾಣಾ ಅವರ ಬಳಿ ಬಂದು ಆಕ್ರಮಣಕಾರಿ ಧಾಟಿಯಲ್ಲಿ ಮಾತನಾಡಿದರು. ಇದರಿಂದ ಮೈದಾನದಲ್ಲಿ ಮತ್ತೊಮ್ಮೆ ಮಾತಿನ ಚಕಮಕಿ ಆರಂಭವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ರಾಣಾ ತೋರಿದ್ದ ಆಕ್ರಮಣಕಾರಿ ವರ್ತನೆಗೆ ಪಾಕಿಸ್ತಾನದ ಆಟಗಾರರು ತಿರುಗೇಟು ನೀಡಿದಂತೆ ಈ ಘಟನೆ ಕಂಡುಬಂದಿತು.
ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಹಂತ ತಲುಪುತ್ತಿದ್ದಂತೆ ಪಾಕಿಸ್ತಾನದ ಸಹ ಆಟಗಾರರೊಬ್ಬರು ಮಧ್ಯಪ್ರವೇಶಿಸಿ ಸುಫಿಯಾನ್ ಮುಕೀಮ್ ಅವರನ್ನ ಹಿಂದಕ್ಕೆ ಎಳೆದರು. ಮೈದಾನದಲ್ಲಿದ್ದ ಅಂಪೈರ್‌ಗಳು ಕೂಡ ಆಟಗಾರರ ನಡುವೆ ಬಂದು ಪರಿಸ್ಥಿತಿಯನ್ನ ತಿಳಿಗೊಳಿಸಲು ಪ್ರಯತ್ನಿಸಿದರು. ಭಾರತ 'ಎ' ತಂಡದ ನಾಯಕ ತಿಲಕ್ ವರ್ಮಾ ಕೂಡ ಪಾಕಿಸ್ತಾನದ ಆಟಗಾರರೊಂದಿಗೆ ಮಾತನಾಡಿ ವಾತಾವರಣವನ್ನ ಶಾಂತಗೊಳಿಸಲು ಮುಂದಾದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
48 ರನ್‌ಗಳಿಂದ ಗೆದ್ದ ಪಾಕಿಸ್ತಾನ
ಮೈದಾನದಲ್ಲಿ ಇಷ್ಟೆಲ್ಲಾ ಮಾತಿನ ಚಕಮಕಿ ನಡೆದ ಪಂದ್ಯದಲ್ಲಿ ಕೊನೆಗೆ ಪಾಕಿಸ್ತಾನ 'ಎ' ತಂಡ 48 ರನ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲೌಟ್ ಆಗಿತ್ತು. ಹಸನ್ ನವಾಝ್ 79 ರನ್, ಮಾಝ್ ಸದಾಕತ್ 59 ರನ್ ಮತ್ತು ಫರ್ಹಾನ್ ಯೂಸುಫ್ 56 ರನ್ ಗಳಿಸಿದ್ದರು. ಭಾರತದ ಪರ ವಿಪ್ರಾಜ್ ನಿಗಮ್ ಮತ್ತು ಸೂರ್ಯಾಂಶ್ ಶೆಡ್ಗೆ ತಲಾ ಎರಡು ವಿಕೆಟ್ ಪಡೆದಿದ್ದರು. 314 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 'ಎ' ತಂಡ 49.1 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ತಿಲಕ್ ವರ್ಮಾ 100 ರನ್ ಗಳಿಸಿ ಶತಕದ ಹೋರಾಟ ನಡೆಸಿದರು.
ಅಭಿಷೇಕ್ ಶರ್ಮಾ 70 ರನ್ ಮತ್ತು ಶಹಬಾಝ್ ಅಹ್ಮದ್ 56 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ಭಾರತ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ. ಒಟ್ನಲ್ಲಿ ಭಾರತ 'ಎ' ಮತ್ತು ಪಾಕಿಸ್ತಾನ 'ಎ' ನಡುವಿನ ಈ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರ ಆಕ್ರಮಣಕಾರಿ ಆಟ, ವಿಕೆಟ್ ಪಡೆದ ಸಂಭ್ರಮ ಮತ್ತು ಔಟಾದ ಬಳಿಕ ಪಾಕಿಸ್ತಾನದ ಆಟಗಾರರು ನೀಡಿದ ಸೆಂಡ್‌ಆಫ್ ಪ್ರಮುಖ ಚರ್ಚೆಯ ವಿಷಯಗಳಾಗಿವೆ. ಮೈದಾನದಲ್ಲಿ ನಡೆದ ಈ ವಾಕ್ಸಮರದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.