SOCIAL MEDIA

Newsletter

PARTNER SITES
Select Language Select State

U19 Asia Cup Final: 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಪಾಕಿಸ್ತಾನದ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟ ಮೊಹಿತ್ ಉಲ್ವಾ!

ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ 10ನೇ ಕ್ರಮಾಂಕದ ಬ್ಯಾಟರ್ ಮೊಹಿತ್ ಉಲ್ವಾ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿದ ಅವರು, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಭಾರತಕ್ಕೆ ಒಂದು ವಿಕೆಟ್‌ನ ಜಯ ತಂದುಕೊಟ್ಟರು. ಈ ಮೂಲಕ ಭಾರತ ಅಂಡರ್-19 ಏಷ್ಯಾಕಪ್ ಚಾಂಪಿಯನ್ ಆಯಿತು.

Written By Puttaraj K Alur
Published: Nov 15, 2026, 10:00 IST | Updated: Nov 15, 2026, 10:11 IST
Image Credit: Mohit Ulva
Join

Mohit Ulwa Stuns Pakistan!: ಪಂದ್ಯದಲ್ಲಿ ಗೆಲುವು ಬಹುತೇಕ ಕೈತಪ್ಪಿದೆ ಎಂದು ಭಾವಿಸಿದ್ದ ಸಂದರ್ಭದಲ್ಲಿ ಕೆಳಕ್ರಮಾಂಕದ ಬ್ಯಾಟರ್ ಒಬ್ಬರು ಅಸಾಧಾರಣ ಹೋರಾಟ ಪ್ರದರ್ಶಿಸಿದರೆ ಫಲಿತಾಂಶವೇ ಬದಲಾಗಬಹುದು ಎಂಬುದಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯ ಸಾಕ್ಷಿಯಾಗಿದೆ. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮೊಹಿತ್ ಉಲ್ವಾ ತಮ್ಮ ಸ್ಫೋಟಕ ಆಟದ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟ ಯುವ ಆಟಗಾರ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಶನಿವಾರ (ನವೆಂಬರ್ 14) ಓಮನ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಕೊನೆಯ ಕ್ಷಣದವರೆಗೂ ರೋಚಕತೆ ಮನೆಮಾಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 337 ರನ್‌ಗಳನ್ನ ಗಳಿಸಿತು. ಈ ಮೂಲಕ ಭಾರತಕ್ಕೆ ಪ್ರಶಸ್ತಿ ಗೆಲ್ಲಲು 338 ರನ್‌ಗಳ ಗುರಿ ನೀಡಿತ್ತು. ಬೃಹತ್ ಗುರಿಯನ್ನ ಬೆನ್ನಟ್ಟಿದ ಭಾರತ ತಂಡದ ಪರ ಆರ್ಯವೀರ್ ಸೆಹ್ವಾಗ್ 58 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ನಾಯಕ ಲಕ್ಷ್ಯ ರೈಚಂದಾನಿ ಕೂಡ 80 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 

ಇಬ್ಬರ ಆಟದಿಂದ ಭಾರತ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಉರುಳತೊಡಗಿದವು. ಒಂದು ಹಂತದಲ್ಲಿ ಭಾರತ ತಂಡ 252 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಇನ್ನೂ ಸಾಕಷ್ಟು ರನ್‌ಗಳ ಅಗತ್ಯವಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲುಗೈ ಸ್ಪಷ್ಟವಾಗಿತ್ತು. ಭಾರತದ ಗೆಲುವಿನ ಸಾಧ್ಯತೆ ಕ್ಷೀಣಿಸುತ್ತಿದೆ ಎಂದು ಭಾವಿಸಿದ್ದಾಗಲೇ 10ನೇ ಕ್ರಮಾಂಕದಲ್ಲಿ ಮೊಹಿತ್ ಉಲ್ವಾ ಕ್ರೀಸ್‌ಗೆ ಬಂದರು.

26 ಎಸೆತಗಳಲ್ಲಿ 49 ರನ್‌ಗಳ ಸ್ಫೋಟಕ ಆಟ

 

 ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮೊಹಿತ್ ಉಲ್ವಾ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪಾಕಿಸ್ತಾನದ ಬೌಲರ್‌ಗಳ ಒತ್ತಡಕ್ಕೆ ಮಣಿಯದೆ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ರನ್ ಗಳಿಸಿದರು. ಕೇವಲ 26 ಎಸೆತಗಳನ್ನ ಎದುರಿಸಿದ ಅವರು ಅಜೇಯ 49 ರನ್ ಸಿಡಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ಮೊಹಿತ್‌ಗೆ ಚಿಗುರುಪತಿ ವೆಂಕಟ ಉತ್ತಮ ಬೆಂಬಲ ನೀಡಿದರು. ಇಬ್ಬರೂ ಜೊತೆಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಗೆಲುವಿನ ಆಸೆಯನ್ನ ಮತ್ತೆ ಜೀವಂತವಾಗಿಟ್ಟರು. ವಿಕೆಟ್‌ಗಳು ಉಳಿಯದಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಈ ಜೋಡಿ ಪಾಕಿಸ್ತಾನದ ಬೌಲರ್‌ಗಳನ್ನ ಎದುರಿಸಿ ತಂಡವನ್ನ ಗುರಿಯ ಸಮೀಪಕ್ಕೆ ಕೊಂಡೊಯ್ದಿತು.

 

ಕೊನೆಯ ಎಸೆತದಲ್ಲಿ ಬೌಂಡರಿ, ಭಾರತಕ್ಕೆ ಚಾಂಪಿಯನ್ ಪಟ್ಟ

ಪಂದ್ಯದ ಕೊನೆಯ ಓವರ್ ಅತ್ಯಂತ ರೋಚಕವಾಗಿತ್ತು. ಭಾರತಕ್ಕೆ ಗೆಲುವು ಸಾಧಿಸಲು ಎಂಟು ರನ್‌ಗಳ ಅಗತ್ಯವಿತ್ತು. ಮತ್ತೊಂದೆಡೆ ಪಾಕಿಸ್ತಾನಕ್ಕೆ ಭಾರತದ ಕೊನೆಯ ವಿಕೆಟ್ ಪಡೆಯುವ ಅವಕಾಶವಿತ್ತು. ಹೀಗಾಗಿ ಪ್ರತಿ ಎಸೆತವೂ ಪಂದ್ಯದ ಫಲಿತಾಂಶವನ್ನ ನಿರ್ಧರಿಸುವಷ್ಟು ಮಹತ್ವ ಪಡೆದುಕೊಂಡಿತ್ತು. ಈ ಒತ್ತಡದ ನಡುವೆಯೂ ಮೊಹಿತ್ ಉಲ್ವಾ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮುಂದುವರಿಸಿದರು.

ಕೊನೆಯ ಎಸೆತದಲ್ಲಿ ಅವರು ಬಾರಿಸಿದ ಚೆಂಡು ಬೌಂಡರಿ ಗೆರೆ ದಾಟುತ್ತಿದ್ದಂತೆ ಭಾರತೀಯ ಆಟಗಾರರ ಸಂಭ್ರಮ ಮುಗಿಲುಮುಟ್ಟಿತು. ಕೇವಲ ಒಂದು ವಿಕೆಟ್ ಅಂತರದಿಂದ ಪಾಕಿಸ್ತಾನವನ್ನ ಮಣಿಸಿದ ಭಾರತ ಅಂಡರ್-19 ಏಷ್ಯಾಕಪ್ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತು. ಮೊಹಿತ್ ಉಲ್ವಾ 26 ಎಸೆತಗಳಲ್ಲಿ ಅಜೇಯ 49 ರನ್ ಗಳಿಸುವ ಮೂಲಕ ಭಾರತದ ಗೆಲುವಿನ ರೂವಾರಿಗಳಲ್ಲಿ ಒಬ್ಬರಾದರು. ಪಂದ್ಯದಲ್ಲಿ ಕೊನೆಯವರೆಗೂ ಹೋರಾಟ ಮುಂದುವರಿಸಿದ ಅವರ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಯುವ ಆಟಗಾರರ ಆಟಕ್ಕೆ ಸೆಹ್ವಾಗ್ ಮೆಚ್ಚುಗೆ

ಭಾರತದ ಈ ರೋಚಕ ಗೆಲುವಿನ ಬಳಿಕ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಕೂಡ ಯುವ ಆಟಗಾರರ ಪ್ರದರ್ಶನವನ್ನ ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ಪಂದ್ಯ ನಿರ್ಣಾಯಕ ಹಂತ ತಲುಪಿದ್ದಾಗ ಮೊಹಿತ್ ಉಲ್ವಾ ತೋರಿದ ಬ್ಯಾಟಿಂಗ್ ಧೈರ್ಯ ಗಮನ ಸೆಳೆದಿದೆ. 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಟಗಾರನೊಬ್ಬ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದು ಈ ಫೈನಲ್ ಪಂದ್ಯದ ಪ್ರಮುಖ ಆಕರ್ಷಣೆಯಾಗಿದೆ. ಕೊನೆಯ ಎಸೆತದವರೆಗೂ ಹೋರಾಟ ನಡೆಸಿದ ಮೊಹಿತ್ ಉಲ್ವಾ ತಮ್ಮ ಪ್ರದರ್ಶನದ ಮೂಲಕ ಭಾರತದ ಅಂಡರ್-19 ತಂಡಕ್ಕೆ ಪ್ರಶಸ್ತಿ ಸಂಭ್ರಮ ತಂದುಕೊಟ್ಟಿದ್ದಾರೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES