ಪಾಕ್‌ಗೆ ಸೋಲುಣಿಸಿದ ಬೆನ್ನಲ್ಲೇ ಮೊಹಿತ್ ಉಲ್ವಾಗೆ ಬಂಪರ್ ಗಿಫ್ಟ್! ರಾತ್ರೋರಾತ್ರಿ ಟಿ20 ತಂಡಕ್ಕೆ ಆಯ್ಕೆ!
ಪಾಕಿಸ್ತಾನ ವಿರುದ್ಧದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಮೊಹಿತ್ ಉಲ್ವಾಗೆ ಮತ್ತೊಂದು ಅವಕಾಶ ಒಲಿದಿದೆ. 18 ವರ್ಷದ ಈ ಯುವ ಆಟಗಾರನನ್ನ ಸೌರಾಷ್ಟ್ರದ ಹಿರಿಯರ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಆಡಲು ಇಂದೋರ್‌ಗೆ ತೆರಳುವಂತೆ ಸೂಚಿಸಲಾಗಿದೆ.
Mohit Ulva: ಪಾಕಿಸ್ತಾನ ವಿರುದ್ಧದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಕೊನೆಯ ಎಸೆತದವರೆಗೂ ಹೋರಾಡಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟ ಯುವ ಕ್ರಿಕೆಟಿಗ ಮೊಹಿತ್ ಉಲ್ವಾ ಅವರಿಗೆ ಇದೀಗ ಮತ್ತೊಂದು ದೊಡ್ಡ ಅವಕಾಶ ಒಲಿದುಬಂದಿದೆ. ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಲವೇ ಗಂಟೆಗಳಲ್ಲಿ 18 ವರ್ಷದ ಮೊಹಿತ್ ಅವರನ್ನು ಸೌರಾಷ್ಟ್ರದ ಹಿರಿಯರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸೌರಾಷ್ಟ್ರ ತಂಡದ ಪರ ಆಡುವ ಅವಕಾಶ ಮೊಹಿತ್‌ಗೆ ಸಿಕ್ಕಿದೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (SCA) ಈ ನಿರ್ಧಾರ ಕೈಗೊಂಡಿದ್ದು, ಯುವ ಆಟಗಾರನ ಪ್ರತಿಭೆಗೆ ಹಿರಿಯರ ತಂಡದಲ್ಲಿ ಅವಕಾಶ ನೀಡಿದೆ. ಅಂಡರ್-19 ಹಂತದಲ್ಲಿ ತೋರಿದ ಅದ್ಭುತ ಪ್ರದರ್ಶನಕ್ಕೆ ದೊರೆತ ತಕ್ಷಣದ ಮನ್ನಣೆ ಇದಾಗಿದೆ.
ಪಾಕಿಸ್ತಾನ ವಿರುದ್ಧದ ಅಬ್ಬರದ ಆಟಕ್ಕೆ ಸಿಕ್ಕ ಪ್ರತಿಫಲ
ನವೆಂಬರ್ 14ರಂದು ಒಮಾನ್‌ನ ಮಸ್ಕತ್‌ನಲ್ಲಿ ನಡೆದ 2026ರ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 338 ರನ್‌ಗಳ ಗುರಿಯನ್ನ ಭಾರತದ ಮುಂದಿಟ್ಟಿತ್ತು. ಈ ಗುರಿಯನ್ನ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ನಿರ್ಣಾಯಕ ಸಂದರ್ಭದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮೊಹಿತ್ ಉಲ್ವಾ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದರು.
ಕೊನೆಯ ಎಸೆತದಲ್ಲಿ ಗೆಲುವಿಗೆ ಮೂರು ರನ್ ಬೇಕಿದ್ದಾಗ ಬೌಂಡರಿ ಬಾರಿಸಿ ಭಾರತಕ್ಕೆ ಒಂದು ವಿಕೆಟ್‌ನ ರೋಚಕ ಜಯ ತಂದುಕೊಟ್ಟರು. ಈ ಅಮೋಘ ಆಟಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಫೈನಲ್ ಪಂದ್ಯದಲ್ಲಿ ಮೊಹಿತ್ ತೋರಿದ ಧೈರ್ಯ ಮತ್ತು ಒತ್ತಡದ ನಡುವೆಯೂ ಸಂಯಮದಿಂದ ಆಡಿದ ರೀತಿಯನ್ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಗುರುತಿಸಿದೆ. ಹೀಗಾಗಿ ತಡಮಾಡದೆ ಅವರನ್ನ ಹಿರಿಯರ ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.
ಇಂದೋರ್‌ಗೆ ತೆರಳಲು ಸೂಚನೆ
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ ಅವರು ಮೊಹಿತ್ ಆಯ್ಕೆಯನ್ನ ಖಚಿತಪಡಿಸಿದ್ದಾರೆ. ನಿರ್ಣಾಯಕ ಸನ್ನಿವೇಶದಲ್ಲಿ ಯುವ ಆಟಗಾರ ತೋರಿದ ಹೋರಾಟದ ಮನೋಭಾವವನ್ನ ಅವರು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿರುವ ಸೌರಾಷ್ಟ್ರ ತಂಡವನ್ನ ಸೇರಿಕೊಳ್ಳಲು ಮೊಹಿತ್‌ಗೆ ನೇರವಾಗಿ ಇಂದೋರ್‌ಗೆ ತೆರಳುವಂತೆ ಸೂಚಿಸಲಾಗಿದೆ.
ಈ ಕುರಿತು ಮಾತನಾಡಿರುವ ಜಯದೇವ್ ಶಾ, ಮೊಹಿತ್ ಅತ್ಯಂತ ಪ್ರತಿಭಾವಂತ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಸುರೇಂದ್ರನಗರದ ಸಾಮಾನ್ಯ ಕುಟುಂಬದಿಂದ ಬಂದಿದ್ದು, ಪ್ರಸ್ತುತ ರಾಜ್‌ಕೋಟ್‌ನಲ್ಲಿ ವಾಸಿಸುತ್ತಿದ್ದಾರೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಮೊಹಿತ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಟೆನಿಸ್ ಬಾಲ್ ಕ್ರಿಕೆಟ್‌ನಿಂದ ಹಿರಿಯರ ತಂಡದವರೆಗೆ
ಮೊಹಿತ್ ಉಲ್ವಾ ಅವರ ಕ್ರಿಕೆಟ್ ಪಯಣವೂ ಗಮನ ಸೆಳೆಯುವಂತಿದೆ. ಗುಜರಾತ್‌ನ ಸುರೇಂದ್ರನಗರ ಮೂಲದ ಅವರು ಆರಂಭದಲ್ಲಿ ತಮ್ಮ ಊರಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದರು. ನಂತರ ಜಾಮ್‌ನಗರದ ಕ್ರಿಕೆಟ್ ಬಂಗಲೆಯಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿತು. ಅಲ್ಲಿ ರವೀಂದ್ರ ಜಡೇಜಾರ ಬಾಲ್ಯದ ಕೋಚ್ ಮಹೇಂದ್ರಸಿಂಹ ಚೌಹಾಣ್ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್ ಕೌಶಲಗಳನ್ನ ಬೆಳೆಸಿಕೊಂಡರು.
ಕಳೆದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ನಡೆದ ಯೂತ್ ಟೆಸ್ಟ್ ಪಂದ್ಯದಲ್ಲಿಯೂ ಮೊಹಿತ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದರು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅವರು 92 ರನ್ ಗಳಿಸಿದ್ದರು. ಇದರಿಂದ ಅವರು ಕೇವಲ ವೇಗದ ಬೌಲರ್ ಮಾತ್ರವಲ್ಲ, ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲ ಆಟಗಾರ ಎಂಬುದನ್ನ ತೋರಿಸಿದ್ದರು.
ಇದೀಗ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿನ ಪ್ರದರ್ಶನದ ಬೆನ್ನಲ್ಲೇ ಸೌರಾಷ್ಟ್ರದ ಹಿರಿಯರ ತಂಡಕ್ಕೆ ಆಯ್ಕೆಯಾಗಿರುವ ಮೊಹಿತ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಯುವ ಹಂತದ ಕ್ರಿಕೆಟ್‌ನಿಂದ ಹಿರಿಯರ ದೇಶೀಯ ಕ್ರಿಕೆಟ್‌ಗೆ ಪ್ರವೇಶ ಪಡೆಯುತ್ತಿರುವ ಅವರ ವೃತ್ತಿಜೀವನದಲ್ಲಿ ಇದು ಹೊಸ ಅಧ್ಯಾಯವಾಗಿದೆ.