Mohammed Shami Retires from Test Cricket: ಭಾರತೀಯ ಕ್ರಿಕೆಟ್‌ನ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 13 ವರ್ಷಗಳ ಕಾಲ ಭಾರತದ ಟೆಸ್ಟ್ ತಂಡವನ್ನ ಪ್ರತಿನಿಧಿಸಿದ್ದ ಶಮಿ, ಭಾವನಾತ್ಮಕ ಸಂದೇಶದ ಮೂಲಕ ಕ್ರಿಕೆಟ್‌ನ ಸುದೀರ್ಘ ಮಾದರಿಗೆ ವಿದಾಯ ಹೇಳಿದ್ದಾರೆ. ನವೆಂಬರ್ 6ರ ಶುಕ್ರವಾರ ರಾತ್ರಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ನಿರ್ಧಾರವನ್ನ ಪ್ರಕಟಿಸಿದ್ದು, ಟೆಸ್ಟ್ ಕ್ರಿಕೆಟ್‌ನೊಂದಿಗಿನ ತಮ್ಮ ಪಯಣದ ನೆನಪುಗಳನ್ನ ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ ಶಮಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನವೇ ನಿವೃತ್ತಿಯನ್ನೂ ಘೋಷಿಸಿದ್ದಾರೆ. 2013ರ ನವೆಂಬರ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡದ ಪರ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದರು. ಇದೀಗ 13 ವರ್ಷಗಳ ಬಳಿಕ ಅದೇ ದಿನ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಭಾರತದ ಬಿಳಿ ಜೆರ್ಸಿಯೊಂದಿಗಿನ ತಮ್ಮ ಪಯಣ ಮುಗಿದಿದ್ದರೂ, ಆ ಜೆರ್ಸಿ ನೀಡಿದ ನೆನಪುಗಳು ಸದಾ ತಮ್ಮೊಂದಿಗಿರಲಿವೆ ಎಂಬ ಭಾವನೆಯನ್ನ ಅವರು ವ್ಯಕ್ತಪಡಿಸಿದ್ದಾರೆ.
64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್
ಮೊಹಮ್ಮದ್ ಶಮಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 64 ಪಂದ್ಯಗಳನ್ನ ಆಡಿದ್ದಾರೆ. ಈ ಅವಧಿಯಲ್ಲಿ 229 ವಿಕೆಟ್‌ಗಳನ್ನ ಕಬಳಿಸಿದ್ದು, 27.71ರ ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಸಾಧನೆ 6 ವಿಕೆಟ್‌ಗಳಿಗೆ 56 ರನ್. ಟೆಸ್ಟ್ ಕ್ರಿಕೆಟ್‌ನಲ್ಲಿ ಆರು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ವೇಗದ ಬೌಲಿಂಗ್, ನಿಖರತೆ ಹಾಗೂ ಚೆಂಡನ್ನ ಎರಡೂ ದಿಕ್ಕುಗಳಲ್ಲಿ ಚಲಿಸುವ ಸಾಮರ್ಥ್ಯ ಶಮಿ ಅವರ ಪ್ರಮುಖ ಬಲವಾಗಿತ್ತು.
ಹೊಸ ಚೆಂಡಿನ ಜೊತೆಗೆ ಹಳೆಯ ಚೆಂಡಿನಲ್ಲಿಯೂ ಪರಿಣಾಮಕಾರಿ ಬೌಲಿಂಗ್ ಮಾಡುವ ಮೂಲಕ ಹಲವು ಸಂದರ್ಭಗಳಲ್ಲಿ ತಂಡಕ್ಕೆ ನೆರವಾಗಿದ್ದರು. ವಿಶೇಷವಾಗಿ ರಿವರ್ಸ್ ಸ್ವಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದ್ದರು. ಭಾರತದ ಪರ ತವರಿನ ಮೈದಾನಗಳಲ್ಲಷ್ಟೇ ಅಲ್ಲದೆ ವಿದೇಶಿ ಪಿಚ್‌ಗಳಲ್ಲಿಯೂ ಶಮಿ ತಮ್ಮ ಬೌಲಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದರು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ನಡೆದ ಪಂದ್ಯಗಳಲ್ಲಿಯೂ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಗಾಯಗಳಿಂದ ಚೇತರಿಸಿಕೊಂಡು ಮಾಡಿದ ಕಮ್‌ಬ್ಯಾಕ್
ಶಮಿ ಅವರ ಟೆಸ್ಟ್ ಕ್ರಿಕೆಟ್ ಪಯಣ ಸುಲಭವಾಗಿರಲಿಲ್ಲ. ವೃತ್ತಿಜೀವನದ ವಿವಿಧ ಹಂತಗಳಲ್ಲಿ ಗಾಯದ ಸಮಸ್ಯೆಗಳನ್ನ ಎದುರಿಸಿದ್ದರು. ಗಾಯಗಳಿಂದ ತಂಡದಿಂದ ಹೊರಗುಳಿಯಬೇಕಾದ ಸಂದರ್ಭಗಳೂ ಎದುರಾಗಿದ್ದವು. ಆದರೆ ಪ್ರತಿ ಬಾರಿ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಮರಳಿದ್ದರು. ತಮ್ಮ ಸಂದೇಶದಲ್ಲಿಯೂ ಗಾಯಗಳು, ಹೋರಾಟಗಳು, ವಿಕೆಟ್‌ಗಳು ಹಾಗೂ ಪುನರಾಗಮನಗಳು ತಮಗೆ ಹಲವು ಪಾಠಗಳನ್ನ ಕಲಿಸಿವೆ ಎಂದು ಶಮಿ ಸ್ಮರಿಸಿದ್ದಾರೆ. ಅವರ ಕೊನೆಯ ಟೆಸ್ಟ್ ಪಂದ್ಯ 2023ರ ಜೂನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಗಿತ್ತು. ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯವೇ ಭಾರತದ ಪರ ಅವರ ಕೊನೆಯ ಟೆಸ್ಟ್ ಪಂದ್ಯವಾಗಿ ಉಳಿದಿದೆ. ಇದಾದ ಬಳಿಕ ಗಾಯದ ಸಮಸ್ಯೆಗಳು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದ್ದವು.
ಸಹ ಆಟಗಾರರು, ಕುಟುಂಬಕ್ಕೆ ಧನ್ಯವಾದ
ನಿವೃತ್ತಿ ಘೋಷಣೆಯ ಸಂದರ್ಭದಲ್ಲಿ ಶಮಿ ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ತಂಡದ ಸಹ ಆಟಗಾರರು, ಕೋಚ್‌ಗಳು, ಕುಟುಂಬದ ಸದಸ್ಯರು ಹಾಗೂ ಕಷ್ಟದ ಸಮಯದಲ್ಲಿಯೂ ತಮ್ಮ ಮೇಲೆ ವಿಶ್ವಾಸವಿಟ್ಟಿದ್ದ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ತಾವು ಪ್ರತಿನಿಧಿಸಿದ್ದ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್‌ಗೂ ವಿಶೇಷ ಧನ್ಯವಾದ ತಿಳಿಸಿದ್ದಾರೆ. ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ಅವಕಾಶಗಳನ್ನ ನೀಡಿದ್ದಕ್ಕಾಗಿ ಈ ಸಂಸ್ಥೆಗಳ ಬೆಂಬಲವನ್ನ ಸ್ಮರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ತಮ್ಮ ಪಾಲಿಗೆ ಕೇವಲ ಒಂದು ಮಾದರಿಯ ಆಟವಾಗಿರಲಿಲ್ಲ. ಅದು ತಮ್ಮ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು ಎಂದು ಅವರು ಹೇಳಿದ್ದಾರೆ. ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಕನಸಿತ್ತು. ಆ ಬಳಿಕದ ಪ್ರತಿಯೊಂದು ವಿಕೆಟ್, ಸವಾಲು, ಗಾಯ ಮತ್ತು ಪುನರಾಗಮನವೂ ತಮ್ಮ ಅನುಭವವನ್ನ ರೂಪಿಸಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲೂ ಗಮನಾರ್ಹ ಸಾಧನೆ
ಟೆಸ್ಟ್ ಕ್ರಿಕೆಟ್ ಮಾತ್ರವಲ್ಲದೆ ಏಕದಿನ ಮಾದರಿಯಲ್ಲಿಯೂ ಶಮಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆ ಟೂರ್ನಿಯಲ್ಲಿ ಕೇವಲ ಏಳು ಇನಿಂಗ್ಸ್‌ಗಳಲ್ಲಿ 24 ವಿಕೆಟ್‌ಗಳನ್ನ ಕಬಳಿಸಿದ್ದರು. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.
ಬಿಳಿ ಜೆರ್ಸಿಗೆ ವಿದಾಯ, ನೆನಪುಗಳಿಗೆ ಅಲ್ಲ
ತಮ್ಮ ನಿವೃತ್ತಿ ಸಂದೇಶದ ಕೊನೆಯಲ್ಲಿ ಮೈದಾನದಲ್ಲಿ ಕೊನೆಯ ಟೆಸ್ಟ್ ಎಸೆತವನ್ನ ಈಗಾಗಲೇ ಎಸೆದಿದ್ದರೂ, ಭಾರತಕ್ಕಾಗಿ ಆಡಿದ ಹೆಮ್ಮೆ ಎಂದಿಗೂ ತಮ್ಮ ಹೃದಯದಲ್ಲಿ ಜೀವಂತವಾಗಿರಲಿದೆ ಎಂಬ ಭಾವನೆಯನ್ನ ಶಮಿ ಹಂಚಿಕೊಂಡಿದ್ದಾರೆ. ‘ಧನ್ಯವಾದಗಳು, ಟೆಸ್ಟ್ ಕ್ರಿಕೆಟ್’ ಎಂಬ ಮಾತುಗಳೊಂದಿಗೆ ತಮ್ಮ ಸಂದೇಶವನ್ನ ಮುಕ್ತಾಯಗೊಳಿಸಿದ್ದಾರೆ.
ಒಟ್ನಲ್ಲಿ 13 ವರ್ಷಗಳ ಟೆಸ್ಟ್ ಪಯಣದಲ್ಲಿ 64 ಪಂದ್ಯಗಳು, 229 ವಿಕೆಟ್‌ಗಳು, ಆರು ಐದು ವಿಕೆಟ್‌ಗಳ ಸಾಧನೆ ಹಾಗೂ ಹಲವು ಸ್ಮರಣೀಯ ಪ್ರದರ್ಶನಗಳನ್ನ ದಾಖಲಿಸಿರುವ ಮೊಹಮ್ಮದ್ ಶಮಿ ಇದೀಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರ ಟೆಸ್ಟ್ ವೃತ್ತಿಜೀವನಕ್ಕೆ ಭಾವನಾತ್ಮಕ ತೆರೆ ಬಿದ್ದಿದೆ.