ಕೊಹ್ಲಿ, ರೋಹಿತ್, ನಾಯಕ ಶ್ರೇಯಸ್ ಶೂನ್ಯಕ್ಕೆ ಔಟ್; ಕಿವೀಸ್ ಎದುರು ಭಾರತಕ್ಕೆ ಹೀನಾಯ ಸೋಲು!!
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್‌ಗೆ ತತ್ತರಿಸಿದ ಭಾರತ ಕೇವಲ 89 ರನ್‌ಗಳಿಗೆ ಆಲೌಟ್ ಆಗಿ 244 ರನ್‌ಗಳ ಭಾರಿ ಸೋಲು ಅನುಭವಿಸಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾದರೆ, ಹೆನ್ರಿ ಒಟ್ಟು 6 ವಿಕೆಟ್ ಕಬಳಿಸಿ ಭಾರತದ ಸೋಲಿಗೆ ಪ್ರಮುಖ ಕಾರಣರಾದರು.
India vs New Zealand: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿದೆ. ವೇಗಿ ಮ್ಯಾಟ್ ಹೆನ್ರಿ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಕೇವಲ 89 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ 244 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ. ವಿಶೇಷವೆಂದರೆ ಭಾರತದ ಪ್ರಮುಖ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ನಾಯಕ ಶ್ರೇಯಸ್ ಅಯ್ಯರ್ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ವಿಲ್ ಯಂಗ್ ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 333 ರನ್ ಗಳಿಸಿತು. 334 ರನ್‌ಗಳ ಕಠಿಣ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ ನ್ಯೂಜಿಲೆಂಡ್ ಬೌಲರ್‌ಗಳ ಎದುರು ರನ್ ಗಳಿಸಲು ಪರದಾಡಿತು. ಅಂತಿಮವಾಗಿ 89 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು.
ವಿಲ್ ಯಂಗ್ ಶತಕದ ಅಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್ ವಿಲ್ ಯಂಗ್ ಆಸರೆಯಾದರು. ಭಾರತೀಯ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ ಅವರು ಆಕರ್ಷಕ ಶತಕ ಸಿಡಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. 108 ಎಸೆತಗಳನ್ನ ಎದುರಿಸಿದ ಯಂಗ್ 125 ರನ್ ಗಳಿಸಿದರು. ಅವರ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ 50 ಓವರ್‌ಗಳ ಅಂತ್ಯಕ್ಕೆ 333 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಭಾರತವು ಗೆಲುವಿಗೆ 334 ರನ್‌ಗಳ ದೊಡ್ಡ ಟಾರ್ಗೆಟ್ ಚೇಸ್ ಮಾಡ್ಬೇಕಿತ್ತು. ಆದರೆ ಈ ಮೊತ್ತ ಬೆನ್ನಟ್ಟಲು ಕಣಕ್ಕಿಳಿದ ಭಾರತೀಯ ಬ್ಯಾಟರ್‌ಗಳಿಗೆ ಆರಂಭದಿಂದಲೇ ನ್ಯೂಜಿಲೆಂಡ್ ವೇಗಿಗಳ ಸವಾಲು ಎದುರಾಯಿತು.
ಕೊಹ್ಲಿ, ರೋಹಿತ್, ಶ್ರೇಯಸ್‌ಗೆ ಶೂನ್ಯದ ಆಘಾತ
ಭಾರತದ ಇನಿಂಗ್ಸ್ ಆರಂಭವಾಗುತ್ತಿದ್ದಂತೆಯೇ ಮ್ಯಾಟ್ ಹೆನ್ರಿ ತಮ್ಮ ಬೌಲಿಂಗ್ ಸಾಮರ್ಥ್ಯ ಪ್ರದರ್ಶಿಸಿದರು. ಭಾರತದ ಪ್ರಮುಖ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರನ್ನ ಶೂನ್ಯಕ್ಕೆ ಔಟ್ ಮಾಡುವ ಮೂಲಕ ತಂಡಕ್ಕೆ ದೊಡ್ಡ ಹೊಡೆತ ನೀಡಿದರು. ಈ ಮೂವರು ಅನುಭವಿ ಬ್ಯಾಟರ್‌ಗಳು ಒಂದೇ ಪಂದ್ಯದಲ್ಲಿ ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದ್ದು ಭಾರತದ ಬ್ಯಾಟಿಂಗ್ ವೈಫಲ್ಯವನ್ನ ಮತ್ತಷ್ಟು ಎತ್ತಿತೋರಿಸಿತು. ಆರಂಭಿಕ ಹಂತದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡ ಭಾರತ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮ್ಯಾಟ್ ಹೆನ್ರಿ ಅವರ ವೇಗ ಮತ್ತು ನಿಖರ ದಾಳಿಗೆ ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು.
27 ರನ್ ನೀಡಿ 6 ವಿಕೆಟ್ ಪಡೆದ ಹೆನ್ರಿ
ಭಾರತದ ಬ್ಯಾಟಿಂಗ್ ವಿಭಾಗವನ್ನೇ ಸಂಪೂರ್ಣವಾಗಿ ಕುಸಿಯುವಂತೆ ಮಾಡಿದ ಮ್ಯಾಟ್ ಹೆನ್ರಿ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 9.4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ ಆರು ವಿಕೆಟ್ ಕಬಳಿಸಿದರು. ಎರಡು ಮೇಡನ್ ಓವರ್‌ಗಳನ್ನ ಎಸೆದ ಅವರು ಭಾರತದ ಬ್ಯಾಟರ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದರು. ಹೆನ್ರಿ ತಮ್ಮ ಆರು ವಿಕೆಟ್‌ಗಳ ಸಾಧನೆಯ ಮೂಲಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಸೇರಿದಂತೆ ಭಾರತದ ಪ್ರಮುಖ ಆಟಗಾರರನ್ನ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಇಶಾನ್ ಕಿಶನ್, ಕುಲದೀಪ್ ಯಾದವ್ ಮತ್ತು ಗುರ್ನೂರ್ ಬ್ರಾರ್ ಅವರ ವಿಕೆಟ್‌ಗಳನ್ನೂ ತಮ್ಮ ಖಾತೆಗೆ ಸೇರಿಸಿಕೊಂಡರು. ಹೆನ್ರಿಗೆ ಉತ್ತಮ ಸಾಥ್ ನೀಡಿದ ಮ್ಯಾಥ್ ಫಿಶ್ನರ್ ಮೂರು ವಿಕೆಟ್ ಪಡೆದರೆ, ಕೈಲಿ ಜೇಮಿಸನ್ ಒಂದು ವಿಕೆಟ್ ಕಬಳಿಸಿದರು. ನ್ಯೂಜಿಲೆಂಡ್ ಬೌಲರ್‌ಗಳ ಸಂಘಟಿತ ಪ್ರದರ್ಶನದ ಮುಂದೆ ಭಾರತದ ಇಡೀ ಬ್ಯಾಟಿಂಗ್ ಪಡೆ 89 ರನ್‌ಗಳಿಗೆ ಸೀಮಿತವಾಯಿತು.
ಏಕದಿನ ಇತಿಹಾಸದಲ್ಲಿ ಭಾರತದ 2ನೇ ದೊಡ್ಡ ಸೋಲು
ನ್ಯೂಜಿಲೆಂಡ್ ವಿರುದ್ಧ 244 ರನ್‌ಗಳ ಅಂತರದಲ್ಲಿ ಸೋಲು ಕಂಡಿರುವ ಭಾರತ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತನ್ನ 2ನೇ ಅತಿದೊಡ್ಡ ರನ್‌ಗಳ ಅಂತರದ ಸೋಲನ್ನ ದಾಖಲಿಸಿದೆ. ಇದಕ್ಕೂ ಮೊದಲು 2000ರಲ್ಲಿ ಶ್ರೀಲಂಕಾ ವಿರುದ್ಧ ಭಾರತ 245 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ವಿಲ್ ಯಂಗ್ ಅವರ ಶತಕ ಹಾಗೂ ಮ್ಯಾಟ್ ಹೆನ್ರಿ ಅವರ ಆರು ವಿಕೆಟ್‌ಗಳ ಸಾಧನೆ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮತ್ತೊಂದೆಡೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗಿದ್ದು ಭಾರತದ ಪಾಲಿಗೆ ನಿರಾಸೆಯ ಸಂಗತಿಯಾಗಿದೆ.