IPL 2027: ಆರ್‌ಸಿಬಿ ತಂಡದಿಂದ ನಾಲ್ವರು ಔಟ್? ಮಿನಿ ಹರಾಜಿಗೂ ಮುನ್ನ ಮಹತ್ವದ ನಿರ್ಧಾರ!
ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ನಾಲ್ವರು ಆಟಗಾರರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಂಗೇಶ್ ಯಾದವ್, ಯಶ್ ದಯಾಳ್, ರಿಚರ್ಡ್ ಗ್ಲೀಸನ್ ಮತ್ತು ಅಭಿನಂದನ್ ಸಿಂಗ್ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಹರಾಜಿನಲ್ಲಿ ಹೊಸ ಆಟಗಾರರನ್ನ ಖರೀದಿಸಲು ತಂಡದ ಪರ್ಸ್ ಮೊತ್ತ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಆದರೆ ಆಟಗಾರರ ಬಿಡುಗಡೆ ಕುರಿತು ಆರ್‌ಸಿಬಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
RCB 2027 Retention: ಐಪಿಎಲ್‌ನಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ 2027ರ ಆವೃತ್ತಿಗೆ ಸಿದ್ಧತೆ ಆರಂಭಿಸಿದೆ. ಮುಂದಿನ ಸೀಸನ್‌ಗೂ ತನ್ನ ಯಶಸ್ಸಿನ ಲಯವನ್ನ ಮುಂದುವರಿಸಲು ಆರ್‌ಸಿಬಿ ಫ್ರಾಂಚೈಸಿ ಮುಂದಾಗುವ ಸಾಧ್ಯತೆಯಿದೆ. ಆದರೆ ಮಿನಿ ಹರಾಜಿನಲ್ಲಿ ಹೊಸ ಆಟಗಾರರನ್ನ ಖರೀದಿಸಲು ತಂಡದ ಪರ್ಸ್‌ನಲ್ಲಿ ಹಣದ ಅಗತ್ಯವಿರುವುದರಿಂದ ಕೆಲ ಆಟಗಾರರನ್ನ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡದಿಂದ ನಾಲ್ವರು ಆಟಗಾರರು ಹೊರಬೀಳುವ ಸಾಧ್ಯತೆಯಿದೆ ಎಂಬ ಚರ್ಚೆ ಶುರುವಾಗಿದೆ. 2026ರ ಹರಾಜಿನಲ್ಲಿ ದೊಡ್ಡ ಮೊತ್ತ ನೀಡಿ ಖರೀದಿಸಿದ ಆಟಗಾರರ ಪೈಕಿ ಕೆಲವರಿಗೆ ಆಡುವ ಅವಕಾಶವೇ ಸಿಕ್ಕಿಲ್ಲ. ಮತ್ತೊಂದೆಡೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಆಟಗಾರರನ್ನೂ ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ವರದಿಯ ಪ್ರಕಾರ, ಬಿಡುಗಡೆ ಪಟ್ಟಿಯಲ್ಲಿ ಮಂಗೇಶ್ ಯಾದವ್, ಯಶ್ ದಯಾಳ್, ರಿಚರ್ಡ್ ಗ್ಲೀಸನ್ ಮತ್ತು ಅಭಿನಂದನ್ ಸಿಂಗ್ ಹೆಸರುಗಳಿವೆ.
1. ಮಂಗೇಶ್ ಯಾದವ್ – ₹5.20 ಕೋಟಿ
ಆರ್‌ಸಿಬಿ ತಂಡದಿಂದ ಬಿಡುಗಡೆಯಾಗುವ ಸಾಧ್ಯತೆಯಿರುವ ಆಟಗಾರರ ಪಟ್ಟಿಯಲ್ಲಿ ಮಂಗೇಶ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ. 2026ರ ಐಪಿಎಲ್ ಹರಾಜಿನಲ್ಲಿ ₹30 ಲಕ್ಷ ಮೂಲ ಬೆಲೆ ಹೊಂದಿದ್ದ ಮಧ್ಯಪ್ರದೇಶದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಅವರನ್ನ ಆರ್‌ಸಿಬಿ ಬರೋಬ್ಬರಿ ₹5.20 ಕೋಟಿ ನೀಡಿ ಖರೀದಿಸಿತ್ತು. ಆದರೆ ಇಡೀ 2026ರ ಆವೃತ್ತಿಯಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ತಂಡದಲ್ಲಿ ಸ್ಥಾನ ಪಡೆಯದೆ ಬೆಂಚ್‌ನಲ್ಲೇ ಉಳಿದಿದ್ದ ಮಂಗೇಶ್ ಯಾದವ್ ಅವರನ್ನ ಮುಂದಿನ ಸೀಸನ್‌ಗೆ ಉಳಿಸಿಕೊಳ್ಳುವ ಬದಲು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ಹರಾಜಿಗಾಗಿ ತಂಡದ ಪರ್ಸ್ ಮೊತ್ತವನ್ನ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.
2. ಯಶ್ ದಯಾಳ್ – ₹5 ಕೋಟಿ
ಆರ್‌ಸಿಬಿ ತಂಡದಿಂದ ಹೊರಬೀಳಬಹುದು ಎಂದು ನಿರೀಕ್ಷಿಸಲಾಗುತ್ತಿರುವ ಮತ್ತೊಂದು ಹೆಸರು ವೇಗಿ ಯಶ್ ದಯಾಳ್. 2026ರ ಆವೃತ್ತಿಯಲ್ಲಿ ಆರ್‌ಸಿಬಿ ಅವರನ್ನ ₹5 ಕೋಟಿ ನೀಡಿ ಉಳಿಸಿಕೊಂಡಿತ್ತು. ಆದರೆ ಮೈದಾನದ ಹೊರಗಿನ ಕಾನೂನು ವಿವಾದಗಳು ಹಾಗೂ ಅಲಭ್ಯತೆಯ ಕಾರಣದಿಂದ ಅವರು ಕಳೆದ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಆಡಿರಲಿಲ್ಲ. ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಅವರ ಲಭ್ಯತೆ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಆರ್‌ಸಿಬಿ ಅವರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ₹5 ಕೋಟಿ ಮೌಲ್ಯದ ಆಟಗಾರನನ್ನ ಬಿಡುಗಡೆ ಮಾಡಿದರೆ ಹರಾಜಿನಲ್ಲಿ ಹೊಸ ಆಟಗಾರರನ್ನ ಖರೀದಿಸಲು ತಂಡಕ್ಕೆ ಅವಕಾಶ ಸಿಗಬಹುದು.
3. ರಿಚರ್ಡ್ ಗ್ಲೀಸನ್ – ₹1.60 ಕೋಟಿ
ಇಂಗ್ಲೆಂಡ್‌ನ ವೇಗಿ ರಿಚರ್ಡ್ ಗ್ಲೀಸನ್ ಕೂಡ ಆರ್‌ಸಿಬಿ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ. ಶ್ರೀಲಂಕಾದ ನುವಾನ್ ತುಷಾರ ಅವರ ಬದಲಿಗೆ ಗ್ಲೀಸನ್ ಅವರನ್ನ ₹1.60 ಕೋಟಿ ನೀಡಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಆರ್‌ಸಿಬಿ ತಂಡದ ವಿದೇಶಿ ಆಟಗಾರರ ಆಯ್ಕೆಯಲ್ಲಿ ಫಿಲ್ ಸಾಲ್ಟ್, ಜೋಶ್ ಹೇಝಲ್‌ವುಡ್, ಟಿಮ್ ಡೇವಿಡ್ ಮತ್ತು ಜೇಕಬ್ ಬೆಥೆಲ್ ಅಥವಾ ಜೇಕಬ್ ಡಫಿ ಅವರಿಗೆ ಆದ್ಯತೆ ಸಿಗುವ ಸಾಧ್ಯತೆಯಿದೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಗ್ಲೀಸನ್‌ಗೆ ಅವಕಾಶ ಸಿಗುವುದು ಕಷ್ಟವಾಗಬಹುದು. ಈ ಕಾರಣದಿಂದ ಅವರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
4. ಅಭಿನಂದನ್ ಸಿಂಗ್ – ₹30 ಲಕ್ಷ
ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ ಅಭಿನಂದನ್ ಸಿಂಗ್. ₹30 ಲಕ್ಷ ಮೂಲ ಬೆಲೆಗೆ ಆರ್‌ಸಿಬಿ ತಂಡದಲ್ಲಿದ್ದ ಈ ವೇಗಿ 2026ರ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನ ಆಡಿದ್ದರು. ಈ ಪಂದ್ಯಗಳಲ್ಲಿ 12.62ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಮೂರು ವಿಕೆಟ್‌ಗಳನ್ನ ಪಡೆದಿದ್ದರು. ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ರಾಸಿಖ್ ಸಲಾಮ್ ಅವರಂತಹ ದೇಶೀಯ ವೇಗಿಗಳು ಇರುವುದರಿಂದ, ಅಭಿನಂದನ್ ಸಿಂಗ್ ಅವರನ್ನ ಬಿಡುಗಡೆ ಮಾಡಿ ತಂಡದ ಸ್ಕ್ವಾಡ್‌ನಲ್ಲಿ ಜಾಗ ಖಾಲಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಆರ್‌ಸಿಬಿ ಪ್ರಮುಖ ಆಟಗಾರರನ್ನ ಉಳಿಸಿಕೊಳ್ಳಲಿದೆಯೇ?
ಮುಂಬರುವ ಆವೃತ್ತಿಯಲ್ಲಿ ತನ್ನ ಗೆಲುವಿನ ಲಯವನ್ನ ಬದಲಿಸಲು ಆರ್‌ಸಿಬಿ ಬಯಸುವುದಿಲ್ಲವೆಂಬುದು ವರದಿಯ ಪ್ರಮುಖ ಅಂಶ. ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜೋಶ್ ಹೇಝಲ್‌ವುಡ್, ಭುವನೇಶ್ವರ್ ಕುಮಾರ್ ಸೇರಿದಂತೆ ಪ್ರಮುಖ ಆಟಗಾರರನ್ನ ತಂಡದಲ್ಲಿ ಮುಂದುವರಿಸುವ ನಿರೀಕ್ಷೆಯಿದೆ. ಒಟ್ನಲ್ಲಿ ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡದಲ್ಲಿ ದೊಡ್ಡ ಬದಲಾವಣೆಗಳ ಬದಲು ಕೆಲವೇ ಆಟಗಾರರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಂಗೇಶ್ ಯಾದವ್, ಯಶ್ ದಯಾಳ್, ರಿಚರ್ಡ್ ಗ್ಲೀಸನ್ ಮತ್ತು ಅಭಿನಂದನ್ ಸಿಂಗ್ ಅವರ ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಆದರೆ ಆರ್‌ಸಿಬಿಯ ಅಧಿಕೃತ ರಿಟೆನ್ಷನ್ ಮತ್ತು ರಿಲೀಸ್ ಪಟ್ಟಿ ಪ್ರಕಟವಾದ ಬಳಿಕವಷ್ಟೇ ಅಂತಿಮ ಚಿತ್ರಣ ಸಿಗಲಿದೆ.