SOCIAL MEDIA

Newsletter

PARTNER SITES
Select Language Select State

IPL 2027: ಐಪಿಎಲ್​ಗೆ ಆಸ್ಟ್ರೇಲಿಯಾ ಆಟಗಾರರು ಡೌಟ್! ಕಾರಣವೇನು ಗೊತ್ತಾ?

ಐಪಿಎಲ್ 2027ರಿಂದ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್‌ವುಡ್ ದೂರ ಉಳಿಯುವ ಸಾಧ್ಯತೆಯಿದೆ. 2027ರಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿ, ಆ್ಯಶಸ್ ಹಾಗೂ ಏಕದಿನ ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಭಾಗವಹಿಸಬೇಕಿದೆ. ಬಿಡುವಿಲ್ಲದ ವೇಳಾಪಟ್ಟಿ ಮತ್ತು ಕೆಲಸದ ಒತ್ತಡದಿಂದ ಈ ಆಟಗಾರರು ಐಪಿಎಲ್ ಆಡದಿರಬಹುದು. ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ ಮತ್ತು ಕ್ಯಾಮರೋನ್ ಗ್ರೀನ್ ಕೂಡ ಟೂರ್ನಿಯ ದ್ವಿತೀಯಾರ್ಧದಲ್ಲಿ ಅಲಭ್ಯರಾಗುವ ಸಾಧ್ಯತೆಯಿದೆ.

Written By Puttaraj K Alur
Published: Nov 09, 2026, 08:10 IST | Updated: Nov 09, 2026, 08:23 IST
Image Credit: IPL 2027
Join

IPL 2027: ಐಪಿಎಲ್ 2027ರ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗಳಿಗೆ ಆಸ್ಟ್ರೇಲಿಯಾ ಆಟಗಾರರ ಲಭ್ಯತೆ ಕುರಿತು ಆತಂಕ ಶುರುವಾಗಿದೆ. ಆಸ್ಟ್ರೇಲಿಯಾದ ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್‌ವುಡ್ ಮುಂಬರುವ ಐಪಿಎಲ್ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ. ರಾಷ್ಟ್ರೀಯ ತಂಡದ ಪರ ನಿರಂತರ ಪಂದ್ಯಗಳು ಹಾಗೂ ಆಟಗಾರರ ಮೇಲಿನ ಕೆಲಸದ ಒತ್ತಡ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಬಹುದು ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 20ನೇ ಆವೃತ್ತಿ 2027ರ ಮಾರ್ಚ್ 10ರಿಂದ ಆರಂಭವಾಗುವ ನಿರೀಕ್ಷೆಯಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಐಪಿಎಲ್ ಆರಂಭವಾಗಲಿದೆ. ಆದರೆ ಟೆಸ್ಟ್ ಸರಣಿ ಮುಗಿದ ತಕ್ಷಣವೇ ಆಸ್ಟ್ರೇಲಿಯಾ ಆಟಗಾರರು ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಗೆ ಸಿದ್ಧತೆ ಆರಂಭಿಸಬೇಕಿದೆ. ಹೀಗಾಗಿ ಪ್ರಮುಖ ಆಟಗಾರರು ಐಪಿಎಲ್‌ನಿಂದ ದೂರ ಉಳಿಯುವ ಸಾಧ್ಯತೆ ಎದುರಾಗಿದೆ.

ಕಮಿನ್ಸ್, ಸ್ಟಾರ್ಕ್, ಹೇಝಲ್‌ವುಡ್‌ಗೆ ವಿಶ್ರಾಂತಿ ಅಗತ್ಯ?

ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್‌ವುಡ್ ಮುಂದಿನ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ರಾಷ್ಟ್ರೀಯ ತಂಡದ ಜವಾಬ್ದಾರಿಗಳ ಜೊತೆಗೆ ನಿರಂತರ ಪಂದ್ಯಗಳ ಒತ್ತಡವನ್ನ ನಿರ್ವಹಿಸುವುದು ಆಟಗಾರರಿಗೆ ಸವಾಲಾಗಬಹುದು. ಹೀಗಾಗಿ ಈ ಮೂವರು ಐಪಿಎಲ್‌ನಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇವರಷ್ಟೇ ಅಲ್ಲದೆ ಟ್ರಾವಿಸ್ ಹೆಡ್ ಸೇರಿದಂತೆ ಆಸ್ಟ್ರೇಲಿಯಾದ ಕೆಲವು ಪ್ರಮುಖ ಆಟಗಾರರು ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಅಲಭ್ಯರಾಗುವ ಸಾಧ್ಯತೆಯಿದೆ. ಅಲೆಕ್ಸ್ ಕ್ಯಾರಿ ಮತ್ತು ಕ್ಯಾಮರೋನ್ ಗ್ರೀನ್ ಕೂಡ ಆರಂಭಿಕ ಹಂತದಲ್ಲಿ ಮಾತ್ರ ಆಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2027ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಬಿಡುವಿಲ್ಲದ ವೇಳಾಪಟ್ಟಿ

2027ನೇ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಅತ್ಯಂತ ಕಾರ್ಯನಿರತ ವರ್ಷವಾಗಿರಲಿದೆ. ಜನವರಿಯಿಂದ ನವೆಂಬರ್‌ವರೆಗೆ ತಂಡವು ಹಲವು ಪ್ರಮುಖ ಅಂತಾರಾಷ್ಟ್ರೀಯ ಸರಣಿಗಳು ಮತ್ತು ಟೂರ್ನಿಗಳಲ್ಲಿ ಭಾಗವಹಿಸಬೇಕಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಭಾರತ ವಿರುದ್ಧ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದೆ. ನಂತರ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ 150ನೇ ವರ್ಷದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯವಿದೆ.

ಜೂನ್‌ನಲ್ಲಿ ಆಸ್ಟ್ರೇಲಿಯಾ ಅರ್ಹತೆ ಪಡೆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದೆ. ಇದರ ಬೆನ್ನಲ್ಲೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿ ನಡೆಯಲಿದೆ. ವರ್ಷದ ಕೊನೆಯಲ್ಲಿ ಅಂದರೆ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್ 2027 ನಡೆಯಲಿದೆ. ಹೀಗೆ ವರ್ಷದ ಬಹುತೇಕ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯಗಳು ನಿಗದಿಯಾಗಿವೆ.

ಜನವರಿಯಿಂದ ಜುಲೈವರೆಗೆ 11 ಟೆಸ್ಟ್ ಪಂದ್ಯಗಳು

ಆಸ್ಟ್ರೇಲಿಯಾ ತಂಡವು ಜನವರಿಯಿಂದ ಜುಲೈವರೆಗೆ ಒಟ್ಟು 11 ಪ್ರಮುಖ ಟೆಸ್ಟ್ ಪಂದ್ಯಗಳನ್ನ ಆಡಬೇಕಿದೆ. ಇದೇ ಅವಧಿಯಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಐಪಿಎಲ್ ನಡೆಯಲಿದೆ. ಮೇ ಅಂತ್ಯದಲ್ಲಿ ಐಪಿಎಲ್ ಮುಗಿಸಿ ತಕ್ಷಣವೇ ಜೂನ್‌ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿಗೆ ಸಿದ್ಧರಾಗುವುದು ಆಟಗಾರರಿಗೆ ಕಷ್ಟವಾಗಬಹುದು. ಈ ಕಾರಣದಿಂದ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಪ್ರಮುಖ ವೇಗಿಗಳು ಐಪಿಎಲ್‌ನಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದೇಶದ ಪರ ಆಡುವುದೇ ಮೊದಲ ಆದ್ಯತೆ ಎಂದ ಕಮಿನ್ಸ್

ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಅವರ ಹೇಳಿಕೆಯೂ ಈ ಬೆಳವಣಿಗೆಗೆ ಮಹತ್ವ ನೀಡಿದೆ. ದೇಶಕ್ಕಾಗಿ ಆಡುವ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಗಳನ್ನ ಕೈಬಿಡಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದಾದರೂ ಒಂದು ವಿಚಾರದಲ್ಲಿ ತ್ಯಾಗ ಮಾಡಬೇಕಾಗಬಹುದು ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ಆಟಗಾರರು ಐಪಿಎಲ್‌ಗಿಂತ ರಾಷ್ಟ್ರೀಯ ತಂಡದ ಜವಾಬ್ದಾರಿಗಳಿಗೆ ಆದ್ಯತೆ ನೀಡುವ ಸಾಧ್ಯತೆ ವ್ಯಕ್ತವಾಗಿದೆ. ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ ಮತ್ತು ಕ್ಯಾಮರೋನ್ ಗ್ರೀನ್ ಅವರಂತಹ ಆಟಗಾರರು ಐಪಿಎಲ್‌ನ ಮೊದಲಾರ್ಧದಲ್ಲಿ ಮಾತ್ರ ಆಡಬಹುದು ಎನ್ನಲಾಗಿದೆ.

ಒಟ್ನಲ್ಲಿ ಐಪಿಎಲ್ 2027ರಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರ ಲಭ್ಯತೆ ಫ್ರಾಂಚೈಸಿಗಳಿಗೆ ಸವಾಲಾಗುವ ಸಾಧ್ಯತೆಯಿದೆ. ಕಮಿನ್ಸ್, ಸ್ಟಾರ್ಕ್ ಮತ್ತು ಹೇಝಲ್‌ವುಡ್ ಸಂಪೂರ್ಣವಾಗಿ ಹೊರಗುಳಿದರೆ, ಟ್ರಾವಿಸ್ ಹೆಡ್ ಹಾಗೂ ಕ್ಯಾಮರೋನ್ ಗ್ರೀನ್ ದ್ವಿತೀಯಾರ್ಧದಲ್ಲಿ ಅಲಭ್ಯರಾಗುವ ಸಾಧ್ಯತೆಯೂ ಇದೆ. ಇದರಿಂದ ಆಸ್ಟ್ರೇಲಿಯಾ ಆಟಗಾರರನ್ನ ನೆಚ್ಚಿಕೊಂಡಿರುವ ತಂಡಗಳ ಯೋಜನೆಗಳಲ್ಲಿ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES