India vs New Zealand Test Series: ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಸರಣಿಗಳನ್ನ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾಗೆ ಈಗ ನಿಜವಾದ ಸವಾಲು ಎದುರಾಗಿದೆ. ಶುಭ್‌ಮನ್ ಗಿಲ್ ನಾಯಕತ್ವದ ಭಾರತ ತಂಡ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪ್ರವೇಶಿಸುವ ಭಾರತದ ಕನಸಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಆದರೆ ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸ ಅಷ್ಟೊಂದು ಉತ್ತಮವಾಗಿಲ್ಲ. ಕಳೆದ 18 ವರ್ಷಗಳಿಂದ ಈ ದೇಶದಲ್ಲಿ ಟೆಸ್ಟ್ ಗೆಲುವು ದಾಖಲಿಸಲು ಭಾರತ ವಿಫಲವಾಗಿರುವುದು ತಂಡದ ಮುಂದಿರುವ ದೊಡ್ಡ ಸವಾಲಾಗಿದೆ.
18 ವರ್ಷಗಳಿಂದ ಕಾಡುತ್ತಿರುವ ಗೆಲುವಿನ ಬರ
ಭಾರತ ತಂಡ ಮೊದಲ ಬಾರಿಗೆ 1968ರಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಅಂದು ಐದು ಪಂದ್ಯಗಳ ಸರಣಿಯಲ್ಲಿ ಮೂರು ಗೆಲುವುಗಳನ್ನ ದಾಖಲಿಸಿದ್ದ ಭಾರತ, ವಿದೇಶಿ ನೆಲದಲ್ಲಿ ತನ್ನ ಮೊದಲ ಟೆಸ್ಟ್ ಸರಣಿ ಜಯದ ಸಾಧನೆ ಮಾಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ಹಲವು ದಶಕಗಳ ಬಳಿಕ ಭಾರತಕ್ಕೆ ಈ ಸಾಧನೆ ವಿಶೇಷವಾಗಿತ್ತು. ಆದರೆ ವರ್ಷಗಳು ಕಳೆದಂತೆ ಪರಿಸ್ಥಿತಿ ಬದಲಾಗುತ್ತಾ ಹೋಯಿತು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದರೂ ನ್ಯೂಜಿಲೆಂಡ್‌ನಲ್ಲಿ ಮಾತ್ರ ಟೆಸ್ಟ್ ಗೆಲುವುಗಳು ಅಪರೂಪವಾಗಿವೆ.
ಭಾರತ ತಂಡ ನ್ಯೂಜಿಲೆಂಡ್ ನೆಲದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಗೆದ್ದಿದ್ದು ಸುಮಾರು 18 ವರ್ಷಗಳ ಹಿಂದೆ. ಹ್ಯಾಮಿಲ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಕಳೆದ 50 ವರ್ಷಗಳ ಅವಧಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ಭಾರತ ದಾಖಲಿಸಿರುವ ಏಕೈಕ ಟೆಸ್ಟ್ ಗೆಲುವು ಇದಾಗಿದೆ. ಇದೀಗ ಶುಭ್‌ಮನ್ ಗಿಲ್ ಪಡೆ ಈ ಇತಿಹಾಸವನ್ನ ಬದಲಿಸುವ ಅವಕಾಶ ಹೊಂದಿದೆ.
WTC ಫೈನಲ್ ಮೇಲೆ ಭಾರತದ ಕಣ್ಣು
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತದ ಸ್ಥಾನ ಮತ್ತು ಫೈನಲ್ ಪ್ರವೇಶದ ಅವಕಾಶಗಳು ಈ ಸರಣಿಯ ಫಲಿತಾಂಶದ ಮೇಲೆ ಅವಲಂಬಿತವಾಗಿವೆ. ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದರೆ ಫೈನಲ್ ಪ್ರವೇಶದ ನಿರೀಕ್ಷೆಯನ್ನ ಮತ್ತಷ್ಟು ಬಲಪಡಿಸಿಕೊಳ್ಳಬಹುದು ಎಂದು ನಾಯಕ ಶುಭ್‌ಮನ್ ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಭಾರತಕ್ಕೆ ಮುಂದಿನ ದಿನಗಳಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಸವಾಲು ಎದುರಾಗಲಿದೆ. ಹೀಗಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಸೋಲುಗಳು ಎದುರಾದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಭಾರತದ ಆಸೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ತಂಡ ಈಗಾಗಲೇ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದು, ತನ್ನ ಸ್ಥಾನವನ್ನ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಹಲವು ತಂಡಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಆತಿಥೇಯ ತಂಡವೂ ಯಾವುದೇ ಪಂದ್ಯವನ್ನ ಸುಲಭವಾಗಿ ಬಿಟ್ಟುಕೊಡುವ ಸ್ಥಿತಿಯಲ್ಲಿಲ್ಲ.
ಗಿಲ್‌ಗೆ ಹಿಂದಿನ ಪ್ರವಾಸದ ಅನುಭವ
ಶುಭ್‌ಮನ್ ಗಿಲ್ ಏಳು ವರ್ಷಗಳ ಹಿಂದೆ ಅಂದರೆ 2019ರಲ್ಲಿ ಯುವ ಆಟಗಾರನಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಭಾರತದ ಬ್ಯಾಟರ್‌ಗಳು ಆತಿಥೇಯ ತಂಡದ ಬೌಲಿಂಗ್ ಯೋಜನೆಗಳಿಗೆ ಉತ್ತರ ನೀಡಲು ವಿಫಲರಾಗಿದ್ದರು. ಭಾರತ ತಂಡ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 165, 191, 242 ಮತ್ತು 124 ರನ್‌ಗಳಿಗೆ ಸೀಮಿತವಾಗಿತ್ತು. ಆ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡದ ಸಿದ್ಧತೆ ಮತ್ತು ಪಂದ್ಯದ ಯೋಜನೆಗಳನ್ನ ಗಿಲ್ ಹತ್ತಿರದಿಂದ ಗಮನಿಸಿದ್ದರು.
ಇದೀಗ ನಾಯಕನಾಗಿ ಮತ್ತೊಮ್ಮೆ ಅದೇ ದೇಶಕ್ಕೆ ಮರಳಿರುವ ಅವರು, ಈ ಬಾರಿ ಉತ್ತಮ ತಂತ್ರಗಳೊಂದಿಗೆ ಎದುರಾಳಿ ತಂಡದ ಸವಾಲನ್ನ ಎದುರಿಸುವ ವಿಶ್ವಾಸ ಹೊಂದಿದ್ದಾರೆ. 2019ರಲ್ಲಿ ಭಾರತ ತಂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಟೆಸ್ಟ್ ಘಟಕವನ್ನ ಹೊಂದಿತ್ತು. ಆದರೆ ಈಗಿನ ಪರಿಸ್ಥಿತಿ ವಿಭಿನ್ನವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನ ಮರಳಿ ಸ್ಥಾಪಿಸಿಕೊಳ್ಳಲು ಭಾರತ ಪ್ರಯತ್ನಿಸುತ್ತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದ ಅವಕಾಶವೂ ತಂಡದ ಮುಂದಿದೆ.
ಮೊದಲ ಟೆಸ್ಟ್‌ಗೆ ವೆಲ್ಲಿಂಗ್ಟನ್ ಆತಿಥ್ಯ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 19ರ ಗುರುವಾರ ನಡೆಯಲಿದೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಸ್ಥಳೀಯ ಸಮಯ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 3.30ಕ್ಕೆ ಪಂದ್ಯ ಆರಂಭವಾಗಲಿದೆ. ವೆಲ್ಲಿಂಗ್ಟನ್‌ನಲ್ಲಿ ವಸಂತ ಋತುವಿನ ಹವಾಮಾನ ನಿರೀಕ್ಷಿಸಲಾಗಿದ್ದು, ಬಿಸಿಲಿನ ಜೊತೆಗೆ ಸಾಧಾರಣ ಗಾಳಿ ಬೀಸುವ ಸಾಧ್ಯತೆಯಿದೆ. ಈ ಮೈದಾನದಲ್ಲಿ ಈವರೆಗೆ ನಡೆದ 73 ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡಗಳು 30 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಆದರೆ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ಗಳ ಸರಾಸರಿ ರನ್‌ಗಳು 300ಕ್ಕಿಂತ ಹೆಚ್ಚಿವೆ.
ನ್ಯೂಜಿಲೆಂಡ್ ತಂಡಕ್ಕೆ ಗಾಯದ ಸಮಸ್ಯೆ
ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಟೆಸ್ಟ್‌ಗೂ ಮುನ್ನ ಗಾಯದ ಸಮಸ್ಯೆ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮಿಚೆಲ್ ಸ್ಯಾಂಟ್ನರ್ ಕೈ ಮೂಳೆ ಮುರಿತದ ಕಾರಣ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ನ್ಯೂಜಿಲೆಂಡ್ A ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಡೀನ್ ಫಾಕ್ಸ್‌ಕ್ರಾಫ್ಟ್ ಅವರನ್ನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಟಾಮ್ ಲ್ಯಾಥಮ್, ಡೆವೊನ್ ಕಾನ್ವೆ, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್, ಗ್ಲೆನ್ ಫಿಲಿಪ್ಸ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್ ಮತ್ತು ಜೇಕಬ್ ಡಫಿ ಸಂಭಾವ್ಯ ತಂಡದಲ್ಲಿದ್ದಾರೆ.
ನಾಲ್ವರು ವೇಗದ ಬೌಲರ್‌ಗಳೊಂದಿಗೆ ಭಾರತ ಕಣಕ್ಕೆ?
ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಮೊದಲ ಟೆಸ್ಟ್‌ನಲ್ಲಿ ನಾಲ್ವರು ವೇಗದ ಬೌಲರ್‌ಗಳನ್ನ ಕಣಕ್ಕಿಳಿಸುವುದಾಗಿ ಸುಳಿವು ನೀಡಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್ ವಿಭಾಗದಲ್ಲಿಯೂ ಸಾಕಷ್ಟು ಆಳವನ್ನ ಕಾಯ್ದುಕೊಳ್ಳಲು ತಂಡ ಯೋಜಿಸಿದೆ. ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್, ರಿಷಭ್ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಗುರ್‌ನೂರ್ ಬ್ರಾರ್ ಅಥವಾ ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬುಮ್ರಾ ಸಂಭಾವ್ಯ ತಂಡದಲ್ಲಿದ್ದಾರೆ.
ಇನ್ನು 2026ರಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಆಡುತ್ತಿರುವುದು ಎಲ್ಲಾ ಮಾದರಿಗಳಲ್ಲಿ 20ನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಒಂದೇ ವರ್ಷದಲ್ಲಿ ನಿರ್ದಿಷ್ಟ ಎದುರಾಳಿ ತಂಡದ ವಿರುದ್ಧ ನ್ಯೂಜಿಲೆಂಡ್ ಆಡುತ್ತಿರುವ ಅತಿ ಹೆಚ್ಚಿನ ಪಂದ್ಯಗಳ ದಾಖಲೆಯೂ ಇದಾಗಿದೆ. ಇದಕ್ಕೂ ಮೊದಲು 2008ರಲ್ಲಿ ಇಂಗ್ಲೆಂಡ್ ವಿರುದ್ಧ 19 ಪಂದ್ಯಗಳನ್ನು ಆಡಿತ್ತು. ಭಾರತದ ಯುವ ಆಟಗಾರ ದೇವದತ್ ಪಡಿಕ್ಕಲ್ ಕೂಡ ಈ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2026ರಲ್ಲಿ ಅವರು 62.43 ಸರಾಸರಿಯಲ್ಲಿ 1,436 ರನ್ ಗಳಿಸಿದ್ದು, ಡೇವಿಡ್ ಬೆಡಿಂಗ್‌ಹ್ಯಾಮ್ 1,529 ರನ್‌ಗಳೊಂದಿಗೆ ಅವರಿಗಿಂತ ಮುಂದಿದ್ದಾರೆ.
ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ತಮ್ಮ ತಂಡದ ವೇಗದ ಬೌಲರ್‌ಗಳ ಫಿಟ್‌ನೆಸ್ ಮತ್ತು ಕೆಲಸದ ಹೊರೆ ನಿರ್ವಹಣೆಗೆ ಹೆಚ್ಚಿನ ಗಮನ ನೀಡುವುದಾಗಿ ತಿಳಿಸಿದ್ದಾರೆ. ಇತ್ತ ಶುಭ್‌ಮನ್ ಗಿಲ್, ಏಕದಿನ ಮತ್ತು ಟಿ20 ಸರಣಿ ಗೆದ್ದಿರುವುದು ಸಂತೋಷ ತಂದಿದೆ. ಟೆಸ್ಟ್ ಸರಣಿಯನ್ನೂ ಗೆದ್ದರೆ ಪ್ರವಾಸ ಪರಿಪೂರ್ಣವಾಗಲಿದೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡಿರುವ ಭಾರತ ತಂಡಕ್ಕೆ ಈಗ ಟೆಸ್ಟ್ ಸರಣಿಯೇ ಪ್ರಮುಖ ಸವಾಲಾಗಿದೆ. 18 ವರ್ಷಗಳ ಗೆಲುವಿನ ಬರವನ್ನ ಅಂತ್ಯಗೊಳಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸನ್ನ ಜೀವಂತವಾಗಿರಿಸಿಕೊಳ್ಳುವುದು ಗಿಲ್ ಪಡೆ ಮುಂದಿರುವ ಪ್ರಮುಖ ಗುರಿಯಾಗಿದೆ.