SOCIAL MEDIA

Newsletter

PARTNER SITES
Select Language Select State

720 ರನ್‌ಗಳ ಬೆಟ್ಟವೇರಿದ ಭಾರತಕ್ಕೆ ಗೆಲುವು ದಕ್ಕಲಿಲ್ಲ! ರೋಚಕ ಡ್ರಾದಲ್ಲಿ ಅಂತ್ಯಗೊಂಡ ಮೊದಲ ಟೆಸ್ಟ್

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಹೋರಾಟದ ಬಳಿಕ ಡ್ರಾನಲ್ಲಿ ಅಂತ್ಯಗೊಂಡಿದೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೃಹತ್ ಮುನ್ನಡೆ ಪಡೆದಿದ್ದ ಭಾರತಕ್ಕೆ ಕೊನೆಯ ದಿನ ನ್ಯೂಜಿಲೆಂಡ್‌ನ ಬ್ಯಾಟರ್‌ಗಳ ಪ್ರತಿರೋಧವನ್ನ ಮುರಿಯಲು ಸಾಧ್ಯವಾಗಲಿಲ್ಲ. ಐದನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತ್ತು. ಈ ವೇಳೆ ಉಭಯ ತಂಡಗಳ ನಾಯಕರು ಪಂದ್ಯವನ್ನ ಡ್ರಾ ಎಂದು ಘೋಷಿಸಲು ಒಪ್ಪಿಕೊಂಡರು.

Written By Puttaraj K Alur
Published: Nov 23, 2026, 10:32 IST | Updated: Nov 23, 2026, 10:42 IST
Image Credit: IND vs NZ
Join

IND vs NZ 1st Test: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಹೋರಾಟದ ಬಳಿಕ ಡ್ರಾನಲ್ಲಿ ಅಂತ್ಯಗೊಂಡಿದೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೃಹತ್ ಮುನ್ನಡೆ ಪಡೆದಿದ್ದ ಭಾರತಕ್ಕೆ ಕೊನೆಯ ದಿನ ನ್ಯೂಜಿಲೆಂಡ್‌ನ ಬ್ಯಾಟರ್‌ಗಳ ಪ್ರತಿರೋಧವನ್ನ ಮುರಿಯಲು ಸಾಧ್ಯವಾಗಲಿಲ್ಲ. ಐದನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತ್ತು. ಈ ವೇಳೆ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾ ಎಂದು ಘೋಷಿಸಲು ಒಪ್ಪಿಕೊಂಡರು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ದಾಖಲೆಯ ಬ್ಯಾಟಿಂಗ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿತ್ತು. ತಂಡ 166 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತದ ಪರ ಹಲವು ಬ್ಯಾಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕೆ.ಎಲ್.ರಾಹುಲ್ 136 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಿಷಭ್ ಪಂತ್ ಆಕರ್ಷಕ ಬ್ಯಾಟಿಂಗ್ ಮೂಲಕ 128 ರನ್ ಸಿಡಿಸಿದರು. ಶುಭ್‌ಮನ್ ಗಿಲ್ 98 ರನ್ ಗಳಿಸಿ ಶತಕದ ಅಂಚಿನಲ್ಲಿ ವಿಕೆಟ್ ಕಳೆದುಕೊಂಡರು. ಯಶಸ್ವಿ ಜೈಸ್ವಾಲ್ 85, ದೇವದತ್ ಪಡಿಕ್ಕಲ್ 80 ಮತ್ತು ಧ್ರುವ್ ಜುರೆಲ್ 78 ರನ್ ಗಳಿಸಿದರು. ಈ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ 720 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ ಮೂರು ವಿಕೆಟ್ ಪಡೆದು ಗಮನ ಸೆಳೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 368ಕ್ಕೆ ಆಲೌಟ್

 

 ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 368 ರನ್‌ಗಳಿಗೆ ಆಲೌಟ್ ಆಯಿತು. ಹೆನ್ರಿ ನಿಕೋಲ್ಸ್ 175 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಗ್ಲೆನ್ ಫಿಲಿಪ್ಸ್ 118 ರನ್ ಗಳಿಸಿ ಶತಕದ ಕೊಡುಗೆ ನೀಡಿದರು. ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರಮಾಣದ ರನ್‌ಗಳು ಬರಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ತಂಡ ಭಾರತದ ಮೊದಲ ಇನ್ನಿಂಗ್ಸ್ ಮೊತ್ತಕ್ಕಿಂತ 352 ರನ್‌ಗಳ ಹಿಂದೆ ಉಳಿಯಿತು. ಈ ಮುನ್ನಡೆಯೊಂದಿಗೆ ಭಾರತ ಪಂದ್ಯದಲ್ಲಿ ಬಲವಾದ ಸ್ಥಿತಿಯಲ್ಲಿತ್ತು.

 

ಎರಡನೇ ಇನ್ನಿಂಗ್ಸ್‌ನಲ್ಲೂ ಕಿವೀಸ್‌ಗೆ ಆರಂಭಿಕ ಆಘಾತ

352 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್‌ಗೆ ಭಾರತದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ನಾಯಕ ಟಾಮ್ ಲ್ಯಾಥಮ್ ಖಾತೆ ತೆರೆಯುವ ಮುನ್ನವೇ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಡೆವನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ತಂಡದ ಇನ್ನಿಂಗ್ಸ್‌ಗೆ ಆಸರೆಯಾದರು. ಕಾನ್ವೇ 65 ರನ್ ಗಳಿಸಿದರು. ನಿಕೋಲ್ಸ್ 31 ರನ್ ಗಳಿಸಿ ಔಟಾದರು. ರಚಿನ್ ರವೀಂದ್ರ 37 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ ಭಾರತದ ಬೌಲರ್‌ಗಳು ನಿರಂತರವಾಗಿ ವಿಕೆಟ್ ಪಡೆಯುತ್ತಿದ್ದರಿಂದ ನ್ಯೂಜಿಲೆಂಡ್ ಮೇಲೆ ಒತ್ತಡ ಮುಂದುವರಿದಿತ್ತು.

ಕೊನೆಯ ದಿನ ಮಿಚೆಲ್-ಫಿಲಿಪ್ಸ್ ಪ್ರತಿರೋಧ

ಐದನೇ ದಿನ ಭಾರತ ಗೆಲುವಿಗಾಗಿ ಉಳಿದ ಎಂಟು ವಿಕೆಟ್‌ಗಳನ್ನ ಪಡೆಯಬೇಕಿತ್ತು. ಆದರೆ ನ್ಯೂಜಿಲೆಂಡ್ ಬ್ಯಾಟರ್‌ಗಳು ವಿಕೆಟ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅದರಲ್ಲೂ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಜೊತೆಯಾಟ ಭಾರತದ ಗೆಲುವಿನ ನಿರೀಕ್ಷೆಗೆ ಅಡ್ಡಿಯಾಯಿತು. ಡ್ಯಾರಿಲ್ ಮಿಚೆಲ್ ಅಜೇಯ 49 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ ಅಜೇಯ 26 ರನ್ ಗಳಿಸಿದರು. ಇಬ್ಬರೂ ಆರನೇ ವಿಕೆಟ್‌ಗೆ ಮುರಿಯದ 63 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ನ್ಯೂಜಿಲೆಂಡ್ ತಂಡವನ್ನ ಸೋಲಿನಿಂದ ಪಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯ ದಿನದಾಟದ ವೇಳೆ ಭಾರತಕ್ಕೆ ಇನ್ನೂ ಐದು ವಿಕೆಟ್‌ಗಳ ಅಗತ್ಯವಿದ್ದರೂ, ನ್ಯೂಜಿಲೆಂಡ್‌ನ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಪಂದ್ಯ ಮುಂದುವರಿದಂತೆ ಗೆಲುವಿನ ಸಾಧ್ಯತೆ ಕ್ಷೀಣಿಸಿತು. ಅಂತಿಮವಾಗಿ ಎರಡೂ ತಂಡಗಳ ನಾಯಕರು ಪಂದ್ಯವನ್ನ ಡ್ರಾದಲ್ಲಿ ಅಂತ್ಯಗೊಳಿಸಲು ನಿರ್ಧರಿಸಿದರು.

ಭಾರತದ ಗೆಲುವಿನ ನಿರೀಕ್ಷೆಗೆ ಬ್ರೇಕ್

ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 239 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಭಾರತದ 720/9 ಡಿಕ್ಲೇರ್ಡ್ ಮೊತ್ತಕ್ಕೆ ಹೋಲಿಸಿದರೆ ಇನ್ನೂ 113 ರನ್‌ಗಳ ಹಿನ್ನಡೆಯಲ್ಲಿದ್ದರೂ, ಉಳಿದ ವಿಕೆಟ್‌ಗಳನ್ನ ಉಳಿಸಿಕೊಂಡು ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ಭಾರತಕ್ಕೆ ಗೆಲುವು ಒಲಿಯಲಿಲ್ಲ. ನ್ಯೂಜಿಲೆಂಡ್‌ನ ಹೋರಾಟದ ಪರಿಣಾಮ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು. ಭಾರತಕ್ಕೆ ಸರಣಿಯಲ್ಲಿ ಮುನ್ನಡೆ ಪಡೆಯುವ ಅವಕಾಶ ಕೈತಪ್ಪಿದರೆ, ಆತಿಥೇಯ ತಂಡ ಸೋಲನ್ನ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

WTC ಫೈನಲ್‌ಗೆ ಅರ್ಹತೆ ಪಡೆಯುವ ಭಾರತದ ಹಾದಿಗೆ ಹಿನ್ನಡೆ!

ವೆಲ್ಲಿಂಗ್ಟನ್ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದ್ದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆಯುವ ಭಾರತದ ಹಾದಿಗೆ ಹಿನ್ನಡೆಯಾಗಿದೆ. ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿ ಪ್ರಮುಖ ಅಂಕಗಳನ್ನ ಪಡೆಯುವ ಅವಕಾಶ ಭಾರತಕ್ಕೆ ಕೈತಪ್ಪಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ 4 ಅಂಕಗಳನ್ನ ಪಡೆದಿವೆ. ಮುಂದಿನ ಜೂನ್‌ನಲ್ಲಿ ನಡೆಯಲಿರುವ WTC ಫೈನಲ್‌ ಪ್ರವೇಶದ ಭಾರತದ ಆಸೆಗೆ ಈ ಫಲಿತಾಂಶ ನೆರವಾಗುವುದಿಲ್ಲ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES