ಏಷ್ಯನ್ ಗೇಮ್ಸ್ 2026: ಭಾರತ - ಪಾಕಿಸ್ತಾನ ಪಂದ್ಯ ಯಾವಾಗ ನಡೆಯಲಿದೆ?
Asian Games 2026 IND vs PAK Match date and time : ಜಪಾನ್‌ನ ಐಚಿ - ನಗೋಯಾದಲ್ಲಿ 20ನೇ ಏಷ್ಯನ್ ಕ್ರೀಡಾಕೂಟ ನಡೆಯುತ್ತಿದ್ದು, ಪುರುಷರ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ.
Asian Games 2026 IND vs PAK Match date and time : ಜಪಾನ್‌ನ ಐಚಿ ನಗೋಯಾದಲ್ಲಿ 20 ನೇ ಏಷ್ಯನ್ ಕ್ರೀಡಾಕೂಟ ನಡೆಯುತ್ತಿದ್ದು, ಪುರುಷರ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಜಪಾನ್ ತಂಡವು ಅಫ್ಘಾನಿಸ್ತಾನ ವನ್ನು ಎದುರಿಸಲಿದೆ. ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಕ್ರಿಕೆಟ್ ನಾಲ್ಕನೇ ಬಾರಿಗೆ ಸೇರ್ಪಡೆಗೊಂಡಿದ್ದು, ಒಟ್ಟು 10 ತಂಡಗಳು ಪದಕಕ್ಕಾಗಿ ಸ್ಪರ್ಧಿಸುತ್ತಿವೆ.
ಏಷ್ಯನ್ ಕ್ರೀಡಾಕೂಟದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಅಭಿಮಾನಿಗಳ ಮನದಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ, ಕ್ರಿಕೆಟ್ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ರೋಚಕ ಹಣಾಹಣಿ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು. ಪಂದ್ಯಾವಳಿಯ ಅಧಿಕೃತ ಸ್ವರೂಪ ಮತ್ತು ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಏಷ್ಯನ್ ಗೇಮ್ಸ್‌ನಲ್ಲಿ ಮುಖಾಮುಖಿ ಸಾಧ್ಯವಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ಎಂದು ನಡೆಯಲಿವೆ ಎಂಬುದನ್ನು ತಿಳಿಯಲು ಇಲ್ಲಿ ತಿಳಿಯಿರಿ.
ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ದೇಶಗಳ ತಂಡಗಳು ಸ್ಪರ್ಧಿಸುತ್ತಿವೆ. ಶ್ರೇಯಾಂಕದ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್-ಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನವು 'ಪೂರ್ಣ ಸದಸ್ಯ' (Full Member) ತಂಡವಾಗಿ ಮುಖ್ಯ ಹಂತದಲ್ಲಿ ನೇರ ಸ್ಥಾನವನ್ನು ಪಡೆದುಕೊಂಡಿದೆ. ಜೊತೆಗೆ, ಜೂನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ಅರ್ಹತಾ ಸುತ್ತಿನ ಮೂಲಕ ಹಾಂಗ್ ಕಾಂಗ್, ಮಲೇಷ್ಯಾ, ನೇಪಾಳ ಮತ್ತು ಓಮನ್ ತಂಡಗಳು ಮುಖ್ಯ ಹಂತಕ್ಕೆ ಅರ್ಹತೆ ಪಡೆದಿವೆ. ಆತಿಥೇಯ ರಾಷ್ಟ್ರವಾಗಿ ಜಪಾನ್ ನೇರ ಪ್ರವೇಶವನ್ನು ಪಡೆದಿದೆ.
ಪಂದ್ಯಾವಳಿಯ ಸ್ವರೂಪವೇನು?
ಏಷ್ಯನ್ ಗೇಮ್ಸ್‌ನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ಪ್ರತ್ಯೇಕ ಹಂತಗಳಾಗಿ ವಿಂಗಡಿಸಲಾಗಿದೆ. ಕೆಳ ಶ್ರೇಯಾಂಕದ ಆರು ತಂಡಗಳನ್ನು ಅಂದರೆ ಆತಿಥೇಯ ಜಪಾನ್, ಅಫ್ಘಾನಿಸ್ತಾನ, ನೇಪಾಳ, ಓಮನ್, ಮಲೇಷ್ಯಾ ಮತ್ತು ಹಾಂಗ್ ಕಾಂಗ್ ತಲಾ ಮೂರು ತಂಡಗಳಿರುವ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಸಿಂಗಲ್ ರೌಂಡ್-ರಾಬಿನ್' ಹಂತದ ನಂತರ, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯಲಿವೆ. ಈ ನಾಲ್ಕು ತಂಡಗಳು ನಂತರ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಎದುರಿಸಲಿವೆ. ತದನಂತರ ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು, ನಂತರ ಫೈನಲ್ ಪಂದ್ಯ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆಯೇ?
ಏಷ್ಯನ್ ಗೇಮ್ಸ್‌ನ ವೇಳಾಪಟ್ಟಿ ಪ್ರಕಾರ, ಗುಂಪು ಹಂತದಲ್ಲಿ ಅಥವಾ ಆರಂಭಿಕ ಕ್ವಾರ್ಟರ್-ಫೈನಲ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಪಂದ್ಯ ನಡೆಯುವುದಿಲ್ಲ. ಎರಡೂ ತಂಡಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಇರಿಸಲಾಗಿದೆ ಮತ್ತು ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ನೀಡಲಾಗಿದೆ. ಎರಡೂ ತಂಡಗಳು ನಾಕೌಟ್ ಹಂತಗಳಲ್ಲಿ ಮುನ್ನಡೆದರೆ ಮಾತ್ರ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಲು ಸಾಧ್ಯವಾಗುತ್ತದೆ. ಉಭಯ ತಂಡಗಳು ತಮ್ಮ ತಮ್ಮ ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯಗಳನ್ನು ಗೆದ್ದರೆ, ಅಕ್ಟೋಬರ್ 3 ರಂದು ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಆಗಲಿವೆ. ಮತ್ತೊಂದೆಡೆ ಒಂದು ವೇಳೆ ಎರಡೂ ತಂಡಗಳು ಸೆಮಿ ಫೈನಲ್ ನಲ್ಲಿ ಸೋತರೆ, ಅದೇ ದಿನ ಅಂದರೆ ಅಕ್ಟೋಬರ್ 3 ರಂದು ನಡೆಯುವ ಕಂಚಿನ ಪದಕದ ಪಂದ್ಯ ದಲ್ಲಿಯೂ ಅವು ಪರಸ್ಪರ ಮುಖಾಮುಖಿ ಆಗುವ ಸಾಧ್ಯತೆಯಿದೆ. ಒಟ್ಟಾರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.