SOCIAL MEDIA

Newsletter

PARTNER SITES
Select Language Select State

ಅಪ್ಪನಂತೆ ಅಬ್ಬರಿಸಿದ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್! ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡ ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 128 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಇಶಾನ್ ಸೂದ್ ಮತ್ತು ಅರ್ಜುನ್ ರಾಜ್‌ಪುತ್ ತಲಾ ಮೂರು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಭಾರತ ಪರ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ 51 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿದರೆ, ನಾಯಕ ಲಕ್ಷ್ಯ ರೈಚಂದಾನಿ 53 ರನ್ ಗಳಿಸಿದರು. ಭಾರತ 19.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ತಲುಪಿತು.

Written By Puttaraj K Alur
Published: Nov 06, 2026, 20:39 IST | Updated: Nov 06, 2026, 20:51 IST
Image Credit: Aaryavir Sehwag
Join

Aaryavir Sehwag: ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅಜೇಯ ಅರ್ಧಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಬೌಲಿಂಗ್‌ನಲ್ಲಿ ಎದುರಾಳಿ ತಂಡವನ್ನ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಭಾರತೀಯ ಯುವ ಪಡೆ, ಬ್ಯಾಟಿಂಗ್‌ನಲ್ಲೂ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿ ತಲುಪುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 

ನೇಪಾಳ ಬ್ಯಾಟಿಂಗ್‌ಗೆ ಭಾರತೀಯ ಬೌಲರ್‌ಗಳ ಕಡಿವಾಣ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನೇಪಾಳ ತಂಡ ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ ನೇಪಾಳಕ್ಕೆ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಭಾರತದ ವೇಗದ ಬೌಲರ್ ಇಶಾನ್ ಸೂದ್ ಆರಂಭಿಕ ಹಂತದಲ್ಲೇ ನೇಪಾಳದ ಪ್ರಮುಖ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಕಳುಹಿಸಿ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಇಶಾನ್ ಸೂದ್ ಅವರ ಪರಿಣಾಮಕಾರಿ ಬೌಲಿಂಗ್‌ನಿಂದ ನೇಪಾಳದ ಅಗ್ರ ಕ್ರಮಾಂಕ ಕುಸಿತ ಕಂಡಿತು. ಮತ್ತೊಂದೆಡೆ ಯುವ ಆಫ್‌ಸ್ಪಿನ್ನರ್ ಅರ್ಜುನ್ ರಾಜ್‌ಪುತ್ ಕೂಡ ಅದ್ಭುತ ಪ್ರದರ್ಶನ ನೀಡಿದರು.

ಕೇವಲ 5.3 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ 8 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ನೇಪಾಳದ ಇನ್ನಿಂಗ್ಸ್‌ಗೆ ಅಂತಿಮ ಹೊಡೆತ ನೀಡಿದರು. ನೇಪಾಳ ಪರ ದರ್ಶ್ ಸೋನಾರ್ ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು. ಅವರು 43 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ ಅವರಿಗೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಪರಿಣಾಮ ನೇಪಾಳ ತಂಡ 42.3 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 128 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಇಶಾನ್ ಸೂದ್ ಮತ್ತು ಅರ್ಜುನ್ ರಾಜ್‌ಪುತ್ ತಲಾ 3 ವಿಕೆಟ್ ಪಡೆದು ಮಿಂಚಿದರು.

ಆರ್ಯವೀರ್ ಸೆಹ್ವಾಗ್ ಅಬ್ಬರ; 51 ಎಸೆತಗಳಲ್ಲಿ ಅಜೇಯ 69 ರನ್!

ನೇಪಾಳ ನೀಡಿದ 129 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮತ್ತು ನಾಯಕ ಲಕ್ಷ್ಯ ರೈಚಂದಾನಿ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ನೇಪಾಳ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ತಮ್ಮ ಬ್ಯಾಟಿಂಗ್ ಮೂಲಕ ತಂದೆಯ ಆಟದ ಶೈಲಿಯನ್ನ ನೆನಪಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನ ಅಟ್ಟಿದ ಅವರು ಆಕರ್ಷಕ ಹೊಡೆತಗಳ ಮೂಲಕ ರನ್‌ಗಳನ್ನ ಕಲೆಹಾಕಿದರು. ವೇಗದ ಬೌಲಿಂಗ್ ಮಾತ್ರವಲ್ಲದೆ ಸ್ಪಿನ್ ದಾಳಿಯನ್ನೂ ಸಮರ್ಥವಾಗಿ ಎದುರಿಸಿದರು.

ಆರ್ಯವೀರ್ ಕೇವಲ 51 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರ ಬ್ಯಾಟಿಂಗ್ ವಿಶೇಷ ಗಮನ ಸೆಳೆಯಿತು. ವೇಗದ ಬೌಲರ್ ಅಭಯ್ ಯಾದವ್ ಎಸೆದ ಚೆಂಡನ್ನ ಮುಂದೆ ಬಂದು ನೇರವಾಗಿ ಸೈಟ್‌ಸ್ಕ್ರೀನ್ ಮೇಲೆ ಸಿಕ್ಸರ್‌ಗೆ ಅಟ್ಟುವ ಮೂಲಕ ಆರ್ಯವೀರ್ ತಮ್ಮ ಅರ್ಧಶತಕದ ಸಂಭ್ರಮ ಆಚರಿಸಿದರು. ಅವರ ಈ ಪ್ರದರ್ಶನಕ್ಕೆ ತಂಡದ ಸಹ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯಿಂದ ಮೆಚ್ಚುಗೆ ವ್ಯಕ್ತವಾಯಿತು.

ನಾಯಕ ಲಕ್ಷ್ಯ ರೈಚಂದಾನಿ ಕೂಡ ಅಜೇಯ ಅರ್ಧಶತಕ

ಆರ್ಯವೀರ್‌ಗೆ ಉತ್ತಮ ಸಾಥ್ ನೀಡಿದ ನಾಯಕ ಲಕ್ಷ್ಯ ರೈಚಂದಾನಿ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಅವರು 63 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ತಂಡದ ಗೆಲುವನ್ನ ಸುಲಭಗೊಳಿಸಿದರು. ಈ ಮೂಲಕ ಇಬ್ಬರೂ ಸೇರಿ 100ಕ್ಕೂ ಹೆಚ್ಚು ರನ್‌ಗಳ ಮುರಿಯದ ಜತೆಯಾಟವಾಡಿದರು. ನೇಪಾಳ ಬೌಲರ್‌ಗಳು ವಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನಿಸಿದರೂ ಭಾರತದ ಆರಂಭಿಕ ಜೋಡಿಯನ್ನ ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಕೇವಲ 19.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. 

ಪಾಕಿಸ್ತಾನ ವಿರುದ್ಧ ಮುಂದಿನ ಸವಾಲು

ನೇಪಾಳ ವಿರುದ್ಧದ ಗೆಲುವಿನೊಂದಿಗೆ ಭಾರತ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಆತ್ಮವಿಶ್ವಾಸದ ಆರಂಭ ಪಡೆದುಕೊಂಡಿದೆ. ಇದೀಗ ತಂಡದ ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯಕ್ಕೆ ಭಾರತೀಯ ಯುವ ಆಟಗಾರರು ಸಜ್ಜಾಗುತ್ತಿದ್ದಾರೆ. ಮೊದಲ ಪಂದ್ಯದಲ್ಲೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ ತಂಡ ಮುಂದಿನ ಪಂದ್ಯದಲ್ಲೂ ಇದೇ ಲಯವನ್ನ ಮುಂದುವರಿಸುವ ನಿರೀಕ್ಷೆಯಿದೆ. 

ವಿಶೇಷವಾಗಿ ಆರ್ಯವೀರ್ ಸೆಹ್ವಾಗ್ ಅವರ ಅಬ್ಬರದ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ವೀರೇಂದ್ರ ಸೆಹ್ವಾಗ್ ಅವರಂತೆ ಆಕ್ರಮಣಕಾರಿ ಆಟದ ಮೂಲಕ ಮಗ ಕೂಡ ಗಮನ ಸೆಳೆಯುತ್ತಿದ್ದಾರೆ. ಒಟ್ನಲ್ಲಿ ಅಂಡರ್-19 ಏಷ್ಯಾಕಪ್‌ನ ಮೊದಲ ಪಂದ್ಯದಲ್ಲೇ ನೇಪಾಳವನ್ನ ಮಣಿಸಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಭಾರತ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆರ್ಯವೀರ್ ಸೆಹ್ವಾಗ್ ಅವರ ಅಜೇಯ ಅರ್ಧಶತಕ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES