SOCIAL MEDIA

Newsletter

PARTNER SITES
Select Language Select State

ಐಸಿಸಿ ರ‍್ಯಾಂಕಿಂಗ್‌; ಅಗ್ರಸ್ಥಾನಕ್ಕಾಗಿ ರಾಜ-ಯುವರಾಜನ ಪೈಪೋಟಿ, ಟಾಪ್‌-5ಕ್ಕೆ ಕುಲ್ದೀಪ್‌ ಎಂಟ್ರಿ!

ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಶುಭ್‌ಮನ್‌ ಗಿಲ್‌ 816 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ವಿರಾಟ್‌ ಕೊಹ್ಲಿ 796 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರೆ ಕೊಹ್ಲಿ ಅಗ್ರಸ್ಥಾನಕ್ಕೆ ಸಮೀಪಿಸಬಹುದು. ಬೌಲಿಂಗ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ನಾಲ್ಕು ಸ್ಥಾನಗಳ ಜಿಗಿತ ಕಂಡು 5ನೇ ಸ್ಥಾನಕ್ಕೇರಿದ್ದಾರೆ.

Written By Puttaraj K Alur
Published: Oct 02, 2026, 02:45 PM IST | Updated: Oct 02, 2026, 02:59 PM IST
Image Credit: ICC ODI Rankings
Join

ICC ODI Rankings 2026: ವೆಸ್ಟ್‌ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಬ್ಯಾಟಿಂಗ್‌ ತಾರೆಯರು ತೋರಿದ ಭರ್ಜರಿ ಪ್ರದರ್ಶನದ ಪರಿಣಾಮ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಸೆಪ್ಟೆಂಬರ್‌ 30ರಂದು ಬಿಡುಗಡೆಯಾದ ನೂತನ ಐಸಿಸಿ ಪುರುಷರ ಏಕದಿನ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್‌ ಗಿಲ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಅನುಭವಿ ಬ್ಯಾಟರ್‌ ವಿರಾಟ್‌ ಕೊಹ್ಲಿ ಒಂದು ಸ್ಥಾನ ಮೇಲೇರಿ 2ನೇ ಸ್ಥಾನಕ್ಕೇರಿದ್ದಾರೆ.

ಗಿಲ್‌ 816 ರೇಟಿಂಗ್‌ ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 139 ರನ್‌ ಸಿಡಿಸಿದ ವಿರಾಟ್‌ ಕೊಹ್ಲಿ 796 ರೇಟಿಂಗ್‌ ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್‌ನ ಡ್ಯಾರಿಲ್‌ ಮಿಚೆಲ್‌ 794 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಮತ್ತೊಬ್ಬ ಅನುಭವಿ ಆಟಗಾರ ರೋಹಿತ್‌ ಶರ್ಮಾ 753 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.  

ಕೊಹ್ಲಿಗೆ ನಂ.1 ಪಟ್ಟದ ಮೇಲೆ ಕಣ್ಣು

ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 88 ಎಸೆತಗಳಲ್ಲಿ ಅಜೇಯ 139 ರನ್‌ ಬಾರಿಸಿದ್ದರು. ಇದು ಅವರ ಏಕದಿನ ವೃತ್ತಿಜೀವನದ 55ನೇ ಶತಕವಾಗಿದ್ದು, ಇದೇ ಇನ್ನಿಂಗ್ಸ್‌ ಮೂಲಕ ಅವರು 15,000 ಏಕದಿನ ರನ್‌ಗಳ ಗಡಿ ದಾಟಿದರು. ಸಚಿನ್‌ ತೆಂಡೂಲ್ಕರ್‌ ಬಳಿಕ ಈ ಮೈಲುಗಲ್ಲು ತಲುಪಿದ ಎರಡನೇ ಬ್ಯಾಟರ್‌ ಎಂಬ ದಾಖಲೆಗೂ ಕೊಹ್ಲಿ ಪಾತ್ರರಾದರು. ಈ ಅದ್ಭುತ ಪ್ರದರ್ಶನದ ಪರಿಣಾಮ ಕೊಹ್ಲಿ ರ‍್ಯಾಂಕಿಂಗ್‌ನಲ್ಲಿ 767ರಿಂದ 796 ಅಂಕಗಳಿಗೆ ಏರಿಕೆ ಕಂಡಿದ್ದಾರೆ.

ಇತ್ತ ಅದೇ ಪಂದ್ಯದಲ್ಲಿ ಗಿಲ್‌ ಕೂಡ ಶತಕ ಸಿಡಿಸಿ ತಮ್ಮ ರೇಟಿಂಗ್‌ ಅಂಕಗಳನ್ನ 801ರಿಂದ 816ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಅಂತರ ಇದೀಗ 20 ಅಂಕಗಳಿಗೆ ಇಳಿದಿದೆ. ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಿದರೆ, ನಂ.1 ಸ್ಥಾನಕ್ಕಾಗಿ ಪೈಪೋಟಿ ಇನ್ನಷ್ಟು ಕುತೂಹಲ ಮೂಡಿಸುವ ಸಾಧ್ಯತೆಯಿದೆ. ಆದರೆ ಮುಂದಿನ ರ‍್ಯಾಂಕಿಂಗ್‌ನಲ್ಲಿ ಸ್ಥಾನ ಬದಲಾವಣೆ ಹೇಗಿರುತ್ತದೆ ಎಂಬುದು ಆಟಗಾರರ ಪ್ರದರ್ಶನ ಮತ್ತು ರ‍್ಯಾಂಕಿಂಗ್‌ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿರಲಿದೆ.

ಕುಲ್ದೀಪ್‌ ಯಾದವ್‌ ಭರ್ಜರಿ ಜಿಗಿತ!

ಬ್ಯಾಟಿಂಗ್‌ ಮಾತ್ರವಲ್ಲದೆ ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲೂ ಭಾರತದ ಆಟಗಾರರು ಗಮನ ಸೆಳೆದಿದ್ದಾರೆ. ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ನಾಲ್ಕು ಸ್ಥಾನಗಳ ಭರ್ಜರಿ ಜಿಗಿತ ಕಂಡು 5ನೇ ಸ್ಥಾನಕ್ಕೇರಿದ್ದಾರೆ. ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕುಲ್ದೀಪ್‌ 4 ವಿಕೆಟ್‌ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  

ಪ್ರಸ್ತುತ ಏಕದಿನ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನದ ರಶೀದ್‌ ಖಾನ್‌ 714 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಅಬ್ರಾರ್‌ ಅಹ್ಮದ್‌ 675 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕೇಶವ್‌ ಮಹಾರಾಜ್‌ 667 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮಿಚೆಲ್‌ ಸ್ಯಾಂಟ್ನರ್‌ ನಾಲ್ಕನೇ ಸ್ಥಾನದಲ್ಲಿದ್ದು, ಕುಲ್ದೀಪ್‌ 623 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.  

ಹ್ಯಾಜಲ್‌ವುಡ್‌ ಟಾಪ್‌-10ಕ್ಕೆ

ಆಸ್ಟ್ರೇಲಿಯಾದ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಕೂಡ ರ‍್ಯಾಂಕಿಂಗ್‌ನಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಐದು ಸ್ಥಾನ ಮೇಲೇರಿ ಅವರು 10ನೇ ಸ್ಥಾನಕ್ಕೆ ಪ್ರವೇಶಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಪರಿಣಾಮ ಈ ಜಿಗಿತ ಕಂಡುಬಂದಿದೆ.  

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಒಮರ್‌ಜೈ ನಂ.1

ಏಕದಿನ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್‌ಜೈ 337 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಅಕ್ಷರ್‌ ಪಟೇಲ್‌ 9ನೇ ಸ್ಥಾನದಲ್ಲಿದ್ದಾರೆ. ಒಟ್ನಲ್ಲಿ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಗಿಲ್‌ ಮತ್ತು ಕೊಹ್ಲಿ ನಡುವಿನ ಅಂತರ ಕಡಿಮೆಯಾಗಿರುವುದು ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಒಂದು ಕಡೆ ಯುವ ನಾಯಕ ಗಿಲ್‌ ತಮ್ಮ ಅಗ್ರಸ್ಥಾನ ಉಳಿಸಿಕೊಳ್ಳಬೇಕೆಂಬ ಒತ್ತಡಲದಲ್ಲಿದ್ದಾರೆ. ಮತ್ತೊಂದೆಡೆ ಅನುಭವಿ ಕೊಹ್ಲಿ ಉತ್ತಮ ಪ್ರದರ್ಶನದ ಮೂಲಕ ಮತ್ತೆ ಅಗ್ರಸ್ಥಾನಕ್ಕೇರುವ ಹಾದಿಯಲ್ಲಿದ್ದಾರೆ. ಇದೇ ವೇಳೆ ಕುಲ್ದೀಪ್‌ ಯಾದವ್‌ ಟಾಪ್‌-5ಕ್ಕೆ ಪ್ರವೇಶಿಸಿರುವುದು ಭಾರತದ ಬೌಲಿಂಗ್‌ ವಿಭಾಗಕ್ಕೂ ಮತ್ತೊಂದು ಗಮನಾರ್ಹ ಬೆಳವಣಿಗೆಯಾಗಿದೆ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES