SOCIAL MEDIA

Newsletter

PARTNER SITES
Select Language Select State

₹4 ಕೋಟಿಗೆ ಗುಜರಾತ್ ಟೈಟನ್ಸ್‌ಗೆ ಹರ್ಷಲ್ ಪಟೇಲ್ ಟ್ರೇಡ್! ಹೈದರಾಬಾದ್‌ನಿಂದ ಹೊಸ ತಂಡಕ್ಕೆ ಅನುಭವಿ ವೇಗಿ

2025ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಹರ್ಷಲ್ ಪಟೇಲ್ ಅವರನ್ನ ₹8 ಕೋಟಿ ನೀಡಿ ಖರೀದಿಸಿತ್ತು. ಇದೀಗ ಗುಜರಾತ್ ಟೈಟನ್ಸ್ ತಂಡವು ಅವರನ್ನ ₹4 ಕೋಟಿ ಮೊತ್ತಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಅಂದರೆ ಹಿಂದಿನ ಹರಾಜಿನ ಖರೀದಿ ಮೊತ್ತಕ್ಕಿಂತ ಅರ್ಧದಷ್ಟು ಮೊತ್ತಕ್ಕೆ ಈ ವರ್ಗಾವಣೆ ನಡೆದಿದೆ.

Written By Puttaraj K Alur
Published: Nov 17, 2026, 15:41 IST | Updated: Nov 17, 2026, 15:55 IST
Image Credit: Harshal Patel
Join

Harshal Patel: ಐಪಿಎಲ್ 2027ರ ಸಿದ್ಧತೆಗಳ ನಡುವೆ ಆಟಗಾರರ ವರ್ಗಾವಣೆ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದೆ. ಇದರ ಭಾಗವಾಗಿ ಭಾರತದ ಅನುಭವಿ ವೇಗದ ಬೌಲರ್ ಹರ್ಷಲ್ ಪಟೇಲ್ ಅವರು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಗುಜರಾತ್ ಟೈಟನ್ಸ್ (GT) ತಂಡಕ್ಕೆ ಅಧಿಕೃತವಾಗಿ ವರ್ಗಾವಣೆಯಾಗಿದ್ದಾರೆ. ನವೆಂಬರ್ 17ರಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯ ಮೂಲಕ ಈ ವರ್ಗಾವಣೆಯನ್ನ ಖಚಿತಪಡಿಸಿದೆ. ವಿಶೇಷವೆಂದರೆ ಈ ಒಪ್ಪಂದವು ಆಟಗಾರರ ವಿನಿಮಯದ ಬದಲಿಗೆ ನಗದು ಆಧಾರಿತ ಒಪ್ಪಂದವಾಗಿದೆ.

₹8 ಕೋಟಿಗೆ ಖರೀದಿಯಾಗಿದ್ದ ಆಟಗಾರ ಈಗ ₹4 ಕೋಟಿಗೆ ವರ್ಗಾವಣೆ

2025ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಹರ್ಷಲ್ ಪಟೇಲ್ ಅವರನ್ನ ₹8 ಕೋಟಿ ನೀಡಿ ಖರೀದಿಸಿತ್ತು. ಇದೀಗ ಗುಜರಾತ್ ಟೈಟನ್ಸ್ ತಂಡವು ಅವರನ್ನ ₹4 ಕೋಟಿ ಮೊತ್ತಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಅಂದರೆ ಹಿಂದಿನ ಹರಾಜಿನ ಖರೀದಿ ಮೊತ್ತಕ್ಕಿಂತ ಅರ್ಧದಷ್ಟು ಮೊತ್ತಕ್ಕೆ ಈ ವರ್ಗಾವಣೆ ನಡೆದಿದೆ. ಈ ಒಪ್ಪಂದದ ಮೂಲಕ ಹರ್ಷಲ್ ಪಟೇಲ್ ಐಪಿಎಲ್‌ನಲ್ಲಿ ತಮ್ಮ ಐದನೇ ಫ್ರಾಂಚೈಸಿಯನ್ನ ಪ್ರತಿನಿಧಿಸಲಿದ್ದಾರೆ. 2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಅವರು ಈವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ.

124 ಪಂದ್ಯಗಳಲ್ಲಿ 151 ವಿಕೆಟ್ ಕಬಳಿಸಿರುವ ವೇಗಿ

ಹರ್ಷಲ್ ಪಟೇಲ್ ಅವರ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 124 ಪಂದ್ಯಗಳನ್ನ ಆಡಿದ್ದು, ಒಟ್ಟು 151 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಅವರ ಬೌಲಿಂಗ್ ಎಕಾನಮಿ 8.92 ಆಗಿದೆ. ಐಪಿಎಲ್‌ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪರ್ಪಲ್ ಕ್ಯಾಪ್ ಗೆದ್ದಿರುವ ಕೇವಲ ನಾಲ್ವರು ಬೌಲರ್‌ಗಳ ಪೈಕಿ ಹರ್ಷಲ್ ಕೂಡ ಒಬ್ಬರಾಗಿದ್ದಾರೆ. 2021ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಹರ್ಷಲ್, 32 ವಿಕೆಟ್‌ಗಳನ್ನ ಪಡೆದು ಟೂರ್ನಿಯ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಬಳಿಕ 2024ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ 24 ವಿಕೆಟ್‌ಗಳನ್ನ ಕಬಳಿಸಿ ಮತ್ತೊಮ್ಮೆ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.

ಹೈದರಾಬಾದ್‌ನಲ್ಲಿ ಅವಕಾಶ ಕಡಿಮೆಯಾಗಿತ್ತು

ಸನ್‌ರೈಸರ್ಸ್ ಹೈದರಾಬಾದ್ ತಂಡದೊಂದಿಗಿನ ಹರ್ಷಲ್ ಪಟೇಲ್ ಅವರ ಎರಡು ಆವೃತ್ತಿಗಳ ಪಯಣ ವಿಭಿನ್ನವಾಗಿತ್ತು. 2025ರ ಐಪಿಎಲ್‌ನಲ್ಲಿ ತಂಡದ ಪರ 13 ಪಂದ್ಯಗಳನ್ನ ಆಡಿದ್ದ ಅವರು 16 ವಿಕೆಟ್‌ಗಳನ್ನ ಪಡೆದಿದ್ದರು. ಆ ಅವಧಿಯಲ್ಲಿ ಅವರ ಎಕಾನಮಿ 9.80 ಆಗಿತ್ತು. ಆದರೆ 2026ರ ಆವೃತ್ತಿಯಲ್ಲಿ ಅವರಿಗೆ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಕೇವಲ ಐದು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದ ಅವರು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಪ್ರತಿ ಓವರ್‌ಗೆ 10.82 ರನ್‌ಗಳನ್ನ ನೀಡಿದ್ದರು. ಹೀಗಾಗಿ ಹೈದರಾಬಾದ್ ತಂಡದಿಂದ ಗುಜರಾತ್ ಟೈಟನ್ಸ್‌ಗೆ ಅವರ ವರ್ಗಾವಣೆ ನಡೆದಿದೆ.

ಗುಜರಾತ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತೊಬ್ಬ ಅನುಭವಿ ಆಟಗಾರ

ಗುಜರಾತ್ ಟೈಟನ್ಸ್ ತಂಡದಲ್ಲಿ ಈಗಾಗಲೇ ಹಲವು ಪ್ರಮುಖ ವೇಗದ ಬೌಲರ್‌ಗಳಿದ್ದಾರೆ. ಕಗಿಸೊ ರಬಾಡ, ಜೇಸನ್ ಹೋಲ್ಡರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಅರ್ಷದ್ ಖಾನ್, ಅಶೋಕ್ ಶರ್ಮಾ, ಲ್ಯೂಕ್ ವುಡ್, ಇಶಾಂತ್ ಶರ್ಮಾ ಮತ್ತು ಕುಲ್ವಂತ್ ಖೆಜ್ರೋಲಿಯಾ ತಂಡದ ಬೌಲಿಂಗ್ ವಿಭಾಗದಲ್ಲಿದ್ದಾರೆ. ವರ್ಗಾವಣೆ ಗಡುವಿನೊಳಗೆ ಕೆಲವು ಆಟಗಾರರನ್ನ ಬಿಡುಗಡೆ ಮಾಡುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.

ಇದೇ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವೂ ಆಟಗಾರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಾಕ್ ಎಡ್ವರ್ಡ್ಸ್ ಅವರನ್ನ ಪಡೆದುಕೊಂಡಿದ್ದ SRH, ಬದಲಾಗಿ ಖಲೀಲ್ ಅಹ್ಮದ್ ಮತ್ತು ನಾಥನ್ ಎಲ್ಲಿಸ್ ಅವರನ್ನ ವರ್ಗಾಯಿಸಿತ್ತು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಟಿ.ನಟರಾಜನ್ ಅವರನ್ನ ಮರಳಿ ತಂಡಕ್ಕೆ ಸೇರಿಸಿಕೊಂಡಿತ್ತು.

ಒಟ್ನಲ್ಲಿ ಐಪಿಎಲ್ 2027ರ ಮುನ್ನ ನಡೆಯುತ್ತಿರುವ ಆಟಗಾರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹರ್ಷಲ್ ಪಟೇಲ್ ಅವರ ಗುಜರಾತ್ ಟೈಟನ್ಸ್ ಸೇರ್ಪಡೆ ಪ್ರಮುಖ ಬೆಳವಣಿಗೆಯಾಗಿದೆ. ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದಿರುವ ಈ ವೇಗಿ ಇದೀಗ ಹೊಸ ತಂಡದ ಪರ ಆಡಲಿದ್ದಾರೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES