SOCIAL MEDIA

Newsletter

PARTNER SITES
Select Language Select State

ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ಬಳಿಕ ಭರ್ಜರಿ ಬ್ಯಾಟಿಂಗ್:‌ 91 ರನ್ ಸಿಡಿಸಿ ಕಣ್ಣೀರಿಟ್ಟ ಹರ್ಮನ್‌ಪ್ರೀತ್ ಕೌರ್!

ಈ ಪಂದ್ಯ ಹರ್ಮನ್‌ಪ್ರೀತ್‌ ಪಾಲಿಗೆ ಕೇವಲ ಉತ್ತಮ ಬ್ಯಾಟಿಂಗ್‌ ಪ್ರದರ್ಶನಕ್ಕೆ ಸೀಮಿತವಾಗಿರಲಿಲ್ಲ. ಇತ್ತೀಚೆಗಷ್ಟೇ ಭಾರತ ಮಹಿಳಾ ತಂಡದ ಮೂರು ಮಾದರಿಗಳ ನಾಯಕತ್ವದಿಂದ ಕೆಳಗಿಳಿದಿದ್ದ ಅವರು, ತಮ್ಮ ಆಟದ ಮೂಲಕ ಮತ್ತೊಮ್ಮೆ ಗಮನ ಸೆಳೆದರು.

Written By Puttaraj K Alur
Published: Oct 21, 2026, 09:44 AM IST | Updated: Oct 21, 2026, 09:54 AM IST
Image Credit: Harmanpreet Kaur
Join

Harmanpreet Kaur 91 Runs: ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತೊಮ್ಮೆ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನ ಸಾಬೀತುಪಡಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಅವರು, ಕೇವಲ 41 ಎಸೆತಗಳಲ್ಲಿ ಅಜೇಯ 91 ರನ್‌ ಗಳಿಸಿ ಭಾರತ ತಂಡದ ಬೃಹತ್‌ ಮೊತ್ತಕ್ಕೆ ಪ್ರಮುಖ ಕೊಡುಗೆ ನೀಡಿದರು. ಆದರೆ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್‌ಪ್ರೀತ್‌, ಪಂದ್ಯದ ಮಧ್ಯೆ ನಡೆದ ಸಂದರ್ಶನದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಘಟನೆ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ.

41 ಎಸೆತಗಳಲ್ಲಿ ಅಜೇಯ 91 ರನ್‌!

ರಾಯ್‌ಪುರದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್‌ ಮಾಡಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತೀಯ ಆಟಗಾರ್ತಿಯರು ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ 69 ರನ್‌ ಗಳಿಸಿದರು. ಇತ್ತ ಹರ್ಮನ್‌ಪ್ರೀತ್‌ ಕೌರ್‌ ತಮ್ಮ ಅನುಭವಕ್ಕೆ ತಕ್ಕಂತೆ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಆಟವಾಡಿದರು. ಕೇವಲ 41 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 91 ರನ್‌ ಗಳಿಸಿದರು.

 

 ಅವರ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 216 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಈ ಗುರಿಯನ್ನ ಬೆನ್ನಟ್ಟಿದ ಜಿಂಬಾಬ್ವೆ ತಂಡ ಭಾರತೀಯ ಬೌಲರ್‌ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಲು ವಿಫಲವಾಯಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಭಾರತ 92 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನ ಭಾರತ 3-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

 

ನಾಯಕತ್ವ ತ್ಯಜಿಸಿದ ಬಳಿಕ ಭಾವುಕರಾದ ಹರ್ಮನ್‌ಪ್ರೀತ್‌

ಈ ಪಂದ್ಯ ಹರ್ಮನ್‌ಪ್ರೀತ್‌ ಪಾಲಿಗೆ ಕೇವಲ ಉತ್ತಮ ಬ್ಯಾಟಿಂಗ್‌ ಪ್ರದರ್ಶನಕ್ಕೆ ಸೀಮಿತವಾಗಿರಲಿಲ್ಲ. ಇತ್ತೀಚೆಗಷ್ಟೇ ಭಾರತ ಮಹಿಳಾ ತಂಡದ ಮೂರು ಮಾದರಿಗಳ ನಾಯಕತ್ವದಿಂದ ಕೆಳಗಿಳಿದಿದ್ದ ಅವರು, ತಮ್ಮ ಆಟದ ಮೂಲಕ ಮತ್ತೊಮ್ಮೆ ಗಮನ ಸೆಳೆದರು. ಸ್ಮೃತಿ ಮಂಧಾನ ಇದೀಗ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ನಾಯಕತ್ವದ ಜವಾಬ್ದಾರಿಯಿಂದ ಹೊರಬಂದ ಬಳಿಕ ಹರ್ಮನ್‌ಪ್ರೀತ್‌ ಆಡಿದ ಈ ಮಹತ್ವದ ಇನಿಂಗ್ಸ್‌ ವಿಶೇಷ ಗಮನ ಸೆಳೆಯಿತು. 

ಪಂದ್ಯದಲ್ಲಿ ಅದ್ಭುತವಾಗಿ ಆಡಿದ ಅವರು, ಇನಿಂಗ್ಸ್‌ ವಿರಾಮದ ವೇಳೆ ನಡೆದ ಸಂದರ್ಶನದಲ್ಲಿ ತಮ್ಮ ಭಾವನೆಗಳನ್ನ ಹಂಚಿಕೊಳ್ಳುವಾಗ ಭಾವುಕರಾದರು. ಭಾರತ ತಂಡದ ಮಾಜಿ ಕೋಚ್‌ ಡಬ್ಲ್ಯು.ವಿ. ರಾಮನ್‌ ಅವರೊಂದಿಗೆ ಮಾತನಾಡಿದ ಹರ್ಮನ್‌ಪ್ರೀತ್‌, ತಮಗೆ ಇಷ್ಟವಾದ ರೀತಿಯಲ್ಲಿ ಆಟವಾಡುವಂತೆ ಪ್ರೋತ್ಸಾಹಿಸಿದ ಅವರ ಮಾತುಗಳನ್ನ ಸ್ಮರಿಸಿದರು. “ಈಗ ನಿಮಗೆ ಇಷ್ಟವಾದ ರೀತಿಯಲ್ಲಿ ಆಟವಾಡಿ” ಎಂಬ ಸಲಹೆ ತಮ್ಮಲ್ಲಿ ಹೊಸ ಉತ್ಸಾಹ ತುಂಬಿತು ಎಂದು ಅವರು ತಿಳಿಸಿದರು. ಕ್ರಿಕೆಟ್‌ ಅನ್ನ ಮತ್ತೆ ಮನಸಾರೆ ಆನಂದಿಸಲು ಈ ಮಾತುಗಳು ನೆರವಾದವು ಎಂಬ ಭಾವವನ್ನ ವ್ಯಕ್ತಪಡಿಸಿದರು.

ಬ್ಯಾಟಿಂಗ್‌ ಕೋಚ್‌ಗೆ ಧನ್ಯವಾದ ಹೇಳುವಾಗ ಕಣ್ಣೀರು

ತಮ್ಮ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ಮಾತನಾಡಿದ ಹರ್ಮನ್‌ಪ್ರೀತ್‌, ಅಭ್ಯಾಸದ ವೇಳೆ ತಮ್ಮೊಂದಿಗೆ ಶ್ರಮಿಸಿದ ಬ್ಯಾಟಿಂಗ್‌ ಕೋಚ್‌ ಹಿಮಾಂಶು ಅವರಿಗೆ ವಿಶೇಷ ಧನ್ಯವಾದಗಳನ್ನ ಅರ್ಪಿಸಿದರು. ಹಿಂದಿನ ಪಂದ್ಯಗಳ ಬಳಿಕ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಲು ಸಮಯ ಸಿಕ್ಕಿದ್ದು, ತಮ್ಮ ಆಟವನ್ನ ಸುಧಾರಿಸಿಕೊಳ್ಳಲು ನೆರವಾಯಿತು ಎಂದು ಹೇಳಿದರು. ಕೋಚ್‌ ನೀಡಿದ ಸಹಕಾರವನ್ನ ಸ್ಮರಿಸುವಾಗ ಅವರ ಧ್ವನಿ ಗದ್ಗದಿತವಾಯಿತು. ಕಣ್ಣೀರನ್ನ ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿದ ಅವರು, ಸಂದರ್ಶನವನ್ನ ಮುಂದುವರಿಸಲು ಸಾಧ್ಯವಾಗದೆ ಮೈಕ್‌ ಅನ್ನ ಬಿಟ್ಟು ಅಲ್ಲಿಂದ ತೆರಳಿದರು. ಈ ದೃಶ್ಯ ಕ್ರಿಕೆಟ್‌ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.

ನಾಯಕತ್ವ ಬದಲಾದರೂ ಹೋರಾಟದ ಮನೋಭಾವ ಅಚಲ

ನಾಯಕತ್ವದ ಜವಾಬ್ದಾರಿಯಿಂದ ಹೊರಬಂದ ಬಳಿಕ ಹರ್ಮನ್‌ಪ್ರೀತ್‌ ಕೌರ್‌ ನೀಡಿದ ಈ ಪ್ರದರ್ಶನ ಅವರ ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನ ಪ್ರತಿಬಿಂಬಿಸಿದೆ. ತಂಡದ ನಾಯಕತ್ವ ಬದಲಾಗಿದ್ದರೂ, ಆಟಗಾರ್ತಿಯಾಗಿ ತಂಡಕ್ಕೆ ಕೊಡುಗೆ ನೀಡುವ ಅವರ ಸಾಮರ್ಥ್ಯ ಕುಂದಿಲ್ಲ ಎಂಬುದನ್ನ ಈ ಇನಿಂಗ್ಸ್‌ ತೋರಿಸಿಕೊಟ್ಟಿದೆ.

ಒಟ್ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಅವರ ಬ್ಯಾಟಿಂಗ್‌ ಅಬ್ಬರ ಭಾರತಕ್ಕೆ ಸರಣಿ ಜಯ ತಂದುಕೊಟ್ಟರೆ, ಸಂದರ್ಶನದ ವೇಳೆ ಅವರು ಭಾವುಕರಾದ ಕ್ಷಣಗಳು ಅವರ ಕ್ರಿಕೆಟ್‌ ಪಯಣದ ಮತ್ತೊಂದು ಮುಖವನ್ನ ಅನಾವರಣಗೊಳಿಸಿವೆ. ಮೈದಾನದಲ್ಲಿ ಅಬ್ಬರಿಸುವ ಆಟಗಾರರ ಹಿಂದೆಯೂ ಭಾವನೆಗಳು, ಒತ್ತಡಗಳು ಮತ್ತು ವೈಯಕ್ತಿಕ ಹೋರಾಟಗಳಿರುತ್ತವೆ ಎಂಬುದನ್ನ ಈ ಘಟನೆ ನೆನಪಿಸಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES