ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಆಸ್ತಿ ಎಷ್ಟು ಗೊತ್ತಾ?
Mahendra Singh Dhoni net worth: ಟೀಂ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತಿನ 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧೋನಿ ಅವರ ಒಟ್ಟು ಆಸ್ತಿ ಎಷ್ಟು? ಅವರ ಆದಾಯದ ಮೂಲಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಟೀಂ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತಿನ 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ನಾಯಕತ್ವ, ಬ್ಯಾಟಿಂಗ್ ಹಾಗೂ ಅದ್ಭುತ ವಿಕೆಟ್ ಕೀಪಿಂಗ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಧೋನಿ, ಹಣ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಾಗೂ ಐಪಿಎಲ್‌ಗೆ ವಿದಾಯ ಹೇಳಿದ್ರೂ ಅವರ ಆದಾಯದ ಮೂಲಗಳು ಮಾತ್ರ ಕಡಿಮೆಯಾಗಿಲ್ಲ. ಐಪಿಎಲ್, ಜಾಹೀರಾತು, ಉದ್ಯಮ ಹಾಗೂ ಹೂಡಿಕೆಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿದ್ದಾರೆ. ಹಾಗಾದ್ರೆ ಧೋನಿ ಅವರ ಒಟ್ಟು ಆಸ್ತಿ ಎಷ್ಟು? ಅವರ ಆದಾಯದ ಮೂಲಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಕ್ರಿಕೆಟ್ ಮೈದಾನದಲ್ಲಿ ತಾಳ್ಮೆ ಮತ್ತು ತಂತ್ರಗಾರಿಕೆಗೆ ಹೆಸರಾಗಿರುವ ಧೋನಿ, ಈಗ ಭಾರತದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲೂ ಮುಂಚೂಣಿಯಲ್ಲಿದ್ದಾರೆ. ಲಭ್ಯವಿರುವ ವಿವಿಧ ವರದಿಗಳ ಪ್ರಕಾರ ಧೋನಿ ಅವರ ನಿವ್ವಳ ಆಸ್ತಿ ಮೌಲ್ಯ ಬರೋಬ್ಬರಿ ₹1,060 ಕೋಟಿಯಿಂದ ₹1,200 ಕೋಟಿ ಎಂದು ಅಂದಾಜಿಸಲಾಗಿದೆ. ಕೆಲವು ವರದಿಗಳು ಈ ಮೊತ್ತ ₹1,500 ಕೋಟಿ ತಲುಪಿದೆ ಎಂದೂ ಹೇಳಿವೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಬಳಿಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.
ಧೋನಿ ಅವರ ಆದಾಯದ ಪ್ರಮುಖ ಮೂಲಗಳಲ್ಲಿ ಐಪಿಎಲ್ ಕೂಡ ಒಂದು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ₹196 ಕೋಟಿಗೂ ಅಧಿಕ ಸಂಭಾವನೆ ಗಳಿಸಿದ್ದಾರೆ ಎನ್ನಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗಿನ ಅವರ ನಂಟು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಇದರ ಜೊತೆಗೆ 30ಕ್ಕೂ ಹೆಚ್ಚು ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಧೋನಿ, ಎಂಡೋರ್ಸ್‌ಮೆಂಟ್‌ಗಳಿಂದಲೇ ವಾರ್ಷಿಕ ₹100 ಕೋಟಿಗೂ ಅಧಿಕ ಆದಾಯ ಗಳಿಸುತ್ತಾರೆ ಎಂಬ ಅಂದಾಜಿದೆ. ಬಿಸಿಸಿಐನಿಂದ ಮಾಜಿ ಆಟಗಾರರ ಪಿಂಚಣಿಯೂ ಅವರಿಗೆ ಲಭಿಸುತ್ತದೆ.
ಇನ್ನು ಧೋನಿ ಕೇವಲ ಕ್ರಿಕೆಟಿಗರಾಗಿ ಉಳಿದಿಲ್ಲ. ಉದ್ಯಮಿಯಾಗಿಯೂ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದ್ದಾರೆ. SEVEN ಕ್ರೀಡಾ ಉಡುಪುಗಳ ಬ್ರಾಂಡ್, ಧೋನಿ ಎಂಟರ್‌ಟೈನ್‌ಮೆಂಟ್ ಹಾಗೂ 7InkBrews ಸಂಸ್ಥೆಗಳ ಜೊತೆ ಗುರುತಿಸಿಕೊಂಡಿದ್ದಾರೆ. ಚೆನ್ನೈಯಿನ್ ಎಫ್‌ಸಿ ಫುಟ್‌ಬಾಲ್ ತಂಡದ ಸಹ-ಮಾಲೀಕರಾಗಿದ್ದಾರೆ. ಗರುಡ ಏರೋಸ್ಪೇಸ್, ಕಾರ್ಸ್24, ಖಾತಾಬುಕ್ ಮತ್ತು EMotorad ಸೇರಿದಂತೆ ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ರಾಂಚಿಯಲ್ಲಿ ಸಾವಯವ ಕೃಷಿ ಹಾಗೂ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಇನ್ನು ಧೋನಿ ಅವರ ಐಷಾರಾಮಿ ಜೀವನಶೈಲಿಯೂ ಸಾಕಷ್ಟು ವಿಶೇಷವಾಗಿದೆ. ರಾಂಚಿಯಲ್ಲಿ ಸುಮಾರು ಏಳು ಎಕರೆ ವಿಸ್ತೀರ್ಣದ ಕೈಲಾಶ್‌ಪತಿ ಫಾರ್ಮ್‌ಹೌಸ್ ಹೊಂದಿದ್ದಾರೆ. ಇದರ ಜೊತೆಗೆ ಡೆಹ್ರಾಡೂನ್, ಮುಂಬೈ ಹಾಗೂ ಪುಣೆಯಲ್ಲೂ ಆಸ್ತಿಗಳಿವೆ ಎನ್ನಲಾಗಿದೆ. ಕಾರುಗಳ ವಿಚಾರಕ್ಕೆ ಬಂದರೆ ಫೆರಾರಿ 599 GTO, ಹಮ್ಮರ್ H2, ನಿಸ್ಸಾನ್ ಜೋಂಗಾ ಮತ್ತು ಜೀಪ್ ಗ್ರ್ಯಾಂಡ್ ಚೆರೋಕಿ ಸೇರಿದಂತೆ ಹಲವು ದುಬಾರಿ ಕಾರುಗಳು ಅವರ ಸಂಗ್ರಹದಲ್ಲಿವೆ. ಬೈಕ್‌ಗಳ ಮೇಲೂ ಧೋನಿಗೆ ವಿಶೇಷ ಪ್ರೀತಿ. ಕವಾಸಕಿ ನಿಂಜಾ H2 ಸೇರಿದಂತೆ 100ಕ್ಕೂ ಹೆಚ್ಚು ಬೈಕ್‌ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದ ಧೋನಿ, ಮೈದಾನದ ಹೊರಗೂ ಉದ್ಯಮ, ಹೂಡಿಕೆ ಮತ್ತು ಜಾಹೀರಾತುಗಳ ಮೂಲಕ ಭರ್ಜರಿ ಸಂಪಾದನೆ ಮಾಡುತ್ತಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಧೋನಿ ಅವರ ಬ್ರಾಂಡ್ ಮೌಲ್ಯ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.
15ಕ್ಕೂ ಹೆಚ್ಚು ಕಂಪನಿಗಳಲ್ಲಿ ಹೂಡಿಕೆ!
* ಕ್ರಿಕೆಟ್ ಮಾತ್ರವಲ್ಲ, ಉದ್ಯಮ ಕ್ಷೇತ್ರದಲ್ಲೂ ಧೋನಿ ಯಶಸ್ಸು
* ಚೆನ್ನೈಯಿನ್ ಎಫ್‌ಸಿ ಫುಟ್‌ಬಾಲ್ ತಂಡದ ಸಹ-ಮಾಲೀಕ
* SEVEN ಕ್ರೀಡಾ ಉಡುಪುಗಳ ಬ್ರಾಂಡ್
* ಧೋನಿ ಎಂಟರ್‌ಟೈನ್‌ಮೆಂಟ್ ಮೂಲಕ ಸಿನಿಮಾ ನಿರ್ಮಾಣ
* 7InkBrews ಪಾನೀಯ ಉದ್ಯಮದಲ್ಲೂ ಹೂಡಿಕೆ
* ಗರುಡ ಏರೋಸ್ಪೇಸ್, Cars24, ಖಾತಾಬುಕ್, EMotorad ಕಂಪನಿಗಳಲ್ಲಿ ಪಾಲುದಾರಿಕೆ
* ರಾಂಚಿಯಲ್ಲಿ ಸಾವಯವ ಕೃಷಿ ಮತ್ತು ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ
7 ಎಕರೆ ಫಾರ್ಮ್‌ಹೌಸ್, ಐಷಾರಾಮಿ ಮನೆಗಳು!
* ರಾಂಚಿಯಲ್ಲಿ ಬರೋಬ್ಬರಿ 7 ಎಕರೆ ವಿಸ್ತೀರ್ಣದ ಕೈಲಾಶ್‌ಪತಿ ಫಾರ್ಮ್‌ಹೌಸ್
* ಡೆಹ್ರಾಡೂನ್‌ನಲ್ಲಿ ಸುಮಾರು ₹17.8 ಕೋಟಿ ಮೌಲ್ಯದ ಮನೆ
* ಮುಂಬೈ ಮತ್ತು ಪುಣೆಯಲ್ಲೂ ಐಷಾರಾಮಿ ಮನೆಗಳು
* ಫೆರಾರಿ 599 GTO, ಹಮ್ಮರ್ H2, ನಿಸ್ಸಾನ್ ಜೋಂಗಾ, ಜೀಪ್ ಗ್ರ್ಯಾಂಡ್ ಚೆರೋಕಿ ಕಾರುಗಳು
* ಕವಾಸಕಿ ನಿಂಜಾ H2, ಕಾನ್ಫೆಡರೇಟ್ ಹೆಲ್‌ಕ್ಯಾಟ್ ಸೇರಿದಂತೆ ದುಬಾರಿ ಬೈಕ್‌ಗಳು
* ಬರೋಬ್ಬರಿ 100ಕ್ಕೂ ಹೆಚ್ಚು ಬೈಕ್‌ಗಳ ಸಂಗ್ರಹ