SOCIAL MEDIA

Newsletter

PARTNER SITES
Select Language Select State

ಐಪಿಎಲ್‌ಗೆ ಎಂಎಸ್ ಧೋನಿ ವಿದಾಯ; 2027 ರಿಂದ ಸಿಎಸ್‌ಕೆ ಮೆಂಟರ್ ಆಗಿ ಹೊಸ ಇನ್ನಿಂಗ್ಸ್ ಆರಂಭ

2027ರ ಐಪಿಎಲ್ ಆವೃತ್ತಿಯಿಂದ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಧೋನಿ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಭಾವುಕ ಕ್ಷಣಕ್ಕೆ ಕಾರಣವಾಗಿದೆ.

Written By Chetana Devarmani
Published: Nov 17, 2026, 16:54 IST | Updated: Nov 17, 2026, 16:56 IST
Join

ಚೆನ್ನೈ: ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರ, ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ‘ತಲಾ’ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ಗೆ ಆಟಗಾರನಾಗಿ ವಿದಾಯ ಘೋಷಿಸಿದ್ದಾರೆ. ಸುಮಾರು 19 ವರ್ಷಗಳ ಸುದೀರ್ಘ ಐಪಿಎಲ್ ಪಯಣಕ್ಕೆ ತೆರೆ ಎಳೆದಿರುವ ಧೋನಿ, ಇನ್ಮುಂದೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ. 2027ರ ಐಪಿಎಲ್ ಆವೃತ್ತಿಯಿಂದ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಧೋನಿ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಭಾವುಕ ಕ್ಷಣಕ್ಕೆ ಕಾರಣವಾಗಿದೆ.

ಐಪಿಎಲ್ 2027ರ ಆಟಗಾರರ ರಿಟೆನ್ಶನ್ ಪಟ್ಟಿ ಪ್ರಕಟಿಸುವ ದಿನವೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ. 2008ರಲ್ಲಿ ಆರಂಭವಾದ ಐಪಿಎಲ್‌ನ ಮೊದಲ ಆವೃತ್ತಿಯಿಂದಲೂ ಚೆನ್ನೈ ತಂಡದೊಂದಿಗೆ ಗುರುತಿಸಿಕೊಂಡಿದ್ದ ಧೋನಿ, ಇದೀಗ ಆಟಗಾರನಾಗಿ ಮೈದಾನಕ್ಕೆ ಇಳಿಯುವುದಿಲ್ಲ. ಆದರೆ, ತಂಡದೊಂದಿಗಿನ ಅವರ ಸಂಬಂಧ ಮುಂದುವರಿಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ ಅವರನ್ನು 2027ರ ಆವೃತ್ತಿಯಿಂದ ಟೀಮ್ ಮೆಂಟರ್ ಆಗಿ ನೇಮಕ ಮಾಡಿರುವುದನ್ನು ಅಧಿಕೃತವಾಗಿ ಘೋಷಿಸಿದೆ. ಸುಮಾರು ಎರಡು ದಶಕಗಳಿಂದ ತಂಡದ ಯಶಸ್ಸಿನ ಭಾಗವಾಗಿದ್ದ ಧೋನಿ, ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಿಎಸ್‌ಕೆ ಮಾಲೀಕ ಎನ್. ಶ್ರೀನಿವಾಸನ್ ಧೋನಿ ಅವರೊಂದಿಗಿನ ಸಂಬಂಧದ ಕುರಿತು ಭಾವುಕವಾಗಿ ಮಾತನಾಡಿದ್ದಾರೆ. 2008ರಲ್ಲಿ ಧೋನಿ ಅವರನ್ನು ತಂಡಕ್ಕೆ ಕರೆತರುವ ನಿರ್ಧಾರ ತಮ್ಮ ಅತ್ಯುತ್ತಮ ನಿರ್ಧಾರವಾಗಿತ್ತು ಎಂದು ಅವರು ಸ್ಮರಿಸಿದ್ದಾರೆ. ಧೋನಿ ಯಾವಾಗಲೂ ಸಿಎಸ್‌ಕೆ ತಂಡದ ಗುರುತಿನ ಭಾಗವಾಗಿರುತ್ತಾರೆ ಎಂಬ ಸಂದೇಶವನ್ನೂ ನೀಡಿದ್ದಾರೆ. 2026ರ ಐಪಿಎಲ್‌ನಲ್ಲಿ ಮೀನಖಂಡದ ಗಾಯದ ಸಮಸ್ಯೆಯಿಂದಾಗಿ ಧೋನಿ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ. ಇದೀಗ ಆಟಗಾರನಾಗಿ ಅವರ ಐಪಿಎಲ್ ಪಯಣ ಅಂತ್ಯಗೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ಧೋನಿ ಅವರ ಕೊಡುಗೆ ಅಪಾರ. ಅವರ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021 ಮತ್ತು 2023ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಈ ಮೂಲಕ ತಂಡಕ್ಕೆ ಐದು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟ ಹೆಗ್ಗಳಿಕೆ ಅವರದ್ದು.

ಮೈದಾನದಲ್ಲಿ ಶಾಂತ ಸ್ವಭಾವ, ಒತ್ತಡದ ಸಂದರ್ಭಗಳಲ್ಲೂ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವ ಗುಣ ಮತ್ತು ಪಂದ್ಯದ ಕೊನೆಯ ಕ್ಷಣದವರೆಗೂ ಗೆಲುವಿಗಾಗಿ ಹೋರಾಡುವ ಮನೋಭಾವ ಧೋನಿ ಅವರನ್ನು ವಿಶೇಷ ಆಟಗಾರನನ್ನಾಗಿ ಮಾಡಿದೆ. ಅವರ ನಾಯಕತ್ವದಲ್ಲಿ ಹಲವು ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಪಡೆದುಕೊಂಡಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಧೋನಿ ಅವರ ಸಾಧನೆ ಅಪಾರ. ಐಸಿಸಿಯ ಮೂರು ಪ್ರಮುಖ ವೈಟ್‌ಬಾಲ್ ಟೂರ್ನಿಗಳಾದ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ ಎಂಬ ದಾಖಲೆಯನ್ನು ಅವರು ಹೊಂದಿದ್ದಾರೆ.

2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ತಂಡ ಅವರ ನಾಯಕತ್ವದಲ್ಲಿ ಗೆದ್ದುಕೊಂಡಿತ್ತು. 2009ರಲ್ಲಿ ಭಾರತ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದಾಗಲೂ ಧೋನಿಯೇ ತಂಡದ ನಾಯಕನಾಗಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ 200 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಅವರು, 110 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ವಿಕೆಟ್‌ಗಳ ಹಿಂದೆ ಚುರುಕಿನ ಆಟಕ್ಕೆ ಹೆಸರಾಗಿರುವ ಧೋನಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 195 ಸ್ಟಂಪಿಂಗ್‌ಗಳನ್ನು ಮಾಡುವ ಮೂಲಕ ವಿಶ್ವದಾಖಲೆಯನ್ನೂ ಹೊಂದಿದ್ದಾರೆ.

ಧೋನಿ ಐಪಿಎಲ್‌ನಿಂದ ಆಟಗಾರನಾಗಿ ನಿವೃತ್ತಿಯಾಗಿರುವುದು ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿದೆ. ಹಳದಿ ಜೆರ್ಸಿಯಲ್ಲಿ ಅವರ ಹೆಲಿಕಾಪ್ಟರ್ ಶಾಟ್, ಕೊನೆಯ ಓವರ್‌ಗಳ ರೋಚಕ ಆಟ ಮತ್ತು ಪಂದ್ಯ ಮುಗಿದ ಬಳಿಕದ ಶಾಂತ ನಗು ಇನ್ನು ಮುಂದೆ ಮೈದಾನದಲ್ಲಿ ಕಾಣಸಿಗುವುದಿಲ್ಲ. ಆದರೆ, ಮೆಂಟರ್ ಆಗಿ ತಂಡದೊಂದಿಗೆ ಮುಂದುವರಿಯಲಿರುವ ಅವರು ತಮ್ಮ ಅನುಭವ ಮತ್ತು ಕ್ರಿಕೆಟ್ ಜ್ಞಾನವನ್ನು ಹೊಸ ಆಟಗಾರರೊಂದಿಗೆ ಹಂಚಿಕೊಳ್ಳಲಿದ್ದಾರೆ. 

ಧೋನಿ ಅವರ ಐಪಿಎಲ್ ಪಯಣ ಅಂತ್ಯಗೊಂಡಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗಿನ ಅವರ ಸಂಬಂಧಕ್ಕೆ ಹೊಸ ಅಧ್ಯಾಯ ಆರಂಭವಾಗಿದೆ. ಆಟಗಾರನಾಗಿ ಹಲವು ದಾಖಲೆಗಳನ್ನು ನಿರ್ಮಿಸಿ, ನಾಯಕನಾಗಿ ತಂಡಕ್ಕೆ ಐದು ಟ್ರೋಫಿಗಳನ್ನು ಗೆದ್ದುಕೊಟ್ಟ ಧೋನಿ ಇದೀಗ ಮಾರ್ಗದರ್ಶಕನಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES