ಎಂ.ಎಸ್. ಧೋನಿ ಐಪಿಎಲ್‌ನಲ್ಲಿ ಆಟಗಾರನಾಗಿ ತಮ್ಮ ಸುದೀರ್ಘ ಪಯಣಕ್ಕೆ ವಿದಾಯ ಹೇಳಿದ್ದಾರೆ. ಈ ಬೆನ್ನಲ್ಲೇ ಪತ್ನಿ ಸಾಕ್ಷಿ ಸಿಂಗ್ ಧೋನಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಅಭಿಮಾನಿಗಳ ಮನಗೆದ್ದಿದೆ. 'ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ ಮಾಹಿ' ಎಂದು ಪತಿಯನ್ನು ಹೊಗಳಿರುವ ಸಾಕ್ಷಿ, ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಮಾಹಿ ಆಟಕ್ಕೆ ಇನ್ಮುಂದೆ ಫುಲ್‌ಸ್ಟಾಪ್! ಬರೋಬ್ಬರಿ ಎರಡು ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿದ್ದ ಎಂ.ಎಸ್. ಧೋನಿ, ಐಪಿಎಲ್‌ನಲ್ಲಿ ಆಟಗಾರನಾಗಿ ತಮ್ಮ ಪಯಣ ಮುಗಿಸಿದ್ದಾರೆ. ಧೋನಿ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಭಾವುಕ ಕ್ಷಣ ತಂದಿದೆ. ಇತ್ತ ಪತಿಯ ನಿವೃತ್ತಿ ಬೆನ್ನಲ್ಲೇ ಪತ್ನಿ ಸಾಕ್ಷಿ ಸಿಂಗ್ ಧೋನಿ ಕೂಡ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. 'ಮಾಹಿ, ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ' ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಹೌದು.. ಕ್ರಿಕೆಟ್ ಲೋಕದಲ್ಲಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಎಂ.ಎಸ್. ಧೋನಿ ಅವರ ಐಪಿಎಲ್ ಪಯಣದ ಆಟಗಾರನ ಅಧ್ಯಾಯ ಅಂತ್ಯಗೊಂಡಿದೆ. ಧೋನಿ ಅವರ ನಿವೃತ್ತಿ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪತ್ನಿ ಸಾಕ್ಷಿ ಇನ್‌ಸ್ಟಾಗ್ರಾಂನಲ್ಲಿ ಪತಿಯ ಫೋಟೋ ಹಂಚಿಕೊಂಡು ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ.ಕೆಲವು ಅಧ್ಯಾಯಗಳು ಮುಕ್ತಾಯಗೊಳ್ಳಬೇಕು. ಆಗಲೇ ಸುಂದರವಾದ ಹೊಸ ಅಧ್ಯಾಯಗಳು ಆರಂಭವಾಗುತ್ತವೆ' ಎಂಬ ಅರ್ಥದ ಸಂದೇಶದ ಮೂಲಕ ಧೋನಿ ಅವರ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ, ಇಷ್ಟು ವರ್ಷಗಳ ಕಾಲ ಮಾಹಿಗೆ ಪ್ರೀತಿ, ಬೆಂಬಲ ಮತ್ತು ನಂಬಿಕೆ ನೀಡಿದ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.
'ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ ಮಾಹಿ. ಯಾವಾಗಲೂ' ಎಂಬ ಸಾಕ್ಷಿ ಅವರ ಸಾಲುಗಳು ಅಭಿಮಾನಿಗಳ ಮನಮುಟ್ಟಿವೆ. ಈ ಪೋಸ್ಟ್‌ಗೆ ಸಾವಿರಾರು ಅಭಿಮಾನಿಗಳು ಪ್ರೀತಿಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.ಇನ್ನು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಶಕ್ತಿಯಾಗಿದ್ದ ಧೋನಿ, ತಮ್ಮ ನಾಯಕತ್ವದಲ್ಲಿ ಐದು ಬಾರಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಸೋಲು-ಗೆಲುವಿನ ಸಂದರ್ಭಗಳಲ್ಲೂ ತಂಡವನ್ನು ಮುನ್ನಡೆಸಿದ ಮಾಹಿ, ಸಿಎಸ್‌ಕೆ ಅಭಿಮಾನಿಗಳ ಪಾಲಿಗೆ ಸದಾ ನೆಚ್ಚಿನ ನಾಯಕ. ಇದೀಗ ಆಟಗಾರನಾಗಿ ವಿದಾಯ ಹೇಳಿರುವ ಧೋನಿ, 2027ರ ಆವೃತ್ತಿಯಿಂದ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
CSK ಜೊತೆ ಎಂ.ಎಸ್. ಧೋನಿ ಪಯಣ ಬರೋಬ್ಬರಿ 19 ವರ್ಷಗಳ ಸುದೀರ್ಘ ಕ್ರಿಕೆಟ್ ಅಧ್ಯಾಯ!
2008ರಲ್ಲಿ ಆರಂಭವಾದ ಈ ಪಯಣ ಈಗ ಹೊಸ ಹಂತಕ್ಕೆ ತಲುಪಿದೆ. ಆಟಗಾರನಾಗಿ ಮೈದಾನದಲ್ಲಿ ಮಿಂಚಿದ್ದ ಧೋನಿ, ಇನ್ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
2008: ಐಪಿಎಲ್ ಮೊದಲ ಆವೃತ್ತಿಯಲ್ಲೇ ಚೆನ್ನೈ ತಂಡದ ನಾಯಕನಾಗಿ ಧೋನಿ ಎಂಟ್ರಿ.
2010: ಮೊದಲ ಬಾರಿಗೆ CSKಗೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟರು.
2011: ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ.
2016-17: CSK ನಿಷೇಧದ ಹಿನ್ನೆಲೆಯಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಆಡಿದರು.
2018: ಮತ್ತೆ CSKಗೆ ಮರಳಿ ತಂಡಕ್ಕೆ ಮೂರನೇ ಟ್ರೋಫಿ ತಂದುಕೊಟ್ಟರು.
2021: ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ.
2023: ಐದನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದರು.
2024: ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದರು.
2026: ಆಟಗಾರನಾಗಿ ಐಪಿಎಲ್‌ಗೆ ವಿದಾಯ; CSK ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ.
ಒಟ್ಟಿನಲ್ಲಿ, ಮೈದಾನದಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಮಿಂಚುತ್ತಿದ್ದ ಮಾಹಿಯನ್ನು ಆಟಗಾರನಾಗಿ ನೋಡಲು ಸಾಧ್ಯವಾಗದಿದ್ದರೂ, ಅವರ ಅನುಭವ ಮತ್ತು ಮಾರ್ಗದರ್ಶನ ತಂಡಕ್ಕೆ ಸಿಗಲಿದೆ. ಒಂದು ಕ್ರಿಕೆಟ್ ಅಧ್ಯಾಯ ಮುಗಿದರೂ, ಮಾಹಿ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ಎಂದಿಗೂ ಮುಗಿಯುವುದಿಲ್ಲ.
ಸದ್ಯ ಧೋನಿ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಭಾವುಕ ಕ್ಷಣ ತಂದಿದೆ. ಇತ್ತ ಪತಿಯ ನಿವೃತ್ತಿ ಬೆನ್ನಲ್ಲೇ ಪತ್ನಿ ಸಾಕ್ಷಿ ಸಿಂಗ್ ಧೋನಿ ಕೂಡ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. 'ಮಾಹಿ, ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ' ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.