Cristiano Ronaldo Retirement : ವಿಶ್ವ ಫುಟ್ಬಾಲ್‌ನ ದಿಗ್ಗಜ ಆಟಗಾರ, ಐದು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅಂತರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಪೋರ್ಚುಗಲ್ ತಂಡದ ನಾಯಕ, 23 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳಿದ್ದಾರೆ. ರೊನಾಲ್ಡೊ ಅವರ ಈ ಘೋಷಣೆ ಫುಟ್ಬಾಲ್ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪೋರ್ಚುಗಲ್ ತಂಡದ ಪರ ಹಲವು ಐತಿಹಾಸಿಕ ಸಾಧನೆಗಳನ್ನು ಮಾಡಿರುವ ಅವರು, ಅಂತರಾಷ್ಟ್ರೀಯ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಧಿಕ ಗೋಲು ಗಳಿಸಿದ ಆಟಗಾರ ಹಾಗೂ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ತಮ್ಮ ಪಯಣವನ್ನು ಮುಕ್ತಾಯಗೊಳಿಸಿದ್ದಾರೆ.
2003ರ ಆಗಸ್ಟ್‌ನಲ್ಲಿ ಪೋರ್ಚುಗಲ್ ರಾಷ್ಟ್ರೀಯ ತಂಡದ ಪರ ಮೊದಲ ಬಾರಿಗೆ ಕಣಕ್ಕಿಳಿದಿದ್ದ ರೊನಾಲ್ಡೊ, ಸತತ 23 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ 234 ಪಂದ್ಯಗಳನ್ನು ಆಡಿರುವ ಅವರು ಒಟ್ಟು 146 ಗೋಲುಗಳನ್ನು ದಾಖಲಿಸಿದ್ದಾರೆ. ರಾಷ್ಟ್ರೀಯ ತಂಡದ ಪರ ಅವರ ಪ್ರದರ್ಶನ ಫುಟ್ಬಾಲ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ತಮ್ಮ ವಿದಾಯದ ವಿಡಿಯೋದಲ್ಲಿ ಮಾತನಾಡಿರುವ ರೊನಾಲ್ಡೊ, ಪೋರ್ಚುಗಲ್ ತಂಡದ ಏಳನೇ ನಂಬರ್ ಜೆರ್ಸಿಯನ್ನು ಹಿಂತಿರುಗಿಸುವ ಸಮಯ ಬಂದಿದೆ ಎಂದು ಭಾವುಕರಾಗಿ ಹೇಳಿದ್ದಾರೆ.
“ಪೋರ್ಚುಗಲ್ ಜನರೇ, ನಮ್ಮ ರಾಷ್ಟ್ರೀಯ ತಂಡದ ಏಳನೇ ನಂಬರ್ ಜೆರ್ಸಿಯನ್ನು ಹಿಂತಿರುಗಿಸುವ ದಿನ ಬಂದಿದೆ. ಈ ಜೆರ್ಸಿ ಎಂದಿಗೂ ನನ್ನೊಬ್ಬನಿಗೆ ಮಾತ್ರ ಸೇರಿದ್ದಲ್ಲ. ಆದರೆ 23 ವರ್ಷಗಳ ಕಾಲ ಅದನ್ನು ಧರಿಸುವ, ರಕ್ಷಿಸುವ ಮತ್ತು ಜಗತ್ತಿನ ವಿವಿಧ ಕ್ರೀಡಾಂಗಣಗಳಲ್ಲಿ ಪ್ರತಿನಿಧಿಸುವ ಗೌರವ ಹಾಗೂ ಜವಾಬ್ದಾರಿ ನನಗೆ ಸಿಕ್ಕಿತ್ತು” ಎಂದು ಅವರು ತಿಳಿಸಿದ್ದಾರೆ.
ಪೋರ್ಚುಗಲ್‌ಗೆ ಯುರೋ ಕಪ್ ಗೆದ್ದುಕೊಟ್ಟ ನಾಯಕ
ರೊನಾಲ್ಡೊ ಅವರ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 2016ರ ಯುರೋಪಿಯನ್ ಚಾಂಪಿಯನ್‌ಶಿಪ್ ಗೆಲುವು ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಅವರ ನಾಯಕತ್ವದಲ್ಲಿ ಪೋರ್ಚುಗಲ್ ತಂಡ ಮೊದಲ ಬಾರಿಗೆ ಯುರೋ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಇದರ ಜೊತೆಗೆ ಎರಡು ಬಾರಿ ಯುಇಎಫ್ಎ ನೇಷನ್ಸ್ ಲೀಗ್ ಪ್ರಶಸ್ತಿಯನ್ನು ಗೆಲ್ಲುವಲ್ಲಿಯೂ ತಂಡಕ್ಕೆ ನೆರವಾಗಿದ್ದರು.
ವಿಶ್ವಕಪ್ ಟೂರ್ನಿಯಲ್ಲೂ ರೊನಾಲ್ಡೊ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಒಟ್ಟು ಆರು ವಿಶ್ವಕಪ್ ಆವೃತ್ತಿಗಳಲ್ಲಿ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸಿರುವ ಅವರು, ಆರು ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ ಅವರ ಸುದೀರ್ಘ ವೃತ್ತಿಜೀವನದಲ್ಲಿ ವಿಶ್ವಕಪ್ ಪ್ರಶಸ್ತಿ ಮಾತ್ರ ಕೈಗೆಟುಕದ ಕನಸಾಗಿಯೇ ಉಳಿದಿದೆ.
ಮುಂದಿನ ಪೀಳಿಗೆಗೆ ಅವಕಾಶ ನೀಡುವ ಸಮಯ ಎಂದ ರೊನಾಲ್ಡೊ
ಅಂತರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳುವ ನಿರ್ಧಾರ ಸುಲಭವಾಗಿರಲಿಲ್ಲ ಎಂದು ರೊನಾಲ್ಡೊ ಒಪ್ಪಿಕೊಂಡಿದ್ದಾರೆ. ತಮ್ಮ ಸ್ಥಾನವನ್ನು ಮುಂದಿನ ಪೀಳಿಗೆಯ ಆಟಗಾರರಿಗೆ ಬಿಟ್ಟುಕೊಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
“ಇದೀಗ ಭವಿಷ್ಯದ ಆಟಗಾರರಿಗೆ ಅವಕಾಶ ನೀಡುವ ಸಮಯ ಬಂದಿದೆ. ಈ ನಿರ್ಧಾರ ಸುಲಭವಾಗಿರಲಿಲ್ಲ. ಏಕೆಂದರೆ ಕೆಲವು ನಿರ್ಧಾರಗಳನ್ನು ಕೇವಲ ಮನಸ್ಸಿನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೃದಯದ ಭಾವನೆಗಳೂ ಅದರಲ್ಲಿ ಸೇರಿರುತ್ತವೆ. 2003ರ ಆಗಸ್ಟ್‌ನಲ್ಲಿ ಆರಂಭವಾದ ಈ ಪಯಣ ನನ್ನ ಜೀವನವನ್ನೇ ಬದಲಿಸಿತು. ಈಗ ಆ ಅಧ್ಯಾಯ ಮುಕ್ತಾಯಗೊಂಡಿದೆ” ಎಂದು ಭಾವುಕ ಸಂದೇಶ ನೀಡಿದ್ದಾರೆ.
ಅಭಿಮಾನಿಗಳ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ
ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವೆಂದರೆ ಕೇವಲ ಗೋಲುಗಳು, ದಾಖಲೆಗಳು ಮತ್ತು ಪ್ರಶಸ್ತಿಗಳಲ್ಲ ಎಂದು ರೊನಾಲ್ಡೊ ಹೇಳಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಪೋರ್ಚುಗಲ್ ಜನರು ತಮ್ಮ ಪಂದ್ಯಗಳನ್ನು ನೋಡಿ ತಾಯ್ನಾಡಿನೊಂದಿಗೆ ಬೆಸೆದುಕೊಳ್ಳುತ್ತಿದ್ದ ಕ್ಷಣಗಳು, ಅಭಿಮಾನಿಗಳ ಪ್ರೀತಿ ಮತ್ತು ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ತಮ್ಮ ಜೀವನದ ಅವಿಸ್ಮರಣೀಯ ಭಾಗಗಳಾಗಿವೆ ಎಂದು ತಿಳಿಸಿದ್ದಾರೆ.
“ನಾನು ತಪ್ಪುಗಳನ್ನು ಮಾಡಿದ್ದೇನೆ. ನೋವು ಅನುಭವಿಸಿದ್ದೇನೆ. ಪೋರ್ಚುಗಲ್ ಜನರು ನಿರೀಕ್ಷಿಸಿದ ಎಲ್ಲವನ್ನೂ ನೀಡಲು ಸಾಧ್ಯವಾಗದ ಕ್ಷಣಗಳೂ ಇದ್ದವು. ಆದರೆ ನಾನು ಎಂದಿಗೂ ಪ್ರಯತ್ನಿಸುವುದನ್ನು ನಿಲ್ಲಿಸಲಿಲ್ಲ. ನನ್ನ ದೇಶವನ್ನು ಪ್ರತಿನಿಧಿಸುವ ಆಸೆಯನ್ನೂ ಕಳೆದುಕೊಳ್ಳಲಿಲ್ಲ. ಗೋಲುಗಳು ಮರೆಯಾಗಬಹುದು, ಟ್ರೋಫಿಗಳು ಮ್ಯೂಸಿಯಂ ಸೇರಬಹುದು, ದಾಖಲೆಗಳನ್ನು ಮತ್ತೊಬ್ಬರು ಮುರಿಯಬಹುದು. ಆದರೆ ಜನರ ಹೃದಯದಲ್ಲಿ ನಮಗೆ ಸಿಗುವ ಸ್ಥಾನವನ್ನು ಕಾಲ ಎಂದಿಗೂ ಅಳಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಕೋಚ್ ಜೊತೆಗಿನ ಭಿನ್ನಾಭಿಪ್ರಾಯವೂ ಚರ್ಚೆಯಲ್ಲಿ
ಇತ್ತೀಚಿನ ದಿನಗಳಲ್ಲಿ ಪೋರ್ಚುಗಲ್ ತಂಡದ ಕೋಚ್ ಜಾರ್ಜ್ ಜೀಸಸ್ ಅವರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆಯೂ ವರದಿಗಳು ಪ್ರಕಟವಾಗಿದ್ದವು. ನೇಷನ್ಸ್ ಲೀಗ್ ಪಂದ್ಯವೊಂದರಲ್ಲಿ ಆಡಲು ನಿರಾಕರಿಸಿ ತಂಡದ ಶಿಬಿರದಿಂದ ಹೊರನಡೆದ ವಿಚಾರ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರೊನಾಲ್ಡೊಗೆ 30 ದಿನಗಳ ಅಮಾನತು ವಿಧಿಸಲಾಗಿತ್ತು ಎಂಬ ವರದಿಯೂ ಪ್ರಕಟವಾಗಿತ್ತು.
ಪೋರ್ಚುಗಲ್ ಫುಟ್ಬಾಲ್‌ಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ರೊನಾಲ್ಡೊ ಅವರ ಅಂತರಾಷ್ಟ್ರೀಯ ವಿದಾಯ ಅಭಿಮಾನಿಗಳಿಗೆ ಭಾವುಕ ಕ್ಷಣವಾಗಿದೆ. ಏಳನೇ ನಂಬರ್ ಜೆರ್ಸಿಯೊಂದಿಗೆ ಅವರು ನಿರ್ಮಿಸಿರುವ ದಾಖಲೆಗಳು ಮತ್ತು ಸಾಧನೆಗಳು ಫುಟ್ಬಾಲ್ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯಲಿವೆ.