SOCIAL MEDIA

Newsletter

PARTNER SITES
Select Language Select State

ಅರಳುವ ಮುನ್ನ ಬಾಡಿದ ಕನಸು.. ಪಾಗಲ್‌ ಪ್ರೇಮಿ ಕಿರುಕುಳಕ್ಕೆ ಯುವ ಕ್ರಿಕೆಟ್ ಆಟಗಾರ್ತಿ ಬಲಿ..!

ಬಿಸಿಸಿಐ ಅಂಡರ್‌-19 ಮಹಿಳಾ ಕ್ರಿಕೆಟ್ ತಂಡದ ಉದಯೋನ್ಮುಖ ಪ್ರತಿಭೆ, ಕೇವಲ 17 ವರ್ಷದ ಆಟಗಾರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಕಿಡಿಗೇಡಿಗಳು ನೀಡಿದ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 13, 2026, 22:15 IST | Updated: Nov 13, 2026, 22:18 IST
Image Credit: cricketer nandini
Join

ವಿಕಾರಾಬಾದ್‌: ತೆಲಂಗಾಣದ ವಿಕಾರಾಬಾದ್‌ ಜಿಲ್ಲೆಯಲ್ಲಿ ನಡೆದ ಅತ್ಯಂತ ನೋವಿನ ಘಟನೆ ಇಡೀ ಕ್ರೀಡಾ ಲೋಕವನ್ನೇ ಬೆಚ್ಚಿಬೀಳಿಸಿದೆ. ಬಿಸಿಸಿಐ (BCCI) ಅಂಡರ್‌-19 ಮಹಿಳಾ ಕ್ರಿಕೆಟ್ ತಂಡದಲ್ಲಿ ಅದ್ಭುತ ಪ್ರತಿಭೆ ತೋರುತ್ತಿದ್ದ ಕೇವಲ 17 ವರ್ಷದ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿ ನಂದಿನಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಎಳೆಯ ವಯಸ್ಸಿನ ಪ್ರತಿಭೆಯೊಂದು ಹೀಗೆ ಅರ್ಧದಲ್ಲೇ ಬದುಕು ಮುಗಿಸಿರುವುದು ತೀವ್ರ ಆಘಾತಕ್ಕೆ ಕಾರಣವಾಗಿದೆ..

ಹೌದು.. ಮೂಲತಃ ಯಾಲಾಲ ಮಂಡಲದ ಸಂಗಯ್ಯಪಲ್ಲಿ ಗ್ರಾಮಕ್ಕೆ ಸೇರಿದ ನಂದಿನಿ, ವಿಕಾರಾಬಾದ್ ನಗರದ ಮಧು ಕಾಲೋನಿಯಲ್ಲಿರುವ ತನ್ನ ಅಮ್ಮಮ್ಮನ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿಯೇ ವಿದ್ಯಾಭ್ಯಾಸದ ಜೊತೆಗೆ ಕ್ರಿಕೆಟ್ ಕಠಿಣ ತರಬೇತಿ ಪಡೆಯುತ್ತಿದ್ದರು. ತಮ್ಮ ಅದ್ಭುತ ಆಟ ಮತ್ತು ಪ್ರತಿಭೆಯ ಬಲದಿಂದ ಇತ್ತೀಚೆಗಷ್ಟೇ ಈ ಯುವಕಿ ಬಿಸಿಸಿಐ ಅಂಡರ್‌-19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮುಂದೊಂದು ದಿನ ದೇಶದ ಪರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಬೇಕಿದ್ದ ಪ್ರತಿಭಾನ್ವಿತ ಆಟಗಾರ್ತಿ ಹೀಗೆ ಹಠಾತ್ತನೆ ಸಾವಿನ ಹಾದಿ ಹಿಡಿದಿರುವುದು ಕ್ರೀಡಾಪ್ರೇಮಿಗಳನ್ನು ಹಾಗೂ ಸ್ಥಳೀಯರನ್ನು ತೀವ್ರ ಶೋಕಾಸಮುದ್ರದಲ್ಲಿ ಮುಳುಗಿಸಿದೆ.

ಪ್ರೀತಿಯ ಹೆಸರಿನಲ್ಲಿ ಕಿರುಕುಳವೇ ಸಾವಿಗೆ ಕಾರಣ 
ನಂದಿನಿ ಅವರ ಅಕಾಲಿಕ ಮರಣಕ್ಕೆ ಯಾರೋ ಕಿಡಿಗೇಡಿಗಳ ನಿರಂತರ ಕಿರುಕುಳವೇ ನೇರ ಕಾರಣ ಎಂದು ಮೃತರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಕಣ್ಣೀರಿಡುತ್ತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ 'ಅನಿಲ್' ಎಂಬ ಯುವಕನು ಪ್ರೀತಿಯ ಹೆಸರಿನಲ್ಲಿ ನಂದಿನಿಯ ಬೆನ್ನಟ್ಟಿ ನಿರಂತರವಾಗಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ಅವರು ಆರೋಪಿಸಿದ್ದಾರೆ. ಈ ಕೃತ್ಯಕ್ಕೆ 'ಕೃಷ್ಣ' ಎಂಬ ಮತ್ತೊಬ್ಬ ವಿದ್ಯಾರ್ಥಿಯೂ ಸಹಕರಿಸಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಕಾಮುಕರ ಈ ಅತಿರೇಕದ ಕಿರುಕುಳ ಹಾಗೂ ಬೆದರಿಕೆಯನ್ನು ತಾಳಲಾರದೆ ತಮ್ಮ ಮಗಳು ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಾಯಿ ಮತ್ತು ಆಪ್ತರು ಗೋಗರೆಯುತ್ತಿದ್ದಾರೆ.

ನ್ಯಾಯಕ್ಕಾಗಿ ರಸ್ತೆಗಿಳಿದು ಪ್ರತಿಭಟನೆ - ಪೊಲೀಸರಿಂದ ತನಿಖೆ ಚುರುಕು
ಯುವತಿಯ ಸಾವಿಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕು ಮತ್ತು ಕುಟುಂಬಕ್ಕೆ ಕಠಿಣ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ನಂದಿನಿಯ ಕುಟುಂಬಸ್ಥರು, ಸ್ನೇಹಿತರು ಹಾಗೂ ನೂರಾರು ಸ್ಥಳೀಯರು ವಿಕಾರಾಬಾದ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ರಸ್ತೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು. ಕುಟುಂಬ ಸದಸ್ಯರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಅನಿಲ್ ಹಾಗೂ ಕೃಷ್ಣ ಎಂಬ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದು, ಈ ದುರಂತದ ಹಿಂದಿನ ಪ್ರತಿಯೊಂದು ಆಯಾಮದ ಬಗ್ಗೆಯೂ ಸಮಗ್ರವಾದ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES