ಏಷ್ಯನ್ ಪ್ಯಾರಾ ಗೇಮ್ಸ್ 2026: ಕಿರುಕುಳ ಆರೋಪ, ಭಾರತಕ್ಕೆ ವಾಪಸಾದ ಪ್ಯಾರಾ ಸ್ವಿಮ್ಮರ್!?
ಜಪಾನ್ ಪೊಲೀಸರು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಬಳಿಕ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಪ್ರಕರಣದ ಬೆನ್ನಲ್ಲೇ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಜೀವಿತಾವಧಿ ನಿಷೇಧದ ಬಗ್ಗೆಯೂ ಚರ್ಚೆ ನಡೆದಿದೆ.
Asian Para Games 2026: ಜಪಾನ್ ನಲ್ಲಿ ನಡೆಯುತ್ತಿರುವ 2026 ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತೀಯ ಪ್ಯಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಪಾನ್ ಪೊಲೀಸರು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಬಳಿಕ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಪ್ರಕರಣದ ಬೆನ್ನಲ್ಲೇ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಜೀವಿತಾವಧಿ ನಿಷೇಧದ ಬಗ್ಗೆಯೂ ಚರ್ಚೆ ನಡೆದಿದೆ.
ವರದಿಗಳ ಪ್ರಕಾರ, ನಾಗೋಯಾ ದಲ್ಲಿ ಭಾರತೀಯ ಪ್ಯಾರಾ ಈಜು ತಂಡ ತಂಗಿದ್ದ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೋಟೆಲ್‌ನ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶೇಖ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿಯ ದೂರಿನ ಬಳಿಕ ಸ್ಥಳೀಯ ಆಯೋಜಕರು ಮತ್ತು ಭಾರತೀಯ ತಂಡದ ಅಧಿಕಾರಿಗಳಿಗೆ ಮಾಹಿತಿ ತಲುಪಿದೆ.
ಬಳಿಕ ಜಪಾನ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ನಡೆದ ಮರುದಿನವೇ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯಿಂದ ಭಾರತೀಯ ಕ್ರೀಡಾ ತಂಡಕ್ಕೂ ಮುಜುಗರ ಉಂಟಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI), ಶೇಖ್ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಜೀವಿತಾವಧಿ ನಿಷೇಧ ವಿಧಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ. ಆದರೆ, ಈ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಬೇಕಿದ್ದ ಪ್ಯಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್, ಆರೋಪದ ಹಿನ್ನೆಲೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಕ್ರೀಡಾಕೂಟ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣದ ಕುರಿತು ಚರ್ಚಿಸಿ ಮುಂದಿನ ಕ್ರಮ ನಿರ್ಧರಿಸುವ ಸಾಧ್ಯತೆಯಿದೆ.
ಯಾರು ಈ ಮೊಹಮ್ಮದ್ ಶಮ್ಸ್ ಆಲಂ ಶೇಖ್?
40 ವರ್ಷದ ಪ್ಯಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್ ಮೂಲತಃ ಬಿಹಾರದವರು. ಅವರು ಪ್ಯಾರಾ ಈಜು ಕ್ಷೇತ್ರದಲ್ಲಿ ಭಾರತವನ್ನು ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದಾರೆ. ಪುರುಷರ 100 ಮೀಟರ್ ಬಟರ್‌ಫ್ಲೈ ಎಸ್5 ಮತ್ತು 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಎಸ್‌ಬಿ4 ವಿಭಾಗಗಳಲ್ಲಿ ಅವರು ಈ ಹಿಂದೆ ವಿಶ್ವದ ನಂಬರ್ ಒನ್ ಸ್ಥಾನ ಪಡೆದಿದ್ದರು ಎಂದು ವರದಿಯಾಗಿದೆ.
2018 ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮೊಹಮ್ಮದ್ ಶಮ್ಸ್ ಆಲಂ ಶೇಖ್ 200 ಮೀಟರ್ ಮತ್ತು 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. 2025ರ ರೇಕ್ಜಾವಿಕ್ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತೀಯ ಹಾಗೂ ಏಷ್ಯನ್ ದಾಖಲೆ ನಿರ್ಮಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಆಟಗಾರನ ವಿರುದ್ಧ ಕೇಳಿಬಂದಿರುವ ಈ ಆರೋಪ ಇದೀಗ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಹಾಗೂ ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ಅಧಿಕೃತ ನಿರ್ಧಾರ ಏನಿರಲಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
ಗಮನಿಸಿ: ಈ ವರದಿಯಲ್ಲಿನ ಆರೋಪಗಳು ಇನ್ನೂ ಅಂತಿಮವಾಗಿ ಸಾಬೀತಾಗಿರುವುದಿಲ್ಲ. ಶಿಸ್ತು ಕ್ರಮದ ಕುರಿತು ಅಧಿಕೃತ ಅಂತಿಮ ನಿರ್ಧಾರವೂ ಪ್ರಕಟವಾಗಿಲ್ಲ.