‘ಸೀತಾ-ರಾಮ್’ ಜಪಿಸುತ್ತಲೇ ಭರ್ಜರಿ ಶತಕ ಸಿಡಿಸಿದ ವೀರೇಂದ್ರ ಸೆಹ್ವಾಗ್ ಪುತ್ರ!
ಯುಎಇ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಕೇವಲ 168 ಎಸೆತಗಳಲ್ಲಿ 160 ರನ್ ಸಿಡಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ತಂದೆಗೆ ನೀಡಿದ್ದ ಭರವಸೆಯನ್ನೂ ಈಡೇರಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಇದೀಗ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ತಂದೆಯಂತೆ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಆರ್ಯವೀರ್, ಅಂಡರ್-19 ಏಷ್ಯಾಕಪ್ 2026 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಯುಎಇ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಕೇವಲ 168 ಎಸೆತಗಳಲ್ಲಿ 160 ರನ್ ಸಿಡಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ತಂದೆಗೆ ನೀಡಿದ್ದ ಭರವಸೆಯನ್ನೂ ಈಡೇರಿಸಿದ್ದಾರೆ.
ಆರ್ಯವೀರ್ ಅವರ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಮತ್ತೊಂದು ಕುತೂಹಲಕಾರಿ ಸಂಗತಿಯೂ ಇದೀಗ ಚರ್ಚೆಗೆ ಬಂದಿದೆ. ಅವರ ತಂದೆ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಮಾಡುವಾಗ ಬಾಲಿವುಡ್ ಹಾಡುಗಳನ್ನು ಗುನುಗುತ್ತಿದ್ದರು. ಆದರೆ ಮಗ ಆರ್ಯವೀರ್ ಮಾತ್ರ ಕ್ರೀಸ್‌ನಲ್ಲಿರುವಾಗ ‘ಸೀತಾ-ರಾಮ್’ ಎಂದು ಜಪಿಸುತ್ತಾರಂತೆ. ಏಕಾಗ್ರತೆ ಕಾಪಾಡಿಕೊಳ್ಳಲು ಮತ್ತು ಒತ್ತಡವನ್ನು ನಿಯಂತ್ರಿಸಲು ಈ ಅಭ್ಯಾಸ ಸಹಾಯ ಮಾಡುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಮಗ!
ನವೆಂಬರ್ 10ರಂದು ನಡೆದ ಅಂಡರ್-19 ಏಷ್ಯಾಕಪ್‌ನ ಎ ಗುಂಪಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್ಯವೀರ್ ತಮ್ಮ ತಂದೆ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಮಾತನಾಡಿದ್ದರು. ಈ ಪಂದ್ಯದಲ್ಲಿ ದೊಡ್ಡ ಶತಕ ಬಾರಿಸುವುದಾಗಿ ತಂದೆಗೆ ಭರವಸೆ ನೀಡಿದ್ದರು. ಅದರಂತೆ ಮೈದಾನಕ್ಕಿಳಿದ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ 160 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಆರ್ಯವೀರ್, ತಮ್ಮ ತಂದೆಗೆ ಸಾಮಾನ್ಯ ಶತಕಕ್ಕಿಂತ ದೊಡ್ಡ ಮೊತ್ತದ ಇನ್ನಿಂಗ್ಸ್‌ಗಳು ಹೆಚ್ಚು ಇಷ್ಟ ಎಂದು ತಿಳಿಸಿದ್ದಾರೆ. ತಂದೆಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ಕ್ರಿಕೆಟ್ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂಬ ಭಾವನೆಯನ್ನೂ ಹಂಚಿಕೊಂಡಿದ್ದಾರೆ.
131 ಎಸೆತಗಳಲ್ಲಿ ಚೊಚ್ಚಲ ಯೂತ್ ಏಕದಿನ ಶತಕ!
ಒಮಾನ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಆರ್ಯವೀರ್, ಬಳಿಕ ತಮ್ಮ ನೈಜ ಆಕ್ರಮಣಕಾರಿ ಆಟಕ್ಕೆ ಮರಳಿದರು. 131 ಎಸೆತಗಳಲ್ಲಿ ತಮ್ಮ ಚೊಚ್ಚಲ ಯೂತ್ ಏಕದಿನ ಶತಕ ಪೂರೈಸಿದರು. ನಂತರವೂ ರನ್ ವೇಗವನ್ನು ಹೆಚ್ಚಿಸಿದ ಅವರು ಒಟ್ಟು 168 ಎಸೆತಗಳಲ್ಲಿ 160 ರನ್ ಕಲೆಹಾಕಿದರು. ಈ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸೇರಿದ್ದವು.
ಭಾರತಕ್ಕೆ 70 ರನ್‌ಗಳ ಭರ್ಜರಿ ಗೆಲುವು
ಆರ್ಯವೀರ್ ಅವರ ಅಮೋಘ ಇನ್ನಿಂಗ್ಸ್‌ಗೆ ವಿ.ಕೆ. ವಿನೀತ್ ಅವರ 67 ರನ್‌ಗಳ ಕೊಡುಗೆಯೂ ಸಾಥ್ ನೀಡಿತು. ಇಬ್ಬರ ನಡುವಿನ 193 ರನ್‌ಗಳ ಜೊತೆಯಾಟದ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ ಯುಎಇ ತಂಡವನ್ನು ಭಾರತೀಯ ಬೌಲರ್‌ಗಳು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಭಾರತ 70 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.
ತಂದೆ ವೀರೇಂದ್ರ ಸೆಹ್ವಾಗ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ವಿಶ್ವ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ್ದರು. ಇದೀಗ ಪುತ್ರ ಆರ್ಯವೀರ್ ಕೂಡ ದೊಡ್ಡ ಇನ್ನಿಂಗ್ಸ್ ಆಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.