28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ! ದಾಖಲೆಗಳ ಮೇಲೆ ದಾಖಲೆ ಬರೆದ ವೈಭವ್ ಸೂರ್ಯವಂಶಿ
ಎಸಿಸಿ ಮೆನ್ಸ್ ರೈಸಿಂಗ್ ಸ್ಟಾರ್ ಏಷ್ಯಾ ಕಪ್ನಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ವೇಗದ ಶತಕದ ದಾಖಲೆ ನಿರ್ಮಿಸಿದ್ದಾರೆ. ಬಳಿಕ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ಒಟ್ಟು 53 ಎಸೆತಗಳಲ್ಲಿ 204 ರನ್ ಗಳಿಸಿದ ಅವರು 28 ಸಿಕ್ಸರ್ ಹಾಗೂ 7 ಬೌಂಡರಿಗಳನ್ನ ಸಿಡಿಸಿದ್ದಾರೆ. ಒಂದೇ ಇನ್ನಿಂಗ್ಸ್ನಲ್ಲಿ ಅತಿಹೆಚ್ಚು ಸಿಕ್ಸರ್, ವೇಗದ ದ್ವಿಶತಕ ಮತ್ತು ಅತ್ಯಧಿಕ ಸ್ಟ್ರೈಕ್ರೇಟ್ ಸೇರಿದಂತೆ ಹಲವು ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.
Vaibhav Sooryavanshi Records: ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್ಗಳ ಸುರಿಮಳೆಗೈದು ಯುವ ಆಟಗಾರ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಎಸಿಸಿ ಮೆನ್ಸ್ ರೈಸಿಂಗ್ ಸ್ಟಾರ್ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮರೈಟ್ಸ್ (UAE) ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಷ್ಟಕ್ಕೇ ನಿಲ್ಲದ ಅವರ ಬ್ಯಾಟಿಂಗ್ ಅಬ್ಬರ ಕೇವಲ 52 ಎಸೆತಗಳಲ್ಲಿ ದ್ವಿಶತಕದ ಗಡಿ ತಲುಪುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಈ ಇನ್ನಿಂಗ್ಸ್ನಲ್ಲಿ ಅವರು ಒಟ್ಟು 28 ಸಿಕ್ಸರ್ಗಳನ್ನ ಸಿಡಿಸಿದ್ದು, ಲಿಸ್ಟ್ ಎ ಕ್ರಿಕೆಟ್ನಲ್ಲಿ ಹಲವು ಮಹತ್ವದ ಸಾಧನೆಗಳನ್ನ ಮಾಡಿದ್ದಾರೆ.
28 ಎಸೆತಗಳಲ್ಲಿ ಶತಕ: ಲಿಸ್ಟ್ ಎ ಕ್ರಿಕೆಟ್ನಲ್ಲಿ ಹೊಸ ದಾಖಲೆ
ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 28 ಎಸೆತಗಳನ್ನ ಎದುರಿಸಿ 15 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗವಾಗಿ ಶತಕ ಗಳಿಸಿದ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಜೇಕ್ ಪ್ರೆಸರ್ ಮೆಕ್ಗುರ್ಕ್ 29 ಎಸೆತಗಳಲ್ಲಿ ಶತಕ ಸಿಡಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ತಾಂಜಾನಿಯಾ ವಿರುದ್ಧ ಅವರು ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಬಿಹಾರದ ಸಕೀಬ್ ಉಲ್ ಗನಿ ಅರುಣಾಚಲ ಪ್ರದೇಶ ವಿರುದ್ಧ 32 ಎಸೆತಗಳಲ್ಲಿ ಹಾಗೂ ಜಾರ್ಖಂಡ್ನ ಇಶಾನ್ ಕಿಶನ್, ಕರ್ನಾಟಕ ವಿರುದ್ಧ 33 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನ ಹಿಂದಿಕ್ಕಿದ ವೈಭವ್ 28 ಎಸೆತಗಳಲ್ಲೇ ಶತಕ ಪೂರೈಸಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ವೇಗದ ಶತಕದ ಹೊಸ ದಾಖಲೆ ನಿರ್ಮಿಸಿದ್ದಾರೆ.
ಸುರೇಶ್ ರೈನಾ ದಾಖಲೆಗೂ ಬ್ರೇಕ್
ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾರ ದಾಖಲೆಯನ್ನೂ ಹಿಂದಿಕ್ಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ರೈನಾ 25 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಕನಿಷ್ಠ 85 ರನ್ ಗಳಿಸಲು ಅತ್ಯಂತ ಕಡಿಮೆ ಎಸೆತಗಳನ್ನ ಎದುರಿಸಿದ ಭಾರತೀಯ ಆಟಗಾರರ ಸಾಧನೆಯಾಗಿ ಈ ದಾಖಲೆ ಗುರುತಿಸಿಕೊಂಡಿತ್ತು. ಆದರೆ ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 25 ಎಸೆತಗಳಲ್ಲೇ 89 ರನ್ ಗಳಿಸುವ ಮೂಲಕ ರೈನಾ ಅವರ ದಾಖಲೆಯನ್ನ ಮುರಿದರು. ಶತಕದ ಬಳಿಕವೂ ತಮ್ಮ ಆಕ್ರಮಣಕಾರಿ ಆಟವನ್ನ ಮುಂದುವರಿಸಿದ ಅವರು, ಕೇವಲ 40 ಎಸೆತಗಳಲ್ಲಿ 20 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 150 ರನ್ ಪೂರೈಸಿದರು.
52 ಎಸೆತಗಳಲ್ಲಿ ದ್ವಿಶತಕ: ಲಿಸ್ಟ್ ಎ ಕ್ರಿಕೆಟ್ನಲ್ಲಿ ವೇಗದ ಸಾಧನೆ
ವೈಭವ್ ಅವರ ಇನ್ನಿಂಗ್ಸ್ನ ಮತ್ತೊಂದು ಪ್ರಮುಖ ದಾಖಲೆ ಎಂದರೆ ದ್ವಿಶತಕ. ಕೇವಲ 52 ಎಸೆತಗಳಲ್ಲಿ 200 ರನ್ಗಳ ಗಡಿ ದಾಟಿದ ಅವರು, ಲಿಸ್ಟ್ ಎ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ ದ್ವಿಶತಕ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಈ ಹಿಂದೆ ನ್ಯೂಜಿಲೆಂಡ್ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು. 2024ರಲ್ಲಿ ಕ್ಯಾಂಟರ್ಬರಿ ಪರ ಒಟಾಗೊ ವಿರುದ್ಧ ಅವರು ಈ ಸಾಧನೆ ಮಾಡಿದ್ದರು. ತಮಿಳುನಾಡಿನ ಎನ್.ಜಗದೀಶನ್ 2022ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ 114 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು. ಇಂಗ್ಲೆಂಡ್ನ ಹ್ಯಾರಿ ಬ್ರೂಕ್ ಕೂಡ 2026ರಲ್ಲಿ ಶ್ರೀಲಂಕಾ ವಿರುದ್ಧ 114 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಈ ದಾಖಲೆಗಳನ್ನ ಹಿಂದಿಕ್ಕಿದ ವೈಭವ್ 52 ಎಸೆತಗಳಲ್ಲೇ ದ್ವಿಶತಕ ಪೂರೈಸಿದ್ದಾರೆ.
ಒಂದೇ ಇನ್ನಿಂಗ್ಸ್ನಲ್ಲಿ 28 ಸಿಕ್ಸರ್: ಮತ್ತೊಂದು ವಿಶ್ವಮಟ್ಟದ ದಾಖಲೆ
ವೈಭವ್ ಸೂರ್ಯವಂಶಿ ಅವರ ಇನ್ನಿಂಗ್ಸ್ನಲ್ಲಿ ದಾಖಲಾಗಿರುವ 28 ಸಿಕ್ಸರ್ಗಳು ವೃತ್ತಿಪರ ಕ್ರಿಕೆಟ್ನಲ್ಲೂ ಹೊಸ ದಾಖಲೆ ನಿರ್ಮಿಸಿವೆ. ಒಂದೇ ಇನ್ನಿಂಗ್ಸ್ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವೈಭವ್ ಮೊದಲ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮೊದಲು ಹೈದರಾಬಾದ್ನ ತನ್ಮಯ್ ಅಗರ್ವಾಲ್ 2024ರ ರಣಜಿ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ 26 ಸಿಕ್ಸರ್ಗಳನ್ನ ಸಿಡಿಸಿದ್ದರು. ನ್ಯೂಜಿಲೆಂಡ್ನ ಕಾಲಿನ್ ಮನ್ರೋ 2015ರ ಪ್ಲಂಕೆಟ್ ಶೀಲ್ಡ್ ಪಂದ್ಯದಲ್ಲಿ 23 ಸಿಕ್ಸರ್ಗಳನ್ನ ಬಾರಿಸಿದ್ದರು. 2018ರ ಏಕದಿನ ಕಪ್ನಲ್ಲಿ ಡಿ'ಆರ್ಸಿ ಶಾರ್ಟ್ ಕೂಡ 23 ಸಿಕ್ಸರ್ಗಳನ್ನ ಸಿಡಿಸಿದ್ದರು. ಈ ಎಲ್ಲಾ ದಾಖಲೆಗಳನ್ನ ಹಿಂದಿಕ್ಕಿದ ವೈಭವ್ 28 ಸಿಕ್ಸರ್ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.
ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಟ್ರೈಕ್ರೇಟ್
ವೈಭವ್ ಅವರ ಬ್ಯಾಟಿಂಗ್ ವೇಗವೂ ಮತ್ತೊಂದು ದಾಖಲೆಗೆ ಕಾರಣವಾಗಿದೆ. ಯುಎಇ ವಿರುದ್ಧ 53 ಎಸೆತಗಳಲ್ಲಿ 204 ರನ್ ಗಳಿಸಿದ ಅವರು 384.90 ಸ್ಟ್ರೈಕ್ರೇಟ್ ದಾಖಲಿಸಿದ್ದಾರೆ. ಲಿಸ್ಟ್ ಎ ಏಕದಿನ ಕ್ರಿಕೆಟ್ನಲ್ಲಿ ಶತಕ ಗಳಿಸಿದ ಇನ್ನಿಂಗ್ಸ್ಗಳ ಪೈಕಿ ಇದು ಅತ್ಯಧಿಕ ಸ್ಟ್ರೈಕ್ರೇಟ್ ಆಗಿದೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 44 ಎಸೆತಗಳಲ್ಲಿ 149 ರನ್ ಗಳಿಸಿ 338.63 ಸ್ಟ್ರೈಕ್ರೇಟ್ ದಾಖಲಿಸಿದ್ದರು. ಆಸ್ಟ್ರೇಲಿಯಾದ ಜೇಕ್ ಪ್ರೆಸರ್ ಮೆಕ್ಗುರ್ಕ್ 2023ರಲ್ಲಿ ದಕ್ಷಿಣ ಆಸ್ಟ್ರೇಲಿಯಾ ಪರ ಟ್ಯಾಸ್ಮೇನಿಯಾ ವಿರುದ್ಧ 38 ಎಸೆತಗಳಲ್ಲಿ 125 ರನ್ ಗಳಿಸಿ 328.94 ಸ್ಟ್ರೈಕ್ರೇಟ್ ಹೊಂದಿದ್ದರು. ಈ ದಾಖಲೆಗಳನ್ನೂ ವೈಭವ್ ಹಿಂದಿಕ್ಕಿದ್ದಾರೆ.
ಇನ್ನು ಲಿಸ್ಟ್ ಎ ಕ್ರಿಕೆಟ್ನ ಒಂದೇ ಇನ್ನಿಂಗ್ಸ್ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲೂ ವೈಭವ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 28 ಸಿಕ್ಸರ್ಗಳನ್ನ ಬಾರಿಸಿದ್ದರೆ, ಡಿ'ಆರ್ಸಿ ಶಾರ್ಟ್ 23 ಮತ್ತು ಬೆವನ್ ಜೇಕಬ್ಸ್ 21 ಸಿಕ್ಸರ್ಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ. ಒಟ್ನಲ್ಲಿ ಯುಎಇ ವಿರುದ್ಧದ ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ಕೇವಲ 53 ಎಸೆತಗಳಲ್ಲಿ 204 ರನ್ ಗಳಿಸುವ ಮೂಲಕ ವೇಗದ ಶತಕ, ವೇಗದ ದ್ವಿಶತಕ, ಒಂದೇ ಇನ್ನಿಂಗ್ಸ್ನಲ್ಲಿ ಅತಿಹೆಚ್ಚು ಸಿಕ್ಸರ್ ಹಾಗೂ ಅತ್ಯಧಿಕ ಸ್ಟ್ರೈಕ್ರೇಟ್ ಸೇರಿದಂತೆ ಹಲವು ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.