ಬಂಜಾರ ಸಮುದಾಯದ ವಿಶಿಷ್ಟ ದೀಪಾವಳಿ: ಇಲ್ಲಿ ಪರಸ್ಪರ ತಬ್ಬಿ ಅಳುವುದೂ ಒಂದು ಸಂಪ್ರದಾಯ
ದೇಶಾದ್ಯಂತ ದೀಪಗಳ ಹಬ್ಬ ದೀಪಾವಳಿಯನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ, ಗಜೇಂದ್ರಗಡದ ಬಂಜಾರದಲ್ಲಿ ಮಾತ್ರ ತುಂಬಾ ವಿಭಿನ್ನವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.
ಗಜೇಂದ್ರಗಡದ ಬಂಜಾರ ತಾಂಡಾದಲ್ಲಿ ವಿಭಿನ್ನ ದೀಪಾವಳಿ ಆಚರಣೆ ಮಾಡಲಾಗಿದ್ದು, ಇಲ್ಲಿ ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು, ತಮ್ಮದೇ ಬಂಜಾರ ಸಂಪ್ರದಾಯ, ಸಂಸ್ಕೃತಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಾಗಿದೆ.
ಹೌದು, ದೀಪಾವಳಿ ಎಂದರೆ ಬೆಳಕು, ಪಟಾಕಿಯದ್ದೇ ಸಂಭ್ರಮ. ಆದರೆ, ಬಂಜಾರ ಸಮುದಾಯದವರ ದೀಪಾವಳಿ ಆಚರಣೆ ಇದಕ್ಕಿಂತ ಭಿನ್ನವಾಗಿದ್ದು ಹಾಡು-ಕುಣಿತದ ಮೂಲಕ ದೀಪಾವಳಿ ಅನ್ನು ಆಚರಿಸಲಾಗಿದೆ.
‘ಮೇರಾ’ ದೀಪಾವಳಿ:
ದೀಪಾವಳಿ ಹಬ್ಬದ ಮೊದಲ ದಿನ ಯುವತಿಯರೆಲ್ಲರೂ ಸೇರಿ ‘ಮೇರಾ ದೀಪಾವಳಿ’ ಅನ್ನು ಆಚರಿಸುತ್ತಾರೆ. ಈ ವೇಳೆ ಕತ್ತಲು ಕಳೆದು ಬೆಳಕು ಮೂಡಲೆಂದು ಮನೆ ಮನೆಗೂ ಹೋಗಿ ದೀಪ ಹೆಚ್ಚುತ್ತಾರೆ.
ಪಾಂಡುರಂಗ ಪೂಜೆ:
ದೀಪಾವಳಿಯ ಎರಡನೇ ದಿನ ಪಾಂಡುರಂಗ ಪೂಜೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೊದಲು ನಾಯಕರ ಮನೆಯ ಬಳಿ ಎಲ್ಲಾ ಹುಡುಗಿಯರು ಒಟ್ಟುಗೂಡುತ್ತಾರೆ. ಅಲ್ಲಿ ಯುವತಿಯರಿಗೆ ಬುಟ್ಟಿಯನ್ನು ವಿತರಿಸಲಾಗುತ್ತದೆ. ಆ ಬುಟ್ಟಿಯನ್ನು ತೆಗೆದುಕೊಂಡು ಹೊಲ ಗದ್ದೆಗಳಿಗೆ ಹೋಗುವ ಯುವತಿಯರು ಅಲ್ಲಿ ಹೂವುಗಳನ್ನು ಕಿತ್ತುಕೊಂಡು ಬರುತ್ತಾರೆ. ಬಳಿಕ ಗುಡಿ ಮುಂದೆ ಒಟ್ಟಿಗೆ ಸೇರಿ ಎಲ್ಲರೂ ಹಾಡು ನೃತ್ಯದ ಮೂಲಕ ಹಬ್ಬವನ್ನ ಸಂಭ್ರಮಿಸುತ್ತಾರೆ. ನಂತರ ಮತ್ತೆ ಎಲ್ಲರ ಮನೆ-ಮನೆಗೆ ಭೇಟಿ ನೀಡುವ ಯುವತಿಯರು ಅಲ್ಲಿ ಬಂಜಾರ ಸಂಪ್ರಾದಯದ ಆಚರಣೆಗಳ ಮೂಲಕ ಪಾಂಡುರಂಗನ ಪೂಜೆ ಮಾಡುತ್ತಾರೆ.
ಹಿರಿಯರ ಹಬ್ಬ:
ಲಂಬಾಣಿ ಸಮುದಾಯದಲ್ಲಿ ದೀಪಾವಳಿ ಹಾಗೂ ಹಿರಿಯರ ಹಬ್ಬ ವಿಶೇಷ ಆಚರಣೆ ಆಗಿದ್ದು, ಅಲಂಕಾರ ಮಾಡಿಕೊಂಡು ಕೈಯಲ್ಲಿ ಬುಟ್ಟಿ ಹಿಡಿದು ಹೂ ತರುವ ಯುವತಿಯರು, ಗೋ ಪೂಜೆ, ಸಗಣಿ ಪೂಜೆ, ತಂಗಡಿ ಹೂವಿನ ಸಂಪ್ರದಾಯ ಇಲ್ಲಿನ ವಿಶೇಷತೆ ಆಗಿದೆ. ಈ ಸಂದರ್ಭದಲ್ಲಿ ಮದುವೆಯಾಗದ ಯುವತಿಯರು ಬಂಜಾರ ಸಮುದಾಯದ ಕಾಂಚಲಿ, ಬಾಂಬಡಿ, ಚೋಟ್ಲ, ಗುಮಟೋ, ಪಟ್ಯ ಹೀಗೆ ಪೇಟಿಯ ತೊಟ್ಟು ದೇವಸ್ಥಾನದ ಮುಂದೆ ಸಕತ್ ಸ್ಟೆಪ್ಸ್ ಹಾಕಿ ಬಂಜಾರ ಸಮುದಾಯದ ಸಂಪ್ರದಾಯದಂತೆ ದೀಪಾವಳಿ ಆಚರಣೆ ಮಾಡುತ್ತಾರೆ.
ದೀಪಾವಳಿಗೆ ತಪ್ಪದೇ ಊರಿಗೆ ಬರುವ ಯುವತಿಯರು:
ಇನ್ನು ಯಾರು ಯಾವುದೇ ಊರಿನಲ್ಲಿ ನೆಲೆಸಿರಲಿ, ಎಷ್ಟೇ ದೂರದ ಊರಿನಲ್ಲಿದ್ದರೂ ಸಹ ಯುವತಿಯರು, ದೀಪಾವಳಿ ಹಬ್ಬಕ್ಕೆಂದು ಮಿಸ್ ಮಾಡದೆ ಊರಿಗೆ ಬರುತ್ತಾರೆ.
ದೀಪವಾಳಿ ದಿನವೇ ಹಿರಿಯರ ಹಬ್ಬ!
ದೀಪವಾಳಿ ಹಬ್ಬದ ದಿನವೇ ಹಿರಿಯರ ಹಬ್ಬ ಆಚರಣೆಯೂ ನಡೆಯಲಿದ್ದು ಸಂಜೆ ಹೊತ್ತಿನಲ್ಲಿ ಗ್ರಾಮದ ಸೇವಾಲಾಲ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ತಾಂಡಾದ ಕನ್ಯೆಯರಿಂದ ಮನೆಮನೆಗೆ ತೆರಳಿ ದೀಪ ಬೆಳಗೋ ಮೂಲಕ ವಿಶಿಷ್ಟವಾಗಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ವೇಳೆ ಹಿರಿಯರಿಂದ ಆಶೀರ್ವಾದ ಪಡೆಯುವ ತಾಂಡಾದ ಕನ್ಯೆಯರು ಯಾರಿಗೆ ಆರತಿ ಬೆಳಗುತ್ತಾರೋ ಅವರಿಂದ ಕಾಣಿಕೆ ರೂಪದಲ್ಲಿ ಹಣ ಪಡೆಯುವ ಸಂಪ್ರದಾಯವೂ ಇದೆ.
ಹೆಣ್ಣು ಮಕ್ಕಳನ್ನ ಲಕ್ಷ್ಮೀ ಸ್ವರೂಪ, ಅವರಿಂದಾಗಿ ಮನೆಯ ಐಶ್ವರ್ಯ ವೃದ್ಧಿಸುತ್ತದೆ ಅನ್ನೋ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ದೀಪವಾಳಿ ದಿನ ತಾಂಡಾದ ಮನೆಗಳಿಗೆ ತೆರಳಿ ಹೆಣ್ಣು ಮಕ್ಕಳು ದೀಪ ಬೆಳಗುತ್ತಾರೆ, ನಿಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗಲಿ ಎಂದು ಪ್ರಾರ್ಥನೆ ಮಾಡುತ್ತಾರೆ ಎನ್ನಲಾಗುತ್ತದೆ. ದೀಪ ಬೆಳಗುವ ಸಂದರ್ಭದಲ್ಲಿ ಹೂವು ಮತ್ತೆ ಸಗಣಿಯನ್ನ ಪ್ರತಿ ಬಾಗಿಲಿಗೂ ಇಟ್ಟು ಅಲ್ಲಿ ದೀಪ ಬೆಳಗುವ ಮೂಲಕ ಕನ್ಯೆಯರು ಪೂಜೆ ಮಾಡುತ್ತಾರೆ.
ಪರಸ್ಪರ ತಬ್ಬಿ ಅಳುವ ಸಂಪ್ರದಾಯ:
ಬಂಜಾರ ಸಮುದಾಯದ ಮತ್ತೊಂದು ವಿಶೇಷ ಸಂಪ್ರಾಯವೆಂದರೆ, ಮುಂದಿನ ವರ್ಷ ಮದುವೆಯಾಗಲಿರುವ ಹೆಣ್ಣು ಮಕ್ಕಳು ನಿರ್ದಿಷ್ಟ ಜಾಗದಲ್ಲಿ ಕುಳಿತು ಪರಸ್ಪರ ತಬ್ಬಿಕೊಂಡು ಅಳುತ್ತಾರೆ. ಅಳುವ ಸಂಪ್ರದಾಯದಲ್ಲಿ ಹಾಡು ನೃತ್ಯದೊಂದಿಗೆ ಊರ ಗಡಿವರೆಗೆ ಬಂದು ಕನ್ಯೆಯರ ಬೀಳ್ಕೊಡುಗೆ ನೀಡುತ್ತಾರೆ ಎಂಬುದು ವಿಶಿಷ್ಟವಾಗಿದೆ.
ಒಟ್ಟಾರೆಯಾಗಿ ಬಂಜಾರ ಸಮುದಾಯಕ್ಕೆ ದೀಪಾವಳಿ ಕೇವಲ ಬೆಳಕಿನ ಹಬ್ಬ ಮಾತ್ರವಲ್ಲ, ಬದಲಿಗೆ ಒಲವು ಚೆಲುವು, ಸ್ನೇಹ, ಪ್ರೀತಿ, ಭಾವನೆ, ಭ್ರಾತೃತ್ವ, ನೋವು, ನಲಿವು, ಸುಖ, ದುಃಖ, ಬಂಧ ಅನುಬಂಧಗಳ ಸಮ್ಮಿಲನ ಎಂತಲೇ ಹೇಳಬಹುದು.