Lakshmi puja rituals : ದೀಪಾವಳಿ ಹಬ್ಬ ಹತ್ತಿರ ಬರ್ತಿದೆ ಅಂದ್ರೆ ಸಾಕು ಎಲ್ಲರ ಮನೆಯಲ್ಲೂ ಒಂದು ಸಂಭ್ರಮ, ಸಡಗರ ಮನೆ ಮಾಡಿರುತ್ತೆ. ಅಕ್ಟೋಬರ್ ಅಥವಾ ನವೆಂಬರ್ ಬಂತೆಂದರೆ ಸಾಕು ಮನೆಗಳ ಶುಚಿಗೊಳಿಸುವುದು, ಹೊಸ ಬಟ್ಟೆಗಳ ಖರೀದಿ, ಸಿಹಿ ತಿಂಡಿಗಳ ತಯಾರಿಕೆ ಜೋರಾಗಿ ನಡೆಯುತ್ತದೆ. ಅದರಲ್ಲೂ ಈ ವರ್ಷ ನವೆಂಬರ್ 8ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಪ್ರತಿಯೊಬ್ಬರೂ ವಿಶೇಷ ಪೂಜೆ-ಪುನಸ್ಕಾರಗಳನ್ನು ಮಾಡುತ್ತೇವೆ. ಆದರೆ, ಅಷ್ಟೆಲ್ಲಾ ಭಕ್ತಿಯಿಂದ ಪೂಜೆ ಮಾಡಿದರೂ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ನಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಲು ಕಾರಣವಾಗಬಹುದು ಅಂತಾ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಹೇಳುತ್ತದೆ. ದೀಪಾವಳಿ ದಿನದಂದು ನಾವು ಯಾವೆಲ್ಲಾ ಪ್ರಮುಖ ತಪ್ಪುಗಳನ್ನು ಮಾಡಬಾರದು ಮತ್ತು ಹಬ್ಬದ ದಿನ ಯಾವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಖಂಡ ದೀಪವನ್ನು ಬಾಯಿಂದ ಊದಿ ಆರಿಸಬೇಡಿ
ಪೂಜಾ ಕೋಣೆಯಲ್ಲಿ ಇಡೀ ರಾತ್ರಿ ಅಥವಾ ಸಂಜೆ ಹಚ್ಚುವ 'ಅಖಂಡ ದೀಪ'ಕ್ಕೆ ನಮ್ಮ ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ. ಆದರೆ ಹಲವರು ದೀಪವನ್ನು ನಂದಿಸಲು ಅಥವಾ ಆರಿಸಲು ಬಾಯಿಂದ ಊದುವ ಅಭ್ಯಾಸ ಹೊಂದಿರುತ್ತಾರೆ. ಇದು ತೀರ ತಪ್ಪು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪವನ್ನು ಎಂದಿಗೂ ಬಾಯಿಂದ ಊದಿ ಆರಿಸಬಾರದು. ಒಂದು ವೇಳೆ ಅನಿವಾರ್ಯವಾಗಿ ದೀಪವನ್ನು ನಂದಿಸಬೇಕಾಗಿ ಬಂದರೆ, ಶುದ್ಧವಾದ ಹೂವಿನ ದಳಗಳನ್ನು ಬಳಸಿ ಎಚ್ಚರಿಕೆಯಿಂದ ಆರಿಸುವುದು ಉತ್ತಮ.
ಗಣೇಶ ಮತ್ತು ಲಕ್ಷ್ಮಿ ವಿಗ್ರಹಗಳ ದಿಕ್ಕು ಹಾಗೂ ಸ್ಥಾನ
ದೀಪಾವಳಿ ಪೂಜೆಯಲ್ಲಿ ಲಕ್ಷ್ಮಿ ಮತ್ತು ಗಣೇಶನ ಮೂರ್ತಿಗಳನ್ನು ಇಡುವಾಗ ಜಾಗರೂಕರಾಗಿರಬೇಕು. ಕೆಲವರು ಗಣೇಶನ ವಿಗ್ರಹವನ್ನು ಲಕ್ಷ್ಮಿ ದೇವಿಯ ಬಲಭಾಗದಲ್ಲಿ ಇಡುತ್ತಾರೆ. ಆದರೆ ಇದು ತಪ್ಪು. ಹಿಂದೂ ಧರ್ಮದ ಪ್ರಕಾರ ಗಣೇಶನನ್ನು ಯಾವಾಗಲೂ ತಾಯಿಯ ಎಡಭಾಗದಲ್ಲೇ ಪ್ರತಿಷ್ಠಾಪಿಸಬೇಕು. ಇನ್ನು ವಿಗ್ರಹಗಳ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರುವಂತೆ ನೋಡಿಕೊಳ್ಳುವುದು ವಾಸ್ತು ಪ್ರಕಾರ ಅತ್ಯಂತ ಶುಭ ಫಲವನ್ನು ನೀಡುತ್ತದೆ. ಪೂಜೆ ಮಾಡುವಾಗ ನಮ್ಮ ಮುಖವೂ ಕೂಡ ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಇರುವಂತೆ ಕುಳಿತುಕೊಳ್ಳಬೇಕು.
ಒಡೆದ ಅಥವಾ ಬಿರುಕು ಬಿಟ್ಟ ಮೂರ್ತಿಗಳ ಬಳಕೆ ಬೇಡ
ಮನೆಯಲ್ಲಿ ಹಳೆಯ ಮಣ್ಣಿನ ವಿಗ್ರಹಗಳಿದ್ದರೆ ಅಥವಾ ಅವುಗಳಿಗೆ ಎಲ್ಲಾದರೂ ಬಿರುಕು ಬಿಟ್ಟಿದ್ದರೆ ಅಂತಹ ಮೂರ್ತಿಗಳನ್ನು ದೀಪಾವಳಿ ಪೂಜೆಗೆ ಬಳಸಲೇಬಾರದು. ಹೋದ ವರ್ಷದ ಬಣ್ಣ ಮಾಸಿದ ಮೂರ್ತಿಗಳು ಹಾಗೂ ಒಣಗಿದ ಹೂವುಗಳನ್ನು ಪೂಜಾ ಸ್ಥಳದಿಂದ ಮೊದಲು ವಿಲೇವಾರಿ ಮಾಡಿ. ಒಂದು ವೇಳೆ ಬೆಳ್ಳಿ ಅಥವಾ ಹಿತ್ತಾಳೆಯ ಮೂರ್ತಿಗಳಾಗಿದ್ದರೆ ಅವುಗಳಿಗೆ ಪಂಚಾಮೃತ ಅಭಿಷೇಕ ಮಾಡಿ ಮತ್ತೆ ಬಳಸಬಹುದು. ಆದರೆ ಮಣ್ಣಿನ ವಿಗ್ರಹಗಳು ಹಾನಿಯಾಗಿದ್ದರೆ ಅವುಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸುವುದು ಒಳ್ಳೆಯದು.
ಮನೆಯ ಮುಖ್ಯ ದ್ವಾರ ಕತ್ತಲೆಯಲ್ಲಿರಬಾರದು
ಅಮಾವಾಸ್ಯೆಯ ಕತ್ತಲು ಇರುವ ಈ ರಾತ್ರಿಯಲ್ಲಿ ಲಕ್ಷ್ಮಿ ದೇವಿಯು ಸ್ವಚ್ಛ ಹಾಗೂ ಹಣತೆಗಳ ಬೆಳಕಿನಿಂದ ಪ್ರಕಾಶಿಸುವ ಮನೆಗೆ ಮಾತ್ರ ಕಾಲಿಡುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ದೀಪಾವಳಿ ದಿನದಂದು ಮನೆಯ ಮುಖ್ಯ ಬಾಗಿಲನ್ನು ಚೆನ್ನಾಗಿ ಗುಡಿಸಿ, ಮಾವು ಅಥವಾ ಅಶೋಕ ಎಲೆಗಳ ತೋರಣ ಕಟ್ಟಿ, ಸುಂದರವಾದ ರಂಗೋಲಿ ಬಿಡಿಸಬೇಕು. ಇದರೊಂದಿಗೆ ಬಾಗಿಲಿನ ಎರಡೂ ಕಡೆ ಹಣತೆಗಳನ್ನು ಹಚ್ಚಿ ಬೆಳಕು ಚೆಲ್ಲುವ ಮೂಲಕ ಧನಾತ್ಮಕ ಶಕ್ತಿಯನ್ನು ಮನೆಗೆ ಸ್ವಾಗತಿಸಬೇಕು.
ಕಪ್ಪು ಬಣ್ಣದ ಬಟ್ಟೆಗಳ ಧರಿಸುವಿಕೆ ಹಾಗೂ ಪಾತ್ರೆಗಳ ಆಯ್ಕೆ
ಹಬ್ಬದ ದಿನ ಕಪ್ಪು, ಗಾಢ ನೀಲಿ ಅಥವಾ ಕಂದು ಬಣ್ಣದ ಬಟ್ಟೆಗಳನ್ನು ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರ ಬದಲಾಗಿ ಕೆಂಪು, ಹಳದಿ, ಕಿತ್ತಳೆ ಅಥವಾ ಗುಲಾಬಿ ಬಣ್ಣದಂತಹ ಮಂಗಳಕರ ಹಾಗೂ ಪ್ರಕಾಶಮಾನವಾದ ಬಟ್ಟೆಗಳನ್ನು ಧರಿಸಿದರೆ ಮನಸ್ಸಿಗೂ ಉಲ್ಲಾಸ ಸಿಗುತ್ತದೆ. ಹಾಗೆಯೇ ನೈವೇದ್ಯ ಇಡಲು ಅಥವಾ ದೀಪ ಹಚ್ಚಲು ಕಬ್ಬಿಣ, ಉಕ್ಕು ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೆ, ಸಾಧ್ಯವಾದಷ್ಟು ತಾಮ್ರ, ಪಿತ್ತಾಳೆ ಅಥವಾ ಮಣ್ಣಿನ ಸಾಂಪ್ರದಾಯಿಕ ಪಾತ್ರೆಗಳನ್ನೇ ಬಳಸುವುದು ಶ್ರೇಷ್ಠ.
ಒಟ್ಟಾರೆಯಾಗಿ, ಈ ಮೇಲಿನ ಸಣ್ಣಪುಟ್ಟ ಎಚ್ಚರಿಕೆಗಳನ್ನು ವಹಿಸುವುದರಿಂದ ತಾಯಿ ಲಕ್ಷ್ಮಿ ಮತ್ತು ಕುಬೇರನ ಕೃಪೆ ನಿಮ್ಮ ಮೇಲಿರುತ್ತದೆ. ದಾರಿದ್ರ್ಯ ನಿಮ್ಮ ಹತ್ತಿರವೂ ಸುಳಿಯದಂತೆ ಈ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ. ಅಷ್ಟೇ ಅಲ್ಲದೆ ಪಟಾಕಿ ಹೊಡೆಯುವಾಗ ಸುರಕ್ಷತೆಯ ಕಡೆ ಗಮನ ನೀಡಿ.