SOCIAL MEDIA

Newsletter

PARTNER SITES
Select Language Select State

ಉತ್ತರಾಖಂಡ ಹೆಲಿಕಾಪ್ಟರ್‌ ದುರಂತ : 5 ಅಮಾಯಕ ಜೀವ ಬಲಿಪಡೆದ ಘಟನೆಗೆ ಕಾರಣವೇನು ಗೊತ್ತೆ?

ಉತ್ತರಾಖಂಡದ ಪವಿತ್ರ ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ಐವರು ಪ್ರವಾಸಿಗರ ಪಾಲಿಗೆ ಭೀಕರ ಹಿಮಪಾತವೇ ಮೃತ್ಯುವಾಗಿ ಎರಗಿದೆ.. ಬದರಿನಾಥ ಧಾಮದ ದರ್ಶನ ಮುಗಿಸಿ ಡೆಹ್ರಾಡೂನ್‌ಗೆ ಮರಳುತ್ತಿದ್ದ ಹೆಲಿಕಾಪ್ಟರ್, ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪದ 'ಹಾಥಿ ಪರ್ವತ' ಶ್ರೇಣಿಯ ಬಳಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.. ಹಾಗಿದ್ರೆ ಈ ದುರಂತಕ್ಕೆ ಅಸಲಿ ಕಾಣವೇನು..? ಸಂಪೂರ್ಣ ಸುದ್ದಿ ಇಲ್ಲಿದೆ..

Written By Krishna NK
Published: Oct 30, 2026, 07:49 PM IST | Updated: Oct 30, 2026, 08:03 PM IST
Image Credit: Uttarakhand helicopter crash
Join

ಬೆಂಗಳೂರು : ಬದರಿನಾಥ ಹೆಲಿಕಾಪ್ಟರ್‌ ದುರಂತದಲ್ಲಿ ಬೆಂಗಳೂರು ಸಿಸಿಬಿಯ ದಕ್ಷ ಇನ್ಸ್‌ಪೆಕ್ಟರ್ ಅರುಣ್ ಸಾಳಂಕೆ, ಇಬ್ಬರು ಹಿರಿಯ ವಕೀಲರು ಸೇರಿದಂತೆ ಐವರು ಸ್ನೇಹಿತರು ಪ್ರಾಣ ಕಳೆದುಕೊಂಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.. ದಟ್ಟ ಹಿಮಪಾತ, ಕಡಿದಾದ ಕಣಿವೆಗಳ ನಡುವೆ ಭಾರತೀಯ ಸೇನೆ, ಎಸ್‌ಡಿಆರ್‌ಎಫ್ ಪಡೆಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.. ಬದರಿನಾಥ ಯಾತ್ರೆಗೆ ಹೋಗಿದ್ದವರ ಕಣ್ಮರೆಯಾಗಿದ್ದೇಕೆ?.. ಟ್ರಾನ್ಸ್ ಭಾರತ್ ಸಂಸ್ಥೆಯ ಹೆಲಿಕಾಪ್ಟರ್ ಪತನದ ಹಿಂದಿನ ಅಸಲಿ ಕಾರಣವೇನು?.. ಉತ್ತರಾಖಂಡ ಹೆಲಿಕಾಪ್ಟರ್ ದುರಂತದ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ..

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. 'ಟ್ರಾನ್ಸ್ ಭಾರತ್ ಏವಿಯೇಷನ್' ಸಂಸ್ಥೆಗೆ ಸೇರಿದ VT-HCX ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ತೆರಳುತ್ತಿದ್ದಾಗ, ಮಧ್ಯಾಹ್ನ 1.14ಕ್ಕೆ ಸಂಪರ್ಕ ಕಳೆದುಕೊಂಡಿತ್ತು. ನಂತರ ಜೋಶಿಮಠದ ಚಾಯಿ ಗ್ರಾಮದ ಹಾಥಿ ಪರ್ವತ ಪ್ರದೇಶದ ಕಣಿವೆಯಲ್ಲಿ ಚಾಪರ್ ಪತನಗೊಂಡಿರುವುದು ಪತ್ತೆಯಾಗಿದೆ. ಅಪಘಾತದಲ್ಲಿ ಬೆಂಗಳೂರು ಮೂಲದ ಐವರು ಭಕ್ತರು ಹಾಗೂ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.

ಈ ದುರಂತದಲ್ಲಿ ಬೆಂಗಳೂರಿನ ಪ್ರಮುಖ ಅಧಿಕಾರಿ ಮತ್ತು ವಕೀಲರು ಪ್ರಾಣ ಕಳೆದುಕೊಂಡಿರುವುದು ತೀವ್ರ ಆಘಾತ ತಂದಿದೆ. 2007ನೇ ಬ್ಯಾಚ್‌ನ ಅಧಿಕಾರಿಯಾಗಿದ್ದ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳಂಕೆ ತಮ್ಮ ಆಪ್ತ ಸ್ನೇಹಿತರಾದ ವಕೀಲ ಸುಧೀರ್ ಕೆ., ಶಂಕರೇಗೌಡ, ಎಚ್.ಎಸ್. ನಟರಾಜ್ ಮತ್ತು ಪ್ರತಾಪ್ ಜೊತೆಗೂಡಿ ಚಾರ್‌ಧಾಮ್ ಯಾತ್ರೆಗೆ ತೆರಳಿದ್ದರು. ರಾಮಮೂರ್ತಿನಗರದಲ್ಲಿ ವಾಸವಿದ್ದ ಅರುಣ್ ಸಾಳಂಕೆ ನಗರದ ಹಲವು ಪ್ರಮುಖ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕುಟುಂಬಸ್ಥರು ಮತ್ತು ಸ್ನೇಹಿತರು ಈ ಕರಾಳ ಸುದ್ದಿಯನ್ನು ಕೇಳಿ ಕಣ್ಣೀರಿಡುತ್ತಿದ್ದಾರೆ.

ದುರಂತ ಸಂಭವಿಸಿದ ಜೋಶಿಮಠ ಮತ್ತು ಹಾಥಿ ಪರ್ವತ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ತೀವ್ರ ಹಿಮಪಾತವಾಗುತ್ತಿದ್ದು, ಶೂನ್ಯ ದೃಷ್ಟಿಗೋಚರತೆ (Zero Visibility) ಉಂಟಾಗಿದೆ. ಹೀಗಾಗಿ ಹೆಲಿಕಾಪ್ಟರ್ ಪತನದ ಜಾಗಕ್ಕೆ ತಲುಪಲು ರಕ್ಷಣಾ ತಂಡಗಳು ಕಡಿದಾದ ಬಂಡೆಗಳ ನಡುವೆ ಹರಸಾಹಸ ಪಡುತ್ತಿವೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಅಪಘಾತದ ತೀವ್ರತೆ ನೋಡಿದರೆ ಯಾರೂ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಗಂಭೀರತೆ ಅರಿತ ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA), ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಪ್ರತಿಕೂಲ ಹವಾಮಾನವಿದ್ದರೂ ಟೇಕಾಫ್‌ಗೆ ಅನುಮತಿ ನೀಡಿದ್ದು ಯಾರು?.. ಹಿಮಪಾತದ ಸಮಯದಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಹಿಮಾಲಯದ ಕಣಿವೆಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಚಾಪರ್ ದುರಂತಗಳು ಯಾತ್ರಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಸ್ನೇಹಿತರೊಂದಿಗೆ ನಗುನಗುತ್ತಾ ಬದರಿನಾಥ ದರ್ಶನ ಪಡೆದು ಪುನೀತರಾಗಿದ್ದ ಬೆಂಗಳೂರಿನ ಈ ಐವರು, ಇಷ್ಟು ಬೇಗ ಹೆಣವಾಗಿ ಮರಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇನ್ಸ್‌ಪೆಕ್ಟರ್ ಅರುಣ್ ಸಾಳಂಕೆ ಅವರ ರಾಮಮೂರ್ತಿನಗರದ ನಿವಾಸ ಹಾಗೂ ವಕೀಲರ ಮನೆಗಳಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಕರ್ನಾಟಕ ಸರ್ಕಾರವು ಉತ್ತರಾಖಂಡ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ರಕ್ಷಣಾ ಪಡೆಗಳು ವಶಕ್ಕೆ ಪಡೆದ ನಂತರ ಮರಣೋತ್ತರ ಪರೀಕ್ಷೆ ಮುಗಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಒಟ್ಟಿನಲ್ಲಿ, ಪುಣ್ಯಕ್ಷೇತ್ರ ಬದರಿನಾಥನ ದರ್ಶನ ಮುಗಿಸಿ ಸಂಭ್ರಮದಿಂದ ತವರಿಗೆ ಮರಳಬೇಕಿದ್ದ ಬೆಂಗಳೂರಿನ ಪ್ರತಿಭಾವಂತ ಸಿಸಿಬಿ ಅಧಿಕಾರಿ ಮತ್ತು ನಾಲ್ವರು ವಕೀಲರು ಹಿಮಾಲಯದ ಹಿಮದ ಕಣಿವೆಯಲ್ಲಿ ಶಾಶ್ವತವಾಗಿ ಕಣ್ಮರೆಯಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಪ್ರತಿಕೂಲ ಹವಾಮಾನ, ಭೀಕರ ಹಿಮಪಾತದ ನಡುವೆಯೂ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಹೇಗೆ ಅನುಮತಿ ಸಿಗುತ್ತದೆ?.. ಯಾತ್ರಿಕರ ಜೀವಕ್ಕೆ ಬೆಲೆಯೇ ಇಲ್ಲವೇ ಎಂಬ ಆಕ್ರೋಶದ ಪ್ರಶ್ನೆಗಳು ಈಗ ಎದ್ದಿವೆ. ಕರ್ತವ್ಯನಿಷ್ಠ ಅಧಿಕಾರಿ ಅರುಣ್ ಸಾಳಂಕೆ ಸೇರಿದಂತೆ ಪ್ರಾಣ ಕಳೆದುಕೊಂಡ ಎಲ್ಲಾ ಬೆಂಗಳೂರಿಗರಿಗೆ ದೇವರು ಸದ್ಗತಿ ಕರುಣಿಸಲಿ, ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.

Add Zee News as a Preferred Source

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES