ಭಾರತದಲ್ಲಿ ತಂಪು ಪಾನೀಯ ಅಂದ ತಕ್ಷಣ ಕಣ್ಣುಮುಚ್ಚಿ ನೆನಪಾಗುವ ಹೆಸರು 'ಥಮ್ಸ್ ಅಪ್'. ಗಾಜಿನ ಬಾಟಲಿ ತೆರೆದಾಗ ಬರುವ ಆ ಗಟ್ಟಿಯಾದ ಫಿಝ್, ಗಂಟಲಿಗೆ ಇಳಿಯುತ್ತಿದ್ದಂತೆ ಸಿಗುವ ಆ ಖಾರ ಹಾಗೂ ದಾಲ್ಚಿನ್ನಿ-ಏಲಕ್ಕಿಯ ಘಾಟು... ಇದು ಕೇವಲ ಒಂದು ಸಾಫ್ಟ್ ಡ್ರಿಂಕ್ ಅಲ್ಲ, ಭಾರತೀಯರ ಪಾಲಿಗೆ ಒಂದು ಎಮೋಷನ್. ಅಮೆರಿಕದ ದೈತ್ಯ ಕಂಪನಿಗಳೇ ಬಂದು ಅಪ್ಪಳಿಸಿದರೂ, ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸಾಮ್ರಾಜ್ಯವನ್ನು ಅಲುಗಾಡಿಸಲು ಬಿಡದ ಈ ಬ್ರ್ಯಾಂಡ್‌ನ ರೋಚಕ ಇತಿಹಾಸ ಮತ್ತು ಯಶಸ್ಸಿನ ಕಥೆ ಇಲ್ಲಿದೆ.
ಸವಾಲಿನಿಂದ ಹುಟ್ಟಿದ 'ಸ್ವದೇಶಿ' ಕೋಲಾ
ಈ ಕಥೆ ಶುರುವಾಗುವುದು 1977ರಲ್ಲಿ. ಆಗಿನ ಭಾರತ ಸರ್ಕಾರ ದೇಶೀಯ ಉದ್ದಿಮೆಗಳಿಗೆ ಒತ್ತು ನೀಡಲು ಒಂದು ಕಠಿಣ ನಿಯಮ ತಂದಿತು. ಅದರಂತೆ ವಿದೇಶಿ ಕಂಪನಿಗಳು ತಮ್ಮ ಸೂತ್ರವನ್ನು (ಫಾರ್ಮುಲಾ) ಬಹಿರಂಗಪಡಿಸಬೇಕು ಮತ್ತು ಶೇ. 60ರಷ್ಟು ಷೇರುಗಳನ್ನು ಭಾರತೀಯ ಪಾಲುದಾರರಿಗೆ ನೀಡಬೇಕಿತ್ತು. ಇದಕ್ಕೆ ಒಪ್ಪದ ಅಮೆರಿಕದ 'ಕೋಕಾ-ಕೋಲಾ' ಕಂಪನಿ ಭಾರತದಿಂದ ಕಾಲು ಕೀಳಬೇಕಾಯಿತು.
ಕೋಕಾ-ಕೋಲಾ ಹೋದ ಮೇಲೆ ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಯಿತು. ಇದನ್ನು ಸರಿಯಾಗಿ ಬಳಸಿಕೊಂಡವರು ಪಾರ್ಲೆ ಕಂಪನಿಯ ರಮೇಶ್ ಚೌಹಾಣ್. ಈಗಾಗಲೇ 'ಲಿಮ್ಕಾ' ಮತ್ತು 'ಗೋಲ್ಡ್ ಸ್ಪಾಟ್' ಮೂಲಕ ಜನಪ್ರಿಯರಾಗಿದ್ದ ರಮೇಶ್, ಭಾರತೀಯರಿಗಾಗಿಯೇ ಒಂದು ಗಟ್ಟಿ ಕೋಲಾ ತಯಾರಿಸಲು ನಿರ್ಧರಿಸಿದರು.
ಅವರು ಕೇವಲ ವಿದೇಶಿ ರುಚಿಯನ್ನು ಅನುಕರಿಸಲಿಲ್ಲ. ಭಾರತದ ವಾತಾವರಣ, ಜನರ ಅಭಿರುಚಿಗೆ ತಕ್ಕಂತೆ ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿಯಂತಹ ಮಸಾಲೆ ಪದಾರ್ಥಗಳನ್ನು ಬಳಸಿ ಒಂದು ಹೊಸ ಫಾರ್ಮುಲಾ ಸಿದ್ಧಪಡಿಸಿದರು. ಭಾರತದಲ್ಲಿ ತಂಪು ಪಾನೀಯಗಳನ್ನು ಐಸ್‌ನಲ್ಲಿ ಸರಿಯಾಗಿ ಇಡದಿದ್ದರೂ, ಬೀದಿ ವ್ಯಾಪಾರಿಗಳು ಮಾರುವಾಗಲೂ ಅದರ 'ಫಿಝ್' (ಕಾರ್ಬೊನೇಷನ್) ಕಡಿಮೆಯಾಗಬಾರದು ಎಂಬುದು ಅವರ ಆಲೋಚನೆಯಾಗಿತ್ತು. ಹೀಗೆ ಹುಟ್ಟಿದ್ದೇ 'ಥಂಬ್ಸ್ ಅಪ್'. ಆದರೆ, ಹೆಸರಿಗೆ ವಿಶಿಷ್ಟ ಸ್ಪರ್ಶ ನೀಡಲು ಕೊನೆಯಲ್ಲಿ 'b' ಅಕ್ಷರವನ್ನು ತೆಗೆದು 'Thums Up' ಎಂದು ನಾಮಕರಣ ಮಾಡಲಾಯಿತು.
'ಮಹಾಕೋಲಾ' ತಂದ ಕ್ರಾಂತಿ ಮತ್ತು 'ಕೋಲಾ ಯುದ್ಧ'
80ರ ದಶಕದಲ್ಲಿ ಥಮ್ಸ್ ಅಪ್ ಮಾರುಕಟ್ಟೆಯನ್ನು ಆಳಲು ಶುರುಮಾಡಿತು. ಕ್ಯಾಂಪಾ ಕೋಲಾ, ಡಬಲ್ ಸೆವೆನ್, ಡ್ಯೂಕ್ಸ್‌ನಂತಹ ಸಾಲು ಸಾಲು ಬ್ರ್ಯಾಂಡ್‌ಗಳು ಬಂದರೂ ಥಮ್ಸ್ ಅಪ್ ಮುಂದೆ ನಿಲ್ಲಲಾಗಲಿಲ್ಲ. ರಮೇಶ್ ಚೌಹಾಣ್ ಅವರು 250 ಮಿಲಿ ಬಾಟಲಿಯ ಬದಲಿಗೆ 300 ಮಿಲಿಯ 'ಮಹಾಕೋಲಾ' ಬಾಟಲಿ ಪರಿಚಯಿಸಿದರು. ಸಣ್ಣಪುಟ್ಟ ಊರುಗಳಲ್ಲಿ ಜನ ಅಂಗಡಿಗೆ ಹೋಗಿ 'ಥಮ್ಸ್ ಅಪ್' ಕೇಳುವ ಬದಲಿಗೆ "ಒಂದು ಮಹಾಕೋಲಾ ಕೊಡಿ" ಎಂದೇ ಕೇಳುವಷ್ಟರ ಮಟ್ಟಿಗೆ ಇದು ಹಿಟ್ ಆಯಿತು.
ಆದರೆ, 1991ರಲ್ಲಿ ಭಾರತದ ಆರ್ಥಿಕ ಉದಾರೀಕರಣ ನೀತಿ ಜಾರಿಯಾದಾಗ ಕಥೆ ಬದಲಾಯಿತು. 'ಪೆಪ್ಸಿ' ಭಾರತಕ್ಕೆ ಲಗ್ಗೆ ಇಟ್ಟಿತು. ಜೂಹಿ ಚಾವ್ಲಾರಂತಹ ಬಾಲಿವುಡ್ ತಾರೆಯರನ್ನು ಬಳಸಿ ಪೆಪ್ಸಿ ಜಾಹೀರಾತು ನೀಡಿದರೆ, ಥಮ್ಸ್ ಅಪ್ ಕ್ರಿಕೆಟ್ ಪ್ರಾಯೋಜಕತ್ವದ ಮೂಲಕ ಕೌಂಟರ್ ನೀಡಿತು. 1993ರಲ್ಲಿ ಕೋಕಾ-ಕೋಲಾ ಮತ್ತೆ ಭಾರತಕ್ಕೆ ಮರುಪ್ರವೇಶ ಗಿಟ್ಟಿಸಿಕೊಂಡಿತು. ಮೂರು ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತು.
1987 :: Imran Khan and Sunil Gavaskar In Thums Up Advertisement #SunilGavaskar #ImranKhan @ImranKhanPTI 💕👇 pic.twitter.com/mxWNCZtcVK
— Mohammed Shaker ( شاکیر ) (@mdshaker179) September 18, 2021
ಅಂತಿಮವಾಗಿ, ಕೋಕಾ-ಕೋಲಾ ಕಂಪನಿಯು ಪಾರ್ಲೆ ಒಡೆತನದಲ್ಲಿದ್ದ ಥಮ್ಸ್ ಅಪ್, ಲಿಮ್ಕಾ ಮತ್ತು ಗೋಲ್ಡ್ ಸ್ಪಾಟ್‌ಗಳನ್ನು 60 ಮಿಲಿಯನ್ ಡಾಲರ್‌ಗೆ (ಅಂದಾಜು 180 ಕೋಟಿ ರೂ.) ಖರೀದಿಸಿತು. ಕೋಕಾ-ಕೋಲಾಗೆ ಮಾರಾಟವಾಗುವಾಗ ಭಾರತದ ಕೋಲಾ ಮಾರುಕಟ್ಟೆಯಲ್ಲಿ ಥಮ್ಸ್ ಅಪ್ ಶೇಕಡಾ 85ರಷ್ಟು ಭರ್ಜರಿ ಪಾಲು ಹೊಂದಿತ್ತು!
ಕೋಕಾ-ಕೋಲಾ ಕಂಪನಿಯು ತನ್ನ ಸ್ವಂತ ಬ್ರ್ಯಾಂಡ್ ಅನ್ನು ಬೆಳೆಸಲು ಥಮ್ಸ್ ಅಪ್ ಅನ್ನು ಮುಚ್ಚಿಹಾಕಲು ಯತ್ನಿಸಿತು ಎಂಬ ಮಾತಿದೆ. ಆದರೆ, ಭಾರತೀಯ ಗ್ರಾಹಕರು ಥಮ್ಸ್ ಅಪ್ ಬಿಟ್ಟು ಬೇರೆ ಕೋಲಾ ಕುಡಿಯಲು ಒಪ್ಪಲಿಲ್ಲ. ಕೊನೆಗೆ ಕೋಕಾ-ಕೋಲಾ ತನ್ನ ನಿರ್ಧಾರ ಬದಲಿಸಿ ಥಮ್ಸ್ ಅಪ್‌ಗೆ ಹೆಚ್ಚು ಪ್ರಚಾರ ನೀಡಬೇಕಾಯಿತು. 2021ರ ವೇಳೆಗೆ ಥಮ್ಸ್ ಅಪ್ 'ಒಂದು ಬಿಲಿಯನ್ ಡಾಲರ್' ಮೌಲ್ಯದ ಬ್ರ್ಯಾಂಡ್ ಆಗಿ ಬೆಳೆದು ನಿಂತಿತು.
ಥಮ್ಸ್ ಅಪ್ ಇತರ ಕೋಲಾಗಳಿಗಿಂತ ಭಿನ್ನವಾಗಿರಲು ಪ್ರಮುಖ ಕಾರಣ ಅದರ 'ಸ್ಟ್ರಾಂಗ್' ರುಚಿ ಮತ್ತು ಹೆಚ್ಚಿನ ಕೆಫೀನ್ ಅಂಶ.
ಶಕ್ತಿ:44 Kcal (ಪ್ರತಿ 100 ಮಿಲಿಗೆ)
ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ: 11 ಗ್ರಾಂ
ಕೆಫೀನ್ : 13 ಮಿಗ್ರಾಂ
ಸೋಡಿಯಂ: 7 ಮಿಗ್ರಾಂ
ಕೊಬ್ಬು ಮತ್ತು ಪ್ರೋಟೀನ್: 0 ಗ್ರಾಂ
ಸಾಮಾನ್ಯ ಕೋಕಾ-ಕೋಲಾದಲ್ಲಿ (100 ಮಿಲಿಗೆ 9 ಮಿಗ್ರಾಂ) ಮತ್ತು ಪೆಪ್ಸಿಯಲ್ಲಿ (100 ಮಿಲಿಗೆ 10 ಮಿಗ್ರಾಂ) ಕೆಫೀನ್ ಇದ್ದರೆ, ಥಮ್ಸ್ ಅಪ್‌ನಲ್ಲಿ 13 ಮಿಗ್ರಾಂ ಕೆಫೀನ್ ಇದೆ. ಇದು ಕುಡಿದ ತಕ್ಷಣ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ. ಜೊತೆಗೆ ಇದರಲ್ಲಿರುವ ಫಾಸ್ಪರಿಕ್ ಆಮ್ಲ (338) ಪಾನೀಯಕ್ಕೆ ಆಮ್ಲೀಯ ರುಚಿ ನೀಡಿದರೆ, ಕ್ಯಾರಮೆಲ್ ಬಣ್ಣ (150d) ಅದಕ್ಕೆ ಗಾಢ ಕಂದು ಬಣ್ಣವನ್ನು ನೀಡುತ್ತದೆ.
ಇಂದು 200 ಮಿಲಿ ಗಾಜಿನ ಬಾಟಲಿಯಿಂದ ಹಿಡಿದು 2 ಲೀಟರ್ ಪಿಇಟಿ ಬಾಟಲಿಗಳವರೆಗೆ ವಿಭಿನ್ನ ಅಳತೆಯಲ್ಲಿ ಇದು ಲಭ್ಯವಿದೆ. 2020ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಇದರ ಸರಾಸರಿ ಬೆಲೆ ಲೀಟರ್‌ಗೆ 35.5 ರೂಪಾಯಿಗಳಷ್ಟಿತ್ತು, ಇದು ಸಾಮಾನ್ಯ ಜನರಿಗೆ ಅತ್ಯಂತ ಕೈಗೆಟುಕುವ ದರವಾಗಿದೆ.
ಕೇವಲ ಪಾನೀಯವಲ್ಲ, ಸಾಹಸದ ಸಂಕೇತ
ಇಂದು ಅಮೆರಿಕದ ಅಟ್ಲಾಂಟಾದಲ್ಲಿರುವ ಕೋಕಾ-ಕೋಲಾ ಕಂಪನಿಯ ಒಡೆತನದಲ್ಲಿದ್ದರೂ, ಥಮ್ಸ್ ಅಪ್ ತನ್ನ ಭಾರತೀಯ ತಂಟೆಯ ಬ್ರ್ಯಾಂಡ್ ಇಮೇಜ್ ಅನ್ನು ಬಿಟ್ಟುಕೊಟ್ಟಿಲ್ಲ. "ಟೇಸ್ಟ್ ದಿ ಥಂಡರ್" ಮತ್ತು "ಆಜ್ ಕುಚ್ ತೂಫಾನಿ ಕರ್ತೆ ಹೈ" ಎಂಬ ಅಡ್ವೆಂಚರ್ ಪ್ರಧಾನ ಜಾಹೀರಾತುಗಳ ಮೂಲಕ ಇದು ಯುವಜನರನ್ನು ಆಕರ್ಷಿಸುತ್ತಿದೆ. ಭಾರತದ ಶೇ. 42ರಷ್ಟು ಏರೇಟೆಡ್ ವಾಟರ್ ಮಾರುಕಟ್ಟೆಯನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಈ 'ಸ್ವದೇಶಿ' ಕೋಲಾ, ಜಾಗತಿಕ ದೈತ್ಯರಿಗೆ ಭಾರತೀಯ ಮಾರುಕಟ್ಟೆಯ ತಾಕತ್ತು ಏನೆಂಬುದನ್ನು ತೋರಿಸಿಕೊಟ್ಟ ಸಾರ್ವಕಾಲಿಕ ಯಶಸ್ಸಿನ ಕಥೆಯಾಗಿದೆ.