SOCIAL MEDIA

Newsletter

PARTNER SITES
Select Language Select State

ಸರ್ಕಾರಿ ನೌಕರರಿಗೆ ʼಸುಪ್ರೀಂʼ ಶಾಕ್: 48 ಗಂಟೆ ಜೈಲಿನಲ್ಲಿದ್ದರೆ ಸ್ವಯಂ ಅಮಾನತು!

ಸರ್ಕಾರಿ ನೌಕರರು ಯಾವುದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸ್ ಅಥವಾ ನ್ಯಾಯಾಂಗ ಕಸ್ಟಡಿಯಲ್ಲಿದ್ದರೆ, ಅವರನ್ನು ಪ್ರತ್ಯೇಕ ಆದೇಶವಿಲ್ಲದೆಯೇ ಅಮಾನತುಗೊಂಡಂತೆ ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನ 'Deemed Suspension' ಎಂದು ಕರೆಯಲಾಗುತ್ತದೆ. ಬಿಹಾರದ ಲಂಚ ಪ್ರಕರಣದ ವಿಚಾರಣೆ ವೇಳೆ ಈ ಮಹತ್ವದ ವಿಚಾರ ತಿಳಿಸಿರುವ ನ್ಯಾಯಾಲಯ, ಅಮಾನತು ತೆರವುಗೊಳಿಸಿ ನೌಕರನನ್ನ ಮತ್ತೆ ಅದೇ ಹುದ್ದೆಗೆ ನೇಮಿಸಿದ ಕ್ರಮದ ಬಗ್ಗೆ ಬಿಹಾರ ಸರ್ಕಾರದಿಂದ ಪರಿಶೀಲನೆಗೆ ಸೂಚಿಸಿದೆ.

Written By Puttaraj K Alur
Published: Nov 12, 2026, 19:28 IST | Updated: Nov 12, 2026, 19:56 IST
Image Credit: Supreme Court
Join

Supreme Court Ruling: ಸರ್ಕಾರಿ ಉದ್ಯೋಗ ಎಂದರೆ ಜೀವನದಲ್ಲಿ ಭದ್ರತೆ ಇದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಸರ್ಕಾರಿ ನೌಕರರು ಕೆಲವು ಸಂದರ್ಭಗಳಲ್ಲಿ ಕಾನೂನು ಕ್ರಮಗಳಿಗೆ ಒಳಗಾದರೆ ಅವರ ಉದ್ಯೋಗದ ಮೇಲೂ ಪರಿಣಾಮ ಉಂಟಾಗಬಹುದು. ಇದೀಗ ಸರ್ಕಾರಿ ನೌಕರರ ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಯಾವುದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿರುವ ಸರ್ಕಾರಿ ನೌಕರರನ್ನ ಪ್ರತ್ಯೇಕ ಅಮಾನತು ಆದೇಶವಿಲ್ಲದೆಯೇ ಅಮಾನತುಗೊಂಡವರು ಎಂದು ಪರಿಗಣಿಸಬೇಕೆಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನ್ಮೋಹನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಮಹತ್ವದ ವಿಚಾರವನ್ನ ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರು 48 ಗಂಟೆಗಳಿಗಿಂತ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದರೆ, ಅನ್ವಯವಾಗುವ ಸೇವಾ ನಿಯಮಗಳ ಪ್ರಕಾರ ಅವರನ್ನ ಸ್ವಯಂಚಾಲಿತವಾಗಿ ಅಮಾನತುಗೊಂಡಂತೆ ಪರಿಗಣಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ಅಮಾನತು ಆದೇಶ ಹೊರಡಿಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ತಿಳಿಸಿದೆ.

ಏನಿದು 48 ಗಂಟೆಗಳ ಅಮಾನತು ನಿಯಮ?

ಸರ್ಕಾರಿ ನೌಕರರೊಬ್ಬರು ಯಾವುದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದಲ್ಲಿದ್ದರೆ, ಅವರನ್ನ ಅಮಾನತುಗೊಂಡಂತೆ ಪರಿಗಣಿಸುವ ನಿಯಮವಿದೆ. ಇದನ್ನ ಇಂಗ್ಲಿಷ್‌ನಲ್ಲಿ 'Deemed Suspension' ಎಂದು ಕರೆಯಲಾಗುತ್ತದೆ. ಈ ನಿಯಮದ ವಿಶೇಷತೆ ಎಂದರೆ, ನೌಕರನ ಅಮಾನತಿಗಾಗಿ ಇಲಾಖೆಯು ಪ್ರತ್ಯೇಕವಾಗಿ ಆದೇಶ ಹೊರಡಿಸದಿದ್ದರೂ, ನಿಗದಿತ ಅವಧಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದ ಸಂದರ್ಭದಲ್ಲಿ ನಿಯಮದಡಿ ಅಮಾನತು ಜಾರಿಗೆ ಬರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟನೆ ನೀಡಿದೆ.

ಏನಿದು ಸುಪ್ರೀಂಕೋರ್ಟ್ ಮುಂದೆ ಬಂದ ಪ್ರಕರಣ?

ಬಿಹಾರದ ಸಮಸ್ತಿಪುರ ಸದರ್ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಲಂಚದ ಆರೋಪದಡಿ ಬಂಧನಕ್ಕೊಳಗಾಗಿದ್ದರು. ತಮ್ಮ ವೇತನವನ್ನ ಬಿಡುಗಡೆ ಮಾಡಲು 4,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಅವರ ಮೇಲಿತ್ತು. ಈ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಅವರು ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಸೆಷನ್ಸ್ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಆದರೆ ಈ ಜಾಮೀನು ಆದೇಶವನ್ನ ಪ್ರಶ್ನಿಸಿ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯ ನೀಡಿದ್ದ ಜಾಮೀನನ್ನ ರದ್ದುಗೊಳಿಸಿ, ಆರೋಪಿಯ ಮತ್ತೆ ಕಸ್ಟಡಿಗೆ ಒಪ್ಪಿಸುವಂತೆ ಆದೇಶಿಸಿತ್ತು. ಹೈಕೋರ್ಟ್‌ನ ಈ ಆದೇಶವನ್ನ ಪ್ರಶ್ನಿಸಿ ಸಂಬಂಧಪಟ್ಟ ಉದ್ಯೋಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪ್ರಕರಣವು ದೇಶದ ಉನ್ನತ ನ್ಯಾಯಾಲಯದ ವಿಚಾರಣೆಗೆ ಬಂದಿತ್ತು.

ಸೆಷನ್ಸ್ ಕೋರ್ಟ್ ಜಾಮೀನು ಮರುಸ್ಥಾಪಿಸಿದ ಸುಪ್ರೀಂಕೋರ್ಟ್

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪಾಟ್ನಾ ಹೈಕೋರ್ಟ್ ನೀಡಿದ್ದ ಆದೇಶವನ್ನ ರದ್ದುಗೊಳಿಸಿತು. ಅಲ್ಲದೆ ಸೆಷನ್ಸ್ ನ್ಯಾಯಾಲಯ ಈ ಹಿಂದೆ ನೀಡಿದ್ದ ಜಾಮೀನನ್ನ ಮರುಸ್ಥಾಪಿಸಿತು. ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಬಂಧನ ಮತ್ತು ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದ ನಿಯಮದ ಬಗ್ಗೆಯೂ ನ್ಯಾಯಪೀಠ ಸ್ಪಷ್ಟನೆ ನೀಡಿತು. ಸರ್ಕಾರಿ ನೌಕರನೊಬ್ಬ ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದರೆ, ಅನ್ವಯವಾಗುವ ನಿಯಮಗಳ ಪ್ರಕಾರ ಆತನನ್ನ ಅಮಾನತುಗೊಂಡಂತೆ ಪರಿಗಣಿಸಬೇಕು. ಈ ಪ್ರಕ್ರಿಯೆಗೆ ಪ್ರತ್ಯೇಕ ಅಮಾನತು ಆದೇಶದ ಅಗತ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿತು.

ಅಮಾನತು ತೆರವುಗೊಳಿಸಿದ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ

ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಉದ್ಯೋಗಿಯನ್ನ ಅಮಾನತುಗೊಳಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರ ಅಮಾನತನ್ನ ತೆರವುಗೊಳಿಸಿ, ಮತ್ತೆ ಅದೇ ಆಸ್ಪತ್ರೆಯಲ್ಲಿ ಅದೇ ಹುದ್ದೆಗೆ ನೇಮಕ ಮಾಡಲಾಗಿತ್ತು. ಈ ಬೆಳವಣಿಗೆಯನ್ನ ಗಮನಿಸಿದ ಸುಪ್ರೀಂಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ಅಮಾನತು ತೆರವುಗೊಳಿಸಿ ಉದ್ಯೋಗಿಯನ್ನ ಮತ್ತೆ ಅದೇ ಹುದ್ದೆಗೆ ನೇಮಿಸಿದ ವಿಚಾರವನ್ನ ಪರಿಶೀಲಿಸುವಂತೆ ಬಿಹಾರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದೆ.

ಸರ್ಕಾರಿ ನೌಕರರು ಗಮನಿಸಬೇಕಾದ ಅಂಶ

ಸುಪ್ರೀಂಕೋರ್ಟ್ ನೀಡಿರುವ ಈ ಸ್ಪಷ್ಟನೆಯ ಪ್ರಕಾರ, 48 ಗಂಟೆಗಳಿಗಿಂತ ಹೆಚ್ಚು ಕಾಲ ಕಸ್ಟಡಿಯಲ್ಲಿರುವ ಸರ್ಕಾರಿ ನೌಕರರು 'Deemed Suspension' ನಿಯಮಕ್ಕೆ ಒಳಪಡಬಹುದು. ಆದರೆ ಅಮಾನತು ಎಂದರೆ ಉದ್ಯೋಗ ಕಳೆದುಕೊಳ್ಳುವುದು ಅಥವಾ ಸೇವೆಯಿಂದ ಶಾಶ್ವತವಾಗಿ ವಜಾಗೊಳ್ಳುವುದು ಎಂದರ್ಥವಲ್ಲ. ಅಮಾನತು ಪ್ರಕ್ರಿಯೆಯು ಸಂಬಂಧಪಟ್ಟ ಸೇವಾ ನಿಯಮಗಳು, ಪ್ರಕರಣದ ಸ್ವರೂಪ ಮತ್ತು ಅನ್ವಯವಾಗುವ ಕಾನೂನು ನಿಬಂಧನೆಗಳನ್ನ ಅವಲಂಬಿಸಿರುತ್ತದೆ. ಆದ್ದರಿಂದ ಈ ವಿಷಯದಲ್ಲಿ ಅಧಿಕೃತ ನ್ಯಾಯಾಲಯದ ಆದೇಶ ಹಾಗೂ ಸಂಬಂಧಪಟ್ಟ ಇಲಾಖೆಯ ಸೇವಾ ನಿಯಮಗಳನ್ನ ಪರಿಶೀಲಿಸುವುದು ಅಗತ್ಯ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES