SOCIAL MEDIA

Newsletter

PARTNER SITES
Select Language Select State

ಸೆಪ್ಟೆಂಬರ್ 28-30 ಬ್ಯಾಂಕ್ ಮುಷ್ಕರ: ನಿಮ್ಮ ಖಾತೆಗೆ ಸಂಬಳ ಸಮಯಕ್ಕೆ ಬರುತ್ತಾ? ಇಲ್ಲಿದೆ ಸಂಪೂರ್ಣ ವಿವರ!

ತಿಂಗಳ ಕೊನೆಯ ಮೂರು ದಿನಗಳು ಅಷ್ಟೇ ಅಲ್ಲದೆ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಮಹತ್ವದ ಸಮಯದಲ್ಲೇ ಈ ಮುಷ್ಕರ ಎದುರಾಗಿರುವುದರಿಂದ ಲಕ್ಷಾಂತರ ಖಾತೆದಾರರು ಆತಂಕಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ "ಈ ಬಾರಿ ನಮ್ಮ ಸಂಬಳ ಸಮಯಕ್ಕೆ ಸರಿಯಾಗಿ ಜಮಾ ಆಗುತ್ತಾ?" ಎನ್ನುವ ಪ್ರಶ್ನೆ ಪ್ರತಿಯೊಬ್ಬ ಉದ್ಯೋಗಿಯ ಮನಸ್ಸಿನಲ್ಲಿ ಮೂಡಿದೆ.

Reported By Manjunath Naragund Written By Manjunath Naragund
Published: Sep 28, 2026, 06:20 AM IST | Updated: Sep 28, 2026, 06:27 AM IST
Image Credit: Salary
Join

ಮಾಸಾಂತ್ಯ ಎಂದರೆ ಪ್ರತಿಯೊಬ್ಬ ಉದ್ಯೋಗಿಗೂ ಸಂಬಳದ ನಿರೀಕ್ಷೆ. ಮನೆ ಬಾಡಿಗೆ, ಇಎಮ್‌ಐ, ದಿನಸಿ ವೆಚ್ಚ ಸೇರಿದಂತೆ ಸಾಲು ಸಾಲು ಖರ್ಚುಗಳು ಎದುರಿಗೆ ನಿಂತಿರುತ್ತವೆ. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಕೆಲಸಗಾರರಿಗೆ ಹಾಗೂ ಸಾಮಾನ್ಯ ಬ್ಯಾಂಕ್ ಗ್ರಾಹಕರಿಗೆ ಒಂದು ದೊಡ್ಡ ಆತಂಕ ಎದುರಾಗಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವು ಸೆಪ್ಟೆಂಬರ್ 28 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.

ತಿಂಗಳ ಕೊನೆಯ ಮೂರು ದಿನಗಳು ಅಷ್ಟೇ ಅಲ್ಲದೆ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ (Half-yearly closing) ಮಹತ್ವದ ಸಮಯದಲ್ಲೇ ಈ ಮುಷ್ಕರ ಎದುರಾಗಿರುವುದರಿಂದ ಲಕ್ಷಾಂತರ ಖಾತೆದಾರರು ಆತಂಕಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ "ಈ ಬಾರಿ ನಮ್ಮ ಸಂಬಳ ಸಮಯಕ್ಕೆ ಸರಿಯಾಗಿ ಜಮಾ ಆಗುತ್ತಾ?" ಎನ್ನುವ ಪ್ರಶ್ನೆ ಪ್ರತಿಯೊಬ್ಬ ಉದ್ಯೋಗಿಯ ಮನಸ್ಸಿನಲ್ಲಿ ಮೂಡಿದೆ.

ನಿಮ್ಮ ಸಂಬಳ ವಿಳಂಬವಾಗಲಿದೆಯೇ?

ಇದಕ್ಕೆ ಸರಳವಾದ ಉತ್ತರ ಎಂದರೆ— ನಿಮ್ಮ ಕಂಪನಿ ಯಾವ ಬ್ಯಾಂಕ್ ಮೂಲಕ ವೇತನ ಪಾವತಿಸುತ್ತದೆ ಮತ್ತು ಯಾವ ಪ್ರಕ್ರಿಯೆಯನ್ನು ಬಳಸುತ್ತದೆ ಎಂಬುದರ ಮೇಲೆ ಇದು ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ.

ಖಾಸಗಿ ಬ್ಯಾಂಕ್‌ಗಳ ಗ್ರಾಹಕರಿಗೆ ಸಮಾಧಾನ: ಹೆಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI) ಅಥವಾ ಆಕ್ಸಿಸ್ (Axis) ಬ್ಯಾಂಕ್‌ನಂತಹ ಪ್ರಮುಖ ಖಾಸಗಿ ಬ್ಯಾಂಕ್‌ಗಳ ಮೂಲಕ ನಿಮ್ಮ ಕಂಪನಿಯು ಡಿಜಿಟಲ್ ಕಾರ್ಪೊರೇಟ್ ಬ್ಯಾಂಕಿಂಗ್ ಅಥವಾ ಸ್ವಯಂಚಾಲಿತ ವೇತನ ಪಾವತಿ (Automated Payroll) ವ್ಯವಸ್ಥೆಯನ್ನು ಬಳಸುತ್ತಿದ್ದರೆ, ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಸಂಬಳ ನಿಗದಿತ ಸಮಯಕ್ಕೇ ಜಮಾ ಆಗುವ ಸಾಧ್ಯತೆ ಹೆಚ್ಚಾಗಿದೆ.

ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ವಿಳಂಬದ ಭೀತಿ: ನಿಮ್ಮ ಉದ್ಯೋಗದಾತರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಂತಹ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ನೆಚ್ಚಿಕೊಂಡಿದ್ದರೆ ಅಥವಾ ಭೌತಿಕ ಚೆಕ್‌ಗಳು, ಶಾಖೆಗೆ ನೇರ ಭೇಟಿ ಹಾಗೂ ಕ್ಲಿಯರಿಂಗ್ ಹೌಸ್‌ಗಳಂತಹ ಹಸ್ತಚಾಲಿತ (Manual) ಪ್ರಕ್ರಿಯೆಗಳನ್ನು ಬಳಸುತ್ತಿದ್ದರೆ, ನಿಮ್ಮ ಸಂಬಳ ಜಮೆಯಾಗುವುದು ಅಕ್ಟೋಬರ್ ತಿಂಗಳಿನಲ್ಲಿ ಕಾರ್ಯಾಚರಣೆ ಪುನರಾರಂಭಗೊಳ್ಳುವವರೆಗೆ ವಿಳಂಬವಾಗಬಹುದು.

ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳೇನು?

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಈ ಮುಷ್ಕರಕ್ಕೆ ಕರೆ ನೀಡಲು ಮುಖ್ಯ ಕಾರಣ ನೌಕರರ ದೀರ್ಘಕಾಲದ ಬೇಡಿಕೆಗಳು.

1. ವಾರಕ್ಕೆ 5 ದಿನಗಳ ಬ್ಯಾಂಕಿಂಗ್: ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸಿ, ವಾರಕ್ಕೆ 5 ದಿನಗಳ ಬ್ಯಾಂಕಿಂಗ್ ಕೆಲಸದ ಅವಧಿಯನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಎಂಬುದು ಒಕ್ಕೂಟಗಳ ಪ್ರಮುಖ ಬೇಡಿಕೆಯಾಗಿದೆ.
2. ಪಿಂಚಣಿ ಮತ್ತು ಸೇವಾ ಸೌಲಭ್ಯಗಳು: ಪಿಂಚಣಿ ಯೋಜನೆಯಲ್ಲಿ ಸೂಕ್ತ ತಿದ್ದುಪಡಿ, ಪರಿಷ್ಕರಣೆ ಹಾಗೂ ನೌಕರರ ಇತರ ಸೇವಾ ಸಂಬಂಧಿತ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಯೂನಿಯನ್‌ಗಳು ಆಗ್ರಹಿಸುತ್ತಿವೆ.

ಯಾವ್ಯಾವ ಬ್ಯಾಂಕ್‌ಗಳ ಮೇಲೆ ಹೆಚ್ವಿನ ಪರಿಣಾಮ?

ಈ ಮೂರು ದಿನಗಳ ಮುಷ್ಕರದಿಂದಾಗಿ ದೇಶಾದ್ಯಂತ ಇರುವ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (RRBs) ಶಾಖೆಗಳಲ್ಲಿ ದೈನಂದಿನ ವ್ಯವಹಾರಗಳು ಹಾಗೂ ಸೇವೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ಫೆಡರಲ್ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್‌ನಂತಹ ಹಳೆಯ ತಲೆಮಾರಿನ ಖಾಸಗಿ ಬ್ಯಾಂಕ್‌ಗಳ ಕೆಲಸ ಕಾರ್ಯಗಳ ಮೇಲೆಯೂ ಭಾಗಶಃ ಪರಿಣಾಮ ಬೀರಲಿದೆ.

ಮತ್ತೊಂದೆಡೆ, ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳಂತಹ ಆಧುನಿಕ ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದಾಗ್ಯೂ, ಇಂಟರ್-ಬ್ಯಾಂಕ್ ವರ್ಗಾವಣೆ (ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಹಣ ರವಾನೆ) ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಗಳಲ್ಲಿ ವಿಳಂಬ ಉಂಟಾಗುವುದು ಖಚಿತ.

ಗ್ರಾಹಕರು ಏನು ಮಾಡಬೇಕು?

ತಿಂಗಳ ಕೊನೆಯಲ್ಲಿ ತುರ್ತು ನಗದು ಅಗತ್ಯವಿದ್ದರೆ ಅಥವಾ ಪ್ರಮುಖ ಬಿಲ್ ಪಾವತಿಗಳಿದ್ದರೆ, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ (UPI) ಅಥವಾ ಎಟಿಎಂಗಳ ಸೇವೆಗಳನ್ನು ಬಳಸಿಕೊಳ್ಳುವುದು ಸೂಕ್ತ. ಆದರೆ, ಶಾಖೆಗೆ ತೆರಳಿ ಮಾಡಬೇಕಾದ ಕೆಲಸಗಳನ್ನು ಅಥವಾ ಚೆಕ್ ಆಧಾರಿತ ವ್ಯವಹಾರಗಳನ್ನು ಮುಷ್ಕರ ಮುಗಿಯುವವರೆಗೆ ಮುಂದೂಡುವುದು ಒಳ್ಳೆಯದು.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES