ಸರ್ಕಾರಿ ಕೆಲಸದಲ್ಲಿದ್ದರೂ ರೇಷನ್ ಅಕ್ಕಿ ಪಡೆದ 1.82 ಲಕ್ಷ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ಕೊಟ್ಟ ರೈಲ್ವೆ ಇಲಾಖೆ
ಕೇಂದ್ರ ಆಹಾರ ಸಚಿವಾಲಯ ನಡೆಸಿದ ವಿಶೇಷ ಪರಿಶೀಲನಾ ಅಭಿಯಾನದಲ್ಲಿ ದೇಶಾದ್ಯಂತ ಸೇವೆಯಲ್ಲಿರುವ 1.82 ಲಕ್ಷ ರೈಲ್ವೆ ನೌಕರರ ಹೆಸರುಗಳು ಪಡಿತರ ಚೀಟಿದಾರರ ಪಟ್ಟಿಯಲ್ಲಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ವೇತನ ಪಡೆಯುತ್ತಿದ್ದರೂ ಬಡವರಿಗಾಗಿ ಇರುವ ರೇಷನ್ ಸೌಲಭ್ಯ ಪಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಮಂಡಳಿಯು ತಕ್ಷಣವೇ ತನಿಖೆಗೆ ಆದೇಶಿಸಿದೆ. ರಾಜ್ಯಗಳ ಅರ್ಹತಾ ನಿಯಮಗಳ ಅನ್ವಯ ಪಟ್ಟಿಯಲ್ಲಿರುವ ನೌಕರರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಎಲ್ಲಾ ವಲಯಗಳಿಗೆ ಸೂಚಿಸಲಾಗಿದೆ.
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (NFSA) ಬಡವರಿಗಾಗಿ ನೀಡಲಾಗುವ ರಿಯಾಯಿತಿ ದರದ ಪಡಿತರ ಸೌಲಭ್ಯವನ್ನು ಲಕ್ಷಾಂತರ ಸರ್ಕಾರಿ ನೌಕರರು ಪಡೆಯುತ್ತಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ದೇಶಾದ್ಯಂತ ನಡೆಸಿದ ವಿಶೇಷ ಪರಿಶೀಲನಾ ಅಭಿಯಾನದಲ್ಲಿ, ಸೇವೆಯಲ್ಲಿರುವ ಬರೋಬ್ಬರಿ 1,82,283 ರೈಲ್ವೆ ನೌಕರರ ಹೆಸರುಗಳು ಪಡಿತರ ಚೀಟಿದಾರರ ಪಟ್ಟಿಯಲ್ಲಿರುವುದು ಬೆಳಕಿಗೆ ಬಂದಿದೆ.
ಉತ್ತಮ ವೇತನ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದರೂ, ಬಡವರ ಪಾಲಿನ ರೇಷನ್ ಅಕ್ಕಿ ಪಡೆಯುತ್ತಿರುವ ಈ ಪ್ರಕರಣವನ್ನು ಭಾರತೀಯ ರೈಲ್ವೆ ಮಂಡಳಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 11ರಂದು ಅಧಿಕೃತ ಸುತ್ತೋಲೆಯನ್ನು ಹೊರಡಿಸಿರುವ ರೈಲ್ವೆ ಮಂಡಳಿ, ತಕ್ಷಣವೇ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದೆ. ಅಲ್ಲದೆ, ನಿಯಮಗಳ ಪ್ರಕಾರ ಪಡಿತರ ಪಡೆಯಲು ಅನರ್ಹ ಫಲಾನುಭವಿಗಳಾಗಿರುವ ನೌಕರರು ತಕ್ಷಣವೇ ತಮ್ಮ ರೇಷನ್ ಕಾರ್ಡ್‌ಗಳನ್ನು ಸಂಬಂಧಪಟ್ಟ ಇಲಾಖೆಗೆ ಸ್ವಯಂಪ್ರೇರಿತವಾಗಿ ಹಿಂದಿರುಗಿಸುವಂತೆ ಖಡಕ್ ಸೂಚನೆ ನೀಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಪ್ರಯೋಜನಗಳು ಕೇವಲ ಅರ್ಹ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮಾತ್ರ ತಲುಪುವಂತೆ ಮಾಡಲು ಕೇಂದ್ರ ಆಹಾರ ಸಚಿವಾಲಯವು ದೇಶವ್ಯಾಪಿ ವಿಶೇಷ ದತ್ತಾಂಶ ಪರಿಶೀಲನಾ ಅಭಿಯಾನವನ್ನು ಕೈಗೊಂಡಿತ್ತು. ಈ ವೇಳೆ ಸರ್ಕಾರಿ ನೌಕರರ ಡೇಟಾಬೇಸ್ ಮತ್ತು ಪಡಿತರ ಚೀಟಿದಾರರ ಪಟ್ಟಿಯನ್ನು ತಾಳೆ ಹಾಕಿ ನೋಡಿದಾಗ, ದೇಶಾದ್ಯಂತ ವಿವಿಧ ವಲಯಗಳಲ್ಲಿ ಸೇವೆಯಲ್ಲಿರುವ 1,82,283 ರೈಲ್ವೆ ನೌಕರರ ಹೆಸರುಗಳು ಪಡಿತರ ಚೀಟಿಯೊಂದಿಗೆ ಹೊಂದಾಣಿಕೆಯಾಗಿರುವುದು ಪತ್ತೆಯಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಬಡ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಅತಿ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಆದರೆ, ಇದಕ್ಕೆ ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ದೇಶದ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಯಮಗಳ ಪ್ರಕಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮಗಳು , ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ನೌಕರರನ್ನು ಈ ಪಡಿತರ ಯೋಜನೆಯಿಂದ ಹೊರಗಿಡಲಾಗಿದೆ. ಆದರೂ ನಿಯಮ ಮೀರಿ ರೇಷನ್ ಕಾರ್ಡ್ ಹೊಂದಿರುವ ನೌಕರರ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಪ್ರಸ್ತುತ ಗುರುತಿಸಲಾಗಿರುವ 1.82 ಲಕ್ಷ ನೌಕರರ ಪಟ್ಟಿಯನ್ನು ಕೇವಲ ಪ್ರಾಥಮಿಕ ದತ್ತಾಂಶಗಳ ಹೊಂದಾಣಿಕೆಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಇದರರ್ಥ ಪಟ್ಟಿಯಲ್ಲಿರುವ ಎಲ್ಲರೂ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಪಡಿತರ ಪಡೆಯುತ್ತಿದ್ದಾರೆ ಎಂದಲ್ಲ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ವಿವಿಧ ರಾಜ್ಯಗಳಲ್ಲಿ ಪಡಿತರ ಚೀಟಿ ಅರ್ಹತಾ ನಿಯಮಗಳು ಹಾಗೂ ಆದಾಯ ಮಿತಿಗಳು ಭಿನ್ನವಾಗಿರಬಹುದು.
ಆದ್ದರಿಂದ, ಪಟ್ಟಿಯಲ್ಲಿ ಹೆಸರಿರುವ ನೌಕರರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಎಲ್ಲಾ ರೈಲ್ವೆ ವಲಯಗಳಿಗೆ ಮಂಡಳಿ ಸೂಚಿಸಿದೆ. ಸಮಗ್ರ ಪರಿಶೀಲನೆಯ ನಂತರವಷ್ಟೇ ಯಾರು ಅರ್ಹರು ಮತ್ತು ಯಾರು ಅನರ್ಹರು ಎಂಬುದು ನಿಖರವಾಗಿ ಸ್ಪಷ್ಟವಾಗಲಿದೆ. ಒಂದು ವೇಳೆ ನಿಯಮಗಳ ಪ್ರಕಾರ ಅನರ್ಹರಾಗಿದ್ದರೂ ರೇಷನ್ ಕಾರ್ಡ್ ಹೊಂದಿರುವುದು ಸಾಬೀತಾದರೆ, ಅಂತಹ ನೌಕರರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ ಅನರ್ಹ ನೌಕರರು ತಕ್ಷಣವೇ ಕಾರ್ಡ್ ಒಪ್ಪಿಸುವಂತೆ ಸಲಹೆ ನೀಡಲಾಗಿದೆ.