ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳಿಂದ ತುಂಬಿದ್ದ ಬಸ್‌ನಲ್ಲಿ ಬೆಂಕಿ ಅವಘಡ..! ಸಂಪೂರ್ಣ ಸುಟ್ಟು ಭಸ್ಮ
ಕೊಡೈಕೆನಾಲ್ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದ ಶಾಲಾ ವಿದ್ಯಾರ್ಥಿಗಳಿದ್ದ ಬಸ್‌ಗೆ ಹಠಾತ್ತನೆ ಬೆಂಕಿ ಹೊತ್ತಿಕೊಂಡ ಘಟನೆಯು ಥೇಣಿ ಜಿಲ್ಲೆಯ ದೇವಧನಪಟ್ಟಿ ಸಮೀಪ ವರದಿಯಾಗಿದೆ. ಬಸ್ಸಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು ಎನ್ನಲಾಗಿದೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..
ತಮಿಳುನಾಡು : ಕೊಡೈಕೆನಾಲ್ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದ ಕೇರಳದ ಶಾಲಾ ವಿದ್ಯಾರ್ಥಿಗಳಿದ್ದ ಬಸ್‌ಗೆ ಹಠಾತ್ತನೆ ಬೆಂಕಿ ಹೊತ್ತಿಕೊಂಡ ಘಟನೆಯು ಥೇಣಿ ಜಿಲ್ಲೆಯ ದೇವಧನಪಟ್ಟಿ ಸಮೀಪ ವರದಿಯಾಗಿದೆ. ಅದೃಷ್ಟವಶಾತ್ ಚಾಲಕನ ಸಮಯೋಚಿತ ನಿರ್ಧಾರದಿಂದ ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹೌದು.. ಕೇರಳದ ಪಾಲಕ್ಕಾಡ್‌ನಲ್ಲಿರುವ ಸರ್ಕಾರಿ ಅನುದಾನಿತ ಶಾಲೆಯೊಂದರ ವಿದ್ಯಾರ್ಥಿಗಳು ನಿರಂತರ ರಜೆ ಇದ್ದ ಕಾರಣ ನವೆಂಬರ್ 7ರಂದು ಕೊಡೈಕೆನಾಲ್‌ಗೆ ಪ್ರವಾಸ ಕೈಗೊಂಡಿದ್ದರು. ಕೊಡೈಕೆನಾಲ್‌ನ ಸುಂದರ ತಾಣಗಳನ್ನು ವೀಕ್ಷಿಸಿದ ನಂತರ, ಅಲ್ಲಿಂದ ಕೇರಳದ ಮುನ್ನಾರ್ ಕಡೆಗೆ ಪ್ರಯಾಣ ಬೆಳೆಸಲು ಯೋಜಿಸಿದ್ದರು. ಅದರಂತೆ ನವೆಂಬರ್ 8ರಂದು ಮುಂಜಾನೆ ಬಸ್‌ನಲ್ಲಿ ಪ್ರವಾಸ ಮುಂದುವರಿಸಿದ್ದರು.
ಪ್ರಯಾಣದ ಮಧ್ಯೆ ಥೇಣಿ ಜಿಲ್ಲೆಯ ದೇವಧನಪಟ್ಟಿ ಬಳಿ ಬಸ್ ಸಾಗುತ್ತಿದ್ದಾಗ, ಹಠಾತ್ತನೆ ಬಸ್ಸಿನ ಟೈರ್ ಒಡೆದು ದೊಡ್ಡ ಶಬ್ದ ಉಂಟಾಗಿದೆ. ಕೆಲವೇ ಕ್ಷಣಗಳಲ್ಲಿ ಬಸ್‌ನ ಕೆಳಭಾಗದಿಂದ ದಟ್ಟವಾದ ಹೊಗೆ ಬರಲು ಪ್ರಾರಂಭಿಸಿದೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಭಯಭೀತರಾಗಿ ಕಿರುಚಾಡಲು ಆರಂಭಿಸಿದ್ದಾರೆ. ಕೂಡಲೇ ಎಚ್ಚೆತ್ತ ಚಾಲಕ ಯಾವುದೇ ಅಡಚಣೆಗೆ ಅವಕಾಶ ನೀಡದೆ ತಕ್ಷಣವೇ ರಸ್ತೆಯ ಬದಿಗೆ ಬಸ್ ಅನ್ನು ನಿಲ್ಲಿಸಿದ್ದಾನೆ. ಕೂಡಲೇ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ.
ವಿದಾರ್ಥಿಗಳು ಕೆಳಗೆ ಇಳಿದ ಕೆಲವೇ ನಿಮಿಷಗಳಲ್ಲಿ ಬಸ್‌ಗೆ ಬೆಂಕಿ ವ್ಯಾಪಿಸಿ, ದೆಹಲಿ ಮಟ್ಟಕ್ಕೆ ಹೊಗೆಯಾಡಲಾರಂಭಿಸಿತು. ಸ್ಥಳೀಯರ ಸಹಾಯದಿಂದ ಕೆಲವರು ನೀರು ಹಾಕಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಬೆಂಕಿಯ ತೀವ್ರತೆ ಹೆಚ್ಚುತ್ತಿರುವುದನ್ನು ಕಂಡು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಸುದ್ದಿ ತಿಳಿದ ಕೂಡಲೇ ಪೆರಿಯಾಕುಲಂ ಮತ್ತು ವಟ್ಟಲಕುಂಡು ಪ್ರದೇಶಗಳಿಂದ ಧಾವಿಸಿಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಆದರೆ, ಅಷ್ಟೊತ್ತಿಗಾಗಲೇ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಬ್ಯಾಗ್‌ಗಳು, ಬಟ್ಟೆಗಳು ಹಾಗೂ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿ ಬೂದಿಯಾಗಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ಟೈರ್ ಸಿಡಿದ ಪರಿಣಾಮ ಉಂಟಾದ ತೀವ್ರ ಘರ್ಷಣೆಯಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಮತ್ತು ಬಸ್ಸಿನ ಹವಾನಿಯಂತ್ರಣ ವ್ಯವಸ್ಥೆಯ ಸಿಲಿಂಡರ್‌ಗೆ ಬೆಂಕಿ ತಗುಲಿ ಇಡೀ ಬಸ್ ವ್ಯಾಪಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಿಂದಾಗಿ ಮಧುರೆ-ಕೊಡೈಕೆನಾಲ್ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣಸ್ತಬ್ಧಗೊಂಡು ಭಾರಿ ದಟ್ಟಣೆ ಉಂಟಾಯಿತು.
ಸ್ಥಳಕ್ಕೆ ದೌಡಾಯಿಸಿದ ದೇವಧನಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರವಾಸದ ಖುಷಿಯಲ್ಲಿದ್ದ ಮಕ್ಕಳಿಗೆ ಈ ಅಚಾನಕ್ ದುರ್ಘಟನೆಯಿಂದ ಆಘಾತ ಉಂಟಾಗಿದ್ದು, ನಂತರ ಪೊಲೀಸರು ಮತ್ತು ಶಾಲಾ ಆಡಳಿತ ಮಂಡಳಿಯವರು ಪರ್ಯಾಯ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕೇರಳದ ಪಾಲಕ್ಕಾಡ್‌ಗೆ ಕಳುಹಿಸಿಕೊಟ್ಟಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದ್ದು, ಪೋಷಕರು ಹಾಗೂ ಸಾರ್ವಜನಿಕರು ನಿರಾಳರಾಗಿದ್ದಾರೆ.