ಭಾರತದ ಕೋಟಿ ಕೋಟಿ ಸಾಮಾನ್ಯ ಜನರ ಪಾಲಿಗೆ ಅತ್ಯಂತ ಕೈಗೆಟುಕುವ ಮತ್ತು ಪ್ರಮುಖ ಪ್ರೋಟೀನ್ ಮೂಲವಾಗಿದ್ದ ಮೊಟ್ಟೆಗಳು ದಿನದಿಂದ ದಿನಕ್ಕೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಮೊಟ್ಟೆಯ ಬೆಲೆಗಳಲ್ಲಿ ಭಾರಿ ಏರಿಕೆ ಆಗಿದೆ. ಆದರೆ ಬೆಲೆ ಯಾಕೆ ಹೆಚ್ಚಳವಾಗುತ್ತಿದೆ ಎನ್ನುವುದು ಸಾಮಾನ್ಯರಿಗೆ ಗೊತ್ತಾಗುತ್ತಿಲ್ಲ. ಸುಮಾರು ಶೇಕಡಾ 35 ರಿಂದ 40 ರಷ್ಟು ಮೊಟ್ಟೆಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದು ನಿಮಗೆಲ್ಲ ಗೊತ್ತಿರುವ ಸಂಗತಿಯೇ ಆಗಿದೆ. ಪ್ರಸ್ತುತ ಕೋಳಿ ಫಾರ್ಮ್‌ಗಳಲ್ಲೇ ಒಂದು ಮೊಟ್ಟೆಯ ಬೆಲೆ ಸರಿಸುಮಾರು 7 ರೂಪಾಯಿ ಆಗಿದೆ ಅಂತೆ. ಇದರಿಂದ ಚಿಲ್ಲರೆ ಮಾರುಕಟ್ಟೆ, ಆನ್‌ಲೈನ್‌ನಲ್ಲಿ ಮೊಟ್ಟೆ ಬೆಲೆ ಇನ್ನಷ್ಟು ಹೆಚ್ಚಳವಾಗಿರುವುದು ಸಾರ್ವಜನಿಕರಿಗೆ ಬೇಸರ ತರಿಸಿದೆ.
ಕೋಳಿ ಸಾಕಣೆ ಅಥವಾ ಪೌಲ್ಟ್ರಿ ಉದ್ಯಮಕ್ಕೆ ಅತ್ಯಂತ ನಿರ್ಣಾಯಕವಾದ ಸಮಯದಲ್ಲಿ ಬೆಲೆ ಏರಿಕೆಯ ಬಿಸಿ ಎದುರಾಗಿದೆ. ಸಾಮಾನ್ಯವಾಗಿ ಚಳಿಗಾಲದ ಅವಧಿಯಲ್ಲಿ ದೇಶಾದ್ಯಂತ ಮೊಟ್ಟೆಗೆ ಭಾರಿ ಬೇಡಿಕೆ ಇರುತ್ತದೆ. ಇಂತಹ ಸಮಯದಲ್ಲಿ ಕೋಳಿಗಳ ಪ್ರಮುಖ ಆಹಾರವಾಗಿರುವ ಮೇವಿನ ವೆಚ್ಚಗಳು ಅಧಿಕವಾಗುತ್ತಿರುವುದು ಮುಂದಿನ ದಿನಗಳಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಮೊಟ್ಟೆ ಬೆಲೆ ಅಧಿಕವಾಗಲು ಕೋಳಿ ಆಹಾರ ತಯಾರಿಕೆಯಲ್ಲಿ ಬಳಸಲಾಗುವ ಪ್ರಮುಖ ಧಾನ್ಯ ಮೆಕ್ಕೆಜೋಳ ಆಗಿದೆ.
ಮೆಕ್ಕೆಜೋಳ ಹೇಗೆ ಕಾರಣವಾಗುತ್ತದೆ?
ಕೋಳಿ ಸಾಕಣೆ ಉದ್ಯಮದಲ್ಲಿ ಕೋಳಿಗಳಿಗೆ ಅಗತ್ಯವಿರುವ ಪೌಷ್ಟಿಕ ಶಕ್ತಿಯ ಪ್ರಮುಖ ಮತ್ತು ಪ್ರಾಥಮಿಕ ಮೂಲವೇ ಮೆಕ್ಕೆಜೋಳ. ಕೋಳಿ ಆಹಾರದ ವೆಚ್ಚದಲ್ಲಿ ಮೆಕ್ಕೆಜೋಳದ ಪಾಲು ಅತಿ ದೊಡ್ಡದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಣೆದಾರರು ಈ ಧಾನ್ಯ ಮೆಕ್ಕೆಜೋಳ ಖರೀದಿಸಲು ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಭಾರತ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮ. ಜೈವಿಕ ಇಂಧನ ಉತ್ಪಾದನೆಗಾಗಿ ದೇಶದಲ್ಲಿ ಹೆಚ್ಚಿನ ಪ್ರಮಾಣದ ಮೆಕ್ಕೆಜೋಳವನ್ನು ಎಥೆನಾಲ್ ತಯಾರಿಕೆಗೆ ತಿರುಗಿಸಲಾಗುತ್ತಿದೆ. ಸರಳವಾಗಿ ಹೇಳುವುದಾದರೆ ಈವರೆಗೆ ಸಂಪೂರ್ಣವಾಗಿ ಕೋಳಿ ಆಹಾರಕ್ಕೆ ಮತ್ತು ಆಹಾರ ಸಂಸ್ಕರಣೆಗೆ ಲಭ್ಯವಿದ್ದ ಮೆಕ್ಕೆಜೋಳವನ್ನು ಈಗ ಎಥೆನಾಲ್ ಉತ್ಪಾದಕರು ಹೆಚ್ಚಿನ ಪ್ರಮಾಣ ಅಧಿಕ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ.
ಮೊಟ್ಟೆಯ ಬೆಲೆ ಹೆಚ್ಚಳಕ್ಕೆ ಎಥೆನಾಲ್ ಉತ್ಪಾದನೆ ಒಂದೇ ಕಾರಣವಲ್ಲದಿದ್ದರೂ, ಇಂಧನ ವಲಯದಿಂದ ಬಂದ ಈ ಹೆಚ್ಚುವರಿ ಬೇಡಿಕೆಯು ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಲಭ್ಯತೆ ಮತ್ತು ಬಳಕೆಯ ನಡುವಿನ ಸಮತೋಲನವನ್ನು ಏರುಪೇರು ಮಾಡಿದೆ. ಪೂರೈಕೆ ಕಷ್ಟಕರ ಆಗಿದ್ದರಿಂದ ಮೆಕ್ಕೆಜೋಳದ ಬೆಲೆ ಹೆಚ್ಚಾಗಿದೆ. ಇದು ನೇರ ಪರಿಣಾಮ ಕೋಳಿ ಮೊಟ್ಟೆಗಳನ್ನು ಖರೀದಿ ಮಾಡುವವರ ಮೇಲೆ ಬೀರಿದೆ. ಇದು ಗ್ರಾಹಕರಿಗೆ ಸಾಮಾನ್ಯವಾಗಿ ಬೆಲೆ ಏರಿಕೆ ಬಿಸಿ ತಟ್ಟಿದೆ.
ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳದ ಬಳಕೆ ಎಷ್ಟು ಶರವೇಗದಲ್ಲಿ ಹೆಚ್ಚಾಗಿದೆ ಎಂಬುದನ್ನು ಕೇಂದ್ರ ಸರ್ಕಾರದ ಅಧಿಕೃತ ದತ್ತಾಂಶಗಳೇ ಹೇಳುತ್ತವೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವರಾದ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಅವರು 2025ರ ಲೋಕಸಭಾ ಅಧಿವೇಶನದಲ್ಲಿ ಈ ಸಂಬಂಧ ಲಿಖಿತ ಉತ್ತರವನ್ನು ನೀಡಿದ್ದರು. ಅದರ ಮಾಹಿತಿ ಇಲ್ಲಿದೆ ಗಮನಿಸಿ.
2024–25ರ ಎಥೆನಾಲ್ ಸರಬರಾಜು ವರ್ಷದಲ್ಲಿ: ಒಟ್ಟು 125.75 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಸಂಪೂರ್ಣವಾಗಿ ಎಥೆನಾಲ್ ಉತ್ಪಾದನೆಗೆ ಬಳಸಲಾಗಿದೆ. ಇದರಿಂದ ಪೂರೈಕೆ ಅವಧಿಯಲ್ಲಿ ಧಾನ್ಯ ಆಧಾರಿತ ಡಿಸ್ಟಿಲರಿಗಳಿಗೆ ಸರಿಸುಮಾರು 477.8 ಕೋಟಿ ಲೀಟರ್ ಎಥೆನಾಲ್ ಅನ್ನು ಹಂಚಿಕೆ ಮಾಡಲಾಗಿದೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಎಥೆನಾಲ್ ಉತ್ಪಾದನೆಗೆ ಬಳಸುತ್ತಿದ್ದ ಮೆಕ್ಕೆಜೋಳದ ಪ್ರಮಾಣವು 8.3 ಲಕ್ಷ ಟನ್‌ಗಳಿಂದ ನೇರವಾಗಿ 125.75 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಇದು ಬಿಸಿನೆಸ್ ವಲಯದಲ್ಲಿ 15 ಪಟ್ಟು ಅಧಿಕ ಹೆಚ್ಚಳವನ್ನು ಮಾಡಿರುವುದು ತೋರಿಸುತ್ತಿದೆ.
2025–26ರ ಯೋಜನೆಯ ಅವಧಿಗೂ ಸಹ ಸರಿಸುಮಾರು 125.78 ಲಕ್ಷ ಟನ್ ಮೆಕ್ಕೆಜೋಳವನ್ನು ಹಂಚಿಕೆ ಮಾಡಲು ಉಲ್ಲೇಖಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದರ ಬಳಕೆಯೂ ಇನ್ನಷ್ಟು ಹೆಚ್ಚಾಗಬಹುದು. ಇದರಿಂದ ನೇರವಾಗಿ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಹಠಾತ್ ವಿಸ್ತರಣೆಯು ಭಾರತದ ಸಂಪೂರ್ಣ ಎಥೆನಾಲ್ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸಿದೆ. ಸಕ್ಕರೆ ಮತ್ತು ಕಬ್ಬಿನ ಉತ್ಪನ್ನಗಳ ಜೊತೆಗೆ ಮೆಕ್ಕೆಜೋಳವೂ ಪ್ರಮುಖ ಫೀಡ್‌ಸ್ಟಾಕ್ ಅಥವಾ ಆಹಾರ ಧಾನ್ಯ ಆಗಿದೆ.
ಎಥೆನಾಲ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿರುವ ಕೇವಲ ಮೆಕ್ಕೆಜೋಳದಿಂದ ಅಡುಗೆ ಮನೆಯಲ್ಲಿ ವಿವಿಧ ಆಹಾರಗಳ ತಯಾರಿಕೆಗೆ ಬೇಕಾದ ಮೊಟ್ಟೆಯ ಬೆಲೆಯ ಮೇಲೆ ಪರಿಣಾಮ ಬೀರಿರುವುದು ದುರಂತವೇ ಸರಿ. ಕೋಳಿಗಳಿಗೆ ಬೇಕಾದ ಆಹಾರದ ದರ ದುಬಾರಿಯಾದಾಗ, ಕೋಳಿ ಸಾಕಣೆದಾರರು ಅಥವಾ ಮಾಲೀಕರು ಆ ಹೆಚ್ಚುವರಿ ವೆಚ್ಚದ ಒಂದಷ್ಟು ಭಾಗವನ್ನು ತಾವೇ ಭರಿಸಬೇಕಾಗುತ್ತದೆ. ಇದನ್ನೇ ಕೋಳಿ ಸಾಕಣೆದಾರರು ಅಥವಾ ಮಾಲೀಕರು ಗ್ರಾಹಕರ ಮೇಲೆ ಅಂದರೆ ಸಾರ್ವಜನಿಕರ ಮೇಲೆ ಬೆಲೆ ಬಿಸಿ ಏರಿದ್ದಾರೆ. ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಸ್ಥಿರವಾಗಿದ್ದಾಗ ಉತ್ಪಾದನಾ ವೆಚ್ಚ ಹೆಚ್ಚಾದರೆ, ಆಟೋಮ್ಯಾಟಿಕ್ ಆಗಿ ಚಿಲ್ಲರೆ ದರಗಳು ಏರಿಕೆಯಾಗುತ್ತವೆ. ಅದರಂತೆ ಈಗ ಮೊಟ್ಟೆ ಬೆಲೆ ಹೆಚ್ಚಳವಾಗಿದೆ.
ಚಳಿಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಪ್ರತಿಯೊಂದು ಮನೆಯಲ್ಲೂ ಮೊಟ್ಟೆಗಳನ್ನು ತಿನ್ನುವುದು ಸಾಮಾನ್ಯವಾಗಿರುತ್ತದೆ. ಏಕೆಂದರೆ ಮೊಟ್ಟೆಗಳನ್ನು ಮಕ್ಕಳಿಂದ ಎಲ್ಲ ವರ್ಗದವರಿಗೂ ಪ್ರಮುಖವಾದ ಪ್ರೋಟಿನ್ ಆಗಿರುತ್ತದೆ. ಚಿಕನ್ ತಿನ್ನುವುದಕ್ಕಿಂತ ಮೊಟ್ಟೆಗಳನ್ನು ತಿಂದರೆ ಹೆಚ್ಚು ಪ್ರೋಟಿನ್ ದೇಹಕ್ಕೆ ಸಿಗುತ್ತದೆ. ಅಲ್ಲದೇ ಚಿಕನ್‌ಗೆ ಹೋಲಿಕೆ ಮಾಡಿದರೆ ಮೊಟ್ಟೆಗಳನ್ನು ತಂದು ಅಡುಗೆ ಮಾಡಿ ತಿನ್ನುವುದು ವೆಚ್ಚ ಕಡಿಮೆ ಅನಿಸುತ್ತದೆ. ಇದರಿಂದ ಕುಟುಂಬಗಳು ಸಾಮಾನ್ಯವಾಗಿ ಮೊಟ್ಟೆಗಳನ್ನು ಖರೀದಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಸುತ್ತವೆ. ಆದರೆ ಈಗ ಮೊಟ್ಟೆಗಳ ದರದಲ್ಲಿ ಏರಿಕೆ ಆಗಿರುವುದು ಎಲ್ಲರಿಗೂ ಯೋಚನೆ ಮಾಡುವಂತೆ ಮಾಡಿದೆ.
ಇನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳಲ್ಲಿ ಸಾಮಾನ್ಯವಾಗಿ ಮೊಟ್ಟೆಗಳು ಇಲ್ಲದೇ ಆಹಾರ ತಯಾರಿ ಆಗುವುದೇ ಇಲ್ಲ. ಅದರಲ್ಲಿ ಚಳಿಗಾಲದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಮೊಟ್ಟೆಗಳು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳಿಗೆ ಬೇಕಾಗುತ್ತವೆ. ಒಂದೆಡೆ ಚಳಿಗಾಲದ ಅಧಿಕ ಬೇಡಿಕೆ, ಇನ್ನೊಂದೆಡೆ ಮೆಕ್ಕೆಜೋಳದ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಕೋಳಿ ಸಾಕಣೆದಾರರು ಅನಿವಾರ್ಯವಾಗಿ ಮೊಟ್ಟೆಗಳ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಈಗಲೇ ಇಷ್ಟು ಆಗಿದೆ ಎಂದರೆ ಮುಂದಿನ ದಿನಗಳಲ್ಲಿ ಮೊಟ್ಟೆಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಲಿದೆ ಎಂದು ಕೆಲವೊಬ್ಬರು ಭವಿಷು ನುಡಿಯುತ್ತಿದ್ದಾರೆ.