SOCIAL MEDIA

Newsletter

PARTNER SITES
Select Language Select State

ಭಾರತೀಯ ವಾಯುಪಡೆಗೆ ಹೆಚ್‌ಎಎಲ್ ಲೋಹದ ಹಕ್ಕಿಗಳ ಬಲ: ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ರಾಜನಾಥ್ ಸಿಂಗ್ ಮೆಚ್ಚುಗೆ!

ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಅದ್ಧೂರಿ ಹಸ್ತಾಂತರ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್ ನಾಯ್ಡು ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Reported By Manjunath Naragund Written By Manjunath Naragund
Published: Sep 18, 2026, 07:59 PM IST | Updated: Sep 18, 2026, 08:09 PM IST
Image Credit: Rajnathsingh
Join

ಭಾರತೀಯ ವಾಯುಪಡೆಗೆ ಹೆಚ್‌ಎಎಲ್ ಲೋಹದ ಹಕ್ಕಿಗಳ ಬಲ: ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ರಾಜನಾಥ್ ಸಿಂಗ್ ಮೆಚ್ಚುಗೆ!

ಬೆಂಗಳೂರು: ದೇಶದ ಭದ್ರತೆ ಹಾಗೂ ರಕ್ಷಣಾ ಉತ್ಪಾದನಾ ವಲಯದಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ಪಾಲಿಗೆ ಇಂದು ಅತ್ಯಂತ ಮಹತ್ವದ ಮತ್ತು ಸಂಭ್ರಮದ ದಿನ. ಹೆಚ್‌ಎಎಲ್ ಸಂಸ್ಥೆ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ತಯಾರಿಸಿದ LCA ತೇಜಸ್ FOC ಟ್ವಿನ್ ಸೀಟರ್ ತರಬೇತಿ ಯುದ್ಧ ವಿಮಾನ, HTT-40 ಮಾದರಿಯ 70 ಬೇಸಿಕ್ ಟ್ರೈನರ್ ವಿಮಾನಗಳು ಹಾಗೂ 'ಪವನ್ ಹನ್ಸ್' ಖಾಸಗಿ ಸಂಸ್ಥೆಗೆ 4 ಧ್ರುವ್ ನೆಕ್ಸ್ಟ್ ಜನರೇಷನ್ (NG) ಹೆಲಿಕಾಪ್ಟರ್‌ಗಳನ್ನು ಇಂದು ಭಾರತೀಯ ವಾಯುಪಡೆ ಹಾಗೂ ನಾಗರಿಕ ಸೇವೆಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಅದ್ಧೂರಿ ಹಸ್ತಾಂತರ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್ ನಾಯ್ಡು ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶ್ರೀರಾಮನ ಭಾವಚಿತ್ರಕ್ಕೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ, ಶುಭಾರಂಭ ಮಾಡಿದರು.

ಬಿಕರಿ ಮತ್ತು ಬಳಕೆಗೆ ಸಿದ್ಧವಾಗಿರುವ ಈ ಯುದ್ಧ ಹಾಗೂ ತರಬೇತಿ ವಿಮಾನಗಳ ಪ್ರಮಾಣ ಪತ್ರಗಳನ್ನು ಕೇಂದ್ರ ಸಚಿವರ ಸಮ್ಮುಖದಲ್ಲಿ ವಾಯುಪಡೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಮೂಲಕ ಭಾರತದ ವಾಯುಪಡೆಗೆ ಬೃಹತ್ ಪ್ರಮಾಣದ ಬಲ ಸಿಕ್ಕಂತಾಗಿದೆ.

ಇಂಜಿನಿಯರ್‌ಗಳಿಗೆ ರಾಜನಾಥ್ ಸಿಂಗ್ ನೀಡಿದ ಸವಾಲು:
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಇಂಜಿನಿಯರ್‌ಗಳ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. "ಇಂದು ನಾನು ನಮ್ಮ ಹೆಚ್‌ಎಎಲ್ ಹಾಗೂ ಭಾರತೀಯ ಇಂಜಿನಿಯರ್‌ಗಳಿಗೆ ಒಂದು ಪ್ರಮುಖ ಸವಾಲನ್ನು ನೀಡುತ್ತಿದ್ದೇನೆ. ಪ್ರಸ್ತುತ ಪ್ರಪಂಚದ ಯಾವುದೇ ದೇಶದಲ್ಲೂ ಇಲ್ಲದಿರುವಂತಹ ಅತ್ಯಾಧುನಿಕ, ಕಡಿಮೆ ವೆಚ್ಚದ ತಂತ್ರಜ್ಞಾನಗಳನ್ನು ನಮ್ಮ ಹೆಚ್‌ಎಎಲ್ ಇಂಜಿನಿಯರ್‌ಗಳು ಕಂಡುಹಿಡಿಯಬೇಕು," ಎಂದು ಕರೆ ನೀಡಿದರು.

ಮುಂದುವರಿದು ಮಾತನಾಡಿದ ಅವರು, "ಇಂದಿನ ಕಾಲಘಟ್ಟದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತಂತ್ರಜ್ಞಾನ ಸಂಶೋಧನೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ದೇಶದಲ್ಲಿ ಖಾಸಗಿ ಹಾಗೂ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಪರಸ್ಪರ ಎದುರಾಳಿಗಳು ಅಥವಾ ಸ್ಪರ್ಧಿಗಳಲ್ಲ. ಬದಲಿಗೆ ಇವೆರಡೂ ಸಂಸ್ಥೆಗಳು ದೇಶದ ಅಭಿವೃದ್ಧಿಗೆ ಪರಸ್ಪರ ಪೂರಕವಾಗಿ ಹಾಗೂ ಸಹಕಾರದಿಂದ ಕೆಲಸ ಮಾಡುವ ಸಹವರ್ತಿಗಳು ಎಂದು ಭಾವಿಸಬೇಕು," ಎಂದರು. ಅಲ್ಲದೆ, 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ' ಯೋಜನೆಗಳಿಗೆ ಈ ಸಾಧನೆ ಮತ್ತಷ್ಟು ಶಕ್ತಿ ತುಂಬಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹೆಚ್‌ಎಎಲ್ ಸಿಎಂಡಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.

ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್ ನಾಯ್ಡು ಮಾತನಾಡಿ, "ಸ್ವದೇಶಿ ತಂತ್ರಜ್ಞಾನದ 'ಶಕ್ತಿ' ಎಂಜಿನ್ ಅನ್ನು ಧ್ರುವ್ ಯುದ್ಧ ಹೆಲಿಕಾಪ್ಟರ್‌ನಲ್ಲಿ ಯಶಸ್ವಿಯಾಗಿ ಅಳವಡಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ 7 ವರ್ಷಗಳ ಅವಧಿಯಲ್ಲಿ 1,000 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಸಾಕಷ್ಟು ಉತ್ಸಾಹ ಮತ್ತು ಬೇಡಿಕೆ ಕಂಡುಬರುತ್ತಿದೆ," ಎಂದರು.

ತಮ್ಮ ಭಾವನಾತ್ಮಕ ಅನುಭವವನ್ನು ಹಂಚಿಕೊಂಡ ಸಚಿವರು, "ನಾನು ಹೆಚ್‌ಎಎಲ್ ಸಂಸ್ಥೆಗೆ ಬಂದಾಗಲೆಲ್ಲಾ ನಮ್ಮ ಸ್ವಂತ ಮನೆಗೆ ಬಂದಂತಹ ಅನುಭವವಾಗುತ್ತದೆ. ಇಲ್ಲಿನ ತಂತ್ರಜ್ಞಾನ ಮತ್ತು ವಿಮಾನಗಳನ್ನು ನೋಡುವಾಗ ಸಣ್ಣ ಮಗುವೊಂದು ಆಟಿಕೆ ಅಂಗಡಿಗೆ ಹೋದಾಗ ಪಡುವಷ್ಟೇ ಖುಷಿ ನನಗಾಗುತ್ತದೆ. ಇಂದು ಹೆಚ್‌ಎಎಲ್‌ನ ತಂತ್ರಜ್ಞಾನ ಮತ್ತು ಸಾಧನೆಗೆ ಇಡೀ ವಿಶ್ವವೇ ಮನಸೋತಿದೆ. ಯಾವುದೇ ಹೊಸ ಏರೋಸ್ಪೇಸ್ ಪ್ರಾಜೆಕ್ಟ್ ಬಂದರೂ ಅದನ್ನು ಮೊದಲು ಹೆಚ್‌ಎಎಲ್ ಸಂಸ್ಥೆಗೆ ನೀಡಬೇಕು ಎನಿಸುವಷ್ಟು ಮಟ್ಟಿಗೆ ಸಂಸ್ಥೆ ಬೆಳೆದಿದೆ. ಶೀಘ್ರದಲ್ಲೇ ಸಿಂಗಲ್ ವಿಂಡೋ ವ್ಯವಸ್ಥೆಯ ಮೂಲಕ ಹೆಲಿಕಾಪ್ಟರ್‌ಗಳಿಗೆ ಅಗತ್ಯವಿರುವ ಎಲ್ಲಾ ರಕ್ಷಣೆ ಹಾಗೂ ತಾಂತ್ರಿಕ ಕ್ಲಿಯರೆನ್ಸ್ ನೀಡಲಾಗುವುದು. ಹೆಚ್‌ಎಎಲ್‌ನ ಈ ಐತಿಹಾಸಿಕ ಮೈಲಿಗಲ್ಲು ದೇಶದ 'ಮೇಕ್ ಇನ್ ಇಂಡಿಯಾ' ಕಲ್ಪನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ," ಎಂದು ಬಣ್ಣಿಸಿದರು.

ಒಟ್ಟಾರೆಯಾಗಿ, ಹೆಚ್‌ಎಎಲ್ ಸಂಸ್ಥೆಯಲ್ಲಿ ದೇಶೀಯವಾಗಿಯೇ ತಯಾರಾದ ಈ ಲೋಹದ ಹಕ್ಕಿಗಳು ಇದೀಗ ಭಾರತೀಯ ವಾಯುಸೇನೆಯ ಅಖಾಡಕ್ಕಿಳಿಯಲು ಸಿದ್ಧವಾಗಿದ್ದು, ಭಾರತದ ರಕ್ಷಣಾ ವಲಯದಲ್ಲಿ ಹೊಸ ಭರವಸೆ ಮತ್ತು ಹೊಸ ಶಕ್ತಿಯನ್ನು ತುಂಬಿವೆ.

Add Zee News as a Preferred Source

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES