SOCIAL MEDIA

Newsletter

PARTNER SITES
Select Language Select State

ಚಂಡಮಾರುತದ ಭೀತಿ : ನವೆಂಬರ್ 16ರ ಸಂಜೆ ಅಪ್ಪಳಿಸಲಿದೆ 3ನೇ ಸೈಕ್ಲೋನ್, ಅಲರ್ಟ್‌ ಘೋಷಣೆ

ಬಂಗಾಳಕೊಲ್ಲಿಯ ಕಡಲ ಗರ್ಭದಲ್ಲಿ ಮತ್ತೊಂದು ಮಹಾ ಚಂಡಮಾರುತದ ರಕ್ಕಸ ಎದ್ದು ನಿಂತಿದ್ದಾನೆ.. 'ಅರ್ನಬ್' ಮತ್ತು 'ಮುರುಸು' ಚಂಡಮಾರುತಗಳ ಸರಣಿ ಆಘಾತದ ಬೆನ್ನಲ್ಲೇ, ಈಗ ಮೂರನೇ ಚಂಡಮಾರುತ ಪೂರ್ವ ಕರಾವಳಿಯ ಬಾಗಿಲು ತಟ್ಟಲು ಸಜ್ಜಾಗಿದೆ.. ಆಗ್ನೇಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು, ನವೆಂಬರ್ 15 ಮತ್ತು 16ರ ವೇಳೆಗೆ ಪೂರ್ಣ ಪ್ರಮಾಣದ ಚಂಡಮಾರುತವಾಗಿ ರೂಪಾಂತರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 14, 2026, 21:28 IST | Updated: Nov 14, 2026, 21:29 IST
Image Credit: Rain News
Join

ಬೆಂಗಳೂರು : 'ಅಕ್ವನ್' ಅರ್ಥಾತ್ ದುಷ್ಟಶಕ್ತಿ ಹಾಗೂ 'ಸೆನ್ಯಾರ್' ಎಂದೇ ಕರೆಯಲಾಗುತ್ತಿರುವ ಈ ಹೊಸ ಚಂಡಮಾರುತ, ನವೆಂಬರ್ 16ರ ಸಂಜೆಯ ವೇಳೆಗೆ ಉತ್ತರ ಆಂಧ್ರ ಮತ್ತು ದಕ್ಷಿಣ ಒಡಿಶಾ ಕರಾವಳಿಗೆ ಅಪ್ಪಳಿಸುವ ಭೀತಿ ಎದುರಾಗಿದೆ.. ಇದರ ಪರಿಣಾಮವಾಗಿ ಆಂಧ್ರ, ಒಡಿಶಾ ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲೂ ಗಂಟೆಗೆ 60 ಕಿಲೋಮೀಟರ್ ವೇಗದ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.. ಕಡಲ ತೀರದ ಜನರಲ್ಲಿ ನಡುಕ ಹುಟ್ಟಿಸಿರುವ ಈ ಹೊಸ ಚಂಡಮಾರುತದ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ..

ಪೂರ್ವ ಕರಾವಳಿಯ ಜನರಿಗೆ ಚಂಡಮಾರುತಗಳ ಸರಣಿ ಆತಂಕ ಮುಂದುವರಿದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ವೇಗವಾಗಿ ಬಲಗೊಳ್ಳುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ನವೆಂಬರ್ 15ರ ವೇಳೆಗೆ ಇದು ಅಧಿಕೃತವಾಗಿ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಬಂಗಾಳಕೊಲ್ಲಿಯಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಈ ಹವಾಮಾನ ವೈಪರೀತ್ಯವು ಸಮುದ್ರದಲ್ಲಿ ಬೃಹತ್ ಅಲೆಗಳನ್ನು ಸೃಷ್ಟಿಸುತ್ತಿದ್ದು, ಕರಾವಳಿ ಭಾಗದಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.

ಈ ಚಂಡಮಾರುತದ ಚಲನೆಯ ಪಥ ಅತ್ಯಂತ ಅಪಾಯಕಾರಿಯಾಗಿದೆ. ಬಂಗಾಳಕೊಲ್ಲಿಯ ಆಗ್ನೇಯ ಭಾಗದಿಂದ ತಮಿಳುನಾಡಿನ ಕರಾವಳಿ ಸೀಮೆಯ ಮೂಲಕ ಸಾಗಲಿರುವ ಈ ವ್ಯವಸ್ಥೆ, ನವೆಂಬರ್ 16ರ ಸಂಜೆಯ ಹೊತ್ತಿಗೆ ನೇರವಾಗಿ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ಈ ವೇಳೆ ಬಿರುಗಾಳಿಯ ವೇಗ ಗಂಟೆಗೆ 60 ಕಿಲೋಮೀಟರ್ ತಲುಪುವ ಸಾಧ್ಯತೆಯಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಮತ್ತು ಮರಗಳು ಧರೆಗುರುಳುವ ಭೀತಿ ಎದುರಾಗಿದೆ.

ಚಂಡಮಾರುತ ಅಪ್ಪಳಿಸಲಿರುವ ಆಂಧ್ರ ಮತ್ತು ಒಡಿಶಾ ರಾಜ್ಯಗಳಲ್ಲಿ ಯುದ್ಧೋಪಾದಿಯ ಸಿದ್ಧತೆಗಳು ಆರಂಭವಾಗಿವೆ. ಒಡಿಶಾದ ಕಟಕ್, ಬಾಲಾಸೋರ್ ಹಾಗೂ ಆಂಧ್ರದ ಕರಾವಳಿ ಭಾಗಗಳಲ್ಲಿ ನವೆಂಬರ್ 16 ರಿಂದ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಜಿಲ್ಲಾಡಳಿತಗಳು ಕರಾವಳಿ ಗ್ರಾಮಗಳ ಮೇಲೆ ನಿಗಾ ಇರಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಿವೆ. ಆದರೆ ಕಟಾವಿಗೆ ಬಂದಿರುವ ಬೆಳೆಗಳು ಮಳೆ ಪಾಲಾಗುವ ಭೀತಿ ಅನ್ನದಾತರನ್ನು ಕಂಗಾಲು ಮಾಡಿದೆ.

ಈ ಚಂಡಮಾರುತದ ನೇರ ಹೊಡೆತ ಆಂಧ್ರ-ಒಡಿಶಾಗೆ ಬಿದ್ದರೂ, ಇದರ ಬಾಲದ ಎಫೆಕ್ಟ್ ಇಡೀ ದಕ್ಷಿಣ ಭಾರತವನ್ನು ಆವರಿಸಲಿದೆ. ಕೇರಳದ ತಿರುವನಂತಪುರಂನಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದ್ದು, ಮುಂದಿನ 3 ದಿನ ಭಾರಿ ಮಳೆಯಾಗಲಿದೆ. ಅತ್ತ ತಮಿಳುನಾಡು ಮತ್ತು ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣವಿದ್ದು, ನವೆಂಬರ್ 16ರ ಆಸುಪಾಸಿನಲ್ಲಿ ಮಳೆಯ ಚಟುವಟಿಕೆಗಳು ಗರಿಗೆದರಲಿವೆ.

ಒಂದೇ ದೇಶದಲ್ಲಿ ಹವಾಮಾನ ವಿಚಿತ್ರ ವೈರುಧ್ಯವನ್ನು ಪ್ರದರ್ಶಿಸುತ್ತಿದೆ. ದಕ್ಷಿಣ ಭಾರತದಲ್ಲಿ ಸೈಕ್ಲೋನ್ ಮಳೆಯ ಭೀತಿ ಎದುರಾಗಿದ್ದರೆ, ಉತ್ತರ ಭಾರತದಲ್ಲಿ ಮಾತ್ರ ಯಾವುದೇ ಮಳೆಯ ಲಕ್ಷಣಗಳಿಲ್ಲ. ದೆಹಲಿ, ಹರಿಯಾಣ, ಪಂಜಾಬ್‌ನಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ರಾತ್ರಿ ವೇಳೆ ಚಳಿ ಹೆಚ್ಚಾಗುತ್ತಿದೆ. ಹಿಮಾಚಲ ಮತ್ತು ಉತ್ತರಾಖಂಡದ ಕೆಲವು ಕಡೆಗಳಲ್ಲಿ ವೆಸ್ಟರ್ನ್ ಡಿಸ್ಟರ್ಬೆನ್ಸ್‌ನಿಂದಾಗಿ ಹಗುರ ಮಳೆಯಾಗುವ ಸಾಧ್ಯತೆ ಬಿಟ್ಟರೆ, ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಆರ್ಭಟ ದಕ್ಷಿಣ ಮತ್ತು ಪೂರ್ವ ಕರಾವಳಿಗಷ್ಟೇ ಸೀಮಿತವಾಗಿದೆ.

ಒಟ್ಟಿನಲ್ಲಿ, ಬಂಗಾಳಕೊಲ್ಲಿಯ ಆಳ ಸಮುದ್ರದಲ್ಲಿ ಸೃಷ್ಟಿಯಾಗುತ್ತಿರುವ ಈ ಮೂರನೇ ಚಂಡಮಾರುತ ಪೂರ್ವ ಕರಾವಳಿ ಮತ್ತು ದಕ್ಷಿಣ ಭಾರತದ ನಿದ್ದೆಗೆಡಿಸಿದೆ.. ನವೆಂಬರ್ 16ರ ಸಂಜೆ ಆಂಧ್ರ ಮತ್ತು ಒಡಿಶಾ ನಡುವೆ ಇದು ಅಪ್ಪಳಿಸುವಾಗ ಯಾವ ರೀತಿಯ ವಿನಾಶ ಸೃಷ್ಟಿಸಲಿದೆ ಎಂಬ ಭೀತಿ ಶುರುವಾಗಿದೆ.. ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯ ಬೆನ್ನಲ್ಲೇ ಆಡಳಿತ ಯಂತ್ರಗಳು ಕಟ್ಟೆಚ್ಚರ ವಹಿಸಿದ್ದು, ಕಡಲ ತೀರದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES