SOCIAL MEDIA

Newsletter

PARTNER SITES
Select Language Select State

ಕೋಟ್ಯಂತರ ಭಾರತೀಯರ ನೆಚ್ಚಿನ 'ಟೈಟಾನ್ ವಾಚ್' ಹುಟ್ಟಿದ್ದು ಹೇಗೆ ಗೊತ್ತಾ?

ಇಂದು ನಾವೆಲ್ಲರೂ ಧರಿಸುವ ಪ್ರತಿಯೊಂದು ಟೈಟಾನ್ ವಾಚ್‌ನ ಹಿಂದೆ, ತಮಿಳುನಾಡಿನ ಆ ಪುಟ್ಟ ಪಟ್ಟಣವಾದ ಹೊಸೂರಿನಲ್ಲಿ ಕಟ್ಟಿದ ಕನಸು, ಸಾವಿರಾರು ಯುವಕರ ಬೆವರು ಮತ್ತು ಭಾರತೀಯ ನಾವೀನ್ಯತೆಯ ಹೆಮ್ಮೆಯ ಇತಿಹಾಸವಿದೆ.

Reported By Manjunath Naragund Written By Manjunath Naragund
Published: Sep 13, 2026, 11:23 AM IST | Updated: Sep 17, 2026, 03:59 PM IST
Image Credit: Tata watch
Join

ಒಂದು ಪುಟ್ಟ ಪಟ್ಟಣವು ಇಡೀ ದೇಶದ ಸಮಯ ನೋಡುವ ಅಥವಾ ಸಮಯದೊಂದಿಗೆ ವ್ಯವಹರಿಸುವ ರೀತಿಯನ್ನೇ ಸಂಪೂರ್ಣವಾಗಿ ಬದಲಾಯಿಸಬಲ್ಲದೇ? ಈ ಪ್ರಶ್ನೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸಿಗುವ ಅತ್ಯಂತ ಯಶಸ್ವಿ ಉತ್ತರ—'ಟೈಟಾನ್', ಹೌದು, ಇಂದು ಕೋಟ್ಯಂತರ ಭಾರತೀಯರಿಗೆ ಟೈಟಾನ್ ಕೇವಲ ಒಂದು ಕೈಗಡಿಯಾರದ ಬ್ರ್ಯಾಂಡ್ ಮಾತ್ರವಲ್ಲ; ಅದು ನಮ್ಮ ಜೀವನದ ಪ್ರಮುಖ ಘಟ್ಟಗಳು, ಹಬ್ಬದ ಸಂಭ್ರಮಗಳು ಮತ್ತು ಮಧುರ ನೆನಪುಗಳೊಂದಿಗೆ ಬೆಸೆದುಕೊಂಡಿರುವ ಪ್ರೀತಿಯ ಮನೆಮಾತಾಗಿದೆ. ಮೊದಲ ಸಂಬಳ ಬಂದಾಗ ಹೆತ್ತವರಿಗೆ ನೀಡುವ ಉಡುಗೊರೆಯಾಗಿರಲಿ, ಪದವಿ ಮುಗಿಸಿದ ಸಂಭ್ರಮದ ನೆನಪಾಗಿರಲಿ ಅಥವಾ ಮದುವೆಯ ಶುಭ ಮುಹೂರ್ತದ ಕಳಸವಾಗಿರಲಿ ಟೈಟಾನ್ ವಾಚ್‌ಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿವೆ.

ಆದರೆ, ಅಚ್ಚರಿ ಎಂದರೆ ಬಹುತೇಕರಿಗೆ ಭಾರತದ ಅತಿ ದೊಡ್ಡ ಗ್ರಾಹಕ ಬ್ರ್ಯಾಂಡ್‌ಗಳಲ್ಲಿ ಒಂದಾದ ಟೈಟಾನ್‌ನ ಈ ಅದ್ಭುತ ಪಯಣ ಪ್ರಾರಂಭವಾಗಿದ್ದು ತಮಿಳುನಾಡಿನ 'ಹೊಸೂರು' ಎಂಬ ತೀರಾ ಪುಟ್ಟ ಪಟ್ಟಣದಲ್ಲಿ ಎಂಬುದು ತಿಳಿದಿಲ್ಲ.ಇತ್ತೀಚಿನ MX ಪ್ಲೇಯರ್ ಸರಣಿ 'ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ' (Made in India: A Titan Story) ಹೊರಹಾಕಿರುವ ಈ ಯಶೋಗಾಥೆಯು, ದೂರದೃಷ್ಟಿ ಮತ್ತು ನಂಬಿಕೆಯಿಂದ ಕಟ್ಟಿದ ಉದ್ಯಮ ಹೇಗೆ ದೇಶದ ಚಿತ್ರಣವನ್ನೇ ಬದಲಾಯಿಸಬಲ್ಲದು ಎಂಬುದಕ್ಕೆ ಅತ್ಯುತ್ತಮ ನಿದರ್ಶನ ಎಂದು ಹೇಳಬಹುದು.

1980 ರ ದಶಕದ ಆರಂಭದ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ, ಭಾರತದಲ್ಲಿ ಒಂದು ಕೈಗಡಿಯಾರ ಹೊಂದುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂದಿನ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ HMT ಕಂಪನಿಯ ವಾಚ್‌ಗಳದ್ದೇ ಕಾರುಬಾರು. ಗ್ರಾಹಕರು ತಮಗಿಷ್ಟವಾದ ವಾಚ್ ಪಡೆಯಲು ಶೋರೂಮ್‌ಗಳ ಮುಂದೆ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಇನ್ನು ಆಧುನಿಕ ವಿನ್ಯಾಸದ 'ಕ್ವಾರ್ಟ್ಜ್' ವಾಚ್‌ಗಳನ್ನು ಪಡೆಯಬೇಕೆಂದರೆ ವಿದೇಶದಲ್ಲಿದ್ದ ಸಂಬಂಧಿಕರು ತಂದುಕೊಡಬೇಕಿತ್ತು. ಹೀಗಾಗಿ, ಸಮಾಜದಲ್ಲಿ ಅದೊಂದು ಅತ್ಯಂತ ದುಬಾರಿ ಹಾಗೂ ಐಷಾರಾಮಿ ವಸ್ತುವಾಗಿ ಮಾತ್ರ ಉಳಿದುಕೊಂಡಿತ್ತು.

ಸಾಮಾನ್ಯ ಭಾರತೀಯ ಕುಟುಂಬಗಳಿಗೆ ಕೈಗೆಟುಕುವ ಬೆಲೆಯಲ್ಲಿ, ಆಧುನಿಕ ವಿನ್ಯಾಸದ ಗಡಿಯಾರಗಳನ್ನು ತಲುಪಿಸಬೇಕು ಮತ್ತು ಈ ಮಾರುಕಟ್ಟೆಯ ಕಷ್ಟಕರ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಎಂಬ ಉದ್ದೇಶದಿಂದ ಹುಟ್ಟಿಕೊಂಡಿದ್ದೇ ಟೈಟಾನ್ ಸಂಸ್ಥೆ.

ಟೈಟಾನ್ ಸ್ಥಾಪನೆಯ ಹಿಂದಿದ್ದ ಆ ಧೈರ್ಯಶಾಲಿ ದೃಷ್ಟಿಕೋನ

1984 ರಲ್ಲಿ ಟಾಟಾ ಇಂಡಸ್ಟ್ರೀಸ್ ಮತ್ತು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಜಂಟಿಯಾಗಿ ಕೈಜೋಡಿಸಿ ಟೈಟಾನ್ ಸಂಸ್ಥೆಯನ್ನು ಸ್ಥಾಪಿಸಿದವು. 1987 ರಲ್ಲಿ ಸಂಸ್ಥೆಯು ಅಧಿಕೃತವಾಗಿ ತನ್ನ ಮೊದಲ ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಜಾಗತಿಕ ಮಟ್ಟದ ಶೈಲಿ, ಅತ್ಯುತ್ತಮ ಗುಣಮಟ್ಟ ಮತ್ತು ಪ್ರತಿಯೊಬ್ಬರಿಗೂ ಸಿಗುವಂತಹ ಸಮಂಜಸ ದರ ಈ ಮೂರನ್ನೂ ಒಂದೇ ಸೂರಿನಡಿ ತರುವುದು ಟೈಟಾನ್‌ನ ಮುಖ್ಯ ಉದ್ದೇಶವಾಗಿತ್ತು.

ಈ ಸಾಹಸದ ಯೋಜನೆಯ ಸಾರಥ್ಯವನ್ನು ವಹಿಸಿಕೊಂಡವರು ಟಾಟಾ ಗ್ರೂಪ್‌ನ ದೃಷ್ಟಾರ ನಾಯಕ ಝೆರ್ಕ್ಸೆಸ್ ದೇಸಾಯಿ.ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಿಗಿಂತ ಉತ್ತಮವಾದ ಉತ್ಪನ್ನಗಳು ಭಾರತದಲ್ಲೇ ತಯಾರಾಗಬೇಕು ಎಂಬ ಗಟ್ಟಿ ನಂಬಿಕೆ ಅವರದ್ದಾಗಿತ್ತು. ಕೇವಲ ದೊಡ್ಡ ನಗರಗಳಲ್ಲಿ ಕಾರ್ಖಾನೆ ತೆರೆದು ಲಾಭ ಮಾಡುವುದಕ್ಕಿಂತ, ಕೈಗಾರಿಕಾ ಪ್ರಗತಿ ಕಾಣದ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಿ ಆ ಸಮುದಾಯವನ್ನೂ ಬೆಳೆಸಬೇಕು ಎಂಬ ಉದಾತ್ತ ಚಿಂತನೆ ಅವರಿಗಿತ್ತು.

ಪ್ರಥಮ ಉತ್ಪಾದನಾ ಘಟಕಕ್ಕೆ 'ಹೊಸೂರು' ಆಯ್ಕೆಯಾಗಿದ್ದು ಏಕೆ?

ಟಾಟಾ ಸಂಸ್ಥಾಪಕ ಜಮ್ಸೆಟ್ಜಿ ಟಾಟಾ ಅವರ "ಉದ್ಯಮದ ಮೂಲಕ ಸಮುದಾಯ ಅಭಿವೃದ್ಧಿ" ಎಂಬ ತತ್ವವನ್ನೇ ಟೈಟಾನ್ ಮೈಗೂಡಿಸಿಕೊಂಡಿತ್ತು. ಹೀಗಾಗಿ, ಪ್ರಸಿದ್ಧ ಕೈಗಾರಿಕಾ ನಗರಗಳನ್ನು ಆಯ್ಕೆ ಮಾಡುವ ಬದಲು, ಬೆಂಗಳೂರಿನಿಂದ 40 ಕಿಲೋಮೀಟರ್ ದೂರದಲ್ಲಿದ್ದ, ಯಾವುದೇ ದೊಡ್ಡ ಉದ್ಯೋಗಾವಕಾಶಗಳಿಲ್ಲದ ತಮಿಳುನಾಡಿನ ಹೊಸೂರು ಪಟ್ಟಣವನ್ನು ಟೈಟಾನ್ ತನ್ನ ಮೊದಲ ಕಾರ್ಖಾನೆಗೆ ಆಯ್ಕೆ ಮಾಡಿಕೊಂಡಿತು.

ಅಂದು ಟೈಟಾನ್ ತೆಗೆದುಕೊಂಡ ಈ ಒಂದು ನಿರ್ಧಾರ, ಕಾಲಕ್ರಮೇಣ ಹೊಸೂರು ಪಟ್ಟಣವನ್ನು ಇಡೀ ದೇಶವೇ ತಿರುಗಿ ನೋಡುವಂತಹ ಬೃಹತ್ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಿತು.

ಟೈಟಾನ್ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಘಟ್ಟವೆಂದರೆ ಸಂಸ್ಥೆಯ ನೇಮಕಾತಿ ಪ್ರಕ್ರಿಯೆ. ಸೂಕ್ಷ್ಮ ಗಡಿಯಾರಗಳನ್ನು ತಯಾರಿಸಲು ಅಗತ್ಯವಿದ್ದ ಕೌಶಲ್ಯಪೂರ್ಣ ಕೆಲಸಗಾರರು ಆ ಸಮಯದಲ್ಲಿ ಹೊಸೂರಿನಲ್ಲಿ ಸಿಗಲಿಲ್ಲ. ಆದರೆ ಟೈಟಾನ್ ಹಿಂಜರಿಯಲಿಲ್ಲ; ಬದಲಿಗೆ ಸಂಪೂರ್ಣ ಹೊಸ ದಾರಿಯನ್ನು ತುಳಿಯಿತು.

ಟೈಟಾನ್‌ನ ತಂಡಗಳು ಸ್ಥಳೀಯ ಶಾಲೆ ಮತ್ತು ಕಾಲೇಜುಗಳಿಗೆ ನೇರವಾಗಿ ಭೇಟಿ ನೀಡಿ, 17 ವರ್ಷ ಮೇಲ್ಪಟ್ಟ ಆಸಕ್ತ ಯುವಕ-ಯುವತಿಯರನ್ನು ಗುರುತಿಸಿದವು. ಅವರಿಗೆ ಸೂಕ್ತ ಪರೀಕ್ಷೆ ನಡೆಸಿ, ಗಡಿಯಾರ ತಯಾರಿಕೆಯ ಉನ್ನತ ಮಟ್ಟದ ತರಬೇತಿಯನ್ನು ಉಚಿತವಾಗಿ ನೀಡಲಾಯಿತು. ದೂರದ ಊರುಗಳಿಂದ ಬಂದವರಿಗೆ ವಸತಿ ಮತ್ತು ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಕಂಪನಿಯೇ ನೀಡಿತು.

ಈ ಯುವಕರಲ್ಲಿ ಬಹುತೇಕರು ತಮ್ಮ ಜೀವನದಲ್ಲಿ ಗಡಿಯಾರ ಕಾರ್ಖಾನೆಯನ್ನೇ ಕಂಡವರಲ್ಲ. ಆದರೆ ಕೆಲವೇ ವರ್ಷಗಳಲ್ಲಿ, ಇದೇ ತರಬೇತಿ ಪಡೆದ ಯುವಕರು ಚಿನ್ನದ ಲೇಪಿತ ಡಯಲ್‌ಗಳು, ಚರ್ಮದ ಪಟ್ಟಿಗಳು, ಸ್ಟೀಲ್ ಬಳೆಗಳು ಮತ್ತು ಅತ್ಯಾಧುನಿಕ ಸ್ಫಟಿಕ ಗಡಿಯಾರಗಳನ್ನು ಸಿದ್ಧಪಡಿಸುವಲ್ಲಿ ನಿಪುಣರಾದರು. ಉದ್ಯೋಗಕ್ಕಾಗಿ ಕಂಪನಿಗೆ ಬಂದ ಈ ಯುವಕರು, ಮುಂದೆ ತಮ್ಮ ಕುಟುಂಬಗಳ ಆರ್ಥಿಕ ಸ್ಥಿತಿಯನ್ನೇ ಬದಲಾಯಿಸಿಕೊಂಡರು. ಈ ಯುವಕರ ಮುಂದಿನ ಪೀಳಿಗೆಯ ಮಕ್ಕಳು ಇಂದು ಡಾಕ್ಟರ್, ಎಂಜಿನಿಯರ್ ಹಾಗೂ ಅಂತರರಾಷ್ಟ್ರೀಯ ಮಟ್ಟದ ಉನ್ನತ ಹುದ್ದೆಗಳಲ್ಲಿ ಮೆರೆಯುತ್ತಿದ್ದಾರೆ.

ಭಾರತೀಯರ ಮನಸೂರೆಗೊಂಡ ಆ ಐಕಾನಿಕ್ 'ಟೈಟಾನ್ ಟ್ಯೂನ್'!

ಭಾರತೀಯರ ಮನಸ್ಸಿನಲ್ಲಿ ಟೈಟಾನ್ ಇಷ್ಟೊಂದು ಹತ್ತಿರವಾಗಲು ಅದರ ಜಾಹೀರಾತುಗಳು ಮತ್ತು ಹಿನ್ನೆಲೆ ಸಂಗೀತವೂ ಪ್ರಮುಖ ಕಾರಣ. ಪ್ರಸಿದ್ಧ ಸಂಗೀತಗಾರ ಮೊಜಾರ್ಟ್ ಅವರ 'ಸಿಂಫನಿ ಸಂಖ್ಯೆ 25' ಅನ್ನು ಆಧರಿಸಿ ಸಿದ್ಧಪಡಿಸಿದ ಆ ಕ್ಲಾಸಿಕ್ ಸಂಗೀತದ ಧ್ವನಿ ಕೇಳಿದರೆ ಸಾಕು, ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ಟೈಟಾನ್ ನೆನಪಾಗುತ್ತದೆ.

ಕೇವಲ ವಸ್ತುವನ್ನು ಮಾರಾಟ ಮಾಡುವುದಕ್ಕಿಂತ ಗ್ರಾಹಕರ ಭಾವನೆಗಳ ಜೊತೆ ಕನೆಕ್ಟ್ ಆಗುವುದು ಮುಖ್ಯ ಎಂದು ಸಂಸ್ಥೆ ನಂಬಿತ್ತು. ಈ ಆಲೋಚನೆಯಿಂದಲೇ ಹುಟ್ಟಿಕೊಂಡಿದ್ದು ಟೈಟಾನ್‌ನ Joy of Gifting ಅಭಿಯಾನಗಳು. ಇದು ಭಾರತೀಯರ ಉಡುಗೊರೆ ನೀಡುವ ಸಂಸ್ಕೃತಿಯನ್ನೇ ಬದಲಾಯಿಸಿತು.

ಬೆಂಗಳೂರಿನಲ್ಲಿ ತೆರೆಯಿತು ಪ್ರಥಮ ಶೋರೂಮ್..!

1987 ರ ಡಿಸೆಂಬರ್ 23 ರಂದು ಬೆಂಗಳೂರಿನ ಸಫೀನಾ ಪ್ಲಾಜಾದಲ್ಲಿ ಟೈಟಾನ್ ತನ್ನ ಚಿಲ್ಲರೆ ವ್ಯಾಪಾರದ ಮೊದಲ ಆಕರ್ಷಕ ಶೋರೂಮ್ ಅನ್ನು ಪ್ರಾರಂಭಿಸಿತು. ಅದಕ್ಕೂ ಮುನ್ನ ವಾಚ್‌ಗಾಗಿ ತಿಂಗಳುಗಟ್ಟಲೆ ಕಾಯುತ್ತಿದ್ದ ಜನರಿಗೆ, ಶೋರೂಮ್‌ನಲ್ಲಿ ಸಾಲು ಸಾಲಾಗಿ ಕಣ್ಣುಕೈಗೆ ಸಿಗುವ ಅತ್ಯಾಧುನಿಕ ವಾಚ್‌ಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.ಪತ್ರಿಕೆಗಳಲ್ಲಿ ಬಂದ ಟೈಟಾನ್ ಜಾಹೀರಾತುಗಳ ಕಟಿಂಗ್‌ಗಳನ್ನು ಹಿಡಿದುಕೊಂಡು ಜನರು ಶೋರೂಮ್ ಮುಂದೆ ಸಾಲಾಗಿ ನಿಂತು ವಾಚ್ ಖರೀದಿಸುತ್ತಿದ್ದರು. ಅಲ್ಲಿಂದ ಮುಂದೆ ಟೈಟಾನ್‌ಗೆ ಹಿಂತಿರುಗಿ ನೋಡುವ ಅಗತ್ಯವೇ ಬರಲಿಲ್ಲ.

ಕೈಗಡಿಯಾರಗಳ ಯಶಸ್ಸಿನ ನಂತರ ಟೈಟಾನ್ ತನ್ನ ವ್ಯಾಪ್ತಿಯನ್ನು ಹಲವು ಕ್ಷೇತ್ರಗಳಿಗೆ ವಿಸ್ತರಿಸಿತು. ಭಾರತೀಯರ ಅಗತ್ಯಕ್ಕೆ ತಕ್ಕಂತೆ ತಾನಿಷ್ಕ್, ಫಾಸ್ಟ್ರ್ಯಾಕ್,ಸೋನಾಟಾ, ಟೈಟಾನ್ ಐ+ ,ತನೈರಾ ನಂತಹ ಹೊಸ ಬ್ರ್ಯಾಂಡ್‌ಗಳನ್ನು ಹುಟ್ಟುಹಾಕಿತು.ಇವುಗಳ ಜೊತೆಗೆ ಮಕ್ಕಳಿಗಾಗಿ ವರ್ಣರಂಜಿತ 'ಝೂಪ್', ಸಾಹಸಿಗಳಿಗಾಗಿ 'ಟೈಟಾನ್ ಆಕ್ಟೇನ್' ಹಾಗೂ ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ 'ಸ್ಮಾರ್ಟ್ ವಾಚ್'ಗಳನ್ನು ಮಾರುಕಟ್ಟೆಗೆ ತರುವ ಮೂಲಕ ಸಂಸ್ಥೆಯು ತನ್ನ ಯಶಸ್ಸಿನ ಪಯಣವನ್ನು ನಿರಂತರವಾಗಿ ಕಾಯ್ದುಕೊಂಡಿದೆ.

ಹೊಸೂರಿನ ಒಂದು ಸಣ್ಣ ಗೋದಾಮಿನಂತಿದ್ದ ಜಾಗದಲ್ಲಿ ಆರಂಭವಾದ ಟೈಟಾನ್, ಇಂದು ಇಡೀ ಭಾರತ ದೇಶದ ಸಮಯವನ್ನಷ್ಟೇ ಅಲ್ಲದೆ, ದೇಶದ ಮಾರುಕಟ್ಟೆ ಸಂಸ್ಕೃತಿಯನ್ನೇ ಬದಲಾಯಿಸಿದೆ. ಕೇವಲ ಹಣ ಗಳಿಸುವುದಷ್ಟೇ ಉದ್ಯಮದ ಗುರಿಯಾಗಬಾರದು, ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಮೂಲಕವೂ ಜಾಗತಿಕ ಮಟ್ಟದ ಉದ್ಯಮ ಕಟ್ಟಬಹುದು ಎಂದು ಟೈಟಾನ್ ಸಾಬೀತುಪಡಿಸಿದೆ.

ಇಂದು ನಾವೆಲ್ಲರೂ ಧರಿಸುವ ಪ್ರತಿಯೊಂದು ಟೈಟಾನ್ ವಾಚ್‌ನ ಹಿಂದೆ, ತಮಿಳುನಾಡಿನ ಆ ಪುಟ್ಟ ಪಟ್ಟಣವಾದ ಹೊಸೂರಿನಲ್ಲಿ ಕಟ್ಟಿದ ಕನಸು, ಸಾವಿರಾರು ಯುವಕರ ಬೆವರು ಮತ್ತು ಭಾರತೀಯ ನಾವೀನ್ಯತೆಯ ಹೆಮ್ಮೆಯ ಇತಿಹಾಸವಿದೆ.

 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES