SOCIAL MEDIA

Newsletter

PARTNER SITES
Select Language Select State

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ನವಜಾತ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ವಿತರಣೆ.. 1.28 ಲಕ್ಷ ಮಕ್ಕಳಿಗೆ ಬಂಗಾರ

ಟಿವಿಕೆ ಸರ್ಕಾರವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ಜನಪ್ರಿಯ ಥೈಮಾಮನ್ ತಂಗ ಮೋತಿರಾಮ್ ತಿಟ್ಟಂ ಚಿನ್ನದ ಉಂಗುರ ಯೋಜನೆಗೆ ಅಧಿಕೃತವಾಗಿ ಸೆಪ್ಟೆಂಬರ್‌ 28 ರಂದು ಚಾಲನೆ

Written By Bhimappa
Published: Sep 27, 2026, 07:12 PM IST | Updated: Sep 27, 2026, 07:19 PM IST
Image Credit: Gold_Rings
Join

CM Joseph Vijay ambitious project Thaimaman Thanga Mothiram Thittam: ತಮಿಳುನಾಡು ರಾಜಕಾರಣದಲ್ಲಿ ಜನಪರ ಕಲ್ಯಾಣ ಕಾರ್ಯಕ್ರಮಗಳ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಈ ಯೋಜನೆ ಆಗಿದೆ. ರಾಜ್ಯದ ಆಡಳಿತಾರೂಢ ಟಿವಿಕೆ ಸರ್ಕಾರವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ಜನಪ್ರಿಯ ಥೈಮಾಮನ್ ತಂಗ ಮೋತಿರಾಮ್ ತಿಟ್ಟಂ ಚಿನ್ನದ ಉಂಗುರ ಯೋಜನೆಗೆ ಅಧಿಕೃತವಾಗಿ ಸೆಪ್ಟೆಂಬರ್‌ 28 ರಂದು ಚಾಲನೆ ಸಿಗಲಿದೆ. ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ಸರ್ಕಾರದ ವತಿಯಿಂದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವ ಈ ವಿನೂತನ ಹಾಗೂ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್ ಅವರು ಉದ್ಘಾಟನೆ ಮಾಡಲಿದ್ದಾರೆ.

ಈ ಯೋಜನೆಯ ಉದ್ಘಾಟನಾ ಸಮಾರಂಭವು ನಾಳೆ ಅಂದರೆ ಸೆಪ್ಟೆಂಬರ್‌ 28 ರಂದು ಮಧ್ಯಾಹ್ನ 12 ಗಂಟೆಗೆ ತಮಿಳುನಾಡಿನ ಮಧುರೈನ ಪ್ರಸಿದ್ಧ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಅತ್ಯಂತ ವೈಭವಪೂರಕವಾಗಿ ನಡೆಯಲಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮುಖ್ಯಮಂತ್ರಿ ಜೋಸೆಫ್‌ ವಿಜಯ್ ಅವರು ಮೊದಲ ಹಂತದಲ್ಲಿ 35 ಮಕ್ಕಳಿಗೆ ಖುದ್ದಾಗಿ ತಮ್ಮ ಹಸ್ತದಿಂದ ಚಿನ್ನದ ಉಂಗುರಗಳನ್ನು ಹಾಕುವ ಮೂಲಕ ಈ ಜನಪರ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ಈ ವಿಶಿಷ್ಟ ಹೆಜ್ಜೆಯಿಂದಾಗಿ ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದ ಕಡೆಯಿಂದ ದೊಡ್ಡ ಪ್ರಮಾಣದ ಆರ್ಥಿಕ, ಭಾವನಾತ್ಮಕ ಬೆಂಬಲ ಸಿಕ್ಕಂತಾಗಿದೆ.

ಯೋಜನೆಯ ವಿಸ್ತೃತ ವಿವರಗಳನ್ನು ನೋಡುವುದಾದರೆ, 2026ರ ಜೂನ್ 22 ರಿಂದ ಈಚೆಗೆ ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸಿದ ಎಲ್ಲ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಅದರಂತೆ, ಜೂನ್ 22 ರಿಂದ ಸೆಪ್ಟೆಂಬರ್ 27ರ ಅವಧಿಯಲ್ಲಿ ಜನಿಸಿರುವ ಸುಮಾರು 1.28 ಲಕ್ಷ ಮಕ್ಕಳಿಗೆ ನಾಳೆ ಒಂದೇ ದಿನ ರಾಜ್ಯಾದ್ಯಂತ ಇರುವ ಒಟ್ಟು 102 ಪ್ರಮುಖ ಕೇಂದ್ರಗಳ ಮೂಲಕ ಚಿನ್ನದ ಉಂಗುರಗಳನ್ನು ವಿತರಿಸಲಾಗುತ್ತದೆ. ಈ ಬೃಹತ್ ಕಾರ್ಯಕ್ರಮಕ್ಕಾಗಿ ಆಡಳಿತ ಯಂತ್ರವು ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಿದೆ ಎನ್ನುವುದು ವಿಶೇಷ ಎನಿಸಿದೆ.

ಫಲಾನುಭವಿಗಳ ಪೋಷಕರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಉಂಗುರಗಳನ್ನು ವಿತರಿಸುವ ಮುಖ್ಯ ಉದ್ದೇಶದಿಂದ, ಅರ್ಹ ಮಕ್ಕಳ ಪೋಷಕರಿಗೆ ವೈದ್ಯಕೀಯ ಅಧಿಕಾರಿಗಳ ಕಡೆಯಿಂದ ಅಧಿಕೃತ ಗುರುತಿನ ಚೀಟಿಯನ್ನು ನೀಡಲಾಗಿದೆ. ಪೋಷಕರು ಈ ಗುರುತಿನ ಚೀಟಿಯನ್ನು ಸಂಬಂಧಪಟ್ಟ ವಿತರಣಾ ಕೇಂದ್ರಗಳಲ್ಲಿ ತೋರಿಸಿ ನಾಳೆ ಅಂದರೆ ಸೆಪ್ಟೆಂಬರ್ 28 ರಂದು ಒಂದು ಗ್ರಾಂ ತೂಕದ ಚಿನ್ನದ ಉಂಗುರವನ್ನು ಪಡೆದುಕೊಳ್ಳಬಹುದು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಈ ಪ್ರಕ್ರಿಯೆಯನ್ನು ನಡೆಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಬೃಹತ್ ಯೋಜನೆಯ ಪಾರದರ್ಶಕತೆ ಮತ್ತು ಗುಣಮಟ್ಟದ ಕಡೆಗೂ ವಿಶೇಷ ಗಮನಹರಿಸಲಾಗಿದೆ. ಪ್ರಸಿದ್ಧ ಆಭರಣ ಸಂಸ್ಥೆಯಾದ ಜಾಯ್ ಆಲುಕಾಸ್ Joyalukkas ಕಂಪನಿಯು ಥೈಮಾಮನ್ ಚಿನ್ನದ ಉಂಗುರ ಯೋಜನೆಯ ಮೊದಲ ಹಂತದ ಅಡಿಯಲ್ಲಿ ಒಟ್ಟು 89,955 ಚಿನ್ನದ ಉಂಗುರಗಳನ್ನು ಅತ್ಯಂತ ನೈಪುಣ್ಯತೆಯಿಂದ ತಯಾರಿಸಿ ವಿತರಿಸಿದೆ. ವಿಶೇಷವೆಂದರೆ, ವಿತರಿಸಲಾಗುವ ಪ್ರತಿಯೊಂದು ಉಂಗುರವು ಅತ್ಯುನ್ನತ ಗುಣಮಟ್ಟವನ್ನು ಹೊಂದಿದ್ದು, ಬಿಐಎಸ್ BIS ಹಾಲ್‌ಮಾರ್ಕ್ ಮುದ್ರೆಯನ್ನು ಹೊಂದಿದೆ. ಪ್ರತಿಯೊಂದು ಉಂಗುರವು ನಿಖರವಾಗಿ ಒಂದು ಗ್ರಾಂ ತೂಕವನ್ನು ಹೊಂದಿದ್ದು, ಶುದ್ಧವಾದ 22 ಕ್ಯಾರೆಟ್ ಚಿನ್ನದಿಂದ ಇದನ್ನು ನಿರ್ಮಿಸಲಾಗಿದೆ.

ಮುಂದಿನ ದಿನಗಳಲ್ಲಿ ಈ ಯೋಜನೆಯ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿಕೊಳ್ಳಲಿದ್ದು, ಸುಮಾರು 4.41 ಲಕ್ಷಕ್ಕೂ ಅಧಿಕ ಮಕ್ಕಳು ಈ ಚಿನ್ನದ ಉಂಗುರ ಯೋಜನೆಯಿಂದ ನೇರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಜೋಸೆಫ್ ವಿಜಯ್‌ ಅವರ ನೇತೃತ್ವದ ಸರ್ಕಾರವು ಬಾಣಂತಿ ಹಾಗೂ ನವಜಾತ ಶಿಶುಗಳ ಆರೋಗ್ಯ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಜಾರಿಗೆ ತಂದಿರುವ ಈ ಥೈಮಾಮನ್ ತಂಗ ಮೋತಿರಾಮ್ ತಿಟ್ಟಂ ಯೋಜನೆಗೆ ಸಾರ್ವಜನಿಕ ವಲಯದಿಂದ ಮತ್ತು ತಾಯಂದರಿಂದ ದೊಡ್ಡ ಮಟ್ಟದ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗುತ್ತಿದೆ.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES