SOCIAL MEDIA

Newsletter

PARTNER SITES
Select Language Select State

ಬಿಸ್ಲೆರಿ ನೀರಿನ ಮಾದರಿಯಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ! ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ FSSAI ಸಜ್ಜು

ಬಿಸ್ಲೆರಿ ಕಂಪನಿಯ ಕುಡಿಯುವ ನೀರಿನ ಮಾದರಿಯಲ್ಲಿ ಎರಡು ಬಾರಿ ನಡೆಸಿದ ಪ್ರಯೋಗಾಲಯ ಪರೀಕ್ಷೆಯಲ್ಲೂ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಪತ್ತೆಯಾಗಿದೆ. ಮೊದಲ ಪರೀಕ್ಷೆಯಲ್ಲಿ ಬ್ರೋಮೇಟ್ ಹಾಗೂ ಎರಡನೇ ಪರೀಕ್ಷೆಯಲ್ಲಿ ಕ್ಯಾನ್ಸರ್‌ಕಾರಕವೆಂದು ಪರಿಗಣಿಸಲಾದ PAHs ಅಂಶಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ FSSAI, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಇದೇ ವೇಳೆ ಕೃತಕ ಬಣ್ಣಗಳ ಬಳಕೆ ಹಿನ್ನೆಲೆಯಲ್ಲಿ ಆಶಾ ಕನ್ಫೆಕ್ಷನರಿಯ ಚಾಕೊಲೇಟ್ ಕುಕೀಸ್‌ಗಳ ಬ್ಯಾಚ್ ವಾಪಸ್ ಪಡೆಯಲು ಆದೇಶಿಸಲಾಗಿದೆ.

Written By Puttaraj K Alur
Published: Nov 23, 2026, 10:58 IST | Updated: Nov 23, 2026, 11:16 IST
Image Credit: Bisleri Water
Join

Bisleri Water: ದೇಶದ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೆರಿ ಇಂಟರ್‌ನ್ಯಾಶನಲ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಕಂಪನಿಯ ಘಟಕದಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರಾಸಾಯನಿಕ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮಕ್ಕೆ ಮುಂದಾಗಿದೆ. ಆರಂಭಿಕ ಪ್ರಯೋಗಾಲಯ ಪರೀಕ್ಷೆಯಲ್ಲಿ ನೀರಿನ ಮಾದರಿ ಅಸುರಕ್ಷಿತ ಎಂದು ವರದಿ ಬಂದಿತ್ತು. ಕಂಪನಿ ಈ ವರದಿಯನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಬಳಿಕ ಮತ್ತೊಂದು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಅಲ್ಲಿಯೂ ನೀರು ಸುರಕ್ಷಿತವಲ್ಲವೆಂಬ ಅಂಶ ದೃಢಪಟ್ಟಿದೆ ಎಂದು ವರದಿಯಾಗಿದೆ.

ಎರಡು ಬಾರಿ ಪರೀಕ್ಷೆಯಲ್ಲೂ ಅಸುರಕ್ಷಿತ ಎಂದು ವರದಿ

ಬಿಸ್ಲೆರಿ ಇಂಟರ್‌ನ್ಯಾಶನಲ್ ಘಟಕದಿಂದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯನ್ನ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮೊದಲ ಹಂತದ ಪರೀಕ್ಷೆಯಲ್ಲಿ ನೀರಿನಲ್ಲಿ 'ಬ್ರೋಮೇಟ್' (Bromate) ಅಂಶ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾ ವರದಿಯ ಪ್ರಕಾರ ನೀರನ್ನ ಕುಡಿಯಲು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಆದರೆ ಪ್ರಯೋಗಾಲಯದ ವರದಿಯನ್ನ ಕಂಪನಿ ಒಪ್ಪಿಕೊಳ್ಳದೆ ಮೇಲ್ಮನವಿ ಸಲ್ಲಿಸಿತು. ಇದರ ಬೆನ್ನಲ್ಲೇ ನೀರಿನ ಮಾದರಿಯನ್ನ ರೆಫರಲ್ ಪ್ರಯೋಗಾಲಯಕ್ಕೆ ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಯಿತು. ಎರಡನೇ ಹಂತದ ಪರೀಕ್ಷೆಯಲ್ಲಿಯೂ ಮಾದರಿ ಸುರಕ್ಷತಾ ಮಾನದಂಡಗಳನ್ನ ಪೂರೈಸಿಲ್ಲವೆಂಬ ವರದಿ ಬಂದಿದೆ. ಈ ಬಾರಿ ಪರೀಕ್ಷೆಯಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಪತ್ತೆಯಾಗಿವೆ ಎಂದು ವರದಿಯಾಗಿದೆ.

ಬ್ರೋಮೇಟ್ ಮತ್ತು PAHs ಬಗ್ಗೆ ಆತಂಕ

ನೀರಿನ ಮಾದರಿಯಲ್ಲಿ ಪತ್ತೆಯಾಗಿರುವ ಬ್ರೋಮೇಟ್ ಮತ್ತು PAHs ಎರಡೂ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆಯಿರುವ ರಾಸಾಯನಿಕಗಳೆಂದು ಹೇಳಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಅಂಶ ಪತ್ತೆಯಾಗಿರುವುದು ಮೊದಲ ಪರೀಕ್ಷೆಯಲ್ಲಿ ಕಂಡುಬಂದಿದ್ದರೆ, ಎರಡನೇ ಪರೀಕ್ಷೆಯಲ್ಲಿ PAHs ಅಂಶ ಪತ್ತೆಯಾಗಿದೆ. ಎರಡೂ ಪ್ರಯೋಗಾಲಯಗಳ ಪರೀಕ್ಷಾ ವರದಿಗಳ ಆಧಾರದಲ್ಲಿ ನೀರಿನ ಮಾದರಿ ಅಸುರಕ್ಷಿತವಾಗಿದೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಬಿಸ್ಲೆರಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲು FSSAI ಮುಂದಾಗಿದೆ.

2006ರ ಕಾಯ್ದೆಯಡಿ ಕಾನೂನು ಕ್ರಮ

ಈ ಪ್ರಕರಣದಲ್ಲಿ ಬಿಸ್ಲೆರಿ ಇಂಟರ್‌ನ್ಯಾಶನಲ್ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ. ಪ್ರಯೋಗಾಲಯದ ವರದಿಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದರಿಂದ ಕಂಪನಿಯ ವಿರುದ್ಧ ಪ್ರಾಸಿಕ್ಯೂಷನ್ ಆರಂಭಿಸಲು ಪ್ರಾಧಿಕಾರ ಮುಂದಾಗಿದೆ. ಜನಪ್ರಿಯ ಬ್ರ್ಯಾಂಡ್‌ನ ನೀರಿನ ಮಾದರಿಯೇ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುವುದು ಗಮನ ಸೆಳೆದಿದೆ. ಆ

ಚಾಕೊಲೇಟ್ ಕುಕೀಸ್‌ಗಳನ್ನೂ ವಾಪಸ್ ಪಡೆಯಲು ಆದೇಶ

ಇದೇ ಸಂದರ್ಭದಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಆಶಾ ಕನ್ಫೆಕ್ಷನರಿ ಸಂಸ್ಥೆಯ ಪ್ಯಾಕ್ ಮಾಡಲಾದ ಚಾಕೊಲೇಟ್ ಫಿಲ್ಡ್ ಕುಕೀಸ್‌ಗಳ ವಿರುದ್ಧವೂ FSSAI ಕ್ರಮ ಕೈಗೊಂಡಿದೆ. ಈ ಕುಕೀಸ್‌ಗಳ ಪರೀಕ್ಷೆಯಲ್ಲಿ ಲೇಬಲ್‌ನಲ್ಲಿ ನಮೂದಿಸದ ಕೃತಕ ಬಣ್ಣದ ಅಂಶ ಪತ್ತೆಯಾಗಿದೆ. 'ಕಾರ್ಮೋಸಿನ್' (Carmosine) ಎಂಬ ಬಣ್ಣವನ್ನ ಪ್ಯಾಕೆಟ್‌ನ ಲೇಬಲ್‌ನಲ್ಲಿ ಉಲ್ಲೇಖಿಸದಿದ್ದರೂ ಉತ್ಪನ್ನದಲ್ಲಿ ಬಳಸಿರುವುದು ಕಂಡುಬಂದಿದೆ. ಇದರ ಜೊತೆಗೆ ಟಾರ್ಟ್ರಾಜಿನ್ (Tartrazine) ಎಂಬ ಬಣ್ಣವನ್ನ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸಿರುವುದು ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಈ ಆಹಾರ ಉತ್ಪನ್ನದಲ್ಲಿ ಬಳಸಲು ಅನುಮತಿಯಿಲ್ಲದ 'ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್' (Sunset Yellow FCF) ಎಂಬ ಕೃತಕ ಬಣ್ಣವೂ ಪತ್ತೆಯಾಗಿದೆ. ಈ ಕಾರಣಗಳಿಂದ ಕುಕೀಸ್‌ಗಳನ್ನ ತಪ್ಪು ಮಾಹಿತಿ ಹೊಂದಿರುವ, ಕಳಪೆ ಗುಣಮಟ್ಟದ ಮತ್ತು ಅಸುರಕ್ಷಿತ ಉತ್ಪನ್ನವೆಂದು FSSAI ಘೋಷಿಸಿದೆ. ಸಮಸ್ಯೆ ಕಂಡುಬಂದಿರುವ ಬ್ಯಾಚ್‌ನ ಎಲ್ಲಾ ಉತ್ಪನ್ನಗಳನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವಂತೆ ಆಶಾ ಕನ್ಫೆಕ್ಷನರಿ ಸಂಸ್ಥೆಗೆ ಸೂಚನೆ ನೀಡಲಾಗಿದೆ.

ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ವಿರುದ್ಧ ಕ್ರಮ

ಬಿಸ್ಲೆರಿ ನೀರಿನ ಮಾದರಿ ಪ್ರಕರಣ ಮತ್ತು ಚಾಕೊಲೇಟ್ ಕುಕೀಸ್‌ಗಳ ಮೇಲಿನ ಕ್ರಮಗಳ ಮೂಲಕ ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ವಿರುದ್ಧ FSSAI ತನ್ನ ಕ್ರಮಗಳನ್ನ ಮುಂದುವರಿಸಿದೆ. ನಿಯಮ ಪಾಲಿಸದ ಆಹಾರ ಉತ್ಪನ್ನಗಳ ಕುರಿತು ಪರೀಕ್ಷೆ ನಡೆಸಿ, ಅಸುರಕ್ಷಿತವೆಂದು ಕಂಡುಬಂದ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ನಲ್ಲಿ ಬಿಸ್ಲೆರಿ ನೀರಿನ ಮಾದರಿಯಲ್ಲಿ ಎರಡು ಹಂತದ ಪರೀಕ್ಷೆಗಳಲ್ಲಿಯೂ ಸುರಕ್ಷತಾ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲು FSSAI ಅನುಮತಿ ನೀಡಿದೆ. ಇದೇ ವೇಳೆ ನಿಯಮ ಉಲ್ಲಂಘಿಸಿದ ಚಾಕೊಲೇಟ್ ಕುಕೀಸ್‌ಗಳ ಬ್ಯಾಚ್‌ಗಳನ್ನ ಮಾರುಕಟ್ಟೆಯಿಂದ ಹಿಂಪಡೆಯಲು ಆದೇಶಿಸಲಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES