ಡಾ.ರಾಜ್ ಸಂಬಂಧಿ ಮನೆಯಲ್ಲಿ ಸ್ಫೋಟ: ಬಾಗಿಲು, ಕಿಟಕಿ ಪೀಸ್-ಪೀಸ್
ದೀಪಾವಳಿ ಹಬ್ಬದ ದಿನ ಅಣ್ಣಾವ್ರ ಸಂಬಂಧಿಗಳ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ತಾವೇ ಕೃತ್ಯ ಎಸಗಿರುವುದಾಗಿ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಪೊಲೀಸರೇ ಕೇಸ್ ಮುಚ್ಚಿಹಾಕುವ ಯತ್ನ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ವರನಟ ಡಾ. ರಾಜ್‌ಕುಮಾರ ರವರ ಹತ್ತಿರದ ಸಂಬಂಧಿ ಮನೋಹರ್ ಅವರ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ ನಡೆದಿದೆಯಾ ಅನ್ನೋ ದೊಡ್ಡ ಶಂಕೆ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು, ಬಾಗಿಲಿನ ಚೌಕಟ್ಟು ಹಾಗೂ ಹಣತೆಗಳು ಪೀಸ್ ಪೀಸ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜನೂರು ಗ್ರಾಮದ ಇಬ್ಬರು ಯುವಕರು ತಾವೇ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಇದು ಕೇವಲ ಪಟಾಕಿ ಸ್ಫೋಟ ಎಂದು ತಮಿಳುನಾಡು ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತಮಿಳುನಾಡಿನ ಈರೋಡು ಜಿಲ್ಲೆಯ ತಾಳವಾಡಿ ತಾಲೂಕಿನ ಗಾಜನೂರು ಗ್ರಾಮ ಸಾಂಸ್ಕೃತಿಕ ರಾಯಭಾರಿ ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟೂರು. ನಿನ್ನೆ ತಡರಾತ್ರಿ 10.20ರ ಸುಮಾರಿಗೆ ಅಣ್ಣಾವ್ರ ಸಂಬಂಧಿ ಮನೋಹರ್ ಅವರ ನಿವಾಸದಲ್ಲಿ ಸ್ಫೋಟವೊಂದು ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿದ್ದು, ಬಾಗಿಲು ಮುರಿದು ಬಿದ್ದಿದೆ. ಸ್ಥಳದಲ್ಲಿದ್ದ ಸೋಫಾಗೂ ಬೆಂಕಿ ತಗುಲಿದೆ. ಘಟನೆಯಿಂದ ಮನೆಯಲ್ಲಿದ್ದ ಡಾ. ರಾಜ್ ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಇನ್ನೂ ನಮ್ಮ ಮನೆ ಮೇಲೆ ನಡೆದಿರುವುದು ಕಚ್ಚಾ ಬಾಂಬ್ ದಾಳಿಯೇ ಸರಿ, ಘಟನೆಯ ಸತ್ಯಾಸತ್ಯತೆಯನ್ನು ಹೊರತರಬೇಕು. ಯಾವುದೇ ಕಾರಣಕ್ಕೂ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವಾಗಬಾರದು ಎಂದು ಡಾ. ರಾಜ್‌ಕುಮಾರ್ ಅವರ ಸಂಬಂಧಿಕರಾದ ಮನೋಹರ್ ಹಾಗೂ ಮನೋಜ್ಞಾ ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಈರೋಡು ಜಿಲ್ಲಾ ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆ ಈಗ ಭಾರೀ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ನಾಡ ಬಾಂಬ್ ಅಥವಾ ಕಚ್ಚಾ ಬಾಂಬ್ ಅಲ್ಲ, ಕೇವಲ ಪಟಾಕಿ ಸ್ಫೋಟ ಎಂದಿದ್ದಾರೆ. ಸಾರ್ವಜನಿಕರು ಪಟಾಕಿ ಹೊಡೆದಿದ್ದಾರೆ, ಆ ಶಬ್ದಕ್ಕೆ ಗಾಜು ಒಡೆದಿದೆ ಎಂದು ಪೊಲೀಸರು ಸಮಜಾಯಿಷಿ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಇನ್ನೂ ಸ್ಥಳಕ್ಕೆ ಪಟಾಕಿ ಹಿಡಿದುಕೊಂಡು ಬಂದ ಮಫ್ತಿ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು, ಇದು ಪಟಾಕಿಯಿಂದ ಆಗಿರುವ ಹಾನಿ ಎಂದು ಸಮರ್ಥಿಸಿಕೊಳ್ಳಲು ಬಂದಾಗ ಅಣ್ಣಾವ್ರ ಸಂಬಂಧಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪಟಾಕಿ ಹೊಡೆದರೆ ಮನೆ ಬಾಗಿಲು ಮುರಿದುಬೀಳಲು ಸಾಧ್ಯವೇ? ಕಿಟಕಿ ಗಾಜುಗಳು ಈ ರೀತಿ ಪುಡಿಪುಡಿಯಾಗುತ್ತವಾ?" ಎಂದು ಮನೋಜ್ಞ ಪೊಲೀಸರನ್ನು ನೇರವಾಗಿ ಪ್ರಶ್ನಿಸಿದರು. ಅಲ್ಲದೆ, ನೀವು ತಂದಿರುವ ಪಟಾಕಿಯನ್ನೇ ಈಗ ಇಲ್ಲಿ ಹೊಡೆದು ತೋರಿಸಿ, ಈ ರೀತಿಯೇ ಹಾನಿಯಾದರೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ಸವಾಲು ಎಸೆದರು.
ಒಟ್ಟಿನಲ್ಲಿ, ಪಟಾಕಿ ಶಬ್ದಕ್ಕೆ ಮನೆಯ ಬಾಗಿಲು, ಕಿಟಕಿ ಗಾಜುಗಳು ಪುಡಿಯಾಗಲು ಸಾಧ್ಯವೇ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ತಮಿಳುನಾಡು ಪೊಲೀಸರ ಪತ್ರಿಕಾ ಪ್ರಕಟಣೆ ಹಾಗೂ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ನಿಜಕ್ಕೂ ಯಾವ ಕಾರಣಕ್ಕೆ ಸ್ಪೋಟ ಮಾಡಲಾಗಿದೆ ಅಥವಾ ಆಕಸ್ಮಿಕವಾಗಿಯೇ ಘಟನೆ ನಡೆದಿದೆಯೇ ಎನ್ನುವುದರ ಸತ್ಯಾಸತ್ಯತೆ ಹೊರಬರಬೇಕಿದೆ.