ಬದರಿನಾಥ ಹೆಲಿಕಾಪ್ಟರ್ ದುರಂತ : 5 ಮಂದಿ ಕನ್ನಡಿಗರ ಸಾ*ವು
ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, 5 ಜನ ಕನ್ನಡಿಗರು ಮತ್ತು ಪೈಲಟ್ ಸೇರಿದಂತೆ ಒಟ್ಟು ಆರು ಸಾವನ್ನಪ್ಪಿದ್ದಾರೆ. ಟ್ರಾನ್ಸ್ ಭಾರತ್ (Trans Bharat) ಸಂಸ್ಥೆಗೆ ಸೇರಿದ VT-HCX ನಂಬರಿನ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.
ಉತ್ತರಾಖಂಡ : ಪವಿತ್ರ ಚಾರ್ ಧಾಮ್‌ಗಳಲ್ಲಿ ಒಂದಾದ ಬದರಿನಾಥದಿಂದ ಯಾತ್ರಾರ್ಥಿಗಳನ್ನು ಹೊತ್ತು ಬರುತ್ತಿದ್ದ ಹೆಲಿಕಾಪ್ಟರೊಂದು ಜೋಶಿಮಠ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಪೈಲಟ್ ಹಾಗೂ ಐವರು ಪ್ರಯಾಣಿಕರು ಸೇರಿದಂತೆ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ಹೆಲಿಕಾಪ್ಟರ್ ಟ್ರಾನ್ಸ್ ಭಾರತ್ ಏವಿಯೇಷನ್ ಕಂಪನಿಗೆ ಸೇರಿದ್ದ VT-HCX ಎಂದು ತಿಳಿದು ಬಂದಿದೆ. ಈ ಹೆಲಿಕಾಪ್ಟರ್ ಬದರಿನಾಥ ಧಾಮದಿಂದ ಫಾಟಾ ಅಥವಾ ಡೆಹ್ರಾಡೂನ್ ಕಡೆಗೆ ತೆರಳುತ್ತಿತ್ತು. ಹಾರಾಟದ ಮಧ್ಯೆ, ಜೋಶಿಮಠದ ಮಾರ್ವಾಡಿ ಪ್ರದೇಶದ ಬಳಿಯಿರುವ ಚಾಯ್ ಗ್ರಾಮದ ಬೆಟ್ಟಗಳ ಹತ್ತಿರ ಬರುತ್ತಿದ್ದಂತೆ ಹಠಾತ್ ಆಗಿ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಗ್ರೌಂಡ್ ಸ್ಟೇಷನ್‌ನೊಂದಿಗೆ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿತು. ಇದರ ಬೆನ್ನಲ್ಲೇ ಅಪಘಾತಕ್ಕೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ..
ಇನ್ನು ಈ ಘಟನೆ ಕುರಿತು ಚಮೋಲಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿವೇಕ್ ಪ್ರಕಾಶ್ ಅವರು ಮಾತನಾಡಿ, ಘಟನೆಯ ಮಾಹಿತಿ ದೊರೆತ ಕೂಡಲೇ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಅಪಘಾತ ಸಂಭವಿಸಿದ ಪ್ರದೇಶವು ಕಡಿದಾದ ಬೆಟ್ಟಗಳು ಮತ್ತು ಪ್ರತಿಕೂಲ ಹವಾಮಾನದಿಂದ ಕೂಡಿದ್ದು, ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆ ನಡೆಸುವುದು ಸವಾಲಿನಿಂದ ಕೂಡಿದೆ. ಆದರೂ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಸ್ಥಳೀಯ ಪೊಲೀಸರು ಹಾಗೂ ಆಡಳಿತಾತ್ಮಕ ತಂಡಗಳು ಘಟನಾ ಸ್ಥಳದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಪವಿತ್ರ ಯಾತ್ರೆ ಮುಗಿಸಿಕೊಂಡು ವಾಪಸಾಗುತ್ತಿದ್ದ ಭಕ್ತರು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ದುರಂತವೇ ಸರಿ.. ಪ್ರಸ್ತುತ ಈ ದುರಂತಕ್ಕೆ ಹವಾಮಾನ ವೈಪರೀತ್ಯ ಕಾರಣವಿರಬಹುದೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ತನಿಖೆ ನಡೆಯಬೇಕಿದೆ.